ಚೆನ್ನೈ ವಿಮಾನನಿಲ್ದಾಣದ ಅಗ್ನಿಶಾಮಕ ದಳದಲ್ಲಿ ಆಯ್ಕೆಯಾದ ಮೊದಲ ಮಹಿಳಾ ಸಿಬ್ಬಂದಿ
ಚೆನ್ನೈನ ವಿಮಾನ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿಯಾಗಿ ಆಯ್ಕೆಯಾದ ಮೊದಲ ಮಹಿಳೆಯಾಗಿ ಕೇರಳದ ರೆಮ್ಯಾ ಶ್ರೀಕಾಂತನ್ ಆಯ್ಕೆಯಾಗಿದ್ದಾರೆ.
ಇಂದು ಹೆಣ್ಣುಮಕ್ಕಳು ಕೂಡ ಹಲವಾರು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಾ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಪುರುಷರಷ್ಟೇ ಮಾಡುತ್ತಿದ್ದ ಕೆಲಸಗಳನ್ನು ಸಹ ನಾವು ಮಾಡಲು ಸಾಧ್ಯ ಎಂದು ತಾವು ಮಾಡುವ ಕಠಿಣ ಕಾರ್ಯಗಳ ಮೂಲಕ ಸಾಬೀತುಪಡಿಸುತ್ತಿದ್ದಾರೆ. ಅದಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ಸಿಬ್ಬಂದಿಯಾಗಿ ಮೊದಲ ಮಹಿಳೆಯಾಗಿ ರೆಮ್ಯಾ ಆಯ್ಕೆಯಾಗಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣವು ಮೊದಲ ಮಹಿಳಾ ಅಗ್ನಿಶಾಮಕ ದಳದ ಸಿಬ್ಬಂದಿಯಾಗಿ ಇಪ್ಪತ್ತೆಂಟು ವರ್ಷದ ರೆಮ್ಯಾ ಶ್ರೀಕಾಂತನ್ ಅವರನ್ನು ಜ್ಯೂನಿಯರ್ ಅಸಿಸ್ಟೆಂಟ್ (ಎಎಫ್ಎಸ್) ಆಗಿ ಆಯ್ಕೆ ಮಾಡಿದೆ.
ಈ ಮೂಲಕ ರೆಮ್ಯಾ ದಕ್ಷಿಣ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಮೊದಲ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಾಗಿ ಮತ್ತು ದೇಶದಲ್ಲಿ ಮೂರನೇ ಅಗ್ನಿಶಾಮಕ ಸಿಬ್ಬಂದಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ರೆಮ್ಯಾ ದಕ್ಷಿಣ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುತ್ತಾ,
"ನಾನು ಸವಾಲಿನ ಕೆಲಸವನ್ನು ಆಯ್ದುಕೊಂಡಿದ್ದು, ಅದನ್ನು ಸರಿಯಾಗಿ ತಲುಪುವ ವಿಶ್ವಾಸವನ್ನು ಹೊಂದಿದ್ದೇನೆ. ಇದರಿಂದ ಭವಿಷ್ಯದ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಅಗ್ನಿಶಾಮಕ ಸೇವೆಗಳಿಗೆ ಸೇರುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದರು.
ಕೆಲಸಕ್ಕೆ ಸೇರುವ ಮುನ್ನ, ನವದೆಹಲಿಯ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ ನಾಲ್ಕು ತಿಂಗಳ ಕಾಲ ರೆಮ್ಯಾ ಕಠಿಣ ತರಬೇತಿಯನ್ನು ಪಡೆದಿದ್ದಾರೆ.
ಕೇರಳ ರಾಜ್ಯದ ತಿರುವನಂತಪುರಂ ನಗರದ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ರೆಮ್ಯಾ ಅವರು ಸ್ಟ್ರಕ್ಚರಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಎಎಐಗೆ ಸೇರುವ ಮೊದಲು ಎಲ್.ಬಿ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫಾರ್ ವುಮೆನ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಎರಡು ವರ್ಷದ ಮಗುವಿನ ತಾಯಿ ಕೂಡ ಹೌದು, ವರದಿ ಎಡೆಕ್ಸ್ ಲೈವ್.
ವಿಮಾನ ನಿಲ್ದಾಣದ ಅಗ್ನಿಶಾಮಕ ಉದ್ಯೋಗಗಳು ಕೇವಲ ಪುರುಷರಿಗೆ ಎಂಬಂತೆ ಸೀಮಿತವಾಗಿದ್ದವು. ಪ್ರಸ್ತುತ ಅದು ಬದಲಾಗುತ್ತಿದ್ದು ಮಹಿಳೆಯು ಕೂಡ ನಾವು ಕಾರ್ಯ ನಿರ್ವಹಿಸಬಹುದೆಂದು ಈ ಮೂಲಕ ಸಾಬೀತುಪಡಿಸುತ್ತಿದ್ದಾರೆ. ಭಾರತದ ವಿಮಾನನಿಲ್ದಾಣ ಪ್ರಾಧಿಕಾರ(ಎಎಐ) 2018ರಲ್ಲಿ ಮೊದಲ ಮಹಿಳಾ ಅಗ್ನಿಶಾಮಕ ದಳವನ್ನು ತನ್ನ ಶ್ರೇಣಿಯಲ್ಲಿ ಸೇರಿಸಿಕೊಂಡಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.