ತಮ್ಮ ಆದಾಯದ 1 ಭಾಗವನ್ನು ಬಡವರಿಗಾಗಿ ಮೀಸಲಿರಿಸಿದ್ದಾರೆ ಮದುರೈನ ಈ ಚಹಾ ಮಾರಾಟಗಾರ
ಚಹಾ ಮಾರಿ ಜೀವನ ನಡೆಸುವ ತಮಿಳಸರನ್ ತಾವು ಗಳಿಸುವ ಅಲ್ಪ ಆದಾಯದಲ್ಲೆ ಒಂದು ಭಾಗವನ್ನು ಬಡವರಿಗೆ, ನಿರ್ಗತಿಕರಿಗೆ ನೀಡುತ್ತಿದ್ದಾರೆ.
ಕೊರೊನಾವೈರಸ್ ಮಹಾಮಾರಿಯು ಹಲವು ಜನರನ್ನು ಕಷ್ಟಕ್ಕೆ ಸಿಲುಕಿಸಿದ್ದು, ವಿಷೇಶವಾಗಿ ದಿನಗೂಲಿ ಕಾರ್ಮಿಕರು, ವಲಸಿಗರು ಮತ್ತು ಕಡಿಮೆ ವೇತನ ಹೊಂದಿರುವವರನ್ನು ಬಡತನಕ್ಕೆ ನೂಕಿದೆ. ಮುಚ್ಚುತ್ತಿರುವ ವ್ಯವಹಾರಗಳು, ಕೈಗಾರಿಕೆಗಳು ಅವರಿಗೆ ಆದಾಯ ಮೂಲಗಳೆ ಇಲ್ಲದಂತಾಗಿಸಿವೆ.
ಈ ಸಮಯದಲ್ಲಿ ಕಷ್ಟದಲ್ಲಿರುವವರ ನೆರವಿಗೆ ಸರ್ಕಾರೇತರ ಸಂಸ್ಥೆಗಳು ಮತ್ತು ಹಲವರು ಧಾವಿಸುತ್ತಿದ್ದು, ಅವರಲ್ಲಿ ಮದುರೈನಲ್ಲಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿರುವ ತಮಿಳರಸನ್ ಕೂಡಾ ಒಬ್ಬರು.
ಮನೆಯಲ್ಲಿ ಚಹಾ ತಯಾರಿಸಿ, ಸೈಕಲ್‌ನಲ್ಲಿ ಊರು ಸುತ್ತಿ ಇವರು ಚಹಾ ಮಾರುತ್ತಾರೆ. ತಾವು ಗಳಿಸುವ ಅಲ್ಪ ಆದಾಯದಲ್ಲೆ ಒಂದು ಭಾಗವನ್ನು ಬಡವರಿಗೆ, ನಿರ್ಗತಿಕರಿಗೆ ನೀಡುತ್ತಿದ್ದಾರೆ ತಮಿಳಸರನ್.
“ನಾನು ಅಲಂಗನಲ್ಲೂರ್, ಮೆಟ್ಟುಪಟ್ಟಿ ಮತ್ತು ಪುದುಪಟ್ಟಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬೈಸಿಕಲ್‌ನಲ್ಲಿ ಚಹಾ ಮಾರುತ್ತೇನೆ, ಇದರಿಂದ ನಾನು ಯೋಗ್ಯವಾದ ದೈನಂದಿನ ಆದಾಯವನ್ನು ಗಳಿಸುತ್ತೇನೆ," ಎಂದು ತಮಿಳರಸನ್ ಎಎನ್‌ಐಗೆ ತಿಳಿಸಿದರು.
“ನಾನು ಪ್ರತಿ ಸಾರಿ ಚಹಾ ಮಾರುವಾಗಲೂ, ಅದರಲ್ಲಿ ಚೂರನ್ನು ರಸ್ತೆಬದಿ, ದೇವಸ್ಥಾನದ ದ್ವಾರದ ಬದಿ ನಿಲ್ಲುವವರಿಗೆ ಉಚಿತವಾಗಿ ನೀಡುತ್ತೇನೆ. ನನ್ನ ಆದಾಯದ ಒಂದು ಭಾಗವನ್ನು ಅವರಿಗೆ ದಿನಕ್ಕೆ ಮೂರು ಬಾರಿ ಆಹಾರ ನೀಡುವುದಕ್ಕಾಗಿ ಮೀಸಲಿರಿಸಿದ್ದೇನೆ,” ಎಂದರು ಅವರು.
ತಮಿಳಸರನ್ ಅವರ ಈ ಕಾರ್ಯ ಸಾಮಾಜಿಕ ತಾಣದಲ್ಲಿ ಬಂದ ನಂತರ ಹಲವು ನೆಟ್ಟಿಗರು ಅವರನ್ನು ಪ್ರಶಂಸಿಸುತ್ತಿದ್ದಾರೆ.
ತಮ್ಮದೇ ಒಂದು ಅಂಗಡಿ ತೆರೆದು, ಸಮಾಜದ ದುರ್ಬಲ ವರ್ಗದವರಿಗೆ ಸಹಾಯಮಾಡಬೇಕೆಂಬುದು ತಮಿಳಸರನ್ ಅವರ ಆಸೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಂಗಡಿ ತೆರೆಯಲು ಅವರು ಈ ಹಿಂದೆ ಸಲ್ಲಿಸಿದ್ದ ಸಾಲದ ಅರ್ಜಿಯನ್ನು ಜಾಮೀನಿಲ್ಲವೆಂಬ ಕಾರಣ ನೀಡಿ ಬ್ಯಾಂಕ್ ತಿರಸ್ಕರಿಸಿದೆ ಎನ್ನುತ್ತಾರೆ ಅವರು.
ತಮಿಳಸರನ್ ಅವರ ಈ ವಿಶಾಲ ಮನೋಭಾವವು ಮಹಾಮಾರಿಯ ಸಮಯದಲ್ಲಿ ಹೆಚ್ಚು ಜನರನ್ನು ಸಹಾಯ ಮಾಡಲು ಪ್ರೇರೆಪಿಸುತ್ತಿದೆ.