ಬೆಂಗಳೂರನ್ನು ಮತ್ತೆ ಲಾಕ್‌ಡೌನ್ ಮಾಡುವುದಿಲ್ಲ, ರಾಜ್ಯದ ಆರ್ಥಿಕತೆಯು ತುಂಬಾ ಮುಖ್ಯ: ಬಿ.ಎಸ್.ವೈ.
ಸೋಂಕು ಹರಡದಂತೆ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ನಗರವನ್ನು ಮತ್ತೊಮ್ಮೆ ಲಾಕ್‌ಡೌನ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಶುಕ್ರವಾರ ತಿಳಿಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯು ಮುಖ್ಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು ಅವರು.
ಕೋವಿಡ್-19 ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿದ್ದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಂಡುಬರುತ್ತಿವೆ, ಆದರೆ ಎಲ್ಲರೂ ಸಹಕಾರ ನೀಡಿದರೆ ಈ ಮಹಾಮಾರಿಯನ್ನು ತಡೆಯಬಹುದು ಎಂದರು ಅವರು.
ಬೇರೆ ರಾಜ್ಯ, ನಗರಗಳಿಗೆ ಹೊಲಿಸಿದರೆ ಬೆಂಗಳೂರಿನ ಸ್ಥಿತಿ ಸುರಕ್ಷಿತವಾಗಿದೆ ಎಂಬ ಕಂದಾಯ ಸಚಿವರಾದ ಆರ್. ಅಶೋಕ ಅವರ ಹೇಳಿಕೆಯ ನಂತರ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ ಮತ್ತು ಪ್ರಸ್ತುತ ನಗರದ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ.
ಗುರುವಾರ ಸಂಜೆಯವರೆಗೆ ಬೆಂಗಳೂರು ನಗರದಲ್ಲಿ ಒಟ್ಟು 1,791 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 78 ಜನರು ಮೃತಪಟ್ಟಿದ್ದಾರೆ ಮತ್ತು 505 ಜನರು ಮುಣಮುಖರಾಗಿ ಮನೆಗೆ ಮರಳಿದ್ದಾರೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10,560 ಕ್ಕೆ ಬಂದು ನಿಂತಿದೆ.
ರಾಜ್ಯದ ರಾಜಧಾನಿಯಲ್ಲಿ ಜಿಲ್ಲೆಗಳಿಗೆ ಹೊಲಿಸಿದರೆ ಅತೀ ಹೆಚ್ಚು ಕೋವಿಡ್ ಪ್ರಕರಣಗಳಿವೆ. “ಮತ್ತೆ ಲಾಕ್‌ಡೌನ್ ಮಾಡುವ ಪ್ರಮೇಯವೆ ಇಲ್ಲ. ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಈಗಾಗಲೇ ಲಾಕ್‌ಡೌನ್ ಹೇರಲಾಗಿದೆ, ಇದರ ಹೊರತು ಬೇರೆ ಪ್ರದೇಶದಲ್ಲಿ ಲಾಕ್‌ಡೌನ್ ಹೇರುವ ಪ್ರಶ್ನೆಯೆ ಇಲ್ಲ,” ಎಂದರು ಬಿ.ಎಸ್.ವೈ.
ಬೆಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣದ ಬಗ್ಗೆ ಚರ್ಚಿಸಲು ಎಲ್ಲ ಪಕ್ಷಗಳ ಸಚಿವರು, ಶಾಸಕರು ಮತ್ತು ಸಂಸತ ಸದಸ್ಯರೊಂದಿಗೆ ಸೇರಿದ ಸಭೆಗೂ ಮುಂಚೆಯೇ ರಾಜ್ಯದ ಆರ್ಥಿಕ ಸ್ಥಿತಿ ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ ಎಂದು ಅವರು ತಿಳಿಸಿದರು.
“ವಿರೋಧಪಕ್ಷದವರನ್ನು ಸೇರಿಸಿ ಎಲ್ಲ ಶಾಸಕರೊಂದಿಗೆ ಮತ್ತು ಬೆಂಗಳೂರಿನ ಸಚಿವರೊಂದಿಗೆ ಚರ್ಚಿಸಿ, ನಿರ್ಧಾರಕ್ಕೆ ಬರುತ್ತೇವೆ. ಅವರೆಲ್ಲರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಕೈಗೊಂಡು ಬೆಂಗಳೂರನ್ನು ಮಹಾಮಾರಿಯಿಂದ ರಕ್ಷಿಸುತ್ತೇವೆ,” ಎಂದರು.
ಕಳೆದ ಕೆಲವು ದಿನಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯ ದೃಷ್ಟಿಯಿಂದ ಕೆಲವು ಸಚಿವರು ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್ ಜಾರಿಗೊಳಿಸಬೇಕು ಎಂದು ಹೇಳಿಕೆ ನೀಡಿದ ನಂತರ ಮತ್ತೆ ಲಾಕ್‌ಡೌನ್ ಹೇರುವ ಊಹಾಪೋಹಗಳು ಹರಡಿದ್ದವು.
ಕೋವಿಡ್-19 ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿದ್ದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಂಡುಬರುತ್ತಿದೆ. ಇದನ್ನು ತಡೆಯಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು ಬಿ.ಎಸ್.ವೈ.
“ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲಿ ವಿಶೇಷ ಕಾಳಜಿ ವಹಿಸಿದರೆ ಕೋವಿಡ್ ಸೋಂಕನ್ನು ತಡೆಯಬಹುದು ಎಂಬ ಭರವಸೆ ನನಗಿದೆ,” ಎಂದರು ಅವರು.
ಇದರ ನಡುವೆ ನಗರದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಕಂದಾಯ ಸಚಿವ ಆರ್. ಅಶೋಕ ಅವರಿಗೆ ವಹಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.