ಗೋಡೆ ಕುಸಿತದಲ್ಲಿ ಮೃತ ಪಟ್ಟ ಇಬ್ಬರು ಮಕ್ಕಳ ಕಣ್ಣುಗಳನ್ನು ದಾನ ಮಾಡಿದ ತಂದೆ
ಮೆಟ್ಟುಪಾಳಯಂನಲ್ಲಿ ನಡೆದ ಗೋಡೆ ಕುಸಿತದಲ್ಲಿ ಮೃತ ಪಟ್ಟ ಇಬ್ಬರು ಮಕ್ಕಳ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದ ಮಕ್ಕಳ ತಂದೆ ಸೆಲ್ವರಾಜ್.
ಅಂಗಾಂಗ ದಾನವು ತುಂಬಾ ಮುಖ್ಯವಾದುದು. ಇಂತಹ ದಾನವನ್ನು ಮಾಡಿ ಇನ್ನೊಬ್ಬರ ಜೀವನವನ್ನು ಬೆಳಕಾಗಿಸುವಂತಹ ಕಾರ್ಯವನ್ನು ಈ ತಂದೆ ಮಾಡಿದ್ದಾರೆ. ಯಾವ ತಂದೆ-ತಾಯಿಯು ಮಕ್ಕಳನ್ನು ಕಳೆದುಕೊಂಡು ದುಃಖಿತರಾಗಿರುವ ಆ ಸಂದರ್ಭದಲ್ಲಿ ಇಂತಹದೊಂದು ನಿರ್ಧಾರ ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟಕರ.
ಕೊಯಮತ್ತೂರಿನ ಮೆಟ್ಟುಪಾಳಯಂನ ನಾಡೂರ್ ಗ್ರಾಮದಲ್ಲಿ ಡಿ. 2 ರಂದು ಮನೆಗಳ ಮೇಲೆ ಕಂಪೌಂಡ್ ಗೋಡೆ ಕುಸಿದು 17 ಜನ ಸಾವಿನಪ್ಪಿದ ಘಟನೆ ನಡೆದಿದ್ದು, ಘಟನೆಯಲ್ಲಿ ನಿವೇದ (18) ಮತ್ತು ರಾಮನಾಥನ್ (15) ಎಂಬ ಮಕ್ಕಳಿಬ್ಬರು ಮೃತ ಪಟ್ಟಿದ್ದಾರೆ, ವರದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್.
ಮೃತರ ತಂದೆಯಾದ ಸೆಲ್ವರಾಜ್ ಅವರು ಜಡಯಪಾಲಯಂ ಪುಡೂರಿನ ಟೀ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಏಳು ವರ್ಷಗಳ ಹಿಂದೆ ಮೆಟ್ಟುಪಾಳಯಂನ ಕಟ್ಟಡವೊಂದರಿಂದ ಬಿದ್ದು ಸಾವನಪ್ಪಿದ್ದರು. ತಾಯಿಯನ್ನು ಕಳೆದುಕೊಂಡ ಮಕ್ಕಳಿಬ್ಬರೂ ಸೆಲ್ವರಾಜ್ ಅವರ ಅತ್ತಿಗೆ ನಾಡೂರಿನ ಮನೆಯಲ್ಲಿ ಮಲಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮೃತೆ ನಿವೇದಾ ಮೆಟ್ಟುಪಾಳಯಂನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ರಾಮನಾಥನ್ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ.
ಘಟನೆ ನಡೆದ ನಂತರ ಮಕ್ಕಳ ಶವಗಳನ್ನು ಮೆಟ್ಟುಪಾಳಯಂನ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿದ್ದಾಗ ಅರವಿಂದ ಕಣ್ಣಿನ ಆಸ್ಪತ್ರೆಯ ವೈದ್ಯರ ತಂಡವು ತಮ್ಮ ಮಕ್ಕಳ ಕಣ್ಣುಗಳನ್ನು ದಾನ ಮಾಡುವಂತೆ ಕೇಳಿಕೊಂಡಾಗ ಸೆಲ್ವರಾಜ್ ತಕ್ಷಣ ಒಪ್ಪಗೆ ನೀಡಿದ್ದರು, ವರದಿ ದಿ ನ್ಯೂಸ್ ಮಿನಿಟ್.
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುತ್ತಾ ಮಕ್ಕಳ ತಂದೆ ಸೆಲ್ವರಾಜ್,
“ನನ್ನ ಮಗಳು ಪೊಲೀಸ್ ಅಧಿಕಾರಿ ಆಗಬೇಕೆಂದು ಹೇಳಿತ್ತಿದ್ದೆ. ಅವಳು ಸಹ ಕಾಲೇಜು ಸೇರಿಕೊಂಡು ಪದವಿ ಓದುತ್ತಿದ್ದಳು. ಆದರೆ ಇಂದು ಅವಳ ಕನಸುಗಳು ಅವಳೊಂದಿಗೆ ಮಣ್ಣಾದವು. ನನ್ನ ಭರವಸೆಗಳು ಹಾಳಾದವು. ಮಕ್ಕಳ ಕಣ್ಣುಗಳನ್ನು ವೈದ್ಯರು ದಾನ ಮಾಡುವಂತೆ ಕೇಳಿಕೊಂಡಾಗ ತಕ್ಷಣ ಒಪ್ಪಿಕೊಂಡೆ. ಈ ಮೂಲಕವಾದರೂ ನನ್ನ ಮಕ್ಕಳ ಕಣ್ಣುಗಳು ಈ ಪ್ರಪಂಚದಲ್ಲಿ ವಾಸಿಸಲೆಂದು” ಎನ್ನುತ್ತ ತಮ್ಮ ದುಃಖವನ್ನು ಹೊರಹಾಕಿದರು.
ಮಣ್ಣಲ್ಲಿ ಮಣ್ಣಾಗಿ ಹಾಳಾಗುವ ಕಣ್ಣುಗಳನ್ನು ದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗುವಂತೆ ಮಾಡಿದ್ದಾರೆ. ಒಬ್ಬ ತಂದೆ ತನ್ನ ದುಃಖವನ್ನು ಮೀರಿ ಮಕ್ಕಳ ಕಣ್ಣುಗಳನ್ನು ದಾನ ಮಾಡಿರುವುದು ನಿಜಕ್ಕೂ ಮೆಚ್ಚುವಂತಹದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.