ಸೂಪರ್ 30 ಆನಂದ ಕುಮಾರ್ ರಂತೆ, ಓಡಿಸ್ಸಾದ ಅಜಯ್ ಬಹದ್ದೂರ್ ಸಿಂಗ್, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯನ್ನು ಎದುರಿಸಲು ತರಬೇತಿ ನೀಡುತ್ತಿದ್ದಾರೆ

ಓಡಿಸ್ಸಾದ ಅಜಯ್ ಬಹದ್ದೂರ್ ಸಿಂಗ್‌ರವರ 'ಜಿಂದಗಿʼಯ ಹದಿನಾಲ್ಕು ವಿದ್ಯಾರ್ಥಿಗಳು 2018 ರಲ್ಲಿ ನೀಟ್ ಅನ್ನು ಭೇದಿಸಿದ್ದಾರೆ ಮತ್ತು ಅವರಲ್ಲಿ 12 ಮಂದಿ ಒಡಿಶಾದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.

ಸೂಪರ್ 30 ಆನಂದ ಕುಮಾರ್ ರಂತೆ, ಓಡಿಸ್ಸಾದ ಅಜಯ್ ಬಹದ್ದೂರ್ ಸಿಂಗ್, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯನ್ನು ಎದುರಿಸಲು ತರಬೇತಿ ನೀಡುತ್ತಿದ್ದಾರೆ

Friday January 03, 2020,

2 min Read

ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಯನ್ನು ಎದುರಿಸಲು ಬಯಸುವ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದೆ ಬಂದಿರುವ ಭುವನೇಶ್ವರ ಮೂಲದ ಸಂಸ್ಥೆಯೊಂದರ ಉಪಕ್ರಮವನ್ನು ಎರಡು ದಶಕಗಳ ಹಿಂದೆ ಇದೇ ರೀತಿಯ ಚಾಲನೆಗೆ ಕಾರಣೀಭೂತರಾದ ‘ಸೂಪರ್ 30’ ಸಂಸ್ಥಾಪಕ ಆನಂದ್ ಕುಮಾರ್ ಅವರು ಶ್ಲಾಘಿಸಿದ್ದಾರೆ.


ಕುಮಾರ್ ಇತ್ತೀಚೆಗೆ ಒಡಿಶಾ ರಾಜಧಾನಿಗೆ ಭೇಟಿ ನೀಡಿ, ‘ಜಿಂದಗಿ' ಕಾರ್ಯಕ್ರಮದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಅವರಿಗೆ ಪ್ರೋತ್ಸಾಹದ ಮಾತುಗಳ ಮೂಲಕ ಹುರಿದುಂಬಿಸಿದರು.


‘ಸೂಪರ್ 30’ ಸಂಸ್ಥಾಪಕ ಆನಂದ್ ಕುಮಾರ್


ಸಂಪನ್ಮೂಲಗಳ ಕೊರತೆಯಿಂದಾಗಿ, ಪ್ರತಿಭಾನ್ವಿತರಾಗಿದ್ದರೂ ಅವರ ಕನಸಿಗೆ ರೆಕ್ಕೆಗಳನ್ನು ನೀಡಲು ಸಾಧ್ಯವಾಗದ ಬಡ ಮಕ್ಕಳ ಜೀವನದಲ್ಲಿ ಒಂದು ತಿರುವು ತರುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಅವರು ಹೇಳಿದರು.


‘ಸೂಪರ್ 30’ ಖ್ಯಾತಿಯ ಗಣಿತಜ್ಞ ಆನಂದ ಕುಮಾರ್ ಜಿಂದಗಿ ಫೌಂಡೇಶನ್‌ನ ಸಂಸ್ಥಾಪಕ ಅಜಯ್ ಬಹದ್ದೂರ್ ಸಿಂಗ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮಂತೆಯೇ ಅವರು ಅಧ್ಯಯನ ಮಾಡುವಾಗ ಕಷ್ಟಗಳನ್ನು ಎದುರಿಸುತ್ತಿದ್ದರು. ಆದ್ದರಿಂದ ಇಂದು ತಮ್ಮಂತೆ ಬಡಕುಟುಂಬದಲ್ಲಿರುವ ತರಕಾರಿ ಮಾರಾಟಗಾರರು, ಮೀನುಗಾರರು ಮತ್ತು ಬಡ ರೈತರ ಮಕ್ಕಳು ಉನ್ನತ ಸಂಸ್ಥೆಗಳನ್ನು ಪ್ರವೇಶಿಸಲು ಸಾಧ್ಯವಾಗಿಸುತ್ತಿದ್ದಾರೆ ಎಂದು ಅವರು ಹೇಳಿದರು.


"ಬೃಹತ್ ಕ್ರಾಂತಿಯನ್ನು ನಿರಂತರ ಹುರುಪಿನಿಂದ ಮುನ್ನಡೆಸಲು ಒಂದು ಸೂಪರ್ 30 ಸಾಕಾಗುವುದಿಲ್ಲವಾದ್ದರಿಂದ ಸಮಾಜದಲ್ಲಿ ಅಜಯ್ ಬಹದ್ದೂರ್ ಸಿಂಗ್‌ನಂತವರ ಅಗತ್ಯವಿದೆ," ಎಂದು ಕುಮಾರ್ ಹೇಳಿದರು.


‘ಸೂಪರ್ 30’ ಮಾದರಿಯಲ್ಲಿ ರೂಪಿಸಲಾಗಿರುವ ಭುವನೇಶ್ವರ ಮೂಲದ ಸರ್ಕಾರೇತರ ಸಂಸ್ಥೆ, ಆರ್ಥಿಕವಾಗಿ ಹಿಂದುಳಿದಿರುವ ದುರ್ಬಲವರ್ಗದ ಕುಟುಂಬದಿಂದ ಬಂದ ವೈದ್ಯಕೀಯ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತದೆ ಮತ್ತು ಅವರ ಆಹಾರ ಮತ್ತು ವಸತಿ ವೆಚ್ಚವನ್ನು ಸಹ ಭರಿಸುತ್ತದೆ.


ಸಿಂಗ್ ಅವರ ಸಂಘಟನೆಯು ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದ್ದರೆ, 2002 ರಲ್ಲಿ ಪಾಟ್ನಾದಲ್ಲಿ ಪ್ರಾರಂಭವಾದ ಆನಂದ ಕುಮಾರರವರ ಸಂಘಟನೆ ಜೆಇಇಗೆ ಅರ್ಹತೆ ಪಡೆಯಲು ಐಐಟಿ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತದೆ.


1990 ರಲ್ಲಿ ಸಿಂಗ್ ಅವರ ತಂದೆ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿದ್ದ ಸಮಯದಲ್ಲಿ ಅವರ ಕುಟುಂಬವು ತಮ್ಮ ಉಳಿತಾಯವನ್ನು ಆರೋಗ್ಯಸೇವೆಗಾಗಿ ವಿನಿಯೋಗಿಸಿದ್ದರಿಂದ ಸಿಂಗ್ ತಮ್ಮ ವಿದ್ಯಾಭ್ಯಾಸವನ್ನು ತ್ಯಜಿಸಬೇಕಾಯಿತು. ಅವರ ಕುಟುಂಬದ ಉಳಿವಿಗಾಗಿ ಚಹಾ ಮತ್ತು ಶರ್ಬತ್ ಮಾರಾಟಕ್ಕೆ ಇಳಿಯಬೇಕಾಯಿತು.


ಇತ್ತ ಕುಮಾರ್ ಅವರು ಹಣದ ಕೊರತೆಯಿಂದಾಗಿ ಯುಕೆಯ ಪ್ರತಿಷ್ಠಿತ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಅವಕಾಶವನ್ನು ತ್ಯಜಿಸಬೇಕಾಯಿತು. ತಮ್ಮ ತಂದೆಯ ಮರಣದ ನಂತರ, ಕುಮಾರ್ ತನ್ನ ಕುಟುಂಬಕ್ಕೆ ನೆರವಾಗಲು ‘ಪಾಪಾಡ್'ಗಳನ್ನು ಮಾರಾಟ ಮಾಡಲು ತೊಡಗಿದ್ದರು.


ಪ್ರತಿಷ್ಠಾನಕ್ಕೆ ಭೇಟಿ ನೀಡುವ ಮೂಲಕ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಕುಮಾರ್ ಅವರಿಗೆ ಸಿಂಗ್ ಧನ್ಯವಾದ ಅರ್ಪಿಸಿದರು.


"ಅವರು (ಕುಮಾರ್) ಈ ಕೆಲಸವನ್ನು ಮುಂದುವರೆಸಲು ನನಗೆ 'ಗುರು ಮಂತ್ರ' (ಸಲಹೆ) ನೀಡಿದರು. ಅವರ ಮಾತುಗಳು ನನ್ನನ್ನು ಪ್ರೋತ್ಸಾಹಿಸಿದವು ಮತ್ತು ನನ್ನ ವಿದ್ಯಾರ್ಥಿಗಳನ್ನು ಯಶಸ್ಸನ್ನು ಸಾಧಿಸಲು ಪ್ರೇರೇಪಿಸಿದವು" ಎಂದು ಸಿಂಗ್ ತಿಳಿಸಿದರು.


ಜಿಂದಗಿ ಫೌಂಡೇಶನ್‌ನ ಸಂಸ್ಥಾಪಕ ಈ ಹಿಂದೆ ಪುರಿಯ ಭಗವಾನ್ ಜಗನ್ನಾಥ ದೇವಾಲಯದ ಹೊರಗೆ ಹೂಮಾಲೆ ಮಾರುವ ಹುಡುಗಿಯನ್ನು ಭೇಟಿಯಾದ ನಂತರ ಈ ಹೆಜ್ಜೆಯನ್ನು ಇಡಲು ನಿರ್ಧರಿಸಿದದು.


ಗಣಿತಜ್ಞನ ಜೀವನ ಮತ್ತು ಸಾಧನೆಗಳ ಆಧಾರದ ಮೇಲೆ ಇತ್ತೀಚೆಗೆ ಬಿಡುಗಡೆಯಾದ ಬಯೋಪಿಕ್ ‘ಸೂಪರ್ 30’ ನಲ್ಲಿ ಕುಮಾರ್ ಪಾತ್ರದಲ್ಲಿ ನಟಿಸಿರುವ ನಟ ಹೃತಿಕ್ ರೋಶನ್ ಅವರಿಂದ 'ಜಿಂದಗಿ' ಸಂಸ್ಥೆಯು ಪ್ರಶಸ್ತಿ ಪಡೆದಿದೆ.


2016 ರಲ್ಲಿ ಪ್ರಾರಂಭವಾದ ಸಂಸ್ಥೆಯಲ್ಲಿ 19 ವಿದ್ಯಾರ್ಥಿಗಳು, ಒಡಿಶಾದಾದ್ಯಂತದ ಪ್ರಸ್ತುತ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ.


ಪ್ರತಿಷ್ಠಾನದ ಹದಿನಾಲ್ಕು ವಿದ್ಯಾರ್ಥಿಗಳು 2018 ರಲ್ಲಿ ನೀಟ್ ಅನ್ನು ಭೇದಿಸಿದ್ದರು ಮತ್ತು ಅವರಲ್ಲಿ 12 ಮಂದಿ ಒಡಿಶಾದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದರು.


ಅವರು ಕಳೆದ ಜುಲೈನಲ್ಲಿ ಕಾರ್ಯಕ್ರಮದಲ್ಲಿ ಆತಿಥ್ಯ ವಹಿಸಿದ್ದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.