ಹಾಲಿನ ಗುಣಮಟ್ಟವನ್ನು ನಿಮಿಷಗಳಲ್ಲಿ ಕಂಡುಹಿಡಿಯುವ ಐಐಟಿ ಗುವಾಹಟಿ ಸಂಶೋಧಕರ ಸಂವೇದಕ ಕಾಗದ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗುವಾಹಟಿಯ ಸಂಶೋಧಕರು ಕಾಗದ ಆಧಾರಿತ ಸಂವೇದಕ ಒಂದನ್ನು ಅಭಿವೃದ್ಧಿಪಡಿಸಿದ್ದು, ಅದು ತನ್ನ ಬಣ್ಣವನ್ನು ಬದಲಾಯಿಸುವ ಮೂಲಕ ಹಾಲಿನ ಗುಣಮಟ್ಟ ಮತ್ತು ತಾಜಾತನವನ್ನು ನಿಮಿಷಗಳಲ್ಲಿ ನಿಖರವಾಗಿ ತಿಳಿಸುತ್ತದೆ.
ಹಾಲಿನಲ್ಲಿನಲ್ಲಿರುವ ಸೂಕ್ಷ್ಮಜೀವಿಗಳು ಹಾಲಿನ ಗುಣಮಟ್ಟ ಮತ್ತು ತಾಜಾತನವನ್ನು ನಿರ್ಧರಿಸುತ್ತವೆ ಎಂದು ಬಯೋಸೆನ್ಸರ್ಸ್ ಮತ್ತು ಬಯೋಎಲೆಕ್ಟ್ರೊನಿಕ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸಂಶೋಧಕರು ವಿವರಿಸಿದ್ದಾರೆ.
ಹಾಲಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳು ಹಾಲಿನ ರುಚಿ ಮತ್ತು ತಾಜಾತನದ ಮೇಲೆ ಪರಿಣಾಮ ಬೀರುವುದಲ್ಲದೆ, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತವೆ ಎಂದು ಅವರು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡರು.
ಪಾಶ್ಚರೀಕರಣವನ್ನು ಸಾಮಾನ್ಯವಾಗಿ ಹಾಲಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಬಳಸಲಾಗುತ್ತದೆ ಮತ್ತು ಪ್ರಕ್ರಿಯೆಯ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ಬೇರೆ ವಿವಿಧ ಪರೀಕ್ಷೆಗಳನ್ನು ಬಳಸಲಾಗುತ್ತದೆ ಎಂದು ಐಐಟಿ ಗುವಾಹಟಿಯ ಸಹಾಯಕ ಪ್ರಾಧ್ಯಾಪಕ ಪ್ರಾಂಜಲ್ ಚಂದ್ರ ಅವರ ನೇತೃತ್ವದಲ್ಲಿನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಬಳಸುವ ಮೀಥಿಲೀನ್ ನೀಲಿ ಪರೀಕ್ಷೆಯು ಹೆಚ್ಚು ಸಮಯ ಹಿಡಿಯುವುದಲ್ಲದೆ, ಸೂಕ್ಷ್ಮಜೀವಿಗಳ ಇರುವಿಕೆಯನ್ನು ಸೂಚಿಸಲು ಬಣ್ಣ ಬದಲಾವಣೆಗಳಿಗೆ ಹಲವು ಗಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು.
ಫೀನೋಲ್ ಆಧಾರಿತ ಪರೀಕ್ಷೆಗಳಿಗೆ ಅತ್ಯಾಧುನಿಕ ಸ್ಪೆಕ್ಟ್ರೋಫೋಟೋಮೀಟರ್ಗಳು ಬೇಕಾಗುತ್ತವೆ ಮತ್ತು ಇದು ಬಹು-ಹಂತದ ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ, ಮಾತ್ರವಲ್ಲದೆ ಈ ವಿಧಾನಕ್ಕೆ ಆಯ್ಧ ಸುಸಜ್ಜಿತವಾದ ಪರೀಕ್ಷಾ ಕೇಂದ್ರಗಳು ಮತ್ತು ನುರಿತ ಸಿಬ್ಬಂದಿಗಳ ಅಗತ್ಯವಿರುತ್ತದೆ.
ಈ ಹಿನ್ನಲೆಯಲ್ಲಿ ಹಿರಿಯ ಸಂಶೋಧಕರದ ಕುಲದೀಪ್ ಮಹಾಟೊ ಅವರ ತಂಡವು ವಿಶೇಷ ಉಪಕರಣಗಳ ಅಗತ್ಯವಿಲ್ಲದೆ ಸುಲಭವಾಗಿ ಹಾಲಿನ ಗುಣಮಟ್ಟವನ್ನು ತಿಳಿಯಲು ಸರಳ ತಂತ್ರವನ್ನು ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ಕೈಗೊಂಡಿತು.
"ಹಾಲಿನ ಗುಣಮಟ್ಟವನ್ನು ಹಾಲು ಸಂಗ್ರಹಿಸುವ ಸ್ಥಳದಲ್ಲೇ ಅಥವಾ ಮನೆಯ ಅಡುಗೆಮನೆಯಲ್ಲಿ ಪರೀಕ್ಷಿಸುವಂತಿದ್ದರೆ ಉಪಯೋಗವಾಗುತ್ತದೆ"
ಎಂದು ಪ್ರಾಂಜಲ್ ಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ, ಸಾಮಾನ್ಯವಾಗಿ ಅಂತಹ ಪರೀಕ್ಷೆಗೆ ಸುಲಭವಾಗಿ ಬಳಸಬಹುದಾದಂತಹ ವ್ಯವಸ್ಥೆಗಳು ಮತ್ತು ಪೋರ್ಟಬಲ್ ಪತ್ತೆ ಕಿಟ್ಗಳು ಬೇಕಾಗುತ್ತವೆ.
ಅಲ್ಕಲೈನ್ ಫಾಸ್ಫಟೇಸ್ (ಎ ಎಲ್ ಪಿ) ಎಂಬುವುದು ಕಾಯಿಸದ ಹಸಿ ಹಾಲಿನಲ್ಲಿ ಕಂಡುಬರುವ ನೈಸರ್ಗಿಕ ಮೇಟಾಲ್ಲೋಪ್ರೋಟೀನ್ ಅಂಶವಾಗಿದ್ದು ಇದನ್ನು ಹಾಲಿನ ಗುಣಮಟ್ಟವನ್ನು ನಿರ್ಧರಿಸುವ ಒಂದು ಪ್ರಮುಖವಾದ ಬಯೋಮಾರ್ಕರ್ ಎಂದು ಗುರುತಿಸಲಾಗಿದೆ.
ಈ ಪ್ರೊಟೀನ್ ಹಸಿ ಹಾಲಿನಲ್ಲಿ ಕಂಡುಬರುತ್ತದೆ ಆದರೆ ಹಾಲಿನ ಪಾಶ್ಚರೀಕರಣದ ಸಮಯದಲ್ಲಿ ಇದು ನಾಶವಾಗುತ್ತದೆ. ಈ ಎ ಎಲ್ ಪಿ ಯು ಸಾಮಾನ್ಯವಾಗಿ ಸಸ್ತನಿಗಳ ಸ್ತನಗ್ರಂಥಿಗಳ ಸೋಂಕಿನಿಂದ ಪಡೆದ ಹಾಲಿನಲ್ಲಿ ಹೆಚ್ಚಿರುತ್ತದೆ ಎಂದರು.
ಹಾಲಿನಲ್ಲಿ ಎ ಎಲ್ ಪಿ ಯ ಪ್ರಮಾಣ ಹೆಚ್ಚಾಗಿದ್ದರೆ ಅದು ಪಾಶ್ಚರೀಕರಣ ಸರಿಯಾಗಿಲ್ಲವೆಂದು ಮತ್ತು ಹಾಲು ಕಲ್ಮಶಗಳಿಂದ ಕೂಡಿದೆ ಎಂಬುದನ್ನು ಸೂಚಿಸುತ್ತದೆ.
“ಸಾಮಾನ್ಯವಾಗಿ ದೊರೆಯುವ ಹಾಲು ಹಾಗೂ ಅಡುಗೆಮನೆಯಲ್ಲಿ ಬಳಸುವ ಹಾಲಿನ ಗುಣಮಟ್ಟವನ್ನು ಅಥವಾ ಹಾಲಿನಲ್ಲಿರುವ ಎ ಎಲ್ ಪಿ ಯನ್ನು ಪತ್ತೆಹಚ್ಚಲು ಅತ್ಯಾಧುನಿಕ ಗುಣಮಟ್ಟದ ಸುಸಜ್ಜಿತ ಉಪಕರಣ ಹಾಗೂ ತರಬೇತಿ ಪಡೆದ ಸಂಶೋಧಕರಿಂದ ಮಾತ್ರ ಸಾಧ್ಯ” ಎಂದು ಪ್ರಾಧ್ಯಾಪಕರಾದ ಚಂದ್ರ ಹೇಳಿದರು.
ಪುಟ್ಟ ಕಾಗದದಲ್ಲಿ ಬಯಲಾಗುತ್ತೆ ಹಾಲಿನ ಬಣ್ಣ
ಈ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸಂಶೋಧಕರು ಸಾಧರಣ ಫಿಲ್ಟರ್ ಕಾಗದಕ್ಕೆ ಆಂಟಿ-ಎ ಎಲ್ ಪಿ ಅಂಶವನ್ನು ಸೇರಿಸಿ ಅದನ್ನು ರಾಸಾಯನಿಕವಾಗಿ ಪರಿವರ್ತಿಸಿದರು. ಆಂಟಿ-ಎ ಎಲ್ ಪಿ ಅಂಶದಿಂದ ಕೂಡಿರುವ ಫಿಲ್ಟರ್ ಕಾಗದವೀಗ ಹಾಲಿನಲ್ಲಿರುವ ಎ ಎಲ್ ಪಿ ಯನ್ನು ಸುಲಭವಾಗಿ ಕಂಡುಹಿಡಿಯುತ್ತದೆ.
ಬಣ್ಣಗಳನ್ನು ರೂಪಿಸುವ ಸಂಯುಕ್ತ "ಬಿಸಿಐಪಿ"ಯೊಂದಿಗೆ ಸಂಸ್ಕರಿಸಿದಾಗ, ಹಿಡಿದಿಟ್ಟ ಎ ಎಲ್ ಪಿ ಯ ಸಂಯುಕ್ತವು ನೀಲಿ ಹಾಗೂ ಹಸಿರು ಬಣ್ಣವನ್ನು ಪ್ರೆಸಿಪಿಟೆಟ್ ಸಿದ್ಧವಾಗುತ್ತದೆ ಮತ್ತು ಎ ಎಲ್ ಪಿ ಇಲ್ಲದೆ ಇರುವಾಗ ಯಾವುದೇ ಬಣ್ಣವನ್ನು ಸೂಚಿಸುವುದಿಲ್ಲ.
ಬಣ್ಣದ ತೀವ್ರತೆಯು ಎ ಎಲ್ ಪಿಯ ಪ್ರಮಾಣವನ್ನು ಸೂಚಿಸುತ್ತದೆ. ಬಣ್ಣಗಳ ಚಿತ್ರವನ್ನು ಸೆರೆಹಿಡಿಯಲು ಸಂಶೋಧಕರು ಸ್ಮಾರ್ಟ್ಫೋನ್ ಬಳಸಿದ್ದಾರೆ.
ಪಡೆದ ಬಣ್ಣವನ್ನು ಪ್ರೊಫೈಲ್ ಮಾಡಲು ಅವರು ಫೋನ್ನಲ್ಲಿನ ಆರ್ ಜಿ ಬಿ (ಕೆಂಪು ಹಸಿರು ನೀಲಿ) ಫಿಲ್ಟರ್ ಅನ್ನು ಬಳಸಿದರು, ಇದನ್ನು ಪರೀಕ್ಷಾ ಮಾದರಿಗಳಲ್ಲಿರುವ ಎ ಎಲ್ ಪಿ ಯ ಸಾಂದ್ರತೆಗೆ ಹೊಂದಿಸಿ ನೋಡಬಹುದಾಗಿದೆ.
"ನಮ್ಮ ಸಂವೇದಕವು ಎ ಎಲ್ ಪಿಯನ್ನು ಕಂಡುಹಿಡಿಯಲು ಕೇವಲ 13 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ಇದನ್ನು ತ್ವರಿತ ಆನ್ಸೈಟ್ ವಿಶ್ಲೇಷಣೆಗೆ ಅನ್ವಯಿಸಬಹುದು" ಎಂದು ಪ್ರಾಂಜಲ್ ಚಂದ್ರ ಹೇಳಿದರು.
ಸಂಶೋಧಕರು ತಮ್ಮ ಕಾಗದ ಆಧಾರಿತ ಸಂವೇದಕ ಕಿಟ್ ಬಳಸಿ ಹಳ್ಳಿಗಳಿಂದ ಪಡೆದ ಹಾಲನ್ನು ಮತ್ತು ವಾಣಿಜ್ಯಿಕವಾಗಿ ಲಭ್ಯವಿರುವ ಹಾಲಿನ ಮಾದರಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದರು, ಮತ್ತು ಅವರು ಪ್ರತಿ ಮಿಲಿಲೀಟರ್ ಹಾಲಿಗೆ 0.87 ಯುನಿಟ್ ಎ ಎಲ್ ಪಿ ಯನ್ನು 91 ರಿಂದ ಶೇಕಡಾ 100 ರಷ್ಟು ನಿಖರತೆಯೊಂದಿಗೆ ಕಂಡುಹಿಡಿಯಬಹುದೆಂದು ಕಂಡುಕೊಂಡರು.
ಈ ಪತ್ತೆ ಮಿತಿ ಮತ್ತು ನಿಖರತೆಯು ಕಚ್ಚಾ ಹಾಲನ್ನು ಪಾಶ್ಚರೀಕರಿಸಿದ ಅಥವಾ ಕಾಯಿಸಿದ ಹಾಲಿನಿಂದ ಬೇರೆಮಾಡಲು ಮಾಡಲು ಸಾಧ್ಯವಾಗಿಸುತ್ತದೆ, ಪಾಶ್ಚರೀಕರಿಸಿದ ಹಾಲಿನಲ್ಲಿ ಎಎಲ್ಪಿ ಅತೀ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಸಂಶೋಧನೆಯ ಆಧಾರದ ಮೇಲೆ, ತಂಡವು ಸೂಕ್ಷ್ಮವಾದ ಸಣ್ಣದಾದ ಪತ್ತೆ ಕಿಟ್ ಅನ್ನು ಸಹ ಅಭಿವೃದ್ಧಿಪಡಿಸಿದೆ ಮತ್ತು ಹಾಲಿನ ಮೇಲ್ವಿಚಾರಣೆಗಾಗಿ ಕಿಟ್ನನ್ನು ಉಪಕರಣ-ಮುಕ್ತ, ಅಡುಗೆಮನೆಯಲ್ಲಿ ಬಳಸಿಕೊಳ್ಳುವ ವಿಧಾನವನ್ನು ಇದೀಗ ಅಭಿವೃದ್ಧಿಪಡಿಸುತ್ತಿದೆ.