ಆವೃತ್ತಿಗಳು
Kannada

ಆನ್​ಲೈನ್​ನಲ್ಲಿ ಕನ್ನಡ ಅಭಿವೃದ್ಧಿಗಾಗಿ ಪಣ ತೊಟ್ಟ ಟೆಕ್ಕಿಗಳು

ಟೀಮ್​ ವೈ.ಎಸ್​. ಕನ್ನಡ

YourStory Kannada
10th Oct 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಕನ್ನಡವನ್ನು ಉಳಿಸುತ್ತೇವೆ, ಬೆಳೆಸುತ್ತೇವೆ ಎಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ಆದರೆ ಕನ್ನಡಕ್ಕಾಗಿ ನಡೆಯುವ ಕೆಲಸ ಅಷ್ಟರಲ್ಲೇ ಇರುತ್ತದೆ. ಹೇಳಿಕೊಳ್ಳುವುದಕ್ಕೆ ಮಾತ್ರ ಕನ್ನಡದ ಕೆಲಸ ನಡೆಯುತ್ತಿರುತ್ತದೆ. ಆದ್ರೆ ಅದ್ರ ಫಲಿತಾಂಶ ಮಾತ್ರ ಶೂನ್ಯ. ಆದ್ರೆ ಕೆಲ ಉತ್ಸಾಹಿ ಯುವಕ ತಂಡವೊಂದು ಇಂಟರ್​ನೆಟ್​ನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದೆ. ಆನ್​ಲೈನ್​ನಲ್ಲಿ ಕನ್ನಡದಲ್ಲಿ ಮನರಂಜನೆ, ಮಾಹಿತಿ ಸಿಗುತ್ತದೆಯೋ ಎಂಬುದನ್ನು ಹುಡುಕಿದರೆ ಇಲ್ಲ ಅನ್ನೋ ಉತ್ತರ ಬರಬಹುದು. ಆದರೆ ಬೇರೆ ಭಾಷೆಗಳಲ್ಲಿ ಇದು ಸಿಗುತ್ತದೆ. ಅದನ್ನು ನಿವಾರಿಸಲು ಯುವಕರ ತಂಡವೊಂದು ಕರ್ನಾಟಕ ಎಂಟರ್​ಟೈನ್​ಮೆಂಟ್​ ಬೋರ್ಡ್ ಎಂಬ ಯೂಟ್ಯೂಬ್ ಚಾನೆಲ್ ಮಾಡಿಕೊಂಡು ಅದರ ಮೂಲಕ ಕನ್ನಡದಲ್ಲಿ ನಿರಂತರ ಮನರಂಜನೆ ನೀಡಲು ಸಜ್ಜಾಗಿದೆ. ಅದರ ಮೊದಲ ಕಂತಾಗಿ ಇತ್ತೀಚೆಗೆ ಬಿಡುಗಡೆಯಾಗಿರುವುದೇ ವಿಕೇಂಡ್ ವಿತ್ ಸುರೇಶ್.

image


ಏನಿದು ಚಾನಲ್​..?

ಇತ್ತೀಚಿನ ದಿನಗಳಲ್ಲಿ ಖಾಸಗಿ ವಾಹಿನಿಗಳಂತೆ ಯೂಟ್ಯೂಬ್ ಚಾನಲ್​ಗಳು ಕೂಡ ಸಾಕಷ್ಟು ಹೆಸರು ಮಾಡುತ್ತಿವೆ. ಉತ್ಸಾಹಿ ಯುವಕರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರ್ಪಡಿಸಲು ಯೂಟ್ಯೂಬ್​ನಲ್ಲಿ ಚಾನೆಲ್ ತೆರೆದು ಅಲ್ಲಿ ಅವರು ನಿರ್ದೇಶಿಸಿದ ಕೆಲ ವಿಡಿಯೋಗಳನ್ನು ಅಪ್​ಲೋಡ್ ಮಾಡುತ್ತಾರೆ. ಹಿಂದಿ ಸೇರಿದಂತೆ ಮತ್ತಿತರ ಭಾಷೆಗಳಲ್ಲಿ ಇದು ಸಾಕಷ್ಟು ಯಶಸ್ವಿಯಾಗಿದೆ. ಯೂಟ್ಯೂಬ್ ಮೂಲಕ ಕನ್ನಡ ಭಾಷೆಯಲ್ಲಿ ನಿರಂತರ ಮನರಂಜನೆ ನೀಡಬೇಕು ಎನ್ನುವ ಉದ್ದೇಶದಿಂದ ಈ ಕೆಇಬಿ ಯೂಟ್ಯೂಬ್ ಚಾನೆಲ್ ರಚನೆಯಾಗಿದೆ. ಈ ಚಾನೆಲ್ ಮಾಡಿರುವವರಲ್ಲಿ ಸಾಕಷ್ಟು ಮಂದಿ ಕಿರು ಚಿತ್ರ ನಿರ್ಮಾಣ ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ್ಯಾಂತ ಸಂಚಲನ ಸೃಷ್ಟಿಸಿದ್ದ ’ ಬಾರಿಸು ಕನ್ನಡ ಡಿಂಡಮ’ ವಿಡಿಯೋ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದು ಇದೇ ತಂಡ.

image


ನಾನಾ ಕ್ಷೇತ್ರದ ಸಾಧಕರನ್ನು ವೀಕ್ಷಕರೆದುರು ಇಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಎಲ್ಲರಿಗೂ ಗೊತ್ತು. ಆದರೆ ಅದಲ್ಲ ಇದು. ಅಂಥದ್ದೇ ಮಾದರಿಯ ಟೆಕ್ಕಿಗಳ ದುನಿಯಾ ಇದು. ಕೆಇಬಿಯ ಸದಸ್ಯ, ಟೆಕ್ಕಿ ಮಹದೇವ್ ಎಂಬುವವರ ನಿರ್ದೇಶನದಲ್ಲಿ ‘ವೀಕೆಂಡ್ ವಿತ್ ಸುರೇಶ್’ ಎಂಬ 30 ನಿಮಿಷದ ಟಾಕ್ ಶೋ ನಿರ್ಮಾಣ ಮಾಡಿದೆ.

image


ವೀಕೆಂಡ್ ವಿತ್ ಸುರೇಶ್ ಸ್ಪೆಷಲ್

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪಡಿಯಚ್ಚಿನಂತಿದ್ದು, ಇದರಲ್ಲಿ ಮಹದೇವ್ ಮತ್ತವರ ತಂಡ ತಮ್ಮದೇ ಆದ ರೀತಿಯಲ್ಲಿ ಹಾಸ್ಯದ ಹೊನಲನ್ನು ಹರಿಸಿದ್ದಾರೆ. ಅಲ್ಲಿ ಸಾಧಕರನ್ನು ಎಲ್ಲ ಜನರಿಗೆ ಪರಿಚಯಿಸುವ ಕೆಲಸವನ್ನು ನಟ ರಮೇಶ್ ಮಾಡುತ್ತಿದ್ದರು. ಆದರೆ ಈ ಯುವಕರು ಒಬ್ಬ ಸಾಮಾನ್ಯ ಸಾಫ್ಟ್​ವೇರ್ ಎಂಜಿನಿಯರ್ ಜೀವನವನ್ನು ಇಲ್ಲಿ ಚಿತ್ರಿಸಿದ್ದಾರೆ. ಸುರೇಶ್ ವೇಣುಗೋಪಾಲ್ ಎಂಬ ಕಾಲ್ಪನಿಕ ಪಾತ್ರ ಸೃಷ್ಟಿಸಿ ಅವರ ಜೀವನದ ಘಟನೆಗಳನ್ನು ಮೆಲುಕು ಹಾಕುತ್ತಾರೆ. ಅಲ್ಲದೆ ಕೆಲ ಎಮೋಶನಲ್ ಸೀನ್​ಗಳನ್ನು ಸಹ ಕ್ರಿಯೇಟ್ ಮಾಡಿ ಪ್ರೇಕ್ಷಕರ ನಗೆ ಉಕ್ಕಿಸುತ್ತಾರೆ.

image


" ಇಂಟರ್​ನೆಟ್​ನಲ್ಲಿ ಕನ್ನಡದಲ್ಲಿ ಮನರಂಜನೆ ಸಿಗುವ ಹಾಗೆ ಮಾಡಬೇಕು ಎಂದು ನನ್ನ ಗೆಳೆಯರೊಂದಿಗೆ ಯೋಚಿಸುತ್ತಿದ್ದಾಗ ಹುಟ್ಟಿಕೊಂಡಿದ್ದೇ ಈ ಕೆಇಬಿ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಥೀಮ್ ಮಾತ್ರ ಇಲ್ಲಿ ಬಳಸಿಕೊಂಡಿದ್ದೇವೆ. ವಿಡಂಬನೆ ಮೂಲಕ ಹಾಸ್ಯವನ್ನು ಕನ್ನಡದಲ್ಲಿ ಆನ್​ಲೈನ್​ ಹೇಳುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ.
-ಮಹದೇವ್ ಪ್ರಸಾದ್, ನಿರ್ದೇಶಕ

ಸಿನಿಮಾ ಮಂದಿಯಿಂದ ಮೆಚ್ಚುಗೆ

ನಟ ರಮೇಶ್ ಅರವಿಂದ್ ಈ ವಿಡಿಯೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂಲ ಶೋ ಅವರದ್ದೇ ಆದರೂ ಈ ವೀಕೆಂಡ್ ವಿತ್ ಸುರೇಶ್ ಕಾರ್ಯಕ್ರಮವನ್ನು ನೋಡಿದ ಅವರು ಟ್ವಿಟ್ ಮಾಡಿ ಯುವಕರ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ತಮ್ಮ ಫೇಸ್​ಬುಕ್ ವಾಲ್​ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರಮೇಶ್ ಮಾತ್ರವಲ್ಲದೆ ಯೂಟರ್ನ್ ಚಿತ್ರದ ನಿರ್ದೇಶಕ ಪವನ್​ಕುಮಾರ್, ನಟಿಯರಾದ ಶ್ರುತಿ ಹರಿಹರನ್, ರಾಧಿಕಾ ಚೇತನ್, ಸಂಯುಕ್ತ ಹೊರನಾಡ್ ನಟ ಧನಂಜಯ ಎಲ್ಲರೂ ಈ ವಿಡಿಯೋವನ್ನು ಮೆಚ್ಚಿಕೊಂಡು ಟ್ವಿಟರ್ ಮತ್ತು ಫೇಸ್ ಬುಕ್​ನಲ್ಲಿ ಶೇರ್ ಮಾಡಿದ್ದಾರೆ.

ಗಮನ ಸೆಳೆಯುವ ಆ್ಯಂಕರ್

ಈ ಶೋದಲ್ಲಿ ಆ್ಯಂಕರ್ ಪಾತ್ರ ಮಾಡಿರುವ ನಟ ಪೂರ್ಣಚಂದ್ರ ಮೈಸೂರು ತಮ್ಮ ವಾಕ್ಚಾತುರ್ಯ, ಮತ್ತು ಕಾಮಿಡಿ ಟೈಮಿಂಗ್​ನಿಂದ ಗಮನ ಸೆಳೆಯುತ್ತಾರೆ. ಇನ್ನು ಸೈಬರ್ ಸುಂದರ ಪಾತ್ರಧಾರಿ ನಾಗಭೂಷಣ್, ಅಪ್ಪನ ಪಾತ್ರಧಾರಿ ರಾಜೇಶ್ ಸಾಫ್ಟ್​ವೇರ್ ಎಂಜಿನಿಯರ್ ಪಾತ್ರಧಾರಿ ಶಮಂತ್ ಎಲ್ಲರೂ ತಮ್ಮ ಟೈಮಿಂಗ್​ನಿಂದ ಗಮನ ಸೆಳೆಯುತ್ತಾರೆ. ಒಟ್ಟಿನಲ್ಲಿ ಕನ್ನಡಕ್ಕಾಗಿ ಮತ್ತು ಅದನ್ನು ಉಳಿಸುವುದಕ್ಕಾಗಿ ದೊಡ್ಡ ಪ್ರಯತ್ನವೇ ನಡೆಯುತ್ತಿದೆ.

ಇದನ್ನು ಓದಿ:

1. ಉಕ್ಕಿ ಹರಿಯುವ ನದಿಗೆ ಸೇತುವೆ ಕಟ್ಟಿದ್ರು- ಎರಡೂ ಗ್ರಾಮಗಳ ಜನರಿಗೆ ನೆಮ್ಮದಿ ತಂದ್ರು..!

2. ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!

3. ಬೈಕ್ ಏರಿ ಮಹಿಳಾಮಣಿಗಳ ಹಿಮಾಲಯ ಸವಾರಿ!

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories