ಕ್ಯಾನ್ಸರ್‌ ನಿಂದ ತನ್ನ ತಾಯಿಯನ್ನು ಕಳೆದುಕೊಂಡ ಈ ಹುಡುಗಿ, ಮಾನವ ಕೂದಲಿನಿಂದ ಮಾಡಿದ ವಿಗ್‌ ಉದ್ಯಮವನ್ನು ಪ್ರಾರಂಭಿಸಿದಳು

ನಿಶ್ಥಾ ಮಲಿಕ್‌ ತಮ್ಮ ಹದಿನೆಂಟನೆ ವಯಸ್ಸಿಗೆ ಕಾಲಿಡುವಾಗ, ಅವರ ತಾಯಿ ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿದರು. ತಮ್ಮ ತಾಯಿ ಕೆಮೋಥೆರಪಿ ಚಿಕಿತ್ಸೆ ಪಡೆಯುವಾಗ ಒಂದು ಸುಂದರವಾದ ವಿಗ್ (ಕೃತಕ ಕೇಶ)ಗಾಗಿ ಹಪಹಪಿಸುತ್ತಿದ್ದ ನೆನಪು ಅವರನ್ನು ಕಾಡಿದಾಗಲೇ ನಿಶ್ಥಾರ “ಬ್ಯೂಕ್ಸ್” ಪ್ರಾರಂಭವಾದದ್ದು.

ಕ್ಯಾನ್ಸರ್‌ ನಿಂದ ತನ್ನ ತಾಯಿಯನ್ನು ಕಳೆದುಕೊಂಡ ಈ ಹುಡುಗಿ, ಮಾನವ ಕೂದಲಿನಿಂದ ಮಾಡಿದ ವಿಗ್‌ ಉದ್ಯಮವನ್ನು ಪ್ರಾರಂಭಿಸಿದಳು

Wednesday January 08, 2020,

4 min Read

2019ರಲ್ಲಿ ಪ್ರಾರಂಭವಾದ “ಬ್ಯೂಕ್ಸ್” ಮಹಿಳೆಯರು ಮತ್ತು ಪುರುಷರಿಗಾಗಿ ಕೃತಕ ವಿಗ್‌ಗಳನ್ನು ತಯಾರಿಸುವ ಕಂಪನಿಯಾಗಿದ್ದು, ಇಲ್ಲಿಯವರೆಗೆ, 12-15 ಲಕ್ಷರೂಪಾಯಿಗಳ ವಹಿವಾಟು ನಡೆಸಿದೆ.


ನಿಶ್ಥಾ ಮಲಿಕ್, ಸಂಸ್ಥಾಪಕಿ, ಬ್ಯೂಕ್ಸ್.


ಅಗಲಿಕೆಯು ನಮ್ಮೆಲ್ಲರ ಮೇಲೂ ಪರಿಣಾಮ ಬೀರುತ್ತದೆ, ಆದರೆ ಪ್ರತಿಯೊಬ್ಬರೂ ಅದನ್ನು ನಿಭಾಯಿಸಲು ವಿಭಿನ್ನ ಮಾರ್ಗವನ್ನು ಅನುಸರಿಸುತ್ತಾರೆ. ನಿಶ್ಥಾ ಮಲಿಕ್ ಅವರಿಗೆ ಆಗ 17 ವರ್ಷ, ಮತ್ತು ಅವರ 18 ನೇ ಹುಟ್ಟುಹಬ್ಬವು ಕೇವಲ ಎರಡು ದಿನಗಳಲ್ಲಿದ್ದಾಗ ಅವರ ತಾಯಿ ಕೊನೆಯ ಉಸಿರೆಳೆದರು. ತಾಯಿಯು ಶ್ವಾಸಕೋಶದ ಕ್ಯಾನ್ಸರ್ನೊಂದಿಗೆ ಹೋರಾಡುವುದನ್ನು ಮತ್ತು ಅಂತಿಮವಾಗಿ ಪ್ರಾಣವನ್ನು ಕಳೆದುಕೊಂಡಿದ್ದನ್ನು ನೋಡಿದ ಘಟನೆ ಅಘಾತಕಾರಿಯಾಗಿತ್ತು.


ಯುವರ್‌ಸ್ಟೋರಿಯೊಂದಿಗಿನ ಸಂವಾದದಲ್ಲಿ, ನಿಶ್ಥಾ,


“ನನ್ನ ತಾಯಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಒಂದು ವಾರದ ಮೊದಲು ನಮಗೆ ತಿಳಿಸಿದ್ದರು. ನಾನು ಅವಳನ್ನು ಕಳೆದುಕೊಂಡಾಗ ನನ್ನ 12 ನೇ ತರಗತಿ ಪರೀಕ್ಷೆಯನ್ನು ಬರೆಯುತ್ತಿದೆ. ಆದರೆ, ನಾನು ಪರೀಕ್ಷೆಗಳನ್ನು ಬರೆದೆ ತೀರುತ್ತೇನೆಂದು ಅವಳಿಗೆ ಭರವಸೆ ನೀಡಿದ್ದೆ. ಆ ಪರಿಸ್ಥಿತಿಯಲ್ಲಿರುವುದೇ ಒಂದು ದುರಂತ. ಒಂದು ಕ್ಷಣದಲ್ಲಿ, ನಾನು ನನ್ನ ಶಾಲಾ ಜೀವನದ ಪ್ರಮುಖ ಹಂತದಲ್ಲಿದ್ದೆ; ಮತ್ತೊಂದೆಡೆ, ನಾನು ಊಹಿಸಲಸಾಧ್ಯವಾದ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದೆ," ಎಂದರು.


ಅವರ ತಾಯಿಯ ಮರಣವು ಅವರ ಮನಸ್ಸಿಗೆ ಮತ್ತು ಜೀವನಕ್ಕೆ ಭಾರಿ ಶೂನ್ಯವಾವರಿಸುವಂತೆ ಮಾಡಿತ್ತು, ಆದರೆ ನಿಶ್ಥಾ ಧೈರ್ಯದಿಂದ ಬಂದದ್ದನ್ನು ಎದುರಿಸಿದರು.


2012 ರಲ್ಲಿ ತಮ್ಮ 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಪದವಿ ಪೂರ್ಣಗೊಳಿಸಿದರು ಮತ್ತು ಉದ್ಯಮಶೀಲತೆಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಲು ಲಂಡನ್‌ಗೆ ತೆರಳಿದರು. ಅವರು ಸಾವಯವ ಕೂದಲ ರಕ್ಷಣಾ ಕಂಪನಿಯಲ್ಲಿ ಸಹ ಕೆಲಸ ಮಾಡುತ್ತಿದ್ದರು, ಆದರೆ ಅದು ಅವರಿಗೆ ತೃಪ್ತಿ ನೀಡಲಿಲ್ಲ.


2019 ರಲ್ಲಿ ನಿಶ್ಥಾ ಮತ್ತೆ ಭಾರತಕ್ಕೆ ಬಂದು ದೇಶದ ಸಾವಯವ ಕೂದಲ ರಕ್ಷಣೆಯ ಮಾರುಕಟ್ಟೆಯನ್ನು ಪರಿಶೋಧಿಸಿದರು. ಉದ್ಯಮದ ಕೊರತೆಯಿದೆ ಎಂದು ಕಂಡು ಅವರು, ವಿಶೇಷವಾಗಿ ವಿಗ್‌ಗಳು ಮತ್ತು ಕೂದಲು ವಿಸ್ತರಣೆಗಳ ವಿಷಯದಲ್ಲಿ ನಿರಾಶೆಗೊಂಡರು. ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಕೂದಲು ಕಳೆದುಕೊಂಡ ನಂತರ ತಾಯಿ ವಿಗ್ ಹುಡುಕಲು ಹೆಣಗಾಡುತ್ತಿರುವುದನ್ನು ನೋಡಿದ್ದರಿಂದ ಆ ನೋವು ಏನೆಂದು ಅವರಿಗೆ ಗೊತ್ತಿತ್ತು.


ತಾನು ಇದರ ಬಗ್ಗೆ ಏನೋ ಮಾಡಲಿದ್ದೇನೆ ಎಂದು ಅವರು ತಕ್ಷಣ ನಿರ್ಧರಿಸಿದರು: ಕೆಮೋಥೆರಪಿಗೆ ಒಳಗಾಗುವ ಮಹಿಳೆಯರಿಗೆ ಗುಣಮಟ್ಟದ ವಿಗ್ ಮತ್ತು ವಿಸ್ತರಣೆಗಳನ್ನು ಒದಗಿಸುವ ಮೂಲಕ ಧೈರ್ಯ ಮತ್ತು ಭರವಸೆ ನೀಡುವುದು.


ಕನಸಿನೆಡೆಗೆ ಮೊದಲ ಹೆಜ್ಜೆಯನ್ನಿಡುತ್ತ

ಬ್ಯೂಕ್ಸ್ ಅವರಿಂದ ತಯಾರಿಸಲ್ಪಟ್ಟ ಕೂದಲು ವಿಸ್ತರಣೆಗಳು


ಎರಡು ವರ್ಷಗಳ ಕಾಲ ನಿಶ್ಥಾ ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಸಂಶೋಧನೆ ನಡೆಸಿದರು.


"ಸಂಶ್ಲೇಷಿತ ಕೂದಲಿನ ಉತ್ಪನ್ನಗಳು ವಿಪುಲವಾಗಿವೆ ಎಂದು ನಾನು ಕಂಡುಕೊಂಡಿದ್ದೇನೆ ಮತ್ತು 100 ಪ್ರತಿಶತ ಮಾನವ ಕೂದಲಿನಿಂದ ಮಾಡಿದ ವಿಗ್ ಮತ್ತು ವಿಸ್ತರಣೆಗಳನ್ನು ಒದಗಿಸುವವರು ಮಾರುಕಟ್ಟೆಯಲ್ಲಿ ಯಾರೂ ಇರಲಿಲ್ಲ. ನಾನು ಲಂಡನ್‌ನಲ್ಲಿದ್ದಾಗ, ಬ್ರ್ಯಾಂಡ್‌ಗಳು ಈ ವ್ಯವಹಾರವನ್ನು ಮಾಡುತ್ತಿರುವುದನ್ನು ನಾನು ನೋಡಿದ್ದೇನೆ; ಅವರು ಬಹಳ ಜನಪ್ರಿಯರಾಗಿದ್ದರು. ಆದರೆ, ಭಾರತದಲ್ಲಿ, ನಾನು ಅದನ್ನು ಎಲ್ಲಿಯೂ ನೋಡಲಾಗಲಿಲ್ಲ,” ಎಂದು ಅವರು ಹೇಳಿದರು.


ನಿಶ್ಥಾ ಇದುವರೆಗೂ ಯಾರೂ ಪ್ರಯೋಗ ಮಾಡದ ಮಾರುಕಟ್ಟೆಯತ್ತ ಗಮನಹರಿಸಲು ನಿರ್ಧರಿಸಿದರು ಮತ್ತು 2019 ರ ಜೂನ್‌ನಲ್ಲಿ ಬ್ಯೂಕ್ಸ್ (ಸುಂದರ) ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವುದರ ಜೊತೆಗೆ, ನಿಜವಾದ ಕೂದಲನ್ನು ಉದ್ಯಮಕ್ಕೆ ತರುವುದು ತನ್ನ ಗ್ರಾಹಕರಿಗೆ, ವಿಶೇಷವಾಗಿ ಮಹಿಳೆಯರಿಗೆ, “ಸುಂದರವಾದ” ದಪ್ಪ ಕೂದಲನ್ನು ಹೊಂದಲು ಅರ್ಹರಾಗಿರುವ ಅವರಿಗೆ ತಲುಪಿಸುತ್ತೇನೆ ಎಂದುಕೊಂಡು ಪ್ರಾರಂಭಿಸಿದರು.


“ಕೂದಲ ವಿಸ್ತರಣೆಗಳು ಹಾಗೂ ವಿಗ್‌ಗಳು ಹೆಣ್ಣುಮಕ್ಕಳಿಗೆ ತಾವು ಸುಂದರವಾಗಿ ಕಾಣುವಂತೆ ಹಾಗೂ ಆತ್ಮವಿಶ್ವಾಸದಿಂದಿರುವಂತೆ ಮಾಡುತ್ತವೆ. ಕೆಲ ಹೆಣ್ಣುಮಕ್ಕಳಿಗೆ ತೀರಾ ತೆಳುವಾದ ಕೂದಲುಗಳಿರುತ್ತವೆ. ಅದು ಅವರ ವಂಶವಾಹಿಯಾದ ಜೀನ್ಸ್‌ಗಳಿಂದ ಅಥವಾ ಒತ್ತಡದ ಅಥವಾ ಅನಾರೋಗ್ಯದ ಕಾರಣದಿಂದ ಆಗಿರಬಹುದು. ಅದು ಅವರಿಗೆ ಅಸುರಕ್ಷತಾ ಭಾವನೆಗಳನ್ನು ತರಿಸುತ್ತದೆ. ಅಥವಾ ಒಂದು ಹಂತದ ನಂತರ ಕೂದಲು ಬೆಳೆಯದೇ ಇರಬಹುದು. ಅಂತಹ ಸಮಯದಲ್ಲಿ, ನಮ್ಮ ಕನಸಿನ ಕೂದಲನ್ನ ನಾವು ವಿಗ್‌ ರೂಪದಲ್ಲಿ ಧರಿಸಬಹುದು,” ಎನ್ನುತ್ತಾರೆ.


ವ್ಯವಹಾರಿಕವಾಗಿ ಬ್ಯೂಕ್ಸ್

ಬ್ಯೂಕ್ಸ್ ಅವರಿಂದ ತಯಾರಿಸಲ್ಪಟ್ಟ ಹೇರ್ ವಿಗ್ಸ್.




ಭಾರತವು ಕೂದಲನ್ನು ಅತಿ ಹೆಚ್ಚು ರಫ್ತು ಮಾಡುವ ದೇಶವಾಗಿರುವುದರಿಂದ ನವೋದ್ಯಮ ಪ್ರಾರಂಭಿಸುವುದು ದೊಡ್ಡ ಹೋರಾಟವಾಗಿರಲಿಲ್ಲ. ಬ್ಯೂಕ್ಸ್ ನವರು 100 ಪ್ರತಿಶತದಷ್ಟು ನೈಸರ್ಗಿಕ ಕೂದಲನ್ನು ಬಳಸುತ್ತಾರೆ ಮತ್ತು ಅದಕ್ಕಾಗಿ ಕೂದಲುಗಳನ್ನು ದಕ್ಷಿಣ ಭಾರತದ ದೇವಾಲಯಗಳಿಂದ, ಮುಖ್ಯವಾಗಿ ತಿರುಪತಿ ಬಾಲಾಜಿ ದೇವಸ್ಥಾನದಿಂದ ಪಡೆಯುತ್ತಾರೆ.


ಅವರು ತಮ್ಮ ತಂದೆಯಿಂದ ಎರವಲು ಪಡೆದ 8 ಲಕ್ಷ ರೂ.ಗಳ ಬಂಡವಾಳದೊಂದಿಗೆ ಕಂಪನಿಯನ್ನು ಪ್ರಾರಂಭಿಸಿದರು. ಸಂಸ್ಕರಣಾ ಘಟಕವು ರಾಜಸ್ಥಾನದ ಕೋಟಾದಲ್ಲಿದೆ, ಅಲ್ಲಿ ಮೂಲದ ಕೂದಲು ಪ್ರಿ-ಕಂಡೀಷನಿಂಗ್, ತೊಳೆಯುವುದು ಮತ್ತು ಕಂಡೀಷನಿಂಗ್ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಸಿದ್ಧಪಡಿಸಿದ ಉತ್ಪನ್ನವು ಅಂತಿಮವಾಗಿ ಘಟಕದಿಂದ ಹೊರಹೊಮ್ಮುವ ಮೊದಲು ಬಹು-ಹಂತದ ಗುಣಮಟ್ಟದ ನಿಯಂತ್ರಣವನ್ನು ದಾಟಿ ಬರುತ್ತದೆ.


ಬ್ಯೂಕ್ಸ್ ವಿಗ್ಸ್, ಟಾಪರ್ಸ್, ಬಣ್ಣದ ಕೂದಲಿನ ಎಳೆಗಳು/ಗೆರೆಗಳು, ಕೂದಲಿನ ಪರಿಶೀಲನೆಗಳು ಮತ್ತು ಕೂದಲಿನ ಹೊದಿಕೆಗಳನ್ನು ಮಾಡುತ್ತದೆ. ಜೂನ್ 2019 ರಲ್ಲಿ ಪ್ರಾರಂಭವಾದ ನಂತರ, ಆರು ತಿಂಗಳಲ್ಲಿ, ಕಂಪನಿಯು ಸರಾಸರಿ 12-15 ಲಕ್ಷ ರೂ.ಗಳ ಮಾರಾಟವನ್ನು ಮಾಡಿದೆ ಮತ್ತು ದಕ್ಷಿಣ ಆಫ್ರಿಕಾ, ದುಬೈ ಮತ್ತು ಟರ್ಕಿಗೆ ರಫ್ತು ಮಾಡಲು ಪ್ರಾರಂಭಿಸಿದೆ.


ನಿಶ್ಥಾ ಹೇಳುತ್ತಾರೆ,


"ನಾನು ಲಂಡನ್ನಲ್ಲಿಯೂ ಗ್ರಾಹಕರನ್ನು ಹೊಂದಿದ್ದೇನೆ, ಮತ್ತು ಮುಂಬೈನ ವಿವಿಧ ಸಲೊನ್‌ನಲ್ಲಿ ಮತ್ತು ದುಬೈನ ಅಟ್ಲಾಂಟಿಸ್ ಮತ್ತು ಪಾಮ್ ಜುಮೇರಾದಲ್ಲಿಯೂ ನಮ್ಮ ವ್ಯವಹಾರದ ಉಪಸ್ಥಿತಿಯಿದೆ. ನನ್ನ ಉತ್ಪನ್ನಗಳನ್ನು ಸಂಗ್ರಹಿಸಲು ಭಾರತದಾದ್ಯಂತ 950 ಸಲೂನ್‌ಗಳನ್ನು ನಡೆಸುವ ಪ್ರಮುಖ ಸರಪಳಿಯೊಂದಿಗೆ ನಾನು ಮಾತುಕತೆ ನಡೆಸುತ್ತಿದ್ದೇನೆ.”


ಅವರು ತಮ್ಮ ಉತ್ಪನ್ನಗಳನ್ನು ಭಾರತದಾದ್ಯಂತದ ವಿವಿಧ ವಸ್ತು ಪ್ರದರ್ಶನಗಳಲ್ಲಿ ಪ್ರದರ್ಶಿಸುತ್ತಾರೆ ಮತ್ತು ಮಾನವ ಕೂದಲಿನ ವಿಸ್ತರಣೆಗಳನ್ನು ಬಳಸುವ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಅವರು ದೆಹಲಿಯ ಪರ್ಲ್ ಅಕಾಡೆಮಿಯಲ್ಲಿ ಅಧಿವೇಶನವನ್ನೂ ನಡೆಸುತ್ತಾರೆ.


ಕಂಪನಿಯು ಪ್ರಸ್ತುತ ತನ್ನ ವೆಬ್‌ಸೈಟ್ ಇಂಡಿಯಾಮಾರ್ಟ್ ಮೂಲಕ ಮತ್ತು ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ಪೋರ್ಟಲ್‌ಗಳ ಮೂಲಕ ಮಾರಾಟ ಮಾಡುತ್ತದೆ. ಕಂಪನಿಯು ಬ್ಯೂಕ್ಸ್ ಬಳಸುವ ಹಲವಾರು ಮೇಕಪ್ ಕಲಾವಿದರೊಂದಿಗೆ ಸಹಯೋಗ ಹೊಂದಿದೆ. ಕಂಪನಿಯು ಫೆಬ್ರವರಿಯಿಂದ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇನ್ನೂ ಹಲವು ವೆಬ್‌ಸೈಟ್‌ಗಳಲ್ಲಿ ಮಾರಾಟವನ್ನು ಪ್ರಾರಂಭಿಸುತ್ತದೆ.


ಮಾರಾಟದ ಮಧ್ಯೆ, ನಿಶ್ಥಾ ಅವರು ಬ್ಯೂಕ್ಸ್ ಅನ್ನು ಏಕೆ ಪ್ರಾರಂಭಿಸಿದರು ಎಂಬುದನ್ನು ಮರೆತಿಲ್ಲ, ಮತ್ತು ಅವರನ್ನು ಸಂಪರ್ಕಿಸುವ ಕ್ಯಾನ್ಸರ್ ರೋಗಿಗಳಿಗೆ ಅವರು ಉಚಿತವಾಗಿ ಸಹಾಯ ಮಾಡುತ್ತಾರೆ.


ಸವಾಲುಗಳನ್ನು ಎದುರಿಸುವುದು ಮತ್ತು ಮುಂದಿನ ದಾರಿ.

ಬ್ಯೂಕ್ಸ್ ಗಂಡಸರ ವಿಗ್.‌


ಜಾಗೃತಿ ಮೂಡಿಸುವುದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ, ಮಾನವ ಕೂದಲಿನಿಂದ ಮಾಡಿದ ವಿಗ್‌ಗಳನ್ನು ಬಳಸುವ ಕಾರಣಗಳು ಮತ್ತು ಪ್ರಯೋಜನಗಳನ್ನು ಜನರು ಹೆಚ್ಚಾಗಿ ಅರ್ಥಮಾಡಿಕೊಳ್ಳುವುದಿಲ್ಲ ಎಂದು ನಿಶ್ಥಾ ಹೇಳುತ್ತಾರೆ.


ಸಂಶ್ಲೇಷಿತ ವಿಗ್‌ಗಳು ಬಹಳ ಕಡಿಮೆ ಶೆಲ್ಫ್ ಜೀವನವನ್ನು ಹೊಂದಿವೆ; ಅವು ಕೇವಲ ಒಂದು ದಿನ ಅಥವಾ ಒಂದೆರಡು ದಿನಗಳವರೆಗೆ ಇರುತ್ತದೆ ಮತ್ತು ನೀವು ಅದರೊಂದಿಗೆ ಪ್ರಯೋಗ ಮಾಡಲು ಸಾಧ್ಯವಿಲ್ಲ. ಮತ್ತೊಂದೆಡೆ, ಮಾನವ ಕೂದಲಿನ ವಿಸ್ತರಣೆಗಳು ಮತ್ತು ವಿಗ್‌ಗಳು 10 ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಅವುಗಳನ್ನು ತೊಳೆಯಬಹುದು, ನೇರಗೊಳಿಸಬಹುದು, ಬಣ್ಣ ಮಾಡಬಹುದು ಮತ್ತು ಇನ್ನೂ ಹೆಚ್ಚಿನದನ್ನು ಮಾಡಬಹುದು.


"ಸಂಶ್ಲೇಷಿತ ಕೂದಲು ವಿಸ್ತರಣೆಗಳು ಚಿಲ್ಲರೆ ವ್ಯಾಪಾರದಲ್ಲಿ ಸುಮಾರು 3,000 ರೂ ಯಷ್ಟು ಬೆಲೆಬಾಳುತ್ತವೆ. ಜನರು ಅವುಗಳನ್ನು ಒಮ್ಮೆ ಅಥವಾ ಎರಡು ಬಾರಿ ಮಾತ್ರ ಬಳಸಬಹುದು ಮತ್ತು ಅವು ನೆತ್ತಿಗೆ ಒಳ್ಳೆಯದಲ್ಲ. ಮತ್ತೊಂದೆಡೆ, ನಮ್ಮ ವಿಸ್ತರಣೆಗಳಿಗೆ ಅಂದಾಜು 15,000 ರೂ ಗಳದ್ದಾಗಿದ್ದು ಇದನ್ನು 10 ವರ್ಷಗಳಿಗಿಂತ ಹೆಚ್ಚು ಕಾಲ ಬಳಸಬಹುದು. ಆದರೆ ಜನರು ಇನ್ನೂ ಸಂಪೂರ್ಣ ಜ್ಞಾನವಿಲ್ಲದೆ ತಮ್ಮ ಆಯ್ಕೆಯನ್ನು ಮಾಡುತ್ತಾರೆ,” ಎಂದು ನಿಶ್ಥಾ ಯುವರ್ ಸ್ಟೋರಿಗೆ ಹೇಳುತ್ತಾರೆ.


ಅವರ ಉತ್ಪನ್ನಗಳು ಸ್ವಲ್ಪಮಟ್ಟಿಗೆ ಬೆಲೆಬಾಳುವವು, ಏಕೆಂದರೆ ಅವುಗಳು "100 ಪ್ರತಿಶತ ನೈಸರ್ಗಿಕ ಮತ್ತು ಒಂದು-ಬಾರಿ ಹೂಡಿಕೆಯೊಂದಿಗೆ ಹಲವು ವರ್ಷಗಳ ಕಾಲ ಉಳಿಯುತ್ತವೆ," ಎಂದು ಅವರು ಹೇಳುತ್ತಾರೆ. ಅನೇಕ ಜನರು ವಿಗ್ ಬಳಸುತ್ತಾರೆ ಎಂದು ಇತರರಿಗೆ ಬಹಿರಂಗಪಡಿಸುವುದರಿಂದ ದೂರವಿರುವುದರಿಂದ ಸ್ವೀಕಾರವೂ ಒಂದು ಸವಾಲಾಗಿದೆ ಎಂದು ಅವರು ಹೇಳುತ್ತಾರೆ.


ಭಾರತದಲ್ಲಿ ಕೆಲವೇ ಸಲೂನ್‌ಗಳು ನಿಜವಾದ ಹೇರ್ ವಿಗ್‌ಗಳನ್ನು ನೀಡುತ್ತವೆ ಎಂದು ನಿಶ್ಥಾ ಹೇಳಿಕೊಂಡಿದ್ದಾರೆ, ಅವುಗಳು ಸಹ "100 ಪ್ರತಿಶತ ನೈಸರ್ಗಿಕವಲ್ಲ". ಬ್ಯೂಕ್ಸ್ ದಿವಾ ಡಿವೈನ್ ಎಂಬ ಸಂಸ್ಥೆಯೊಂದಿಗೆ ಸ್ಪರ್ಧಿಸುತ್ತಿದ್ದು, ಇದು 20 ವರ್ಷಗಳಿಂದ ಭಾರತದಲ್ಲಿ ಇದೇ ರೀತಿಯ ವಿಗ್ ಮತ್ತು ಕೂದಲು ವಿಸ್ತರಣೆಗಳೊಂದಿಗೆ ವ್ಯವಹರಿಸುತ್ತಿದೆ.


ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುತ್ತಾ, ನಿಶ್ಥಾ ಅವರು ತಮ್ಮ ವ್ಯವಹಾರವನ್ನು ದೇಶಾದ್ಯಂತ ವಿಸ್ತರಿಸಲು ಬಯಸುತ್ತಾರೆ. ಅವರು ಭಾರತದ ಗ್ರಾಮೀಣ ಪ್ರದೇಶಗಳನ್ನು ತಲುಪಲು ಬಯಸುತ್ತಾರೆ, ಮತ್ತು ಸಾಮಾನ್ಯ ಜನರು ಹಾಗೂ ಕ್ಯಾನ್ಸರ್ ರೋಗಿಗಳಿಗೆ ಮಾನವ ಕೂದಲಿನ ವಿಗ್‌ ಹಾಗೂ ವಿಸ್ತರಣೆಗಳ ಬಳಕೆ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ತಿಳಿಸಿಕೊಡಲು ಇಚ್ಛಿಸುತ್ತಾರೆ.