ಬಿದಿರಿನ ಮನೆ ನಿರ್ಮಾಣದ ಮೂಲಕ ಸುಸ್ಥಿರ ಜೀವನದ ದಾರಿ ತೋರುತ್ತಿರುವ ಹೈದರಾಬಾದ್ ನವದಂಪತಿಗಳು
ಪ್ರಶಾಂತ್ ಲಿಂಗಂ ಮತ್ತು ಅರುಣಾ ಕಪ್ಪಗಂಟುಲಾ ಎಂಬ ದಂಪತಿಗಳು ಸ್ಥಾಪಿಸಿರುವ ಬಾಂಬೂ ಹೌಸ್ ಇಂಡಿಯಾ, ಬಿದಿರಿನ ಮನೆಗಳನ್ನು ನಿರ್ಮಿಸುವ ಮೂಲಕ ಪರಿಸರ ಸ್ನೇಹಿ ಜೀವನ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾರ್ವಜನಿಕ ಸೌಕರ್ಯಗಳನ್ನು ನಿರ್ಮಿಸಲು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ನವ ದಂಪತಿಗಳಾದ ಪ್ರಶಾಂತ್ ಲಿಂಗಂ ಮತ್ತು ಅರುಣಾ ಕಪ್ಪಗಂಟುಲಾ ಅವರು ತಮ್ಮ ಮನೆ ನಿರ್ಮಾಣ ಹಂತದಲ್ಲಿ ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಹುಡುಕಲಾರಂಭಿಸಿದರು. ಈ ಆಲೋಚನೆಯು 2006 ರಲ್ಲಿ 'ಭಾರತದ ಬಿದಿರಿನ ಮನೆ' ಯನ್ನು ಪ್ರಾರಂಭಿಸಲು ಸ್ಫೂರ್ತಿಯಾಯಿತು.
ಈ ದಂಪತಿಗಳು ಪರಿಸರ ಸ್ನೇಹಿ ಬಿದಿರಿನ ಮನೆಗಳನ್ನು ನಿರ್ಮಿಸುವುದರಿಂದ ಹಿಡಿದು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತ್ಯಾಜ್ಯದಿಂದ ಫುಟ್‌ಪಾತ್‌ಗಳ ನಿರ್ಮಾಣದ ಮೂಲಕ ಸುಸ್ಥಿರ ಜೀವನವನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಹಾಗೂ ಈ ಪ್ರಕ್ರಿಯೆಯಲ್ಲಿ ಹಲವು ರೈತರು ಮತ್ತು ಕುಶಲಕರ್ಮಿಗಳನ್ನು ಒಳಗೊಂಡು ಉದ್ಯೋಗವನ್ನು ಕೂಡ ಸೃಷ್ಟಿಸಿದ್ದಾರೆ. ಇಂದು ಈ ಬಾಂಬೂ ಹೌಸ್ ಇಂಡಿಯಾ ವಹಿವಾಟು ಬರೋಬ್ಬರಿ 2 ಕೋಟಿ ರೂ.
ಆದರೆ, ಅವರ ಈ ಪಯಣ ಸುಗಮದ ಹಾದಿಯಾಗಿರಲಿಲ್ಲ ಎಂಬುದನ್ನು ಪ್ರಶಾಂತ್ ನೆನಪಿಸಿಕೊಳ್ಳುತ್ತಾರೆ.
ಯಶಸ್ಸಿನ ಹಿಂದಿನ ಕಷ್ಟದ ಹಾದಿ
ಆರಂಭಿಕ ದಿನಗಳಲ್ಲಿ, ದಂಪತಿಗಳು ಕೆಲವು ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ಕಟ್ಟುನಿಟ್ಟಾದ ರಾಜ್ಯ ಕಾನೂನುಗಳು ಮತ್ತು ನಿಯಮಗಳ ಕಾರಣದಿಂದಾಗಿ, ಅವರು ಸುಲಭವಾಗಿ ಬಿದಿರನ್ನು ಪಡೆಯಲು ಸಾಧ್ಯವಾಗಲಿಲ್ಲ ಹಾಗಾಗಿ, 2010 ರವರೆಗೆ ಈ ಸಾಹಸವು ಶುರುವಾಗೇ ಇರಲಿಲ್ಲ. ಆ ಹೊತ್ತಿಗೆ ಆಗಲೇ ದಂಪತಿಗಳು ಸಾಲದಲ್ಲಿ ಮುಳುಗಿ ಹೋಗಿದ್ದರು. ಒಂದು ದಿನದ ಊಟವೂ ಸಹ ಕಷ್ಟಕರವಾಯಿತು.
ಪ್ರಶಾಂತ್ ಅವರು ಹೇಳುವ ಪ್ರಕಾರ, ಅವರ ಕುಟುಂಬದಲ್ಲಿ ಕೆಲವು ಸಾವುಗಳು ಸಂಭವಿಸಿದ್ದಲ್ಲದೇ, ಮೂರು ವರ್ಷಗಳ ಒಳಗೆ 60 ಲಕ್ಷ ರೂ ಸಾಲವನ್ನು ತೀರಿಸಲು ಹೆಣಗಾಡುತ್ತಿದ್ದರು, ಇದರಿಂದ ಹೆದರಿದ್ದ ದಂಪತಿಗಳು ಆತ್ಮಹತ್ಯೆಗೆ ಕೂಡ ಪ್ರಯತ್ನಿಸಿದ್ದರು ಎಂದು ಹೇಳುತ್ತಾರೆ. ಆದರೆ, ಅವರು ತಮ್ಮ ಕನಸಿಗೆ ಕೊನೆಯದಾಗಿ ಪ್ರಯತ್ನಿಸಲು ನಿರ್ಧರಿಸಿದರು. ಹೀಗಾಗಿ ಅರುಣಾ ತನ್ನ ಆಭರಣಗಳನ್ನು ಮಾರಿ ಹಣ ಪಡೆದುಕೊಂಡರು.
ಶೀಘ್ರದಲ್ಲೇ ಕಾಲವು ಬದಲಾಯಿತು. ಹೈದರಾಬಾದ್‌ನ ಶಾಲೆಯ ಪ್ರಾಂಶುಪಾಲರೊಬ್ಬರು ಬಿದಿರಿನ ಗುಡಿಸಲು ನಿರ್ಮಿಸುವ ಕೋರಿಕೆಯೊಂದಿಗೆ ದಂಪತಿಯನ್ನು ಸಂಪರ್ಕಿಸಿದರು. ಇದರ ಫಲವಾಗಿ ಅವರ ಗುಣಮಟ್ಟ ಮತ್ತು ಕರಕುಶಲತೆಯು ಇತರರನ್ನೂ ಸಹ ಆಕರ್ಷಿಸಿತು.
ಸುಸ್ಥಿರ ಭವಿಷ್ಯ
ಅಂದಿನಿಂದ ಇಂದಿನವರೆಗೆ ಬಹು ಎತ್ತರಕ್ಕೆ ಬೆಳೆದಿದ್ದಾರೆ. ಕೇವಲ 13 ವರ್ಷಗಳಲ್ಲಿ ಹೈದರಾಬಾದ್ ಮೂಲದ ಈ ದಂಪತಿಗಳು ಬಾಂಬೂ ಹೌಸ್ ಇಂಡಿಯಾವನ್ನು ದೇಶಾದ್ಯಂತ ಪರಿಚಯಿಸಿದರು.
ಹಾಗೆ ನೋಡಿದರೆ, ಕಾಂಕ್ರೀಟ್ ಮನೆಗಳಿಗೆ ಪ್ರತಿ ಚದರ ಅಡಿಗೆ 1,500–2,500 ರೂ. ವೆಚ್ಚವಾಗುತ್ತದೆ ಆದರೆ ಬಿದಿರಿನ ಮನೆಗಳಿಗೆ ಚದರ ಅಡಿಗೆ ಕೇವಲ 500–700 ರೂ ಮಾತ್ರ ಖರ್ಚಾಗುತ್ತದೆ. ಆದ್ದರಿಂದ ಬಿದಿರಿನಮನೆ ನಿರ್ಮಾಣ ಅತ್ಯಂತ ಅಗ್ಗವಾಗಿದೆ. ಅಲ್ಲದೆ ಕಾಂಕ್ರೀಟ್ ಮನೆಗಳಿಗೆ ಹೋಲಿಸಿದರೆ ತಾಪಮಾನವು ಮೂರರಿಂದ ನಾಲ್ಕು ಡಿಗ್ರಿಗಳಷ್ಟು ಕಡಿಮೆಯಾಗಿರುವುದರಿಂದ ಮನೆಗೆ ಹವಾನಿಯಂತ್ರಕದ ಅವಶ್ಯಕತೆಯೂ ಇರುವುದಿಲ್ಲ.
ಸಾರ್ವಜನಿಕ ಮೂಲ ಸೌಕರ್ಯಗಳನ್ನು ನಿರ್ಮಿಸಲು ಪ್ಲಾಸ್ಟಿಕ್ ಅನ್ನು ಬಳಸುವ ಮೂಲಕ ದಂಪತಿಗಳು ಪ್ಲಾಸ್ಟಿಕ್ ಭೀತಿಯ ವಿರುದ್ಧ ಬಲವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಉದಾಹರಣೆಗೆ, 2013 ರಲ್ಲಿ ಅವರು ಹೈದರಾಬಾದ್‌ನಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದಲೇ ಸಂಪೂರ್ಣ ಮನೆಯನ್ನು ನಿರ್ಮಿಸಿದರು.
ಈ ಉಪಕ್ರಮದ ಕುರಿತು ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿದ ಪ್ರಶಾಂತ್,
“2018 ರಲ್ಲಿ, ನಾವು ಕುಕತ್‌ಪಲ್ಲಿ ಉದ್ಯಾನವನದಲ್ಲಿ ಅರ್ಧ ಪ್ಲಾಸ್ಟಿಕ್ ಮತ್ತು ಅರ್ಧ ಬಿದಿರಿನಿಂದ ಕಚೇರಿಯನ್ನು ನಿರ್ಮಿಸಿದೆವು ಹಾಗೂ ಈ ರಚನೆಯಲ್ಲಿ ಪ್ಲಾಸ್ಟಿಕ್ ನೆಲಹಾಸನ್ನು ಕೂಡ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಆ ನಂತರ, ಮಿಯಾಪುರದಲ್ಲಿ ಮೆಟ್ರೊ ಪಾರ್ಕಿಂಗ್ ಕೌಂಟರ್‌ನಲ್ಲಿ ಸಿಬ್ಬಂದಿಯೊಬ್ಬರಿಗೆ ಒಂದು ಮನೆಯನ್ನು ನಿರ್ಮಿಸಿದ್ದೇವೆ. ಅಲ್ಲಿ ಫ್ಲೋರಿಂಗ್ ಹೊರತುಪಡಿಸಿ ಇಡೀ ರಚನೆಯನ್ನು ಪ್ಲಾಸ್ಟಿಕ್‌ನಿಂದ ಮಾಡಲಾಗಿತ್ತು. ನಮ್ಮ ಈ ಹೊಸ ಪ್ರಯತ್ನಗಳು ಜನರನ್ನು ಸೆಳೆಯುತ್ತವೆಯಾದರೂ, ಅವುಗಳ ದೀರ್ಘಾಯುಷ್ಯದ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸುತ್ತಾರೆ” ಎಂದರು
ಸದ್ಯಕ್ಕೆ, ಬಾಂಬೂ ಹೌಸ್ ಇಂಡಿಯಾ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನತ್ತ ಗಮನ ಹರಿಸುತ್ತಿದೆ. ಹೈದರಾಬಾದ್‌ನ ಯುಎಸ್ ಕಾನ್ಸುಲೇಟ್‌ನಲ್ಲಿ ಇವರ ಕೆಲಸವನ್ನು ಕಾಣಬಹುದು ಹಾಗೂ ಅವರು ಹೈದರಾಬಾದ್‌ನ ಗೂಗಲ್ ಕಚೇರಿಯಲ್ಲಿ ಬೋಟ್‌ಹೌಸ್ ಕೂಡ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ, ಈ ದಂಪತಿಗಳು ತಮ್ಮ ಯೋಜನೆಗಳನ್ನು ಮಹಾರಾಷ್ಟ್ರದಲ್ಲೂ ಸ್ಥಾಪಿಸಲಿದ್ದಾರೆ.
ಸುಸ್ಥಿರ ಭವಿಷ್ಯದತ್ತ ಕೆಲಸ ಮಾಡುತ್ತಿರುವ ಈ ದಂಪತಿಗಳು, ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ಗಳತ್ತ ಗಮನ ಹರಿಸುತ್ತಿದ್ದಾರೆ, ಜೊತೆಗೆ ಚಿಂದಿಆಯುವವರನ್ನೂ ಬೆಂಬಲಿಸುತ್ತಿದ್ದಾರೆ.
ಪ್ರಶಾಂತ್ ರವರು ಮಾತನಾಡಿ "ನಾವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಉಪನ್ಯಾಸಗಳನ್ನು ನೀಡುವ ಮೂಲಕ ಮತ್ತು ಯುವಕರನ್ನು ಆಕರ್ಷಿಸುವ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ" ವರದಿ ಎಫರ್ಟ್ಸ್ ಫಾರ್ ಗುಡ್.
ಪ್ರಶಾಂತ್ ಅವರು ಪ್ಲಾಸ್ಟಿಕ್‌ನಿಂದ ಶೌಚಾಲಯಗಳು, ಪೀಠೋಪಕರಣಗಳು ಮತ್ತು ಕಚೇರಿಯಂತಹ ಸ್ಥಳಗಳನ್ನು ನಿರ್ಮಿಸಲು ಯೋಜನೆ ನಡೆಸುತ್ತಿದ್ದಾರೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.