ಸುಟ್ಟು ವ್ಯರ್ಥವಾಗುವ ಭತ್ತದ ಹೊಟ್ಟಿನಿಂದ ಪರಿಸರಸ್ನೇಹಿ, ವಿಷಕಾರಿಯಲ್ಲದ ಬಣ್ಣ ತಯಾರಿಸಿದ ದೆಹಲಿ ಸಂಶೋಧಕರು

ಶಿವ ನಾದರ್ ವಿಶ್ವವಿದ್ಯಾಲಯದ ಇಂಜನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಹರ್ಪಿತ್ ಸಿಂಗ್ ಗ್ರೆವಾಲ್ ಮತ್ತು ಡಾ. ಹರ್ಪಿತ್ ಅರೋರಾ ಅವರ ಸಂಶೋಧನಾ ತಂಡವು ಭತ್ತದ ಹೊಟ್ಟಿನಿಂದ ಪರಿಸರಸ್ನೇಹಿ ಬಣ್ಣವನ್ನು ತಯಾರಿಸಿದೆ.

ಸುಟ್ಟು ವ್ಯರ್ಥವಾಗುವ ಭತ್ತದ ಹೊಟ್ಟಿನಿಂದ ಪರಿಸರಸ್ನೇಹಿ, ವಿಷಕಾರಿಯಲ್ಲದ ಬಣ್ಣ ತಯಾರಿಸಿದ ದೆಹಲಿ ಸಂಶೋಧಕರು

Wednesday September 25, 2019,

2 min Read

ಒಂದು ಮನೆಯನ್ನು ಅಥವಾ ಕಟ್ಟಡವನ್ನು ನಿರ್ಮಿಸಲು ಇಟ್ಟಿಗೆ, ಸಿಮೆಂಟ್ ಎಷ್ಟು ಮುಖ್ಯವೋ ಹಾಗೇ ಅದು ಅಂದವಾಗಿ ಕಾಣಲು ಬಣ್ಣವು ಅಷ್ಟೇ ಮುಖ್ಯವಾಗಿದೆ. ಇತ್ತೀಚೆಗೆ ಮಾರಕ ಬಣ್ಣಗಳ ಬದಲಾಗಿ ಪರಿಸರಸ್ನೇಹಿ ಬಣ್ಣಗಳ ಬಳಸುವಿಕೆ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಯೋಚನೆಯೂ ಹೌದು. ಇದಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ದೆಹಲಿ ಮೂಲದ ಶಿವ ನದಾರ್ ವಿಶ್ವವಿದ್ಯಾಲಯದವರು ಭತ್ತದ ಹೊಟ್ಟಿನಿಂದ ಪರಿಸರಸ್ನೇಹಿ ಬಣ್ಣವನ್ನು ತಯಾರಿಸಿ ಮಾದರಿಯಾಗಿದ್ದಾರೆ.


ಭತ್ತದ ಹೊಟ್ಟಿನಿಂದ ತಯಾರಿಸುವ ಈ ಬಣ್ಣವು ಪರಿಸರಸ್ನೇಹಿ ಆಗಿದ್ದು, ಯಾವುದೇ ವಿಷಕಾರಿ ಅಂಶವನ್ನು ಹೊಂದಿಲ್ಲದೆ ಬಹುಕಾಲ ಬಾಳಿಕೆಯ ಗುಣವನ್ನು ಹೊಂದಿದೆ. ರೈತರು ತಮ್ಮ ಬೆಳೆಯ ಅವಶೇಷಗಳನ್ನು ಸುಡುವುದಕ್ಕೆ ಬದಲಾಗಿ ಇದೊಂದು ಉತ್ತಮ ಪರ್ಯಾಯ ಮಾರ್ಗವಾಗಿದೆ.


(ಸಾಂಧರ್ಭಿಕ ಚಿತ್ರ: ಇಂಡಿಯಾ ಟುಡೇ)



ಶಿವ ನಾದರ್ ವಿಶ್ವವಿದ್ಯಾಲಯದ ಇಂಜನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಹರ್ಪಿತ್ ಸಿಂಗ್ ಗ್ರೆವಾಲ್ ಮತ್ತು ಡಾ. ಹರ್ಪಿತ್ ಅರೋರಾ ಅವರ ಸಂಶೋಧನಾ ತಂಡವು ಇಂತಹದ್ದೊಂದು ವಿನೂತನ ಪ್ರಯೋಗವನ್ನು ಸಾದರ ಪಡಿಸಿದೆ.


ಇಂಡಿಯಾ ಟುಡೇ ವರದಿಯೊಂದರ ಪ್ರಕಾರ


“ಈ ಬಣ್ಣವು ಪರಿಸರಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ನೀರನ್ನು ಹಿಮ್ಮೆಟ್ಟುಸುವುದರ ಜೊತೆಗೆ ವಸ್ತುಗಳು ತುಕ್ಕು ಹಿಡಿಯುವುದನ್ನು ತಪ್ಪಿಸುತ್ತದೆ.”

ಈ ಸಂಶೋಧನೆಯನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ(ಸಿಎಸ್‍ಐಆರ್)ಯು ಪ್ರಾಯೋಜಿಸಿದ್ದು, ಇದರ ಕುರಿತು ‘ಪ್ರೋಗ್ರೆಸ್ ಇನ್ ಆಗ್ರ್ಯಾನಿಕ್ ಕೋಟಿಂಗ್ಸ’ ಎಂಬ ವೈಜ್ಞಾನಿಕ ಪತ್ರಿಕೆಯು ಪ್ರಕಟಿಸಿದೆ.


“ಸ್ವಯಂ ಶುಚಿಗೊಳಿಸುವ ಬಣ್ಣಗಳ ಲೇಪನ ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ವಿಷಕಾರಿ ಬಣ್ಣಗಳ ಬದಲಾಗಿ ಕೃಷಿ ತಾಜ್ಯವಾದ ಭತ್ತದ ಹೊಟ್ಟಿನಿಂದ ತಯಾರಿಸಲಾದ ಬಣ್ಣವು ಪರಿಸರಸ್ನೇಹಿಯಾಗಿದೆ. ಜೊತೆಗೆ ಮಳೆ, ಬಿರುಗಾಳಿ ಸೇರಿದಂತೆ ತೀವ್ರ ಹವಾಮಾನ ಪರಿಸ್ಥಿತಿಗಳಲ್ಲಿಯೂ ಈ ಬಣ್ಣದ ಲೇಪನವನ್ನು ಪರೀಕ್ಷಿಸಲಾಗಿದ್ದು, ಹೊರಾಂಗಣ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳುವದರಿಂದ ಇದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಸಂಶೋಧಕರು ಇಂಡಿಯಾ ಟುಡೇ ಗೆ ಹೇಳಿದ್ದಾರೆ.


ಕೃಷಿ ತ್ಯಾಜ್ಯವಾದ ಭತ್ತದ ಹೊಟ್ಟಿನ ನ್ಯಾನೊ-ಸಿಲಿಕಾ ಕಣಗಳನ್ನು ಹೊರ ತೆಗೆಯುವ ಮೂಲಕ ಅಭಿವೃದ್ಧಿ ಪಡಿಸಲಾಗಿದ್ದು, ಇದು ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ರೈತರು ತಮ್ಮ ಅಳಿದುಳಿದ ಬೆಳೆಯ ಅವಶೇಷಗಳನ್ನು ಸುಡುವುದರ ಬದಲಾಗಿ ಪರ್ಯಾಯ ವಿಧಾನವಾಗಿದೆ. ಜೊತೆಗೆ ಬಹುಕಾಲ ಬಾಳಿಕೆ ಬರುವಂತಹ ಕಟ್ಟಡಗಳ ಉಳಿಕೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.


ಈ ಬಣ್ಣದ ಮತ್ತೊಂದು ವಿಶೇಷತೆಯೆನೆಂದರೆ, ಇದು ವಿಷಕಾರಿಯಲ್ಲದಾಗಿರುವದರಿಂದ ಎಲ್ಲಾ ಗೃಹಪಯೋಗಿ ವಸ್ತುಗಳು, ಕಟ್ಟಡಗಳು, ವಾಹನಗಳು ಮತ್ತು ಕೈಗಾರಿಕೆಗಳಲ್ಲಿ ಅನ್ವಯಿಸಬಹುದಾಗಿದೆ.


ಡಾ. ಹರ್ಪಿತ್ ಸಿಂಗ್ ಗ್ರೆವಾಲ್ ಎಡೆಕ್ಸ್‌ ಲೈವ್ ಜೊತೆಗೆ ಮಾತನಾಡುತ್ತಾ,


“ಧೂಳೂ ಹೈಡ್ರೋಫಿಲಿಕ್‌ ಎಂದರೆ ಅದು ಬಹುಬೇಗ ನೀರಿನೊಂದಿಗೆ ಬೆರೆಯುತ್ತದೆ. ಆದರೆ ಈ ಪರಿಸರಸ್ನೇಹಿ ಲೇಪನವು ಹೈಡ್ರೋಫೋಬಿಕ ಆಗಿರುವುದರಿಂದ ನೀರಿನೊಂದಿಗೆ ಬೆರೆಯಲು ಬಿಡುವುದಿಲ್ಲ. ಆದ್ದರಿಂದ ಇದರ ಮೇಲ್ಪದರದ ಮೇಲೆ ಧೂಳು ಅಂಟುವುದಿಲ್ಲ. ವಾಯುಮಾಲಿನ್ಯದಿಂದ ಆಮ್ಲಮಳೆ ಬಂದರು ಅದು ಬಣ್ಣದ ಲೇಪನಕ್ಕೆ ಹಾನಿಯುಂಟು ಮಾಡುವುದಿಲ್ಲ ಜೊತಗೆ ತುಕ್ಕು ಹಿಡಿಯುವದನ್ನು ಕಡಿಮೆ ಮಾಡುತ್ತದೆ. ನಮ್ಮ ಸುತ್ತ-ಮುತ್ತಲಿನ ಎಲ್ಲ ವಸ್ತುಗಳನ್ನು ರಕ್ಷಣೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಹೇಳಿದ್ದಾರೆ.


ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳು ಮತ್ತು ಲೇಪನಗಳು ಆರೋಗ್ಯಕ್ಕೆ ಹಾನಿಕಾರಕವಾಗಿರುವ ಸೀಸ, ಹೆಕ್ಸವಾಲೆಂಟ್ ಕ್ರೋಮಿಯಂನಂತಹ ವಿಷಕಾರಿ ಅಂಶಗಳನ್ನು ಒಳಗೊಂಡಿರುತ್ತವೆ. ಸಂತಾನೋತ್ಪತ್ತಿ ತೊಂದರೆಗಳು, ಆಸ್ತಾಮಾದಂತಹ ತೊಂದರೆಗಳು ಉಂಟಾಗಿ ಆ ಬಣ್ಣ ಆರೋಗ್ಯವನ್ನು ಹಾಳು ಮಾಡಬಹುದು, ಆದ್ದರಿಂದ ಇಂತಹ ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಜೊತೆಗೆ ಬಣ್ಣಕ್ಕಾಗಿ ಮಾಡುವ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.