ಮಾನವ ಕಂಪ್ಯೂಟರ್‌ ಶಕುಂತಲಾ ದೇವಿಗೆ ಗಿನ್ನಿಸ್‌ ವರ್ಡ್‌ ರೆಕಾರ್ಡ್ಸ್‌ನಿಂದ ಪ್ರಮಾಣ ಪತ್ರ

ಶರವೇಗದಲ್ಲಿ ಗಣಿತ ಸಮಸ್ಯೆಗಳನ್ನು ಬಗೆಹರಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿ 40 ವರ್ಷಗಳಾದ ನಂತರ, ಶಕುಂತಲಾ ದೇವಿಯವರು ಅಂತಿಮವಾಗಿ ತಮ್ಮ ಸಾಧನೆಗಾಗಿ ಗಿನ್ನಿಸ್‌ ವಿಶ್ವ ದಾಖಲೆಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ.

ಮಾನವ ಕಂಪ್ಯೂಟರ್‌ ಶಕುಂತಲಾ ದೇವಿಗೆ ಗಿನ್ನಿಸ್‌ ವರ್ಡ್‌ ರೆಕಾರ್ಡ್ಸ್‌ನಿಂದ ಪ್ರಮಾಣ ಪತ್ರ

Friday July 31, 2020,

1 min Read

ಗಿನ್ನಿಸ್‌ ವರ್ಲ್ಡ್ ರೆಕಾರ್ಡ್ಸ್ ಗುರುವಾರ ಭಾರತೀಯ ಗಣಿತ ಪ್ರತಿಭೆ ಶಕುಂತಲಾ ದೇವಿ ಅವರಿಗೆ ‘ಅತೀ ವೇಗವಾಗಿ ಲೆಕ್ಕಾಚಾರ ಮಾಡುವ ಮಾನವʼ ಎಂಬ ಹೆಸರು ನೀಡಿ ಗೌರವಿಸಿದೆ.


1980 ರ ಜೂನ್ 18 ರಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಶಕುಂತಲಾ ದೇವಿ ಮನಸ್ಸಿಗೆ ತೋಚಿದ 13-ಅಂಕಿಯ ಎರಡು ಸಂಖ್ಯೆಗಳನ್ನು ಆಯ್ಕೆ ಮಾಡಿ, ಕೇವಲ 28 ಸೆಕೆಂಡುಗಳಲ್ಲಿ ಗುಣಿಸುವ ಮೂಲಕ ಅತಿ ವೇಗದ ಮಾನವ ಗಣನೆಯ ದಾಖಲೆಯನ್ನು ನಿರ್ಮಿಸಿದ್ದರು.


ಶಕುಂತಲಾ ದೇವಿ



ಈ ಪ್ರಮಾಣಪತ್ರವನ್ನು ದಿವಂಗತ ಗಣಿತಜ್ಞೆಯ ಪುತ್ರಿ ಅನುಪಮಾ ಬ್ಯಾನರ್ಜಿ ಸ್ವೀಕರಿಸಿದ್ದಾರೆ. ತಾಯಿ ವಿಶ್ವ ದಾಖಲೆ ಮಾಡಿದಾಗ ತಮಗೆ ಕೇವಲ 10 ವರ್ಷ ಎಂದು ಬ್ಯಾನರ್ಜಿ ಹೇಳಿದರು.


"ನಾನು ಹೋದಲ್ಲೆಲ್ಲಾ, ಎಲ್ಲರೂ ಆ ದಾಖಲೆಯ ಬಗ್ಗೆ ಮಾತನಾಡುತ್ತಿದ್ದರು. ಹಾಗಾಗಿ ಇದು ವಿಶ್ವಾದ್ಯಂತದ ದೊಡ್ಡ ಸಾಧನೆ ಎಂದು ನನಗೆ ತಿಳಿದಿತ್ತು. ಟ್ರೊಕಾಡೆರೊ ಸೆಂಟರ್‌ಗೆ ಹೋಗಿದ್ದ ನೆನಪು ನನಗಿದೆ. ಅಲ್ಲಿನ ಒಂದು ಕೊಠಡಿಯಲ್ಲಿ ತಾಯಿಯ ಚಿತ್ರವಿದೆ,” ಎಂದು ಬ್ಯಾನರ್ಜಿ ಸಂದರ್ಶನವೊಂದರಲ್ಲಿ ಹೇಳಿದರು.


ಗಣಿತ ತಜ್ಞೆಯ ಜೀವನಾಧಾರಿತ ‘ಶಕುಂತಲಾ ದೇವಿʼ ಚಿತ್ರ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗುವ ಒಂದು ದಿನ ಮುನ್ನ ಈ ಗೌರವ ಲಭಿಸಿದೆ. ಅನು ಮೇನನ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಕುಂತಲಾ ದೇವಿಯಾಗಿ ವಿದ್ಯಾ ಬಾಲನ್‌ ನಟಿಸಿದ್ದಾರೆ.


ಗಿನ್ನಿಸ್‌ ವರ್ಲ್ಡ್ ರೆಕಾರ್ಡ್ಸ್ನ ಪ್ರಧಾನ ಸಂಪಾದಕ ಕ್ರೇಗ್ ಗ್ಲೆಂಡೆ ಮಾತನಾಡುತ್ತಾ, ಶಕುಂತಲಾ ದೇವಿಯ ಬೆರಗುಗೊಳಿಸುವ ಸಾಧನೆಯು ಇಷ್ಟು ವರ್ಷಗಳ ನಂತರವೂ ದಾಖಲೆಗಳಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.


"ಶಕುಂತಲಾ ದೇವಿಯವರ ಮನಸ್ಸಿನ ಅಸಾಧಾರಣ ಶಕ್ತಿ ಮತ್ತು ನಿರ್ದಿಷ್ಟ ಮಾನಸಿಕ ಸವಾಲಿನ ಮಹತ್ವ ಎರಡಕ್ಕೂ ಸಾಕ್ಷಿಯಾಗಿರುವ ಈ ದಾಖಲೆಯನ್ನು ಮುರಿಯಲು ಇಲ್ಲಿಯವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಅವರ ಜೀವನ ಮತ್ತು ವೃತ್ತಿಜೀವನದ ಜಾಗತಿಕ ಆಚರಣೆಗೆ ಈಗಾಗಲೇ ತುಂಬಾ ವಿಳಂಬವಾಗಿದೆ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಈ ಅನನ್ಯ ವ್ಯಕ್ತಿಯ ಜೀವನದಲ್ಲಿ ಭಾಗವಹಿಸುವುದಕ್ಕೆ ಹೆಮ್ಮೆ ಪಡುತ್ತದೆ,” ಎಂದರು.


ಜಿಸ್ಶು ಸೇನ್‌ಗುಪ್ತಾ ಮತ್ತು ಅಮಿತ್ ಸಾಧ್ ನಟಿಸಿರುವ ‘ಶಕುಂತಲಾ ದೇವಿ’ ಚಿತ್ರ ಇಂದು (ಶುಕ್ರವಾರ) ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.