ಯುವಕರನ್ನು ವಿದ್ಯಾವಂತ ಮತದಾರರನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ ಈ 22 ವರ್ಷದ ಕಾನೂನು ವಿದ್ಯಾರ್ಥಿ ಮತ್ತು ರಾಷ್ಟ್ರೀಯ ಕ್ರೀಡಾಪಟು

ಮುಂಬೈ ಮೂಲದ ಚೈತನ್ಯ ಪ್ರಭು ನೇತೃತ್ವದ ಮಾರ್ಕ್ ಯುವರ್ ಪ್ರೆಸೆನ್ಸ್ ಕಂಪನಿಯು ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ರಾಜ್ಯ ಚುನಾವಣೆಗಳಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವವರಿಗಾಗಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಇಲ್ಲಿಯವರೆಗೆ, ಈ ಸಂಸ್ಥೆ 10,000 ಕ್ಕೂ ಹೆಚ್ಚು ಯುವ ಮತದಾರರನ್ನು ನೊಂದಾಯಿಸಿದೆ.

ಯುವಕರನ್ನು ವಿದ್ಯಾವಂತ ಮತದಾರರನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ ಈ 22 ವರ್ಷದ ಕಾನೂನು ವಿದ್ಯಾರ್ಥಿ ಮತ್ತು ರಾಷ್ಟ್ರೀಯ ಕ್ರೀಡಾಪಟು

Monday December 30, 2019,

6 min Read

ಕಾಲೇಜಿನಲ್ಲಿ ಹೆಚ್ಚಿನ ಜನರು ಉದ್ಯೋಗ ಪಡೆಯಲು ಅಥವಾ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಯೋಚಿಸುತ್ತಾರೆ ಅಥವಾ ಪ್ರಸ್ತುತವಾಗಿ ತಮ್ಮದೇ ಆದ ಸ್ಟಾರ್ಟ್ ಅಪ್ ಕಂಪನಿಯನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಾರೆ.


ನಮ್ಮಲ್ಲಿ ಬಹಳಷ್ಟು ಜನರು ಈ ಆಯ್ಕೆಗಳ ಬಗ್ಗೆ ಆಲೋಚಿಸುತ್ತಿದ್ದರೆ, ಮುಂಬೈ ವಿಶ್ವವಿದ್ಯಾಲಯದ 21 ವರ್ಷದ ಕಾನೂನು ವಿದ್ಯಾರ್ಥಿ ಚೈತನ್ಯ ಪ್ರಭು ಸಂಪೂರ್ಣವಾಗಿ ವಿಭಿನ್ನವಾದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮತ ಚಲಾಯಿಸಲು ಮತದಾರರಿಗೆ ಗುರುತಿನಿ ಚೀಟಿ ನೀಡುವ ಮೂಲಕ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಮತದಾನದ ಕುರಿತು ಜಾಗೃತಿ ಮೂಡಿಸುವುದು ಅವರ ಧ್ಯೇಯವಾಗಿದೆ.


ಅದ್ಭುತವಾದ ವಿದ್ಯಾರ್ಹತೆಯನ್ನು ಹೊಂದಿದ್ದರೂ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದರೂ, ವಿದ್ಯಾವಂತ ಮತದಾರರೊಂದಿಗೆ ಪ್ರಜಾಪ್ರಭುತ್ವವನ್ನು ನಿರ್ಮಿಸುವ ಮೂಲಕ ಜನರಿಗೆ ಸಹಾಯ ಮಾಡುವುದು ಚೈತನ್ಯ ಅವರ ಏಕೈಕ ಆಸಕ್ತಿಯಾಗಿದೆ.


ಸೋಷಿಯಲ್ ಸ್ಟೋರಿಯೊಂದಿಗೆ ಮಾತನಾಡುತ್ತಾ, 


"ಭಾರತದ ಜನಸಂಖ್ಯೆಯಲ್ಲಿ 65 ಪ್ರತಿಶತ ಯುವಕರಿದ್ದಾರೆ ಆದರೆ ದುಃಖಕರವಾದ ವಿಷಯವೆಂದರೆ, ಈ ವರ್ಗವು ಮತ ಚಲಾಯಿಸುತ್ತಿಲ್ಲ. ಆದ್ದರಿಂದ, ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಮತ್ತು ಮತ ಚಲಾಯಿಸಲು ಮನವರಿಕೆ ಮಾಡುವ ಕೆಲಸವನ್ನು ನಾನು ಮಾಡಲು ನಿರ್ಧರಿಸಿದೆ,” ಎಂದು ಹೇಳುತ್ತಾರೆ.


ಯುವ ಮತದಾರರೊಂದಿಗೆ ಚೈತನ್ಯ ಪ್ರಭು.


ಇದು 2019 ರ ಜನವರಿಯಲ್ಲಿ ಮುಂಬೈ ಮೂಲದ ಅವರ ಸಂಘಟನೆಯಾದ ಮಾರ್ಕ್ ಯುವರ್ ಪ್ರೆಸೆನ್ಸ್ ಅನ್ನು ಪ್ರಾರಂಭಿಸಲು ಕಾರಣವಾಯಿತು. ಅಂದಿನಿಂದ, ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ರಾಜ್ಯ ಚುನಾವಣೆಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಮತದಾರರಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಮತ್ತು ಇಲ್ಲಿಯವರೆಗೆ ಅದು 10,000 ಕ್ಕೂ ಹೆಚ್ಚು ಯುವ ಮತದಾರರನ್ನು ನೊಂದಾಯಿಸಿದೆ.


ಮಾರ್ಕ್ ಯುವರ್ ಪ್ರೆಸೆನ್ಸ್ ನ ಪ್ರಾರಂಭ

18 ವರ್ಷ ತುಂಬಿದ ಸಮಯದಲ್ಲಿ ಚೈತನ್ಯ ತಮ್ಮ ಹೊಸ ಮತದಾರರ ಚೀಟಿಯನ್ನು ಪಡೆದಾಗ ಇವೆಲ್ಲವೂ ಪ್ರಾರಂಭವಾಯಿತು. ಗುರುತಿನ ಚೀಟಿಯನ್ನು ಪಡೆದ ನಂತರ, ಇತರರು ಈ ಚೀಟಿಯನ್ನು ಹೊಂದಿದ್ದಾರೆಯೇ ಎಂದು ವಿಚಾರಿಸಲು ಪ್ರಯತ್ನಿಸಿದ ಅವರು ತನ್ನ ಒಂದೆರಡು ಸ್ನೇಹಿತರನ್ನು ಕೇಳಿದರು ಮತ್ತು ಅವರಲ್ಲಿ ಯಾರೊಬ್ಬರಲ್ಲೂ ಗುರುತಿನ ಚೀಟಿ ಇಲ್ಲ ಎಂಬುದು ಅರಿವಾಯಿತು.


ಇದು ನನಗೆ ಯೋಚಿಸುವಂತೆ ಮಾಡಿತು. ಏಕೆ ಮತದಾರರ ಗುರುತಿನ ಚೀಟಿ ಪಡೆಯಲು ಯಾರೂ ಸಿದ್ಧರಿಲ್ಲ? ನಂತರ, ನಾನು ಇಡೀ ಪ್ರಕ್ರಿಯೆಯನ್ನು ಸಂಶೋಧಿಸಿದೆ ಮತ್ತು ಅದು ಸಂಪೂರ್ಣವಾಗಿ ಆನ್‌ಲೈನ್ ಪ್ರಕ್ರಿಯೆ ಎಂದು ಅರಿತುಕೊಂಡೆ ಮತ್ತು ಸ್ವತಃ ನೊಂದಾಯಿಸಿಕೊಳ್ಳುವುದು ತುಂಬಾ ಸುಲಭ ಎಂಬುದು ತಿಳಿಯಿತು. ಆದ್ದರಿಂದ, ನಾನು ನನ್ನ ಸ್ನೇಹಿತರನ್ನು ಕರೆದು ಸಾಧ್ಯವಾದಷ್ಟು ಬೇಗ ನೊಂದಾಯಿಸಲು ಹೇಳಿದೆ. ಅವರು ನೊಂದಾಯಿಸಲು ತಮಗೂ ಇಷ್ಟ ಎಂದು ಅವರು ಹೇಳಿದರು ಮತ್ತು ನಾನು ನೊಂದಾಯಿಸುವ ಹಂತಗಳ ಕಸ್ಟಮೈಸ್ ಮಾಡಿದ ಸಂದೇಶವನ್ನು ಅವರಿಗೆ ಕಳುಹಿಸಿದೆ (ನಾನು ಮಾಡಿರುವ). ಅವರು ಆ ಪ್ರಕ್ರಿಯೆಯನ್ನು ಮಾಡಲು ಸಮಯ ಹೊಂದಿಲ್ಲದಿದ್ದರೆ ನಾನು ಅವರಿಗಾಗಿ ಆ ಕೆಲಸವನ್ನು ಮಾಡುತ್ತೇನೆ ಎಂದು ಅವರಿಗೆ ಹೇಳಿದೆ. ಶೀಘ್ರದಲ್ಲೇ, ನಾನು ನನ್ನ ಕೆಲವು ಸ್ನೇಹಿತರ ಹೆಸರುಗಳನ್ನು ನೊಂದಾಯಿಸಲು ಪ್ರಾರಂಭಿಸಿದೆ ಮತ್ತು ಇದು ಕೇವಲ 7.30 ನಿಮಿಷಗಳ ಪ್ರಕ್ರಿಯೆಯಾಗಿದೆ, ಮತ್ತು ಯಾರಾದರೂ ಮನೆಯಲ್ಲಿ ಕುಳಿತು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಯಿತು,” ಎಂದು ಚೈತನ್ಯ ಹೇಳುತ್ತಾರೆ.


ಬಹು ಬೇಗನೆ, ಚೈತನ್ಯ ಮತದಾರರ ಗುರುತಿನ ಚೀಟಿಗಾಗಿ ಸುಮಾರು 550 ಜನರನ್ನು ನೊಂದಾಯಿಸಿದರು. ನಂತರ ಅವರು ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾದರು, ಅವರು ಚೈತನ್ಯ ಅವರ ಆಲೋಚನೆಯನ್ನು ಕೇಳಿದ ನಂತರ, ಅಗತ್ಯವಿರುವ ಬೆಂಬಲ ಮತ್ತು ಸಹಾಯವನ್ನು ನೀಡುವ ಭರವಸೆ ನೀಡಿದರು.


ಸರ್ಕಾರಿ ಅಧಿಕಾರಿಗಳ ಬೆಂಬಲದೊಂದಿಗೆ, ಚೈತನ್ಯ ತಮ್ಮ ಕೆಲಸಕ್ಕೆ ಮುಂದಾದರು. ಅವರು ಯುವ ಮತದಾರರ ಹೆಸರುಗಳನ್ನು ನೊಂದಾಯಿಸಿದರು ಮತ್ತು ಹೆಚ್ಚಿನ ಜನರನ್ನು ತಲುಪಲು ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡರು. "7.30 ನಿಮಿಷಗಳಲ್ಲಿ ನೊಂದಾಯಿಸಿ, ಎನ್ನುವ ತಲೆ ಬರಹವನ್ನು ಪ್ರಚಲಿತಕ್ಕೆ ತರುವ ಮೂಲಕ ನೊಂದಾಯಿಸುವುದು ಎಷ್ಟು ಸುಲಭ ಎಂದು ಜನರಿಗೆ ಅರ್ಥವಾಗುವಂತೆ ಪ್ರಕ್ರಿಯೆಯನ್ನು ಬ್ರಾಂಡ್ ಮಾಡಿದ್ದೇನೆ," ಎಂದು ಚೈತನ್ಯ ಹೇಳುತ್ತಾರೆ.


ಯುವಕರನ್ನು ವಿದ್ಯಾವಂತ ಮತದಾರರನ್ನಾಗಿ ಮಾಡುವುದು

ಸ್ವತಃ ವಿದ್ಯಾರ್ಥಿಯಾಗಿರುವ ಚೈತನ್ಯ ಅವರು ಪ್ರಸ್ತುತ ಪೀಳಿಗೆಯ ಯುವಕರಿಗೆ ಮತದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಲು ಏನು ಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು, ಚೈತನ್ಯ ನಗರದ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ‘ಪ್ರಜಾಪ್ರಭುತ್ವ ವರ್ಗ’ ಎಂಬ ಹೆಸರಿನಲ್ಲಿ ಮತದಾನದ ಕುರಿತು ಮಾಹಿತಿ ನೀಡುತ್ತಾರೆ. ಇಲ್ಲಿಯವರೆಗೆ, ಅವರು ಮುಂಬೈನ 42 ಕಾಲೇಜುಗಳು ಮತ್ತು ಐದು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದಾರೆ.


ತಮ್ಮ ತರಗತಿಯಲ್ಲಿ, ಚೈತನ್ಯ ವಿದ್ಯಾರ್ಥಿಗಳಿಗೆ ತಮ್ಮ ಮತದಾನದ ಹಕ್ಕು, ಅದು ಎಲ್ಲಿಂದ ಬರುತ್ತದೆ, ಮತ್ತು ಅದು ಏಕೆ ಮುಖ್ಯವಾಗಿದೆ ಎಂಬುದರ ಬಗ್ಗೆ ವಿವರಿಸುತ್ತಾರೆ. ಮತದಾನದ ಹಕ್ಕಿಗಾಗಿ ಜನರು ಹೇಗೆ ಹೋರಾಡಿದ್ದಾರೆ, ಇಂದು ನಾವು ಹೇಗೆ ಮತದಾನ ಮಾಡಲು ಸ್ವತಂತ್ರರಾಗಿದ್ದೇವೆ ಮತ್ತು ಆ ಹಕ್ಕನ್ನು ನಾವು ಯಾಕೆ ವ್ಯರ್ಥ ಮಾಡಬಾರದು ಎಂಬುದರ ಬಗ್ಗೆ ಅವರು ಯುವ ಮತದಾರರಿಗೆ ಮಾಹಿತಿ ನೀಡುತ್ತಾರೆ.


“ನಾವು ಎಷ್ಟು ಚುನಾವಣೆಗಳನ್ನು ಇಲ್ಲಿಯವರೆಗೆ ನಡೆಸಿದ್ದೇವೆ, ನಾವು ಯಾರನ್ನು ಆಯ್ಕೆ ಮಾಡುತ್ತೇವೆ ಮತ್ತು ನಾವು ಯಾರನ್ನು ಯಾವುದಕ್ಕೆ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ವಿವರಿಸುತ್ತೇನೆ. ಅದಕ್ಕಿಂತ ಮುಖ್ಯವಾಗಿ, ಒಂದು ಕ್ಷೇತ್ರ, ವಿಧಾನಸಭೆ ಮತ್ತು ವಾರ್ಡ್ ಎಂದರೇನು ಎಂಬುದನ್ನು ನಾನು ಅವರಿಗೆ ವಿವರಿಸುತ್ತೇನೆ, ಇದರಿಂದ ಅವರೆಲ್ಲರೂ ವಿದ್ಯಾವಂತ ಮತ್ತು ತಿಳುವಳಿಕೆಯುಳ್ಳ ಮತದಾರರಾಗುತ್ತಾರೆ,” ಎಂದು ಚೈತನ್ಯ ಹೇಳುತ್ತಾರೆ.


ರೂಪಗಳು ಮತ್ತು ಕಾರ್ಯವಿಧಾನವನ್ನು ವಿವರಿಸುತ್ತಿರುವುದು


ಈ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ ಎಂದು ಚೈತನ್ಯ ಹೇಳುತ್ತಾರೆ. ಹಾಗೂ ಅದನ್ನು ಹಂತ ಹಂತವಾಗಿ ವಿವರಿಸುತ್ತಾರೆ. ಕೆಲವೊಮ್ಮೆ, ನೊಂದಣಿಯನ್ನು ಸ್ಥಳದಲ್ಲೇ ಮಾಡಲಾಗುತ್ತದೆ ಆದರೆ, ಸಮಯವು ಕಡಿಮೆ ಇದ್ದರೆ, ಅವರು ವ್ಯಕ್ತಿಗಳ ಸಂಪರ್ಕ ವಿವರಗಳನ್ನು ತೆಗೆದುಕೊಂಡು ಕಾರ್ಯವಿಧಾನವನ್ನು ಅವರಿಗೆ ಇಮೇಲ್ ಮಾಡುತ್ತಾರೆ. ಇತ್ತೀಚೆಗೆ, ಯುವಕರು ರ‍್ಯಾಪ್ ಸಂಗೀತವನ್ನು ಅನುಸರಿಸುವುದರಿಂದ ಮತದಾನಕ್ಕೆ ಮತ್ತು ರ‍್ಯಾಪ್ ಸಂಗೀತಕ್ಕೆ ಸಂಪರ್ಕವನ್ನು ಕಲ್ಪಿಸಲು ಅವರು ಪ್ರಯತ್ನಿಸಿದರು. ಅವರ ತಂಡವು ಮೂರು ವಿಭಿನ್ನ ಭಾಷೆಗಳಲ್ಲಿ, ಮತದಾನದ ಮಹತ್ವದ ಬಗ್ಗೆ ಮತ್ತು ಮತದಾರರ ಗುರುತಿನ ಚೀಟಿಗಳಿಗೆ ನೊಂದಾಯಿಸುವ ಕುರಿತು ಜಾಗೃತಿ ಮೂಡಿಸುವ ಮೊದಲ ಹಾಡನ್ನು ರಚಿಸಿದರು.


ನೋಂದಣಿ ವ್ಯವಸ್ಥೆಯ ಬಗ್ಗೆ ಕೇಳಿದಾಗ, “ನೀವು markyourpresence.org.in ಗೆ ಲಾಗ್ ಇನ್ ಮಾಡಿ, ಮತ್ತು ಮತದಾರರ ಐಡಿಗೆ ನೊಂದಾಯಿಸಲು ರಿಜಿಸ್ಟರ್ ನೌ ಗೆ ಕ್ಲಿಕ್ ಮಾಡಬೇಕು. ಪ್ರತಿಯೊಬ್ಬರೂ ಕೆಲವೇ ನಿಮಿಷಗಳಲ್ಲಿ ನೊಂದಾಯಿಸಲು ನಾನು ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದೇನೆ,” ಎಂದು ಚೈತನ್ಯ ವಿವರಿಸುತ್ತಾರೆ.


ಇದಲ್ಲದೆ, ಮತದಾನದ ಪ್ರಕ್ರಿಯೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಜನರಿಗೆ ಸಹಾಯ ಮಾಡಲು ಚೈತನ್ಯ ಮತ್ತು ಅವರ ತಂಡ ಮತದಾರರ ಕೈಪಿಡಿಯನ್ನು ತಯಾರಿಸಿದೆ. ಮತದಾರರು ಮತವನ್ನು ಚಲಾಯಿಸಲು ಹೊರಡುವ ಮೊದಲು ಮತದಾರನು ಮಾಡಬೇಕಾದ ಅಗತ್ಯ ವಿಷಯಗಳನ್ನು ಕೈಪಿಡಿ ಒಳಗೊಂಡಿದೆ. ಅಲ್ಲದೆ ಇದು ಮತದಾರರಿಗೆ ತಮ್ಮ ಕ್ಷೇತ್ರ ಮತ್ತು ಸಂಸತ್ ಸದಸ್ಯರ ಪಾತ್ರದ ಬಗ್ಗೆ ತಿಳಿಸುತ್ತದೆ.


ಸಮಸ್ಯೆ ಬಂದಾಗಲೆಲ್ಲಾ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ತಂಡವು ಸಂಪರ್ಕಿಸಿ ಮಾಹಿತಿ ಪಡೆದಿದೆ. ಅದರ ವೆಬ್‌ಸೈಟ್‌ನಲ್ಲಿ, ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಅವರ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಹಾಗೂ ಅವರ ಮತದಾನ ಕೇಂದ್ರಗಳ ಬಗ್ಗೆ ಪರಿಶೀಲಿಸಬಹುದು ಮತ್ತು ಅವರು ತಮ್ಮ ಹತ್ತಿರದ ಚುನಾವಣಾ ಕಚೇರಿಯ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ಪಡೆಯಬಹುದು.


ಹಣದ ಬಗ್ಗೆ ಕೇಳಿದಾಗ, “ನಾವು ಪರಸ್ಪರ ಲಾಭದಾಯಕ ಆಧಾರದ ಮೇಲೆ ಸಹಕರಿಸುತ್ತೇವೆ ಮತ್ತು ಒಟ್ಟುಗೂಡಿ ಕೆಲಸವನ್ನು ಮಾಡುತ್ತೇವೆ. ಎಲ್ಲರೂ ಯುವ ವಿದ್ಯಾರ್ಥಿಗಳು, ಆದ್ದರಿಂದ ಎಲ್ಲರೂ ಸಮಾಜದ ಮೇಲೆ ಪ್ರಭಾವ ಬೀರಲು ಕೆಲಸ ಮಾಡುತ್ತಿದ್ದಾರೆ," ಎಂದು ಚೈತನ್ಯ ಹೇಳುತ್ತಾರೆ.


ಸಮೀಕ್ಷೆ ಮತ್ತು ಮುಂದಿನ ಯೋಜನೆ

ಮತದಾರರ ಗುರುತಿನ ಚೀಟಿ ಇಲ್ಲದ ಯುವಕರು, ಅರ್ಹ ಮತದಾರರ ಸಂಖ್ಯೆಯನ್ನು ಅರ್ಥಮಾಡಿಕೊಳ್ಳಲು, ಮಾರ್ಕ್ ಯುವರ್ ಪ್ರೆಸೆನ್ಸ್ ತಂಡವು ನಗರದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಮೀಕ್ಷೆಗಳನ್ನು ನಡೆಸುತ್ತದೆ. ಒಮ್ಮೆ ಸಮೀಕ್ಷೆ ಪೂರ್ಣಗೊಂಡ ನಂತರ, ಮತದಾನ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ತಂಡವು ಅರಿಯುತ್ತದೆ. ಆದರೆ, ಮತದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆ ಯುವಕರು ಹೊಂದಿರುವುದಿಲ್ಲ.


ಇದನ್ನು ಎದುರಿಸಲು, ಚೈತನ್ಯ ಎಲ್ಲಾ ವಿವರಗಳೊಂದಿಗೆ ಒಂದು ವೆಬ್‌ಸೈಟ್ ತಯಾರಿಸಿದರು, ಅಲ್ಲಿ ಅವರ ತಂಡವು ಚುನಾವಣೆಗೆ ಮುನ್ನ ಮತದಾರರ ಕೈಪಿಡಿಯನ್ನು ಬಿಡುಗಡೆ ಮಾಡುತ್ತದೆ, ಅದು ಶಾಸಕರು, ಸಂಸದರು ಮತ್ತು ಕಾರ್ಪೊರೇಟರ್‌ಗಳ ಪಾತ್ರ ಮತ್ತು ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಸುತ್ತದೆ, ಆದ್ದರಿಂದ ಮೊದಲ ಬಾರಿಗೆ ಮತದಾರರು ವಿಶ್ಲೇಷಿಸಿ ನಂತರ ಮತ ಚಲಾಯಿಸಬಹುದು.


“ನಾವು ಸ್ಪರ್ಧಿಸುತ್ತಿರುವ ಎಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡುತ್ತೇವೆ, ಆದ್ದರಿಂದ ಜನರಿಗೆ ನಿಮಿಷಗಳಲ್ಲಿ ಮಾಹಿತಿ ಲಭ್ಯವಿರುತ್ತದೆ. ಸಮೀಕ್ಷೆಗಳ ಪ್ರಕಾರ ನಾವು ನಮ್ಮ ಮತದಾರರ ಕೈಪಿಡಿಯನ್ನು ತಯಾರಿಸುತ್ತೇವೆ. ಪ್ರತಿಯೊಬ್ಬ ಮತದಾರರ ಮನಸ್ಥಿತಿಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅದೇ ರೀತಿ ಕೈಪಿಡಿಯನ್ನು ತಯಾರಿಸುತ್ತೇವೆ ಎಂದು ಚೈತನ್ಯ ಹೇಳುತ್ತಾರೆ.”




ಮೊದಲ ಬಾರಿಗೆ ಮತದಾನ ಮಾಡುವವರಿಗೆ, ಈ ಕೈಪಿಡಿ ಚುನಾವಣಾ ಮಾರ್ಗದರ್ಶಿಯಂತೆ, ಮತ್ತು ಪ್ರಸ್ತುತ, ಮುಂಬರುವ ದೆಹಲಿ ಚುನಾವಣೆಗೆ ಸಂಸ್ಥೆ ಅದೇ ರೀತಿ ಮಾಡುತ್ತಿದೆ. ಈಗ ಅಶೋಕ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳನ್ನು ನೊಂದಾಯಿಸಲು ಪ್ರಾರಂಭಿಸಿದೆ ಮತ್ತು ಜನವರಿಯಲ್ಲಿ ಇದು ದೆಹಲಿ ವಿಶ್ವವಿದ್ಯಾನಿಲಯದಲ್ಲಿ, ಮತದಾನದ ಮಹತ್ವ ಮತ್ತು ಪ್ರಭಾವದ ಬಗ್ಗೆ ಸೆಮಿನಾರ್ ನಡೆಸಲು ಯೋಜಿಸುತ್ತಿದೆ.


“ದೆಹಲಿಯ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಬಲದೇವ್ ಸಿಂಗ್ ಅವರು ನಮ್ಮ ಸಲಹೆಗಳನ್ನು ಹೊರತುಪಡಿಸಿ ನಮ್ಮ ಯೋಜನೆಯನ್ನು ಬೆಂಬಲಿಸಿದ್ದಾರೆ ಮತ್ತು ನಮಗೆ ಬೇಕಾದ ಸಹಾಯ ಮಾಡಿದ್ದಾರೆ," ಎಂದು ಚೈತನ್ಯ ಹೇಳುತ್ತಾರೆ.

ಚೈತನ್ಯ ಅವರ ಪ್ರಕಾರ, ಸಿಇಒ ಕಚೇರಿಯ ಬೆಂಬಲದೊಂದಿಗೆ ಕೆಲಸ ಮಾಡುವುದು ಸುಲಭ, ಇದು ಕೆಲಸಗಳನ್ನು ಹೇಗೆ ಸಂಪೂರ್ಣವಾಗಿ ಮಾಡಬೇಕೆಂದು ಸಂಸ್ಥೆಗೆ ಸಲಹೆ ನೀಡುತ್ತದೆ. ಇದಲ್ಲದೆ, ನೊಂದಣಿಯ ನಂತರ ಯಾವುದೇ ಸಮಸ್ಯೆ ಮುಂದುವರಿದರೆ, ಅವರು ಮುಂದಿನ ಹಂತಗಳಿಗೆ ಮತದಾರರಿಗೆ ಮಾರ್ಗದರ್ಶನ ನೀಡುತ್ತಾರೆ.


ಭವಿಷ್ಯದಲ್ಲಿ, ಚೈತನ್ಯ ಅವರು ಮತದಾನವನ್ನು ಒಂದು ಕಾರ್ಯಕ್ರಮವನ್ನಾಗಿ ಮಾಡಲು ಬಯಸುತ್ತಾರೆ, ಏಕೆಂದರೆ ಇದು ಚುನಾವಣೆಯ ಸಮಯದಲ್ಲಿ ಮಾತ್ರವಲ್ಲದೆ ವರ್ಷದುದ್ದಕ್ಕೂ ಚರ್ಚಿಸಬೇಕಾದ ವಿಷಯವಾಗಿದೆ ಎಂದು ಅವರು ನಂಬುತ್ತಾರೆ. ಇದಲ್ಲದೆ, ಜನರ ಹೆಚ್ಚಿನ ಭಾಗವಹಿಸುವಿಕೆ ಮತ್ತು ನೊಂದಣಿಗಾಗಿ ರಾಜಕೀಯ ಮತ್ತು ಮತದಾನವನ್ನು ಹೆಚ್ಚು ಆಸಕ್ತಿಕರಗೊಳಿಸಲು ಚೈತನ್ಯ ಬಯಸುತ್ತಾರೆ.


ಇದಕ್ಕಾಗಿ ಅವರು ರಾಜಕೀಯ ಸಿದ್ಧಾಂತದ ಪರೀಕ್ಷೆಯನ್ನು ಮಾಡಲು ನಿರ್ಧರಿಸಿದ್ದಾರೆ, ಇದು ಪ್ರತಿ ಮತದಾರನು ಈ ಪರೀಕ್ಷೆಯಲ್ಲಿ ಹೇಗೆ ಉತ್ತರಿಸಿದ್ದಾರೆ ಎಂಬುದರ ಆಧಾರದ ಮೇಲೆ ಮತದಾರನ ಸಿದ್ಧಾಂತವನ್ನು ತಿಳಿಸುತ್ತದೆ. ಇದು ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸುವಾಗ ಗೊಂದಲಕ್ಕೊಳಗಾದಂತೆ ಮತದಾರರಿಗೆ ಸಹಾಯ ಮಾಡುತ್ತದೆ.


ಪ್ರಸ್ತುತ ಇದು ವಿದ್ಯಾವಂತ ಮತದಾರರತ್ತ ಗಮನ ಹರಿಸಿದೆ. ಮುಂದಿನ ದಿನಗಲ್ಲಿ ಆಸಿಡ್ ದಾಳಿಗೆ ಒಳಗಾದವರು, ಮಂಗಳ ಮುಖಿಯರು ಮತ್ತು ಕುರುಡು ವಿದ್ಯಾರ್ಥಿಗಳನ್ನು ನೊಂದಾಯಿಸಲು ತಂಡವು ಯೋಚಿಸಿದೆ.


ಪ್ರತಿ ಶಾಲೆ, ಪ್ರತಿ ಕಾಲೇಜು ಮತ್ತು ಪ್ರತಿ ವಿಶ್ವವಿದ್ಯಾಲಯವು ನೊಂದಾಯಿತ ಮತದಾರರನ್ನು ಹೊಂದಿರಬೇಕು. ಪ್ರತಿಯೊಬ್ಬರೂ ಮತದಾರರ ಗುರುತಿನ ಚೀಟಿ ನೊಂದಾಯಿಸುವವರೆಗೂ ನಾನು ನಿಲ್ಲುವುದಿಲ್ಲ, ಏಕೆಂದರೆ ಇದು ಬರೀ ಮುಂದಿನ ಚುನಾವಣೆಯಗೆ ಸಂಬಂಧಿಸಿದ್ದಲ್ಲ, ಇದು ಮುಂದಿನ ಪೀಳಿಗೆಯ ಬಗ್ಗೆ,” ಎಂದು ಚೈತನ್ಯ ಹೇಳುತ್ತಾರೆ.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.