ಕೊರೊನಾವೈರಸ್: ಕೋವಿಡ್-19ಗೆ ಔಷಧಿಯನ್ನು ಅಭಿವೃದ್ಧಿಪಡಿಸುತ್ತಿರುವ ಐಐಟಿ ಗುವಾಹಟಿ
ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಔಷಧಿಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ ಮತ್ತು ಮಾರಣಾಂತಿಕ ವೈರಸ್ ಸಂಶೋಧನೆಗಾಗಿ ಮೀಸಲಾದ ಕೇಂದ್ರವನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಐಐಟಿ ಗುವಾಹಟಿಯು ಸೋಮವಾರ ಹೇಳಿದೆ.
12 ಗಂಟೆಗಳ ಅವಧಿಯಲ್ಲಿ 1,000 ಮಾದರಿಗಳನ್ನು ವಿಶ್ಲೇಷಿಸಬಲ್ಲ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದ್ದು ಮತ್ತು ಅಂತಹ ಎರಡು ಘಟಕಗಳನ್ನು ಈಗಾಗಲೇ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ಸರಬರಾಜು ಮಾಡಲಾಗಿದೆ ಎಂದು ಎಂದು ಪ್ರಧಾನ ಸಂಸ್ಥೆ ಹೇಳಿಕೆ ನೀಡಿದೆ.
"ರೋಗಕ್ಕೆ ಪ್ರಸ್ತುತ ಯಾವುದೇ ಅಧಿಕೃತ ಔಷಧಿಗಳು ಲಭ್ಯವಿಲ್ಲದ ಕಾರಣ, ಸಿಬ್ಬಂದಿ ವರ್ಗವು ಆಧುನಿಕ ಜೈವಿಕ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಂಡು ಕೋವಿಡ್-19 ಚಿಕಿತ್ಸೆಗಾಗಿ ಸಣ್ಣ ಅಣುಗಳ ಪ್ರತಿರೋಧಕಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದ್ದಾರೆ," ಎಂದು ಐಐಟಿ ಗುವಾಹಟಿ ಹೇಳಿದೆ.
ಒಟ್ಟಾರೆ ಇದರ ಆಲೋಚನೆಯು ಕೋವಿಡ್-19 ರೋಗಿಗಳು ಮತ್ತು ಇತರ ಭಯಾನಕ ವೈರಲ್ ಸೋಂಕುಗಳ ಚಿಕಿತ್ಸೆಗಾಗಿ ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಔಷಧಿಯನ್ನು ಅಭಿವೃದ್ಧಿಪಡಿಸುವುದಾಗಿದೆ.
ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನೀಯರಿಂಗ್ ವಿಭಾಗದಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಇತರ ಇಲಾಖೆಗಳು ವಿವಿಧ ವೈರಲ್ ಸೋಂಕುಗಳನ್ನು ಬೇಗ ಪತ್ತೆಹಚ್ಚಲು ರೋಗನಿರ್ಣಯ ಮತ್ತು ಚಿಕಿತ್ಸಕ ವಿಧಾನವನ್ನು ಹೊಂದಲು ಅನೇಕ ಮಾರ್ಗಗಳನ್ನು ಕಂಡುಹಿಡಿಯುವಲ್ಲಿ ತೊಡಗಿಕೊಂಡಿವೆ ಎಂದು ಹೇಳಿಕೆ ತಿಳಿಸಿದೆ.
"ಜೈವಿಕ ವಿಜ್ಞಾನ, ಜೈವಿಕ ಎಂಜಿನೀಯರಿಂಗ್ ಮತ್ತು ರಸಾಯನಶಾಸ್ತ್ರ ವಿಭಾಗಗಳ ಅಧ್ಯಾಪಕ ಸದಸ್ಯರು ಮತ್ತು ನ್ಯಾನೊತಂತ್ರಜ್ಞಾನ ಕೇಂದ್ರವು ಕೋವಿಡ್-19 ಅನ್ನು ಎದುರಿಸಲು ಸಂಶೋಧನೆಯನ್ನು ಪ್ರಾರಂಭಿಸಿದೆ," ಎಂದು ಅದು ಹೇಳಿದೆ.
ಕೋವಿಡ್-19 ವಿಶ್ಲೇಷಣೆಗಾಗಿ ಈ ಸಂಸ್ಥೆ ಸುಧಾರಿತ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದು, ಇದು ಈಶಾನ್ಯ ಪ್ರದೇಶವು ಮಹಾಮಾರಿ ಕರೋನವೈರಸ್ ಅನ್ನು ಪರೀಕ್ಷಿಸಲು ಮತ್ತು ಅಂತಹ ಇತರ ಮಾರಕ ವೈರಸ್‌ಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
"ಈಶಾನ್ಯ ಪ್ರದೇಶದ ಭಾಗದಲ್ಲಿ ಅತ್ಯಾಧುನಿಕ ಸೌಲಭ್ಯ ಇರುವಂತೆ ಮಾಡುವುದು ನಮ್ಮ ಆಲೋಚನೆ," ಎಂದು ಸಂಸ್ಥೆ ಹೇಳಿದೆ.
"ಭವಿಷ್ಯದಲ್ಲಿ ಈ ಕೇಂದ್ರವು ವಿವಿಧ ಸಾಂಕ್ರಾಮಿಕ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಮತ್ತು ಅವುಗಳ ತಡೆಗಟ್ಟುವಿಕೆಗೆ ಹೆಚ್ಚು ಸಮರ್ಥ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ," ಎಂದು ಐಐಟಿ-ಜಿ ನಿರ್ದೇಶಕ ಟಿ.ಜಿ ಸೀತಾರಾಮ್ ಹೇಳಿದ್ದಾರೆ.
ಕೊರೊನಾವೈರಸ್ ರೋಗನಿರ್ಣಯಕ್ಕಾಗಿ ಜಿಎಂಸಿಎಚ್ ಗೆ ಅಭಿವೃದ್ಧಿಪಡಿಸಿದ ಮತ್ತು ಪೇಟೆಂಟ್ ಪಡೆದ ಎರಡು ನಿಜ ಸಮಯದ (ರಿಯಲ್ ಟೈಮ್) ಪಿಸಿಆರ್ ಯಂತ್ರಗಳನ್ನು ಇದು ಒದಗಿಸಿದೆ ಎಂದು ಅವರು ಹೇಳಿದರು.
"ಈ ಯಂತ್ರಗಳು 12 ಗಂಟೆಗಳ ಕಾಲ ನಿರಂತರವಾಗಿ ಚಲಿಸಿದರೆ 1,000 ಮಾದರಿಗಳನ್ನು ಮತ್ತು 24 ಗಂಟೆಗಳಲ್ಲಿ 2,000 ಮಾದರಿಗಳನ್ನು ವಿಶ್ಲೇಷಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತವೆ," ಎಂದು ಹೇಳಿಕೆ ತಿಳಿಸಿದೆ.
ಇದಲ್ಲದೆ, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನೀಯರಿಂಗ್ ವಿಭಾಗಗಳು ಔಷಧ ಮತ್ತು ಆಹಾರವನ್ನು ಪ್ರತ್ಯೇಕ ವಾರ್ಡ್‌ಗಳಿಗೆ ಸಾಗಿಸುವ ಸಲುವಾಗಿ ರೋಬೋಟ್ ಆಧಾರಿತ ಘಟಕವನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ಮಾಡುತ್ತಿವೆ.
ಈ ಸಂಸ್ಥೆಯು ಆಸ್ಪತ್ರೆಯ ಹಾಸಿಗೆಗಳು, ವೆಂಟಿಲೇಟರ್‌ಗಳು, ಪ್ರತ್ಯೇಕ ವಾರ್ಡ್‌ಗಳಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ, ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ತಯಾರಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಐಐಟಿ-ಗುವಾಹಟಿ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಸಿದ್ಧಪಡಿಸಿದ್ದು ಜಿಎಂಸಿಎಚ್ ಮತ್ತು ಅಸ್ಸಾಂ ಸರ್ಕಾರಕ್ಕೆ ಒದಗಿಸಲು ಕನಿಷ್ಠ 5,000 ಸ್ಯಾನಿಟೈಸರ್ ಬಾಟಲಿಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ," ಎಂದು ಹೇಳಲಾಗಿದೆ.
ವಿನ್ಯಾಸ ವಿಭಾಗವು ಟೋಪಿ ಸೇರಿದಂತೆ 3ಡಿ ಮುದ್ರಿತ ಮುಖಕ್ಕೆ ಪೂರ್ಣಪ್ರಮಾಣದ ರಕ್ಷಣಾಫಲಕವನ್ನು ಸಹ ಅಭಿವೃದ್ಧಿಪಡಿಸಿದೆ, ಅವುಗಳನ್ನು ತಕ್ಷಣವೇ ಜಾಸ್ತಿಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.