ಒದ್ದೆಬಟ್ಟೆಯಿಂದ ವಿದ್ಯುತ್ ಉತ್ಪಾದಿಸುವ ಹೊಸ ಆವಿಷ್ಕಾರಕ್ಕೆ ಸಾಕ್ಷಿಯಾದ ಖರಗ್ಪುರದ ಐಐಟಿ
ನೀರು, ಗಾಳಿ, ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವುದು ಸರ್ವೇ ಸಾಮಾನ್ಯ. ಆದರೆ, ಖರಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ನೈಸರ್ಗಿಕ ವಾತಾವರಣದಲ್ಲಿ ಬಟ್ಟೆಗಳನ್ನು ಒಣಗಿಸುವ ಪ್ರಕ್ರಿಯೆಯಲ್ಲಿ ವಿದ್ಯುತ್ ಉತ್ಪಾದಿಸುವ ವಿಶಿಷ್ಟ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಭಾರತದ ವಿಜ್ಞಾನಿಗಳು ಅಸಾಮಾನ್ಯ ಸಾಧಕರು. ಪ್ರತಿದಿನ ಒಂದಿಲ್ಲೊಂದು ತಂತ್ರಜ್ಞಾನ ಆವಿಷ್ಕಾರಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುವಲ್ಲಿ ನಿರತರಾಗಿತ್ತಾರೆ. ಅಲ್ಲದೇ, ನಮ್ಮಲ್ಲಿನ ಸಂಪನ್ಮೂಲ ಲಭ್ಯತೆಯಲ್ಲಿಯೇ ಜಾಗತಿಕ ಸವಾಲುಗಳಿಗೆ ವಿಶಿಷ್ಟ ಪರಿಹಾರಗಳನ್ನು ಒದಗಿಸುವ ಭಾರತೀಯ ವಿಜ್ಞಾನಿಗಳ ಸಾಧನೆಗೆ ಇಸ್ರೋವಿನ ಸಾಧನೆ ಒಂದು ಪುಟ್ಟ ಉದಾಹರಣೆ. ಇತ್ತೀಚೆಗೆ, ಚಂದ್ರಯಾನ-೨ ಮುಖಾಂತರ ಚಂದ್ರನ ದಕ್ಷಿಣ ಧ್ರುವಕ್ಕೆ ಗುರಿಯಿಟ್ಟ ಇಸ್ರೋ ಇಡೀ ಪ್ರಪಂಚವನ್ನೇ ನಿಬ್ಬೆರಗಾಗಿಸಿದ್ದು ನಮಗೆಲ್ಲ ಗೊತ್ತೇ ಇದೆ. ಹೀಗೆ ಸಂಶೋಧಕರ ಇಂತಹ ಹಲವು ಆವಿಷ್ಕಾರಗಳು ಭಾರತದ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ.
ಭಾರತ ದೇಶವು ಹೆಚ್ಚುವರಿ ವಿದ್ಯುತ್ ಉತ್ಪಾದನ ಸಾಮರ್ಥ್ಯವನ್ನು ಹೊಂದಿದೆ. ಜಲಶಕ್ತಿ, ಪವನಶಕ್ತಿ, ಸೌರಶಕ್ತಿ ಹಾಗೂ ಜೈವಿಕಶಕ್ತಿಗಳಿಂದ ಸಾವಿರಾರು ಮೆಗಾವ್ಯಾಟ್ ಗಳಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಆದರೂ ಇಂದಿಗೂ ದೇಶದ ಶೇಕಡಾ 15 ಪ್ರತಿಶತದಷ್ಟು ಜನ ಕತ್ತಲೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ನಮ್ಮ ಸಂಶೋಧಕರು ಪರ್ಯಾಯ ವಿದ್ಯುತ್ ಉತ್ಪಾದನ ಕಾರ್ಯದಲ್ಲಿ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಒಂದು ಸಾಧನೆಗೆ ಜ್ವಲಂತ ಸಾಕ್ಷಿಯಾಗಿ ಖರಗ್ಪುರದ ಐಐಟಿ ಸಂಶೋಧಕರು ಒದ್ದೆ ಬಟ್ಟೆಯನ್ನು ಒಣಗಿಸುವ ಮೂಲಕ ವಿದ್ಯುತ್ ಉತ್ಪಾದಿಸುವ ಹೊಸ ಆವಿಷ್ಕಾರದಲ್ಲಿ ಯಶಸ್ಸುಗಳಿಸಿದ್ದಾರೆ.
ಸಾಂಪ್ರದಾಯಿಕವಾಗಿ ನೇಯ್ದ ಸೆಲ್ಯುಲೋಸ್ ಆಧಾರಿತ ಬಟ್ಟೆ ಒಂದು ಸಣ್ಣ ದಾರಿಯ ಜಾಲವನ್ನು ಹೊಂದಿದೆ, ಇದನ್ನು ವಿದ್ಯುತ್ ಶಕ್ತಿ ಉತ್ಪಾದನೆಗೆ ಸಂಶೋಧಕರ ಗುಂಪು ಬಳಸಿದೆ. ಅವರು ಯಶಸ್ವಿಯಾಗಿ ಲವಣಯುಕ್ತ ನೀರಿನ ಚಲನೆಯನ್ನು ನಿರಂತರವಾದ ಅವಿಯಾಗುವಿಕೆಯ ಹೊರತಾಗಿಯೂ ತಿಳಿದು ಕೊಂಡರು, ಇದು ಥೆಟ್ ಜೀವವಿರುವ ಗಿಡದಲ್ಲಿ ನೀರು ಗಿಡದ ಬೇರೆ ಬೇರೆ ಭಾಗಗಳಿಗೆ ಹೋಗುವ ಸಂಚಾರ ವ್ಯವಸ್ಥೆಯಂತಿದೆ. ಸಾಧನದ ವಿನ್ಯಾಸವು ಅಂತರ್ಗತವಾಗಿಯೇ ಬಾಷ್ಪೀಕರಣವಾಗುವ ದೊಡ್ಡ ಮೇಲ್ಮೈಯನ್ನೇ ಕಬಳಿಸುವುದರಿಂದ ಅಯನುಗಳ ಚಲನೆ ಸರಾಗವಾಗಿ ನೈಸರ್ಗಿಕ ಅವಿಯಾಗುವಿಕೆಯ ಪ್ರಕ್ರಿಯೆಯಂತೆ ನಡೆಯುತ್ತದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಈ ಯೋಜನೆಯ ಪ್ರಮುಖ ಸಂಶೋಧಕ ಸುಮನ್ ಚಕ್ರವರ್ತಿ ಹೀಗೆ ಹೇಳಿದ್ದಾರೆ,
"ನಾವು ಧರಿಸುವ ಬಟ್ಟೆಗಳು ಸೆಲ್ಯುಲೋಸ್ ಆಧಾರಿತ ಜವಳಿಯಾಗಿದ್ದು, ನಾರಿನಿಂದ ಹೆಣೆದ ಜವಳಿಯು ಹೊಂದಿರುವ ಸಣ್ಣ ಜಾಲವೊಂದರಲ್ಲಿ ಲವಣಯುಕ್ತ ನೀರಿನಲ್ಲಿ ಕಿರುಕೊಳವೆ ಕ್ರಿಯೆಯ ಮೂಲಕ ಅಯಾನುಗಳು ಚಲಿಸಲು ಇದು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಈ ಪ್ರಕ್ರಿಯೆಯಲ್ಲಿ ವಿದ್ಯುತ್ ಸಾಮರ್ಥ್ಯವನ್ನು ಉಂಟುಮಾಡುತ್ತದೆ"
ಇಂಡಿಯಾ ಟುಡೆ ವರದಿಯ ಪ್ರಕಾರ, ದೂರದ ಹಳ್ಳಿಯೊಂದರಲ್ಲಿ 3000 ಚದರ ಮೀಟರ್ ಸ್ಥಳದಲ್ಲಿ ಈ ಸಾಧನವನ್ನು ಪರೀಕ್ಷಿಸಲಾಯಿತು. ಈ ಸ್ಥಳದಲ್ಲಿ ಸುಮಾರು 50 ಜನ ಒಗೆದ ಬಟ್ಟೆಗಳನ್ನು ಒಣಗಿಸಿ ಸಂಶೋಧಕರು ಇಡೀ ಪ್ರಕ್ರಿಯೆಯ ಅಪ್-ಸ್ಕೇಲಿಂಗ್ ಅನ್ನು ಪ್ರದರ್ಶಿಸಿದರು. ಈ ಬಟ್ಟೆಯನ್ನು ಕಮರ್ಷಿಯಲ್ ಸೂಪರ್ ಕೆಪ್ಯಾಸಿಟರ್ ಗೆ ಸಂಪರ್ಕಿಸಲಾಗಿದ್ದು 24 ಗಂಟೆಗಳಲ್ಲಿ ಸಂಶೋಧಕರು ಸುಮಾರು 10 ವೋಲ್ಟ್ ವರೆಗೆ ವಿದ್ಯುತ್ ಹೊರಹಾಕಿತು. ಇಲ್ಲಿ ಸಂಗ್ರಹಿಸಿದ ಶಕ್ತಿಯು 1 ಗಂಟೆಗಿಂತ ಹೆಚ್ಚು ಕಾಲ ಬಿಳಿ ಎಲ್ಇಡಿ ಬಲ್ಬ್ ಬೆಳಗಲು ಸಾಕಾಗುವಷ್ಟು ವಿದ್ಯುತ್ ಉತ್ಪತ್ತಿಯಾಗಿತ್ತು.
ಅಸ್ತಿತ್ವದಲ್ಲಿರುವ ಸಂಕೀರ್ಣ ಸಂಪನ್ಮೂಲಗಳಿಂದಾಗುವ ಶಕ್ತಿ ಕೊಯ್ಲು ಪ್ರಕ್ರಿಯೆಗೆ ಹೋಲಿಸಿದರೆ ಈ ಪ್ರಕ್ರಿಯೆಯು ಸಂಪೂರ್ಣ ನೈಸರ್ಗಿಕವಾಗಿದೆ. ಅಲ್ಲದೇ, ಕೃತಕ ವಿದ್ಯುತ್ ಉತ್ಪಾದನಾ ಸಾಧನಗಳಿಗೆ ಅಧಿಕ ಬಾಹ್ಯ ಪಂಪ್ ಗಳ ಅವಶ್ಯಕವಿದೆ. ಆದರೆ, ಇಲ್ಲಿ ಬಟ್ಟೆಯಲ್ಲಿನ ಆವಿಯಾಗುವಿಕೆ ಚಲನಾಶಕ್ತಿಯನ್ನು ಬಳಸಲಾಗುತ್ತದೆ.
ಎಡೆಕ್ಸ್ ಲೈವ್ ನೊಂದಿಗೆ ಮಾತನಾಡಿದ ಚಕ್ರವರ್ತಿಯವರು,
"ಒದ್ದೆಯಾದ ಬಟ್ಟೆಗಳನ್ನು ನೈಸರ್ಗಿಕವಾಗಿ ವಾತಾವರಣದಲ್ಲಿ ಒಣಗಿಸುವಾಗ ಶುದ್ಧ ಶಕ್ತಿಯನ್ನು ಉತ್ಪಾದಿಸಬಹುದೆಂಬುದು ಕಲ್ಪನೆಗೂ ಮೀರಿದೆ. ಈ ಮಿತವ್ಯಯದ ಆವಿಷ್ಕಾರವು, ಸೆಲ್ಯುಲೋಸ್ ಆಧಾರಿತ ಬಟ್ಟೆಗಳನ್ನು ನೈಸರ್ಗಿಕ ವಾತಾವರಣದಲ್ಲಿ ಸಾಮಾನ್ಯವಾಗಿ ಒಣಗಿಸುವ ದೂರದ ಪ್ರದೇಶಗಳಲ್ಲಿನ ಅಗತ್ಯ ವಿದ್ಯುತ್ ಅವಶ್ಯಕತೆಗಳನ್ನು ಪರಿಹರಿಸುವ ಮೂಲಕ ಹಿಂದುಳಿದ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸುವಲ್ಲಿ ಸಮರ್ಥವಾಗಿದೆ" ಎಂದರು.
ಮುಂದುವರೆದು ಮಾತನಾಡಿದ ಅವರು,
"ದಿನನಿತ್ಯ ಧರಿಸಬಹುದಾದ ಉಡುಪುಗಳನ್ನು ಒಟ್ಟಾಗಿ ಸೂರ್ಯನ ಬೆಳಕಿನಲ್ಲಿ ಒಣಗಿಸುವ ಮೂಲಕ ಅಲ್ಪ ಪ್ರಮಾಣದ ಆರ್ಥಿಕತೆಯನ್ನು ಸಾಧಿಸಬಹುದು. ಅಲ್ಲದೇ ಇದು ಗ್ರಾಮೀಣಭಾಗಳಲ್ಲಿ ಕಡಿಮೆ-ವೆಚ್ಚದ ವಿದ್ಯುತ್ ಕೊಯ್ಲು ಮಾಡಬಹುದಾದ ಪ್ರಯೋಜನಕಾರಿ ಮಾದರಿಯಾಗಿದೆ" ಎಂದು ಚಕ್ರವರ್ತಿ ವಿವರಿಸಿದರು.
ಭಾರತದ ಬೇಸಿಗೆಯ ಹವಾಮಾನವು ಸ್ವಯಂಪ್ರೇರಿತ ವಿದ್ಯುತ್ ಹರಿವು ಸಾಮರ್ಥ್ಯವನ್ನು ಹೆಚ್ಚಿಸಲು ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಉಷ್ಣ ಮತ್ತು ಶುಷ್ಕ ಹವಾಮಾನವನ್ನು ಹೊಂದಿರುವ ಯಾವುದೇ ಭೌಗೋಳಿಕ ಪ್ರದೇಶವು ಈ ತಂತ್ರಜ್ಞಾನವನ್ನು ಬಳಸಲು ಪರಿಣಾಮಕಾರಿಯಾಗಿದೆ.
ಖರಗ್ ಪುರ ಐಐಟಿ ಸಂಸ್ಥೆಯ ಪ್ರಾಧ್ಯಪಕರಾದ ಚಕ್ರವರ್ತಿಯ ಮಾರ್ಗದರ್ಶನದಲ್ಲಿನ ಪಿಹೆಚ್ಡಿ ವಿದ್ಯಾರ್ಥಿಗಳಾದ ಸಂಖ ಸುವಾರ್ ದಾಸ್, ವಿನಯ್ ಮನಸ್ವಿ ಪೆದಿರೆಡ್ಡಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಆದಿತ್ಯಾ ಬಂದೋಪಾದ್ಯಾಯ ಮತ್ತಿತರರು ಈ ಹೊಸ ಆವಿಷ್ಕಾರದ ನಿರ್ಮಾತೃಗಳಾಗಿದ್ದಾರೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.