ಮಂಗಳೂರಿನ ಶಿಕ್ಷಕ ದಂಪತಿಗಳ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌

ಮಿಮಿಕ್ರಿ ಹಾಗೂ ಗಾಂಧೀಜಿಯ ಭಾವಚಿತ್ರವನ್ನು ಪೇಪರ್ ಕಟಿಂಗ್‌ನಲ್ಲಿ ನಿರ್ಮಿಸುವ ಮೂಲಕ ಮಂಗಳೂರಿನ ಅಕ್ಷತಾ ಕುಡ್ಲ ಹಾಗೂ ಚೇತನ್ ಕೊಪ್ಪ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

ಮಂಗಳೂರಿನ ಶಿಕ್ಷಕ ದಂಪತಿಗಳ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌

Monday November 11, 2019,

2 min Read

ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗೆ ಕಲೆಗೆ ವಯಸ್ಸಿನ ಹಂಗಿಲ್ಲ ಎನ್ನುವುದು ಸತ್ಯವೇ. ಎಷ್ಟೋ ಜನ ತಮ್ಮ ಇಳಿ ವಯಸ್ಸಿನಲ್ಲೂ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಇನ್ನು ಹೆಣ್ಣು ಮಕ್ಕಳು ಕೂಡ ಮನೆಯಲ್ಲಿಯೇ ಕೂರದೇ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಲೇ ಇದ್ದಾರೆ. ಇದೀಗ ಈ ಸಾಧಕರ ಸಾಲಿಗೆ ಸೇರುತ್ತಿರುವವರೇ ಅಕ್ಷತಾ ಕುಡ್ಲ ಹಾಗೂ ಚೇತನ್ ಕೊಪ್ಪ. ಈ ಶಿಕ್ಷಕ ದಂಪತಿ ತಮ್ಮದೇ ಆದ ಕಲೆಗಳ ಮೂಲಕ ಇಂದು ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.


ಪ್ರಶಸ್ತಿಯೊಂದಿಗೆ ಅಕ್ಷತಾ ಕುಡ್ಲ ಹಾಗೂ ಚೇತನ್ ಕೊಪ್ಪ (ಚಿತ್ರ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್)


ಸಂತ ಅಲೋಶಿಯಸ್ ಗೊನ್ಜಾಂಗ ಶಾಲೆಯ ಕನ್ನಡ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಅಕ್ಷತಾ ಕುಡ್ಲ ಒಂದು ನಿಮಿಷದಲ್ಲಿ 40ಕ್ಕೂ ಅಧಿಕ ಧ್ವನಿಗಳ ಮಿಮಿಕ್ರಿ ಮಾಡಿದ್ದಾರೆ. ಮತ್ತು ಉಳಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಚೇತನ್ ಕೊಪ್ಪ ಅತ್ಯಲ್ಪ ಸಮಯದಲ್ಲಿ 10/11 ಅಡಿ ಗಾತ್ರದ ಗಾಂಧೀಜಿ ಭಾವಚಿತ್ರವನ್ನು ಪೇಪರ್ ಕಟಿಂಗ್‌ನಲ್ಲಿ ಮಾಡುವ ಮೂಲಕ ಈ ವರೆಗಿನ ದಾಖಲೆಗಳನ್ನು ಮುರಿದಿದ್ದಾರೆ ವರದಿ, ಇಡೆಕ್ಸ್ ಲೈವ್.


ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಪರ್ಧೆಯಲ್ಲಿ ಪ್ರಪಂಚದ 800 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮ ಹಂತಕ್ಕೆ ಈ ಇಬ್ಬರು ಶಿಕ್ಷಕ ದಂಪತಿ ಸೇರಿ ಒಟ್ಟು 18 ಮಂದಿ ಆಯ್ಕೆಯಾಗಿದ್ದರು. ಈ 18 ಮಂದಿಯಲ್ಲಿ ಅಕ್ಷತಾ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದರು. ಕೊನೆಗೆ ಅವರೇ ಗೆಲುವು ಸಾಧಿಸಿದ್ದಾರೆ. ಈ ಕುರಿತಂತೆ ಮಂಗಳೂರಿನಲ್ಲಿ ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಸುದ್ದಿಗೋಷ್ಟಿ ನಡೆಸಿ ಈ ಇಬ್ಬರು ಸಾಧಕರ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಈ ಜೋಡಿ ಸ್ವರೂಪ ಅಧ್ಯಯನ ಕೇಂದ್ರಕ್ಕೆ ಶಿಕ್ಷಣದ ಜೊತೆ ಕಲೆ ಸಾಹಿತ್ಯ, ನೃತ್ಯ ಸೇರಿದಂತೆ ಹಲವು ಚಟುವಟಿಕೆಗಳನ್ನು ನೀಡುವ ಗುರಿ ಹೊಂದಿದ್ದಾರೆ.


ಇಡೆಕ್ಸ್ ಲೈವ್ ಜೊತೆ ಮಾತನಾಡುತ್ತಾ ಚೇತನ್ ಕೊಪ್ಪಾ ಹೇಳುತ್ತಾರೆ,


ನಮ್ಮ ಸಾಧನೆ ನೂರಾರು ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವವರ ಪ್ರತಿಭೆಯನ್ನು ಪ್ರದರ್ಶಿಸಲು ಪ್ರೋತ್ಸಾಹಿಸುತ್ತದೆ. ಮಹಾತ್ಮ ಗಾಂಧಿಯವರ ಅತಿದೊಡ್ಡ ಭಾವಚಿತ್ರವನ್ನು ಪೇಪರ್ ಕಟಿಂಗ್‌ನಲ್ಲಿ ತಯಾರು ಮಾಡುವ ಮೂಲಕ ನಾನು ಈ ರೆಕಾರ್ಡ್ ಮಾಡಿದ್ದೇನೆ. 11 ಅಡಿ ಉದ್ದದ ಬಿಳಿ ಮತ್ತು ಕಪ್ಪು ಕಾಗದದ ಹಾಳೆಗಳನ್ನು ಇದಕ್ಕಾಗಿ ಬಳಸಿದ್ದೇನೆ ಮತ್ತು ಅಕ್ಟೋಬರ್ 2 ರಂದು ಗಾಂಧಿ ನಮನಾ ಕಾರ್ಯಕ್ರಮದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಗಾಂಧಿಯವರ ಭಾವಚಿತ್ರವನ್ನು 10.6 ಅಡಿಯಲ್ಲಿ ಮಾಡಿದ್ದೆ. ನನಗೆ ಈ ಕೆಲಸಕ್ಕೆ ಸ್ಪೂರ್ತಿಯಾಗಿದ್ದು, ಗೋಪಡ್ಕರ್ ಸ್ವರೂಪಾ ಅಧ್ಯಾಯ ಕೇಂದ್ರದ ವಿದ್ಯಾರ್ಥಿಯೂ ಆಗಿರುವ ಚಂದನ್ ಸುರೇಶ್ ಎನ್ನುತ್ತಾರೆ.


ಅಕ್ಷತಾ ಕುಡ್ಲ ಯುವಜನ ಮೇಳಗಳಲ್ಲಿ ರಾಜ್ಯ ಮಟ್ಟದ ಹಾಡಿಗಾಗಿ ಪ್ರಥಮ ಸ್ಥಾನ ಹಾಗೂ ರಾಷ್ಟ್ರ ಮಟ್ಟದ ಮಿಮಿಕ್ರಿಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮ ನೀಡಿದ್ದಾರೆ. ಹಾಡುಗಾರಿಕೆ, ನೃತ್ಯದಲ್ಲೂ ರಾಷ್ಟ್ರ ಮಟ್ಟದಲ್ಲಿ ಮಿಂಚಿದವರು. ಇನ್ನು ಚೇತನ್ ಕೊಪ್ಪ ಅವರು ಅಮ್ಮಾ ಮತ್ತೊಮ್ಮೆ ಕ್ಷಮಿಸು, ಅಸ್ಮಿತೆ, ಮುಹೂರ್ತ ಸರಿಯಿಲ್ಲ ಕೃತಿಗಳನ್ನು ಬರೆದಿದ್ದು, ಕಾಡೇ ಕೂಗು, ಬಂಗಾರದ ರೆಕ್ಕೆ ನಾಟಕಗಳನ್ನು ನಿರ್ದೇಶಿಸಿದ್ದಾರೆ.


ಇಡೆಕ್ಸ್ ಲೈವ್ ಜೊತೆ ಮಾತನಾಡುತ್ತಾ ಅಕ್ಷತಾ ಕುಡ್ಲ ಹೇಳುತ್ತಾರೆ,


ನಾನು ವಾಹನಗಳ ಧ್ವನಿ, ಸಂಗೀತ ಉಪಕರಣಗಳು, ಪಕ್ಷಿಗಳ ಶಬ್ದಗಳು ಸೇರಿದಂತೆ ವಿವಿಧ ಶಬ್ದಗಳನ್ನು ಒಂದು ನಿಮಿಷದಲ್ಲಿ ಅನುಕರಿಸಬಲ್ಲೆ. ಈ ಸ್ಪರ್ಧೆಯಲ್ಲಿ ನಾನು 40 ವಿಭಿನ್ನ ಶಬ್ದಗಳನ್ನು ಅನುಕರಿಸಿದೆ. ಸ್ಪರ್ಧೆಯಲ್ಲಿ ಹಾಜರಿದ್ದ ತೀರ್ಪುಗಾರರು ನನ್ನ ಪ್ರತಿಭೆಯನ್ನು ನೋಡಿ ಆಶ್ಚರ್ಯಪಟ್ಟರು. ಮಲ್ಟಿ-ಟಾಸ್ಕಿಂಗ್ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಾನು ಬಯಸುತ್ತೇನೆ. ನಾನು ಗೋಪಡ್ಕರ್ ಶಾಲೆಯಲ್ಲಿ ಅನುಕರಿಸುವ ಕಲೆಯನ್ನು ಕಲಿತಿದ್ದೇನೆ ಮತ್ತು ವಿದ್ಯಾರ್ಥಿಗಳನ್ನು ಈ ಕಲೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಮತ್ತು ಅವರು ಅನುಕರಿಸುವ ಕೌಶಲ್ಯಗಳನ್ನು ಬೆಳೆಸುವಲ್ಲಿ ಅವರಿಗೆ ಬೆಂಬಲ ನೀಡಲು ಈ ಸಾಧನೆ ಸಹಾಯ ಮಾಡಿದೆ ಎನ್ನುತ್ತಾರೆ.


ಮುಂದೆ ಚೇತನ್ ಕೊಪ್ಪ 50X50 ಅಡಿ ಗಾತ್ರದ ಮಹಾತ್ಮ ಗಾಂಧಿಜಿಯವರ ಬೃಹತ್ ಚಿತ್ರ ನಿರ್ಮಾಣದ ಆಸೆಯೊಂದಿದ್ದು, ಇದಕ್ಕಾಗಿ ಸಿದ್ಧತೆಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಅಕ್ಷತಾ ಕುಡ್ಲ 16 ಗಂಟೆ ನಿರಂತರ 300 ಕ್ಕೂ ಅಧಿಕ ಹಾಡುಗಳನ್ನು ನಿರಂತರವಾಗಿ ಹಾಡುವ ದಾಖಲೆಗೆ ಮುಂದಾಗುತ್ತಿದ್ದಾರೆ. ಈಗಾಗಲೇ ಭಾರತ ಸೇರಿದಂತೆ ವಿದೇಶಗಳನ್ನು ಸಾಕಷ್ಟು ಪ್ರದರ್ಶನ ನೀಡಿದ್ದಾರೆ ಅಕ್ಷತಾ. ದಾಖಲೆ ಮಾಡುವ ಮೂಲಕ ಭಾರತಕ್ಕೆ ವಿಶ್ವ ಮಟ್ಟದಲ್ಲಿ ಹೆಸರು ತಂದಿರುವುದು ಖುಷಿಯ ವಿಚಾರವೇ, ವರದಿ ಮಂಗಳೂರು ಟುಡೇ.