ಗ್ರಾಮಸ್ಥರಿಗೆ ಪರಿಸರ ಪ್ರವಾಸೋದ್ಯಮದ ಮೂಲಕ ಪ್ರತಿವರ್ಷ 1 ಕೋಟಿ ರೂ. ಆದಾಯ ಬರುವಂತೆ ಮಾಡಿದ ಒಡಿಶಾದ ಅರಣ್ಯಾಧಿಕಾರಿ

ಮಹಾನದಿ ವನ್ಯಜೀವಿ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ಅನ್ಶು ಪ್ರಜ್ಞಾನ್ ದಾಸ್ ಅವರು ಗ್ರಾಮದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಒಡಿಶಾದ ಮುದುಲಿಗಡಿಯಾ ಹಳ್ಳಿಗರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ.

ಗ್ರಾಮಸ್ಥರಿಗೆ ಪರಿಸರ ಪ್ರವಾಸೋದ್ಯಮದ ಮೂಲಕ ಪ್ರತಿವರ್ಷ 1 ಕೋಟಿ ರೂ. ಆದಾಯ ಬರುವಂತೆ ಮಾಡಿದ ಒಡಿಶಾದ ಅರಣ್ಯಾಧಿಕಾರಿ

Wednesday July 15, 2020,

2 min Read

ಮಹಾನದಿ ನದಿಯ ರತ್ನ-ನೀಲಿ ನೀರಿಗೆ ಹತ್ತಿರದಲ್ಲಿದೆ ಮುದುಲಿಗಡಿಯಾ - ಒಡಿಶಾದ ನಾಯಗರ್‌ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಸಂಪೂರ್ಣವಾಗಿ ಸ್ವ-ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿರುವ ಈ ಹಳ್ಳಿಯು ಜಿಲ್ಲೆಗೆ ಮಾದರಿಯಂತಿದೆ.


ಮಹಾನದಿ ವನ್ಯಜೀವಿ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ಅನ್ಶು ಪ್ರಜ್ಞಾನ್ ದಾಸ್ ತಮ್ಮ ದೃಢನಿಶ್ಚಯ ಮತ್ತು ಸಮರ್ಪಣೆಯ ಮೂಲಕ ಇದನ್ನು ಸಾಧ್ಯವಾಗಿಸಿದ್ದಾರೆ. 2018 ರಲ್ಲಿ ಪ್ರಾರಂಭಿಸಲಾದ ಈ ಪರಿಸರ-ಪ್ರವಾಸೋದ್ಯಮ ಯೋಜನೆ ಹಳ್ಳಿಗರಿಗೆ ಜೀವನೋಪಾಯವನ್ನು ಗಳಿಸಲು ಸಹಾಯ ಮಾಡಿರುವುದಲ್ಲದೆ ಅರಣ್ಯ ಸಂರಕ್ಷಣೆ ಪ್ರಯತ್ನಗಳನ್ನು ವೃದ್ಧಿಸಿದೆ.


ಮಹಾನದಿ ವನ್ಯಜೀವಿ ವಿಭಾಗದ ವಿಭಾಗೀಯ ಅರಣ್ಯ ಅಧಿಕಾರಿ ಅನ್ಶು ಪ್ರಜ್ಞಾನ್ ದಾಸ್




ಮರಳು ಹಾಸಿನ ಮೇಲೆ ಡೇರೆ ಹಾಕುವುದರಿಂದ ಹಿಡಿದು ಮನೆಗಳ ಗೋಡೆಗಳ ಮೇಲೆ ಚಿತ್ತಾರ ಬಿಡಿಸುವುದರವರೆಗೆ ಈ ಉಪಕ್ರಮವು ಸುಸ್ಥಿರವಾದ ಮಾದರಿ ಹಳ್ಳಿಯನ್ನಾಗಿಸಲು ಜನರನ್ನು ಒಟ್ಟುಗೂಡಿಸಿದೆ. ಇದರ ಹೊರತಾಗಿ ಹಳ್ಳಿಯು ರಾಜ್ಯ ಅರಣ್ಯ ಇಲಾಖೆಯ ಸಹಾಯದಿಂದ ಪರಿಸರ ಅಭಿವೃದ್ಧಿ ಸಮಿತಿ(ಇಡಿಸಿ)ಯನ್ನು ಸ್ಥಾಪಿಸಿದೆ.


“ಹಳ್ಳಿಯನ್ನು ಅಭಿವೃದ್ಧಿಪಡಿಸಲು ಹೇಗೆ ಹೂಡಿಕೆ ಮಾಡಬೇಕೆಂದು ಹಳ್ಳಿಯ ಸಮಿತಿಯವರು ನನ್ನನ್ನು ಕೇಳಿದರು. ಆಗಲೆ ನನಗೆ ಎಕೊ-ವಿಲೇಜ್‌ (ಪರಿಸರ ಗ್ರಾಮ)ನ ಕಲ್ಪನೆ ಬಂದಿತು,” ಎನ್ನುತ್ತಾರೆ ವಿಭಾಗೀಯ ಅರಣ್ಯ ಅಧಿಕಾರಿ ಅನ್ಶು.


ಇಂದು ಮುದುಲಿಗಾಡಿಯಾದ ಎಲ್ಲ 35 ಕುಟುಂಬಗಳು ಅಡಿಗೆ ಮಾಡಲು ಕಟ್ಟಿಗೆ ಬಿಟ್ಟು ಎಲ್‌ಪಿಜಿ ಬಳಸುತ್ತಿವೆ, ಇದು ಆ ಪ್ರದೇಶದ ವಾಯು ಮಾಲಿನ್ಯ ತಡೆಯಲು ಸಹಾಯ ಮಾಡಿದೆ. ಗಿಡ ಮರ ಬೆಳೆಸಿ, ರಸ್ತೆ ಮಾಡಿ ಪ್ರವಾಸಿಗರನ್ನು ಸ್ವಾಗತಿಸುವಂತೆ ಅನ್ಶು ಮತ್ತು ಅವರ ತಂಡವು ಹಳ್ಳಿಗರನ್ನು ಪ್ರೋತ್ಸಾಹಿಸಿದೆ. ಹಳ್ಳಿಯನ್ನು ಬಯಲು ಬಹಿರ್ದೆಸೆಯಿಂದ ಮುಕ್ತಗೊಳಿಸಲು ಶೌಚಾಲಯ ಕಟ್ಟಲು, ಕಸದ ಬುಟ್ಟಿಗಳನ್ನಿಡಲು ಮತ್ತು ಸಮರ್ಪಕ ನೀರಿನ ಸಂಪರ್ಕವನ್ನೆರ್ಪಡಿಸಲು ಅನ್ಶು ಹಳ್ಳಿಗರಿಗೆ ಬೆಂಬಲ ನೀಡಿದ್ದಾರೆ.


ಪರಿಸರ ಪ್ರವಾಸೋದ್ಯಮ ಯೋಜನೆಯಿಂದಾಗಿ ಗ್ರಾಮಸ್ಥರ ಜೀವನಶೈಲಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಇಡಿಸಿ ಅಧ್ಯಕ್ಷ ಸುಮಂತ ದಾಸ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.


ಮುದುಲಿಗಾಡಿಯಾ ಹಳ್ಳಿಯಲ್ಲಿರುವ ಮನೆಗಳು.



"ಪರಿಸರ-ಪ್ರವಾಸೋದ್ಯಮ ತಾಣಗಳು ಸ್ಥಳೀಯರಿಗೆ ಸಾಕಷ್ಟು ಆದಾಯವನ್ನು ಗಳಿಸಲು ಸಹಾಯ ಮಾಡಿದವು, ಮತ್ತು ಅವರು ಕ್ರಮೇಣ ತಮ್ಮ ಜೀವನೋಪಾಯವನ್ನು ಗಳಿಸಲು ಅರಣ್ಯ ಉತ್ಪನ್ನಗಳ ಮೇಲಿನ ಅವರ ಅವಲಂಬನೆ ಕಡಿಮೆಯಾಯಿತು. ಪರಿಸರ ಪ್ರವಾಸೋದ್ಯಮದ ಒಡಿಶಾ ಮಾದರಿಯು ಭಾರತದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ಸಮುದಾಯ ಆಧಾರಿತ ಮಾದರಿಯಾಗಿದೆ, ಅಲ್ಲಿ ಇಡೀ ಪ್ರವಾಸೋದ್ಯಮ ಆದಾಯದ 80 ಪ್ರತಿಶತಕ್ಕಿಂತಲೂ ಹೆಚ್ಚಿನದನ್ನು ಸಮುದಾಯಕ್ಕೆ ವೇತನವಾಗಿ ಹಿಂದಿರುಗಿಸಲಾಗುತ್ತದೆ, ಉಳಿದ 20 ಪ್ರತಿಶತವನ್ನು ನಿರ್ವಹಣೆ, ಪಾಲನೆ, ಪ್ರವಾಸಿ ತಾಣಗಳ ಶ್ರೇಣೀಕರಣಕ್ಕಾಗಿ ಬಳಸಲಾಗುತ್ತದೆ,” ಎಂದು ಅನ್ಶು ವಿವರಿಸಿದರು.


ಅನ್ಶು ನೇತೃತ್ವದ ಅರಣ್ಯ ಇಲಾಖೆಯ ಸಂಪೂರ್ಣ ವನ್ಯಜೀವಿ ವಿಭಾಗವು ಹಳ್ಳಿಗರ ಜೀವನವನ್ನು ಬದಲಿಸಿದೆ. ಈ ಯೋಜನೆಯು ಕಳೆದ ಎರಡು ವರ್ಷಗಳಲ್ಲಿ 1 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸಿದ್ದಲ್ಲದೆ, ತಿಂಗಳಿಗೆ ಪ್ರತಿ ಕುಟುಂಬ ಸುಮಾರು ರೂ. 15,000 ರೂ. ಗಳಿಸಲು ಸಹಾಯ ಮಾಡಿದೆ.