ಕೋವಾಕ್ಸಿನ್: ಭಾರತದ ಮೊದಲ ಕೋವಿಡ್-19 ಲಸಿಕೆ ಕ್ಲಿನಿಕಲ್ ಟ್ರಯಲ್‌ನತ್ತ
ಭಾರತದ ಮೊದಲ ಕೋವಿಡ್-19 ಲಸಿಕೆಯಾದ ಭಾರತ ಬಯೋಟೆಕ್‌ನ ಕೋವಾಕ್ಸಿನ್ ಜುಲೈ ತಿಂಗಳಲ್ಲಿ ಕ್ಲಿನಿಕಲ್ ಟ್ರಯಲ್‌ನ ಹಂತ 1 ಮತ್ತು 2ಕ್ಕಾಗಿ ಡಿಸಿಜಿಐ ನಿಂದ ಹಸಿರು ನಿಶಾನೆ ಪಡೆದಿದೆ.
ಕೊರೊನಾವೈರಸ್ ನಿಂದ ತತ್ತರಿಸಿರುವ ಜಗತ್ತಿನಲ್ಲಿ ಆಶಾದಾಯಕ ಸುದ್ದಿಯೊಂದು ಬಂದಿದೆ. ಹೈದರಾಬಾದ್ ಮೂಲದ ಭಾರತ ಬಯೋಟೆಕ್ ಕಂಪನಿ ಭಾರತದ ಮೊದಲ ಕೊರೊನಾವೈರಸ್ ಲಸಿಕೆ ಕೋವಾಕ್ಸಿನ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಮ್‌ಆರ್) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ) ಜತೆ ಸೇರಿ ಅಭಿವೃದ್ಧಿಪಡಿಸಿದೆ.
ಸಾರ್ಸ್-ಕೋವ್-2 ತಳಿಯನ್ನು ಪುಣೆಯ ಎನ್‌ಐವಿನಲ್ಲಿ ಪ್ರತ್ಯೇಕಿಸಿ ನಂತರ ಭಾರತ ಬಯೋಟೆಕ್‌ಗೆ ವರ್ಗಾಯಿಸಲಾಗಿದೆ. ಈ ಸ್ಥಳೀಯ ಲಸಿಕೆಯನ್ನು ಹೈದರಾಬಾದ್‌ನ ಜಿನೋಮ್ ವ್ಯಾಲಿಯಲ್ಲಿರುವ ಭಾರತ ಬಯೋಟೆಕ್‌ನ ಬಿಎಸ್‌ಎಲ್-3 ಧಾರಕ ಸೌಲಭ್ಯದಲ್ಲಿ ಅಭಿವೃದ್ಧಿಪಡಿಸಿ, ತಯಾರಿಸಲಾಗಿದೆ.
ಸುರಕ್ಷತೆ ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರದರ್ಶಿಸುವ ಪ್ರಿ-ಕ್ಲಿನಿಕಲ್ ಅಧ್ಯಯನಗಳಿಂದ ಬಂದ ಫಲಿತಾಂಶಗಳನ್ನು ಭಾರತ ಬಯೋಟೆಕ್ ಸಾದರ ಪಡಿಸಿದ ನಂತರ ಸಿಡಿಎಸ್‌ಸಿಒ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎರಡು ಹಂತದ ಮಾನವರ ಮೇಲಿನ ಪ್ರಯೋಗಕ್ಕೆ ಅನುಮತಿ ನೀಡಿದೆ.
ಜುಲೈ 2020 ರಲ್ಲಿ ಭಾರತದಾದ್ಯಂತ ಕ್ಲಿನಿಕಲ್ ಟ್ರಯಲ್‌ಗಳು ಶುರುವಾಗಲಿವೆ.
“ಐಸಿಎಮ್‌ಆರ್ ಮತ್ತು ಎನ್‌ಐವಿ ಜತೆಯ ಸಹಯೋಗವು ಈ ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಸಿಡಿಎಸ್‌ಸಿಒದ ಪೂರ್ವಭಾವಿ ಬೆಂಬಲ ಮತ್ತು ಮಾರ್ಗದರ್ಶನವು ಈ ಯೋಜನೆಗೆ ಅನುಮೋದನೆಗಳನ್ನು ಸಕ್ರಿಯಗೊಳಿಸಿದೆ. ನಮ್ಮ ಸ್ವಾಮ್ಯದ ತಂತ್ರಜ್ಞಾನಗಳನ್ನು ಈ ವೇದಿಕೆಯತ್ತ ನಿಯೋಜಿಸಲು ನಾವು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ,” ಎಂದರು ಭಾರತ್ ಬಯೋಟೆಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ.
ರಾಷ್ಟ್ರೀಯ ನಿಯಂತ್ರಕ ಪ್ರೋಟೋಕಾಲ್‌ಗಳನ್ನು ತ್ವರಿತವಾಗಿ ನಿಭಾಯಿಸಿರುವ ಕಂಪನಿಯು ಸಮಗ್ರ ಪೂರ್ವ-ಕ್ಲಿನಿಕಲ್ ಅಧ್ಯಯನಗಳನ್ನು ಪೂರ್ಣಗೊಳಿಸುವ ಉದ್ದೇಶಕ್ಕೆ ವೇಗ ನೀಡಿತು. ಅಧ್ಯಯನಗಳ ಫಲಿತಾಂಶಗಳು ಭರವಸೆಯಿಂದ ಕೂಡಿದ್ದು, ವ್ಯಾಪಕ ಸುರಕ್ಷತೆ ಮತ್ತು ಪರಿಣಾಮಕಾರಿ ರೋಗನಿರೋಧಕ ಪ್ರತಿಕ್ರಿಯೆಗಳನ್ನು ತೋರಿಸುತ್ತಿವೆ.
ಭಾರತ್ ಬಯೋಟೆಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರ ಎಲಾ, “ಸಾಂಕ್ರಾಮಿಕ ರೋಗಗಳ ಮುನ್ಸೂಚನೆಯಲ್ಲಿ ನಮ್ಮ ನಡೆಯುತ್ತಿರುವ ಸಂಶೋಧನೆ ಮತ್ತು ಪರಿಣತಿಯು ಎಚ್1ಎನ್1 ಸಾಂಕ್ರಾಮಿಕಕ್ಕೆ ಲಸಿಕೆಯನ್ನು ಯಶಸ್ವಿಯಾಗಿ ತಯಾರಿಸಲು ಅನುವು ಮಾಡಿಕೊಟ್ಟಿತು. ಭಾರತದಲ್ಲಿ ಉತ್ಪಾದನೆ ಮತ್ತು ಪರೀಕ್ಷೆಗಾಗಿ ಏಕೈಕ ಬಿಎಸ್ಎಲ್ -3 ಧಾರಕ ಸೌಲಭ್ಯಗಳನ್ನು ರಚಿಸುವತ್ತ ನಾವು ಗಮನ ಹರಿಸುತ್ತಿದ್ದೇವೆ,” ಎಂದರು.
ಹಿಂದೆ ಭಾರತ ಬಯೋಟೆಕ್ ವೆರೊ ಸೆಲ್ ಕಲ್ಚರ್ ಪ್ಲಾಟ್‌ಫಾರ್ಮ್ ಟೆಕ್ನಾಲಜೀಸ್ ಅನ್ನು ಅಭಿವೃದ್ಧಿಪಡಿಸಿದೆ, ಅದು ಪೋಲಿಯೋ, ರೇಬಿಸ್, ರೋಟಾವೈರಸ್, ಜಪಾನೀಸ್ ಎನ್ಸೆಫಾಲಿಟಿಸ್, ಚಿಕನ್‌ಗುನ್ಯಾ ಮತ್ತು ಜಿಕಾನಂತಹ ರೋಗಗಳಿಗೆ ಅನೇಕ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯಕವಾಗಿದೆ.
ಜೈಡಸ್ ಕ್ಯಾಡಿಲಾ, ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಪಾನಾಕಾ ಬಯೋಟೆಕ್ ಎಂಬ ಭಾರತದ ಇತರ ಕಂಪನಿಗಳು ಕೋವಿಡ್-19 ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ.
ಇದರ ನಡುವೆ ಭಾರತದಲ್ಲಿ ಕೋರೊನಾ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಸೋಮವಾರ ಒಂದೇ ದಿನದಲ್ಲಿ 18,000 ಪ್ರಕರಣಗಳು ವರದಿಯಾಗಿ, ಒಟ್ಟು ಪ್ರಕರಣಗಳ ಸಂಖ್ಯೆ 5,67,423 ಕ್ಕೆ ಏರಿದೆ.