ಕೊರೊನಾ ಹೋರಾಟದಲ್ಲಿ ನೆರವಾಗಲಿದೆ ಎನ್‌ಐಟಿಕೆಯ ಸೋಂಕು ನಿವಾರಣಾ ಉಪಕರಣ

ಈ ಸಾಧನದ ಹೆಸರು “ಝೀರೊ ಕೋವ್”‌, ಅರ್ಥಾತ್‌ ಕೋವಿಡ್-19‌ ಸೋಂಕಿನಿಂದ ಮುಕ್ತವಾಗಿರುವುದು. ಹೆಸರಿನಂತೆ ಈ ಸಾಧನ ಹಲವಾರು ವಸ್ತುಗಳ ಮೇಲಿರುವ ಕೊರೊನಾ ಸೋಂಕನ್ನು ನಾಶಪಡಿಸಿ, ಅದು ಹರಡದಂತೆ ತಡೆಯುತ್ತದೆ.

ಕೊರೊನಾ ಹೋರಾಟದಲ್ಲಿ ನೆರವಾಗಲಿದೆ ಎನ್‌ಐಟಿಕೆಯ ಸೋಂಕು ನಿವಾರಣಾ ಉಪಕರಣ

Thursday April 16, 2020,

2 min Read

ಕೊರೊನಾ ಮಹಾಮಾರಿಯ ಆಗಮನದಿಂದಾಗಿ ನಮ್ಮ ಸ್ವಚ್ಛತಾ ಅಭ್ಯಾಸಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಜಾಗೂರಕರಾಗಿರಬೇಕಾದ ಪರಿಸ್ಥಿತಿ ಎದುರಾಗಿದೆ. ಕೊರೊನಾ ಸೋಂಕು ಹೇಗೆ? ಎಲ್ಲಿ? ಯಾವ ವಸ್ತುವಿನಿಂದ ಹರಡುತ್ತದೆಂದು ತಿಳಿಯದೇ ನಾವು ಸೋಂಕಿತರಾಗುವ ಸಂಭವ ಹೆಚ್ಚಿದೆ. ಹಾಗಾಗಿ ನಾವು ಸೋಂಕಿನಿಂದ ದೂರವಿರಲು ಕೈಗೊಳ್ಳುವ ಕ್ರಮಗಳ ಜೊತೆಗೆ ನಾವು ಬಳಸುವ ವಸ್ತುಗಳು ಸೋಂಕು ಮುಕ್ತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ.


ಈ ನಿಟ್ಟಿನಲ್ಲಿ ನಮ್ಮ ಮಂಗಳೂರಿನ ಎನ್‌ಐಟಿಕೆ ಅಭಿವೃದ್ಧಿ ಪಡಿಸಿರುವ ಸೋಂಕು ನಿವಾರಣಾ ಸಾಧನ ಗಮನಾರ್ಹವಾದುದು. ಇದನ್ನು ಎನ್‌ಐಟಿಕೆ ಸುರತ್ಕಲ್‌ನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ, ಡಾ. ಅರುಣ್ ಮೋಹನ ಇಸ್ಲೂರು ಅವರ ಸಂಶೋಧನಾ ವಿದ್ಯಾರ್ಥಿ ಸೈಯದ್‌ ಇಬ್ರಾಹಿಂ ಜೊತೆಗೂಡಿ ಅಭಿವೃದ್ಧಿ ಪಡಿಸಿದ್ದಾರೆ.


ಸೋಂಕು ನಿರ್ಮೂಲನಾ ಸಾಧನದೊಂದಿಗೆ ತಂಡ




ಈ ಸಾಧನದ ಹೆಸರು “ಝೀರೊ ಕೋವ್”‌, ಅರ್ಥಾತ್‌ ಕೋವಿಡ್-19‌ ಸೋಂಕಿನಿಂದ ಮುಕ್ತವಾಗಿರುವುದು. ಹೆಸರಿನಂತೆ ಈ ಸಾಧನ ಹಲವಾರು ವಸ್ತುಗಳ ಮೇಲಿರುವ ಕೊರೊನಾ ಸೋಂಕನ್ನು ನಾಶಪಡಿಸಿ, ಸೋಂಕು ಹರಡದಂತೆ ತಡೆಯುತ್ತದೆ.


“ಕೊರೊನಾವೈರಸ್‌ ಪ್ಲಾಸ್ಟಿಕ್‌/ಲೋಹದ ವಸ್ತುಗಳ ಮೇಲೆ 3 ರಿಂದ 8 ಗಂಟೆಗಳ ಕಾಲ ಜೀವಂತವಾಗಿರುತ್ತದೆ. ಆದ್ದರಿಂದ ಮಾರುಕಟ್ಟೆ, ಸೂಪರ್‌ ಮಾರ್ಕೆಟ್‌ ಇತ್ಯಾದಿ ವಿವಿಧ ಸ್ಥಳಗಳಿಂದ ತಂದ ವಸ್ತುಗಳ ಮೇಲೆ ಸೋಂಕಿರುವ ಸಾಧ್ಯತೆ ಇರುವುದರಿಂದ, ಅದನ್ನು ಶುಚಿಗೊಳಿಸಬೇಕಾಗುತ್ತದೆ,” ಎಂದೆನ್ನುತ್ತಾರೆ ಡಾ. ಅರುಣ್ ಇಸ್ಲೂರು.


ಈ ಸಾಧನ ಯಾವ್ಯಾವ ವಸ್ತುಗಳನ್ನು ಸೋಂಕು ಮುಕ್ತವಾಗಿಸುತ್ತದೆ?

ತರಕಾರಿ,‌ ಬಿಸ್ಕತ್ತು, ಮೊಬೈಲ್‌, ಪುಸ್ತಕಗಳು, ನೋಟು, ವ್ಯಾಲೆಟ್‌ ನಂತಹ ಹಲವಾರು ವಸ್ತುಗಳ ಮೇಲಿರುವ ಸೋಂಕನ್ನು ನಾಶಪಡಿಸುತ್ತದೆ.


ತರಕಾರಿಗಳನ್ನು ಬಿಸಿ ನೀರಿನಲ್ಲಿ ಉಪ್ಪಿನೊಂದಿಗೆ ೨೦ ನಿಮಿಷ ಕಾಯಿಸಿದರೆ ಸೋಂಕು ಮುಕ್ತವಾಗುವುದು. ಆದರೆ ಘನ ವಸ್ತುಗಳಾದ ನೋಟು, ಪರ್ಸು, ಮೊಬೈಲ್‌ ಮುಂತಾದವುಗಳನ್ನು ನೀರಿನಿಂದ ಸ್ವಚ್ಛಗೊಳಿಸಲಾಗುವುದಿಲ್ಲ. ಅಂತಹ ಸಮಯದಲ್ಲಿ ಈ ಯಂತ್ರ ಅತ್ಯವಶ್ಯಕವಾಗುತ್ತದೆ.


ಈ ಸಾಧನ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಈ ಸಾಧನ 254 ನ್ಯಾನೋ ಮೀಟರ್‌ ತರಂಗಾಂತರಗಳನ್ನು ಹೊಂದಿರುವ ಯುವಿ-ಸಿ (ನೇರಳಾತೀತ) ವಿಕಿರಣವನ್ನು ಬಳಸಿ ಯಾವುದೇ ವಸ್ತುವಿನ ಮೇಲ್ಮೈ ನಲ್ಲಿರುವ ಬ್ಯಾಕ್ಟೀರಿಯಾ ಅಥವಾ ವೈರಸ್‌ನಂತಹ ಸೂಕ್ಷ್ಮಾಣುಜೀವಿಗಳ ಜೀವಕೋಶಕ್ಕೆ ದಾಳಿಯಿಟ್ಟು ನ್ಯೂಕ್ಲಿಕ್‌ ಆಮ್ಲವನ್ನು ನಾಶಪಡಿಸುತ್ತದೆ ಎನ್ನುತ್ತಾರೆ ಡಾ. ಅರುಣ್.


ವಸ್ತುಗಳನ್ನು ಈ ವಿಕಿರಣದಡಿ 15 ನಿಮಿಷ ಇರಿಸಿದರೆ 99.9 ಪ್ರತಿಶತದಷ್ಟು ಅವುಗಳನ್ನು ಸೋಂಕು ಮುಕ್ತಗೊಳಿಸುತ್ತದೆ.


ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುವುದರಲ್ಲಿ ಯುವಿ-ಸಿ ಕಿರಣಗಳು 99.9 ಪ್ರತಿಶತದಷ್ಟು ಫಲಕಾರಿಯೆಂದು ವಿಶ್ವ ಆರೋಗ್ಯ ಸಂಸ್ಥೆ ಧೃಢಪಡಿಸಿದೆ.


ಈ ತಂತ್ರಜ್ಞಾನವನ್ನು ಹೆಚ್ಚಾಗಿ ಲ್ಯಾಬೋರೆಟರಿಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮನೆಯಲ್ಲಿ ಸೋಂಕು ನಿವಾರಣೆಗೆ ಬಳಸಲಾಗುತ್ತಿದೆ ಎಂದರು ಡಾ. ಅರುಣ್.‌


ಹಳೆಯ ರೆಫ್ರಿಜರೇಟರ್‌‌ಗೆ ಕೆಲವೊಂದು ಬದಲಾವಣೆಗಳನ್ನು ಮಾಡಿ ಈ ತಂತ್ರಾಂಶವನ್ನು ಅಳವಡಿಸಿದ್ದಾರೆ.


ಈ ಸಾಧನವನ್ನು ಬಳಸುವಾಗ ಗಮನದಲ್ಲಿಡಬೇಕಾದ ಮುಖ್ಯ ಅಂಶವೆಂದರೆ ವಸ್ತುಗಳನ್ನು ಸಾಧನದ ಒಳಗಿಟ್ಟು ಸ್ವಿಚ್‌ ಆನ್‌ ಮಾಡಿದಾಗ, ಬಾಗಿಲನ್ನು ಮರೆಯದೆ ಮುಚ್ಚಬೇಕು, ಗಾಜಿನ ಪೆಟ್ಟಿಗೆಯನ್ನು ಸಾಧನವಾಗಿ ಬಳಸಿದ್ದಲ್ಲಿ ವಿಕಿರಣಗಳು ಹೊರಗೆ ಬರದಂತೆ ಲೇಪನ ಮಾಡಬೇಕು. ಈ ವಿಕಿರಣಗಳು ಮನುಷ್ಯನ ಚರ್ಮಕ್ಕೆ ತಾಗಿದರೆ ಹಾನಿಯುಂಟು ಮಾಡಿ, ಅಡ್ಡ ಪರಿಣಾಮಗಳನ್ನು ಸೃಷ್ಟಿಸಬಹುದಾಗಿದೆ.


ಗಂಟೆಗೆ ಈ ಸಾಧನ 11 ವ್ಯಾಟ್‌ ವಿದ್ಯುತ್‌ ಉಪಯೋಗಿಸುತ್ತದೆ.

“ಈ ಸಾಧನವನ್ನು ಕೋವಿಡ್‌-19 ನೊಂದಿಗೆ ಹೋರಾಡಲು ಸಾರ್ವಜನಿಕರಿಗೆ ಸಹಾಯವಾಗಲೆಂದು ತಯಾರಿಸಲಾಗಿದೆ. ಮತ್ತು ಈ ಸಮಸ್ಯೆಗೆ ಇದು ನಮ್ಮ ಸಂಭಾವ್ಯ ಪರಿಹಾರದ ಪ್ರಯತ್ನವಾಗಿದೆ,” ಎಂದು ಸಾಧನದ ಅಭಿವೃದ್ಧಿಯ ಹಿಂದಿನ ಉದ್ದೇಶ ಬಿಚ್ಚಿಟ್ಟರು ಡಾ. ಇಸ್ಲೂರು.