ನಾಸಾಗೆ ಪ್ರಯಾಣ ಬೆಳೆಸಿದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ
ತಮಿಳುನಾಡಿನ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿನಿ ಯಾವ ಕಾನ್ವೆಂಟ್ ಶಾಲೆಗೂ ಕಮ್ಮಿ ಇಲ್ಲಾ ಎಂಬಂತೆ ಒಂದೇ ತಿಂಗಳಲ್ಲಿ ಇಂಗ್ಲೀಷ್ ಕಲಿತು ನಾಸಾಗೆ ತೆರಳಲು ಅವಕಾಶ ಪಡೆದುಕೊಂಡು ಸಾಧನೆ ಮಾಡಿತೊರಿಸಿದ್ದಾಳೆ.
ತಮಿಳುನಾಡಿನ ತಂಜಾವೂರು ಜಿಲ್ಲೆಯ ಅದನಕೊಟ್ಟೈನ ಸರ್ಕಾರಿ ಪ್ರೌಢ ಶಾಲೆಯಲ್ಲಿ 11ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕೆ. ವಿಜಯಲಕ್ಷ್ಮಿ ಆನ್‌ಲೈನ್ ನಲ್ಲಿ ನಡೆದ ಗೋ4ಗುರು ಎಂಬ ಸ್ಪರ್ಧೆಯಲ್ಲಿ ವಿಜೇತಳಾಗುವ ಮೂಲಕ ಅಮೇರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ತೆರಳಲು ಆಯ್ಕೆಯಾಗಿದ್ದಾಳೆ. ತನಗೆ ಇಂಗ್ಲೀಷ್ ಬಾರದ ಕಾರಣ ಈ ಸ್ಪರ್ಧೆಗಾಗಿ ಕೇವಲ ಒಂದು ತಿಂಗಳಲ್ಲಿ ಇಂಗ್ಲೀಷ್ ಕೋಚಿಂಗ್ ಪಡೆದುಕೊಂಡು ಆನ್‌ಲೈನ್ ಪರೀಕ್ಷೆಯಲ್ಲಿ 2ನೇ ಕ್ರಮಾಂಕ ಪಡೆದುಕೊಂಡಿದ್ದಾಳೆ.
ಕೆ.ವಿಜಯಲಕ್ಷ್ಮಿ ಮಧ್ಯಮ ವರ್ಗದ ಬಡ ವಿದ್ಯಾರ್ಥಿನಿ ತನ್ನ ಬುದ್ದಿ ಮಾಂದ್ಯ ತಾಯಿ ಹಾಗೂ ತಮ್ಮನನ್ನು ಈಕೆಯೇ ನೋಡಿಕೊಳ್ಳುತ್ತಿದ್ದಾಳೆ. ಕುಟುಂಬವನ್ನು ನಿಭಾಯಿಸಲು ವಿಜಯಲಕ್ಷ್ಮಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತೆಗೆದುಕೊಳ್ಳುತ್ತಾಳೆ ಹಾಗೂ ಗೋಡಂಬಿಗಳನ್ನು ಮಾರಾಟ ಮಾಡಿ ಮನೆ ನಡೆಸುತ್ತಿದ್ದಾಳೆ. ಆನ್‌ಲೈನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದ ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ವಿಜಯಲಕ್ಷ್ಮಿಯೂ ಒಬ್ಬಳು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುತ್ತಾ ಕೆ.ವಿಜಯಲಕ್ಷ್ಮಿ,
“ನಾನು ಕ್ಯಾರಂಮ್ ಆಟವನ್ನು ಪ್ರಾಕ್ಟೀಸ್ ಮಾಡುತ್ತಿರುವಾಗ ಬೋರ್ಡ್‌ನ ಪಕ್ಕದಲ್ಲಿ ಬಿದ್ದಿದ್ದ ಪತ್ರಿಕೆ ನೋಡಿದೆ. ಅದರಲ್ಲಿ ಕಳೆದ ವರ್ಷ ನಾಸಾಗೆ ತೆರಳಲು ಅವಕಾಶ ಪಡೆದುಕೊಂಡಿದ್ದ ಧನ್ಯಾ ಥಸ್ನೆಮ್ ಅವರ ಸುದ್ದಿಯನ್ನು ಓದಿದೆ ತಕ್ಷಣವೇ ಮನೆಗೆ ಹೋಗಿ ಪರೀಕ್ಷೆಗೆ ನೋಂದಾಯಿಸಿದೆ,” ಎನ್ನುತ್ತಾಳೆ.
ನಾಸಾದ ಬಾಹ್ಯಾಕಾಶ ವಿಜ್ಞಾನಿಗಳನ್ನು ಸಂದರ್ಶಿಸುವ ಹಾಗೂ ಐದು ದಿನಗಳ ಪ್ರವಾಸದಲ್ಲಿ ಕಾರ್ಯಾಗಾರ ಅಷ್ಟೇ ಅಲ್ಲದೇ ಡಿಸ್ನಿ ಅಂತಹ ಪ್ರವಾಸಿ ತಾಣಗಳಿಗೂ ಭೇಟಿ ನೀಡಲಿದ್ದಾಳೆ. ಈ ಪ್ರವಾಸ ಈ ವರ್ಷದ ಮೇ ತಿಂಗಳಲ್ಲಿ ನಡೆಯಲಿದೆ.
ಕಷ್ಟ ಪಟ್ಟು ಓದಿ ಸ್ಪರ್ಧೆಯಲ್ಲಿ ವಿಜೇತಳಾಗಿ ನಾಸಾಗೆ ತೆರಳಲು ಸಿದ್ಧವಾಗಿರುವ ವಿಜಯಲಕ್ಷ್ಮಿಗೆ ತನ್ನ ಬಡತನ ಅಡ್ಡಿಯಾಗಿತ್ತು. ನಾಸಾ ಪ್ರಯಾಣದ ವೆಚ್ಚ ಸುಮಾರು 1.69 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.
ನನ್ನ ತಂದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಯಾವಾಗಲಾದರೂ ಒಂದು ಬಾರಿ ಹಣ ಕಳಿಸುತ್ತಾರೆ. ನನ್ನ ಶಿಕ್ಷಕರು ಹಾಗೂ ಸ್ನೇಹಿತರ ಸಹಾಯದಿಂದ ಪಾಸ್‌ಪೋರ್ಟ್ ಪಡೆದುಕೊಂಡಿದ್ದೇನೆ. ಪಾಸ್‌ಪೋರ್ಟ್ ಅಧಿಕಾರಿಯೂ ಸಹ 500 ರೂ. ಕೊಟ್ಟಿದ್ದಾರೆ. ನನ್ನ ಪ್ರವಾಸದ ವೆಚ್ಚವನ್ನು ಭರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ,” ಎಂದು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ, ವರದಿ ಶೀ ದಿ ಪೀಪಲ್.
ಅಷ್ಟೇ ಅಲ್ಲದೆ ಜನರು ಒಟ್ಟಾಗಿ ಸೇರಿ ಹಣ ನೀಡಿ ಸಹಾಯ ಮಾಡಲು ಮುಂದಾಗಿದ್ದಾರೆ. ಎನ್‌ಜಿಸಿ ಡಿಜಿಎಂ 65 ಸಾವಿರ ರೂಪಾಯಿಯ ಸಹಾಯ ಮಾಡಿದೆ, ಅದಲ್ಲದೆ ವೈಯಕ್ತಿಕವಾಗಿ ಜನರು 60 ಸಾವಿರ ರೂಪಾಯಿ ಸಂಗ್ರಹಿಸಿ ನೀಡಿದ್ದಾರೆ.
ಇನ್ನು ವಿಜಯಲಕ್ಷ್ಮಿ ಓದುತ್ತಿರುವ ಶಾಲೆಯ ಪ್ರಾಂಶುಪಾಲರು ಮಾತನಾಡಿ ‘ಅವಳು ಪ್ರತಿಭಾವಂತ ಹುಡುಗಿ. ಅಲ್ಲದೆ ಇಲ್ಲಿಯವರೆಗೂ ಹಲವು ಸ್ಪರ್ಧೆಗಳಲ್ಲಿ ಜಯಗಳಿಸಿದ್ದಾಳೆ. ಅಕಾಶವೇ ಅವಳಿಗೆ ಚಿಕ್ಕದೆನಿಸಿದೆ,ʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ನನ್ನ ಈ ಸಾಧನೆಗೆ ಎಪಿಜೆ ಅಬ್ದುಲ್ ಕಲಾಂ ಅವರೇ ಸ್ಪೂರ್ತಿ. ಅವರ ಹಾಗೆಯೇ ನಾನು ಕೂಡ ರಾಕೆಟ್ ತಯಾರಿಸಬೇಕು. ಈ ಪ್ರವಾಸಕ್ಕೆ ತೆರಳಲು ಯಾವುದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿಲ್ಲ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನಾನು ಪ್ರೇರಣೆಯಾಗಬೇಕು” ಎಂದು ತನ್ನ ಸಂತಸವನ್ನು ಹಂಚಿಕೊಂಡಿದ್ದಾಳೆ, ವರದಿ ಶೀ ದಿ ಪೀಪಲ್.
ಪ್ರತಿಭಾವಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೆ. ವಿಜಯಲಕ್ಷ್ಮಿ ಸ್ಪೂರ್ತಿಯಾಗಲಿ, ಅವಳ ಈ ಪ್ರವಾಸ ಯಶಸ್ವಿಯಾಗಲಿ ಹಾಗೂ ತನ್ನ ಶಾಲೆಗೆ, ನಾಡಿಗೆ ಹೆಮ್ಮೆ ತರಲಿ ಎಂದು ಆಶಿಸೊಣ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.