ಒಂದು ಪತ್ರಿಕಾ ಜಾಹೀರಾತು ಮತ್ತು 5 ಲಕ್ಷ ರೂಪಾಯಿಗಳ ಹೂಡಿಕೆ ಹೇಗೆ ಈ ಉದ್ಯಮಿಯನ್ನು 50 ಕೋಟಿ ರಾಸಾಯನಿಕ ಉದ್ಯಮದ ಅಧಿಪತಿಯನ್ನಾಗಿಸಿದ ಕಥೆ
ಒಂದು ಪತ್ರಿಕಾ ಜಾಹೀರಾತಿನಲ್ಲಿ ನೀಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, 2002 ನೇ ಇಸವಿಯಲ್ಲಿ ಬೆಂಗಳೂರು ಮೂಲದ ಎಂ. ಶ್ರೀನಿವಾಸ್ ಪಾಂಚಜನ್ಯ ಎಂಟರ್ ಪ್ರೈಸಸ್ ಎಂಬ ರಾಸಾಯನಿಕಗಳನ್ನು ಉತ್ಪಾದಿಸುವ ಉದ್ಯಮವನ್ನು ಸ್ಥಾಪಿಸಿದರು. ಇಂದು ಆ ಉದ್ಯಮ ಸಂಸ್ಥೆಯಲ್ಲಿ 30 ಜನ ನೌಕರರು ಕೆಲಸ ಮಾಡುತಿದ್ದು, ಸಂಸ್ಥೆಯ ವಾರ್ಷಿಕ ವಹಿವಾಟು 7.5 ಕೋಟಿ ರೂಪಾಯಿಗಳಷ್ಟು ಆಗಿದೆ.
2002 ನೇ ಇಸವಿಯಲ್ಲಿ ಬೆಂಗಳೂರು ಮೂಲದ ಎಂ.ಶ್ರೀನಿವಾಸ್ ಪತ್ರಿಕೆಯೊಂದರಲ್ಲಿ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಮಂತ್ರಾಲಯವು ರಾಸಾಯನಿಕಗಳ ಉತ್ಪಾದನಾ ತರಬೇತಿಯ ಬಗ್ಗೆ ನೀಡಿದ್ದ ಜಾಹೀರಾತೊಂದನ್ನು ಗಮನಿಸಿದರು. ಆಗ ಅವರು ರಾಸಾಯನಿಕಗಳ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಈ ತರಬೇತಿಯನ್ನು ಪಡೆದರೆ ತಾವೇ ರಾಸಾಯನಿಕಗಳನ್ನು ಉತ್ಪಾದಿಸುವ ಉದ್ಯಮವನ್ನು ಪ್ರಾರಂಭಿಸಲು ಒಳ್ಳೆಯ ಅವಕಾಶ ಸಿಗುತ್ತದೆಂದು ಆಲೋಚಿಸಿದರು.
“ನಾನು ಈ ತರಬೇತಿಯು ರಾಸಾಯನಿಕಗಳ ವ್ಯಾಪಾರಕ್ಕಿಂತ ಹೆಚ್ಚು ಲಾಭದಾಯಕವಾದ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಡಲು ಒಂದು ಒಳ್ಳೆಯ ಅವಕಾಶ ಎಂಬುದನ್ನು ಮನಗಂಡು ತರಬೇತಿಗೆ ಹಾಜರಾಗಲು ನೋಂದಾಯಿಸಿಕೊಂಡೆ” ಎಂದು ಅವರು ಹೇಳುತ್ತಾರೆ.
2017-18 ರಲ್ಲಿ 163 ಬಿಲಿಯನ್ ಡಾಲರುಗಳ ವಹಿವಾಟು ಹೊಂದಿದ್ದ ರಾಸಾಯನಿಕಗಳ ಉತ್ಪಾದನಾ ಕ್ಷೇತ್ರವು 2025 ರ ಹೊತ್ತಿಗೆ 304 ಬಿಲಿಯನ್ ಡಾಲರುಗಳ ವಹಿವಾಟನ್ನು ತಲುಪುವ ನಿರೀಕ್ಷೆ ಇದೆ. ಇಂತಹ ಪ್ರಗತಿಪಥದತ್ತ ಹೆಜ್ಜೆ ಹಾಕುತ್ತಿರುವ ಕ್ಷೇತ್ರವನ್ನು ಪ್ರವೇಶಿಸಲು ಶ್ರೀನಿವಾಸ್ ಸಜ್ಜಾದರು.
ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಬೇಕಾದ ಕೌಶಲ್ಯಗಳನ್ನು ಕೈಗೂಡಿಸಿಕೊಂಡ ನಂತರ ಶ್ರೀನಿವಾಸ್ ತಮ್ಮದೇ ಆದ ರಾಸಾಯನಿಕಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ನಿರ್ಧರಿಸಿದರು.
ಅವರು 5 ಲಕ್ಷ ಬಂಡವಾಳವನ್ನು ತೊಡಗಿಸಿ ಬೆಂಗಳೂರಿನಲ್ಲಿ ಲಿಕ್ವಿಡ್ ಹ್ಯಾಂಡ್ ವಾಷ್, ಲಿಕ್ವಿಡ್ ಡಿಶ್ ವಾಷ್, ಟಾಯ್ಲೆಟ್ ಕ್ಲೀನಿಂಗ್ ಫ್ಲೂಯಿಡ್ಸ್ ಮುಂತಾದ ಉತ್ಪನ್ನಗಳನ್ನು ತಯಾರಿಸುವ ಪಾಂಚಜನ್ಯ ಎಂಟರ್ ಪ್ರೈಸಸ್ ಸಂಸ್ಥೆಯನ್ನು ಸ್ಥಾಪಿಸಿದರು.
ಅವರು ಹಿಂದಿನ ಹನ್ನೆರಡು ವರ್ಷಗಳಿಂದ ರಾಸಾಯನಿಕಗಳ ವ್ಯಾಪಾರದಲ್ಲಿ ಪಡೆದಿದ್ದ ಅನುಭವವು ಹೊಸ ಉದ್ಯಮಕ್ಕೆ ವರದಾನವಾಗಿ ಪರಿಣಮಿಸಿತು.
“ನಮ್ಮ ಸಂಸ್ಥೆಯು ಐಎಸ್ಓ 9001-2008 ನ ದೃಢೀಕೃತ ಸಂಸ್ಥೆಯಾಗಿದ್ದು ಅದಕ್ಕೆ ಪೂರಕವಾಗಿ ಗುಣಮಟ್ಟವನ್ನು ಹೊಂದಿರುವ ಉತ್ಪನ್ನಗಳನ್ನು ಉತ್ಪಾದಿಸುತ್ತೇವೆ” ಎಂದು ಅವರು ದೃಢಪಡಿಸುತ್ತಾರೆ.
ಉತ್ಪನ್ನಗಳ ವೈವಿಧ್ಯತೆ
ಪ್ರಸಕ್ತ ಪಾಂಚಜನ್ಯ ಸಂಸ್ಥೆಯು ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಅಲ್ಲಿ 30 ಜನ ನೌಕರರು ಕೆಲಸ ಮಾಡುತಿದ್ದಾರೆ. ಸಂಸ್ಥೆಯು 7.5 ಕೋಟಿ ರೂಪಾಯಿಗಳ ವಹಿವಾಟನ್ನು ಹೊಂದಿರುತ್ತದೆ.
ಸಂಸ್ಥೆಯಲ್ಲಿ ಡಿಟರ್ಜಂಟ್ ಪೌಡರ್, ಡಿಶ್ ವಾಷ್ ಪೌಡರ್ ಮತ್ತು ಲಿಕ್ವಿಡ್, ಗ್ಲಾಸ್ ಕ್ಲೀನರ್, ಹ್ಯಾಂಡ್ ವಾಷ್ ಲಿಕ್ವಿಡ್, ಹರ್ಬಲ್ ಫಿನಾಯಿಲ್, ಮಲ್ಟಿ ಪರ್ಪಸ್ ಕ್ಲೀನರ್ ಮುಂತಾದ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. 2012 ರಲ್ಲಿ ಸಂಸ್ಥೆಯ ಯಶಸ್ಸಿನಿಂದ ಉತ್ತೇಜನ ಪಡೆದುಕೊಂಡು ಪ್ರಾಣಿಗಳಿಗೆ ನೀಡುವ ಪೂರಕ ಆಹಾರಗಳ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ.
ಹಲವಾರು ವರ್ಷಗಳಿಂದ ಶ್ರೀನಿವಾಸ್ ತಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಮನೆ-ಮನೆಗಳ ಬಾಗಿಲಿಗೆ ಹೋಗಿ ಮಾರುವ ಮಾರುಕಟ್ಟೆ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಪಾಂಚಜನ್ಯ ಸಂಸ್ಥೆಯು ಕರ್ನಾಟಕ ರಾಜ್ಯಾದ್ಯಂತ ಗಣನೀಯವಾದ ಗ್ರಾಹಕಜಾಲವನ್ನು ಬೆಳೆಸಿಕೊಂಡಿದೆ. ಇದರಲ್ಲಿ ಆಹಾರ, ಔಷಧ, ಆರೋಗ್ಯಕಾಳಜಿ ಸೇವಾಸಂಸ್ಥೆಗಳು ಮತ್ತು ಸರ್ಕಾರದ ಸಂಸ್ಥೆಗಳೂ ಸೇರಿವೆ.
ಶ್ರೀನಿವಾಸ್ ತಮ್ಮ ಗ್ರಾಹಕರೊಂದಿಗೆ ಹೊಂದಿರುವ ಉತ್ತಮ ಸಂಬಂಧದ ಯಶಸ್ಸಿಗೆ ತಾವು ಉತ್ಪಾದಿಸುತ್ತಿರುವ ಉತ್ಪನ್ನಗಳ ಗುಣಮಟ್ಟವೇ ಕಾರಣವೆಂದು ಹೇಳುತ್ತಾರೆ.
“ಶುಚಿತ್ವದ ಧ್ಯೇಯವನ್ನು ಹೊಂದಿರುವ ಔಷಧ ತಯಾರಿಕೆ ಕಂಪೆನಿಗಳು ಮತ್ತು ಆಹಾರ ಪರಿಷ್ಕರಣೆಯ ಕಂಪೆನಿಗಳಿಗೆ ನಾವು ಬಹಳ ವರ್ಷಗಳಿಂದ ನಮ್ಮ ಉತ್ಪನ್ನಗಳನ್ನು ಮಾರುತ್ತಿರುವುದು ನಮ್ಮ ಉತ್ಪನ್ನಗಳ ಹೆಚ್ಚಿನ ಗುಣಮಟ್ಟದ ಕಾರಣದಿಂದಾಗಿ ಮಾತ್ರ” ಎಂದು ಅವರು ಹೇಳುತ್ತಾರೆ.
ಆದರೆ ತಾವು ತಯಾರಿಸುವ ಉತ್ಪನ್ನಗಳ ಗುಣಮಟ್ಟವು ಹೆಚ್ಚಿನದಾಗಿದ್ದರೂ ಕೂಡ ಬಹುರಾಷ್ಟ್ರೀಯ ಕಂಪೆನಿಗಳಾದ ಪಿ ಅಂಡ್ ಜಿ, ರೆಕಿಟ್ ಬೆನ್ಸಿಕಿಸರ್ಗಳಂತಹ ದೈತ್ಯ ಕಂಪನಿಗಳೊಂದಿಗೆ ಸೆಣಸಾಡುವುದು ಸಾಧ್ಯವಿಲ್ಲ ಎಂದು ಶ್ರೀನಿವಾಸ್ ಒಪ್ಪಿಕೊಳ್ಳುತ್ತಾರೆ. ಇದರಿಂದಾಗಿ ಬಹಳಷ್ಟು ರಾಜ್ಯ ಸರ್ಕಾರದ ಉದ್ಯಮಗಳು ಪಾಂಚಜನ್ಯ ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸುವುದಿಲ್ಲ.
“ನಮ್ಮ ಉತ್ಪನ್ನಗಳ ಗುಣಮಟ್ಟವು ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳ ಗುಣಮಟ್ಟಕ್ಕೆ ಸರಿಸಾಟಿಯಾಗಿದ್ದರೂ ಕೂಡ ರಾಜ್ಯ ಸರ್ಕಾರದ ಉದ್ಯಮಗಳು ನಮಗೆ ಪ್ರೋತ್ಸಾಹ ನೀಡುವುದಿಲ್ಲ. ನಮ್ಮ ಉತ್ಪನ್ನಗಳಿಗೆ ಅವುಗಳಿಂದ ಯಾವುದೇ ಬೇಡಿಕೆ ಇಲ್ಲ. ಬಹುರಾಷ್ಟ್ರೀಯ ಕಂಪೆನಿಗಳಂತೆ ಜಾಹೀರಾತು ನೀಡಿ ನಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ನಮ್ಮಲ್ಲಿ ಅಷ್ಟೊಂದು ಹಣವಿಲ್ಲ” ಎಂದು ಅವರು ನುಡಿಯುತ್ತಾರೆ.
ಮುಂದಿನ ದಾರಿ
ರಾಜ್ಯ ಸರ್ಕಾರದ ಉದ್ಯಮಗಳಿಂದ ತಮ್ಮ ಉತ್ಪನ್ನಗಳಿಗೆ ಯಾವುದೇ ಬೇಡಿಕೆಯಿಲ್ಲದಿದ್ದರೂ ಕೂಡ ಶ್ರೀನಿವಾಸ್ ಅಧೀರರಾಗಿಲ್ಲ. ಈ ಕ್ಷೇತ್ರದಲ್ಲಿ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಅವರು ಗಮನಿಸಿದ್ದಾರೆ. ಇದರಿಂದಾಗಿ ಅವರ ಉತ್ಸಾಹ ಇಮ್ಮಡಿಯಾಗಿದೆ. ಮುಂದಿನ ಐದು ವರ್ಷಗಳಲ್ಲಿ 50 ಕೋಟಿ ರೂಪಾಯಿಗಳ ವಹಿವಾಟಿನ ಗುರಿ ತಲುಪಲು ಯೋಜನೆ ಹಾಕಿಕೊಂಡಿದ್ದಾರೆ.
“ಇದು ಕರ್ನಾಟಕದ ಸಾರ್ವಜನಿಕ ಉದ್ಯಮಗಳು ಪ್ರತಿಶತಃ 20 ರಷ್ಟು ಉತ್ಪನ್ನಗಳನ್ನು ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಂದ ಪಡೆಯಬೇಕೆಂಬ ಸರ್ಕಾರದ ನಿಯಮವನ್ನು ಪಾಲಿಸಿದರೆ ಮಾತ್ರ ಸಾಧ್ಯವಾಗಲಿದೆ” ಎಂಬುದನ್ನು ಶ್ರೀನಿವಾಸ್ ದೃಢಪಡಿಸುತ್ತಾರೆ.
ಅವರು ತಮ್ಮ ಉತ್ಪನ್ನಗಳನ್ನು ತಮ್ಮ ಸಂಸ್ಥೆಯ ಶಕ್ತಿಯಾಗಿರುವ ಮಾರುಕಟ್ಟೆ ತಂತ್ರಗಳನ್ನು ಬಳಸಿಕೊಂಡು ನೆರೆಹೊರೆಯ ರಾಜ್ಯಗಳಲ್ಲಿ ಮಾರಲು ಯೋಜನೆ ಹಮ್ಮಿಕೊಂಡಿದ್ದಾರೆ. ಇದಾದ ನಂತರ ಸದ್ಯದಲ್ಲಿಯೇ ಜಾಹೀರಾತುಗಳ ಮೇಲೆ ಬಂಡವಾಳ ಹೂಡಿ ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಸೆಣಸಲು ನಿರ್ಧರಿಸಿದ್ದಾರೆ.
“ನಾವು ತಯಾರಿಸುತ್ತಿರುವ ಪ್ರಾಣಿಗಳ ಪೂರಕ ಆಹಾರ ಉತ್ಪನ್ನಗಳ ಮೇಲೆ ನಮಗೆ ಅಪಾರ ಭರವಸೆಯಿದೆ. ನಮಗೆ ಸರ್ಕಾರಿ ಸಂಸ್ಥೆಗಳಿಂದ ಇವುಗಳಿಗೆ ಹೆಚ್ಚಿನ ಬೇಡಿಕೆಯೂ ಬರುತ್ತಿದೆ” ಎಂದು ಅವರು ಹೇಳುತ್ತಾರೆ.
ತಮ್ಮ ಯಶಸ್ಸಿನ ಮಂತ್ರದ ಬಗ್ಗೆ ಮಾತನಾಡುತ್ತಾ ಶ್ರೀನಿವಾಸ್ ಹೀಗೆ ಹೇಳುತ್ತಾರೆ.
“ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು ಮತ್ತು ಗ್ರಾಹಕರ ಸಂತೃಪ್ತಿಯೇ ನಮ್ಮ ಯಶಸ್ಸಿನ ಗುಟ್ಟು.”