350 ಕೋವಿಡ್‌-19 ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿದ ದೆಹಲಿಯ ಪೊಲೀಸ್‌ ಸಿಬ್ಬಂದಿಗಳು

ಕ್ರಿಷನ್‌ ಕುಮಾರ್‌ ನಂತಹ ಕೆಲವು ಪೊಲೀಸ್‌ ಸಿಬ್ಬಂದಿಗಳು ಕೇವಲ ಒಂದು ಬಾರಿ ಅಲ್ಲದೆ 5 ಬಾರಿ ಪ್ಲಾಸ್ಮಾ ದಾನ ಮಾಡಿದ್ದಾರೆ.

350 ಕೋವಿಡ್‌-19 ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿದ ದೆಹಲಿಯ ಪೊಲೀಸ್‌ ಸಿಬ್ಬಂದಿಗಳು

Friday November 27, 2020,

2 min Read

ದೆಹಲಿಯ ಪೊಲೀಸ್‌ ಸಿಬ್ಬಂದಿಗಳು ಪ್ಲಾಸ್ಮಾ ದಾನ ಮಾಡುವ ಮೂಲಕ 350 ಕ್ಕೂ ಹೆಚ್ಚಿನ ಕೋವಿಡ್‌-19 ರೋಗಿಗಳ ಪ್ರಾಣವನ್ನು ರಕ್ಷಿಸಿದ್ದಾರೆಂದು ಪೊಲೀಸ್‌ ಪಡೆ ಬುಧವಾರ ತಿಳಿಸಿದೆ.


ಹೆಡ್‌ ಕಾನ್ಸ್ಟೇಬಲ್‌ ಕ್ರಿಶನ್‌ ಕುಮಾರ್‌ ನಂತಹ ಪೊಲೀಸ್‌ ಸಿಬ್ಬಂದಿಗಳು ಕೇವಲ ಒಮ್ಮೆ ತಮ್ಮ ಪ್ಲಾಸ್ಮಾ ದಾನ ಮಾಡದೆ ಅವಷ್ಯಕತೆ ಇದ್ದಾಗಲೆಲ್ಲ ದಾನ ಮಾಡಲು ಮುಂದಾಗಿದ್ದಾರೆ.


ಕಪಶೇರಾ ಪೊಲೀಸ್‌ ಠಾಣೆಯ 42ರ ಕುಮಾರ್‌ ಎಂಬುವವರು ಐದು ಬಾರಿ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ.

ಹೆಡ್‌ ಕಾನ್ಸ್ಟೇಬಲ್‌ ಕ್ರಿಶನ್‌ ಕುಮಾರ್‌ (ಚಿತ್ರಕೃಪೆ: ಟ್ವಿಟ್ಟರ್‌)


ಮೇ 1ರಂದು ಕುಮಾರ್‌ ಅವರಿಗೆ ಸೋಂಕಿರುವುದು ದೃಢವಾಗಿತ್ತು, ಮತ್ತು ಅವರ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಾದರು. ಮೇ 19ಕ್ಕೆ ಗುಣಮುಖರಾಗಿ ಮನೆಗೆ ತೆರಳಿದರು. ಮೇ28 ರಂದು ತಮ್ಮ ಸಹೋದ್ಯೋಗಿಯ ಪತ್ನಿಗೆ ಅವರು ಪ್ಲಾಸ್ಮಾ ದಾನ ಮಾಡಿದರು.


“ನನ್ನ ಸಹೋದ್ಯೋಗಿಯೊಬ್ಬರ ಪತ್ನಿ ಕೊರೊನಾವೈರಸ್‌ನಿಂದ ಬಳಲುತ್ತಿದ್ದರು. ಅವರ ಪರಿಸ್ಥಿತಿ ಗಂಭೀರವಾಗಿತ್ತು ಮತ್ತು ಅವರಿಗೆ ಪ್ಲಾಸ್ಮಾ ದಾನಿಯ ಅಗತ್ಯವಿತ್ತು. ಅದಾಗಲೇ ನಾನು ಗುಣಮುಖನಾಗಿ ಸುಧಾರಿಸಿಕೊಳ್ಳುತ್ತಿದ್ದೆ, ನನ್ನ ಕಷ್ಟದಲ್ಲಿ ನಮ್ಮ ಹಿರಿಯ ನೌಕರರು ಮತ್ತು ಸಿಬ್ಬಂದಿಗಳು ನನ್ನೊಂದಿಗಿದ್ದರು. ಅದು ನನ್ನನ್ನು ಪ್ರೇರೆಪಿಸಿತು ಮತ್ತು ಪ್ಲಾಸ್ಮಾ ನೀಡಲು ಮುಂದಾದೆ,” ಎನ್ನುತ್ತಾರೆ ಕುಮಾರ್‌.


“ಯಾವಾಗ ಪ್ಲಾಸ್ಮಾದ ಅವಷ್ಯಕತೆ ಇತ್ತೋ ಆಗೆಲ್ಲ ನಾನು ಪ್ಲಾಸ್ಮಾ ದಾನ ಮಾಡಿದ್ದೇನೆ,” ಎಂದರು ಅವರು.


ಮಾರ್ಚ್‌ನಲ್ಲಿ ಕೊರೊನಾ ಹರಡಿದಾಗಿನಿಂದಲೂ ಪೊಲೀಸರು ಲಾಕ್‌ಡೌನ್‌ ವೇಳೆ ಕಾನೂನನ್ನು ಕಾಪಾಡುವುದರ ಜತೆಗೆ ಸಾಂಕ್ರಾಮಿಕದ ವಿರುದ್ಧವು ಮುಂದೆ ನಿಂತು ಹೋರಾಡಬೇಕಿತ್ತು ಎಂದರು ದೆಹಲಿ ಪೊಲೀಸ್‌ ಪಿಆರ್‌ಒ ಈಶ್‌ ಸಿಂಘಲ್‌.


ತಮ್ಮ ಕೆಲಸದಲ್ಲಿ ಪೊಲೀಸರಿಗೆ ಸೋಂಕು ತಾಗುವ ಅಪಾಯ ತುಂಬಾ ಹೆಚ್ಚಿತ್ತು. 6,937 ಸೋಂಕಿತರಲ್ಲಿ 6,089 ಜನ ಗುಣಮುಖರಾಗಿದ್ದು, ಇನ್ನೂ 822 ಜನ ಗುಣಮುಖರಾಗಬೇಕು ಎಂದರು ಅವರು.


ದೆಹಲಿಯ 26 ಪೊಲೀಸ್‌ ಸಿಬ್ಬಂದಿಗಳು ಕೊರೊನಾವೈರಸ್‌ಗೆ ಬಲಿಯಾಗಿದ್ದಾರೆ.


“ಕೊರೊನಾದಿಂದ ಗುಣಮುಖರಾದ ನಂತರ ಹಲವು ದೆಹಲಿ ಪೊಲೀಸರು ಕೋವಿಡ್‌-19 ರೋಗಿಗಳ ಜೀವ ಉಳಿಸುವುದರಲ್ಲಿ ನಿರತರಾಗಿದ್ದಾರೆ. ಅವರು ತಮ್ಮ ಗೆಳೆಯರು, ಸಹೊದ್ಯೋಗಿಗಳು, ಕುಟುಂಬದವರು ಮತ್ತು ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದ ಗುರುತು ಪರಿಚಯ ಇಲ್ಲದ ಜನರಿಗೂ ಪ್ಲಾಸ್ಮಾ ದಾನ ಮಾಡಿದ್ದಾರೆ,” ಎಂದು ಸಿಂಘಲ್‌ ತಿಳಿಸಿದರು.

ಪ್ಲಾಸ್ಮಾ ದಾನ ಮಾಡಿದ ದೆಹಲಿಯ ಕಾನ್ಸ್ಟೇಬಲ್‌ ಸಂದೀಪ್‌ (ಚಿತ್ರಕೃಪೆ: ಟ್ವಿಟ್ಟರ್)‌

ಪೊಲೀಸರ ಮಾಹಿತಿಯ ಪ್ರಕಾರ ಸೋಮವಾರದವರೆಗೆ ಕನಿಷ್ಟ 323 ಪೊಲೀಸ್‌ ಸಿಬ್ಬಂದಿಗಳು ಕೋವಿಡ್‌-19 ಗೆ ತುತ್ತಾಗಿರುವ ಎಲ್ಲ ವಯೋಮಾನದವರು ಸೇರಿದಂತೆ ವಿಶೇಷವಾಗಿ ಹಿರಿಯ ನಾಗರಿಕರಿಗೆ ಮತ್ತು ವಯಸ್ಕರರಿಗೆ ಪ್ಲಾಸ್ಮಾ ದಾನ ಮಾಡಿದ್ದಾರೆ.


ಒಟ್ಟು ಪ್ಲಾಸ್ಮಾ ದಾನಗಳಲ್ಲಿ 82 ತಮ್ಮ ಸಹೋದ್ಯೋಗಿಗಳಿಗೆ, 107 ಕುಟುಂಬದ ಸದಸ್ಯರಿಗೆ ಮತ್ತು ಗೆಳೆಯರಿಗೆ ಮತ್ತು 134 ಅಪರಿತರಿಗೆ ನೀಡಲಾಗಿದೆ ಎಂದು ತಿಳಿಸಲಾಗಿದೆ.