ದೃಷ್ಟಿಹೀನ ಅಭ್ಯರ್ಥಿಗಳು ಐಎಎಸ್ ಪರೀಕ್ಷೆ ಬರೆಯಲು ಸಹಕಾರಿಯಾಗುವಂತಹ ತರಬೇತಿ ನೀಡುತ್ತಿರುವ ಅಕೆಲ್ಲಾ ರಾಘವೇಂದ್ರ
ಅಕೆಲ್ಲಾ ರಾಘವೇಂದ್ರ ಅವರು ಆಂಗ್ಲ ಭಾಷೆಯಲ್ಲಿ ಅಭಿವೃದ್ಧಿಪಡಿಸಿದ ಆಡಿಯೊಬುಕ್ ಭಾರತದಲ್ಲಿ ಇಂತಹ ಮೊದಲ ಅಧ್ಯಯನ ಸಾಮಗ್ರಿಯಾಗಿದೆ ಮತ್ತು ಈ ಅಧ್ಯಯನ ಸಾಮಗ್ರಿಯು online-ias.com ಜಾಲತಾಣದಲ್ಲಿ ಉಚಿತವಾಗಿ ಲಭ್ಯವಿದೆ.
ಭಾರತದ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಯುಪಿಎಸ್ಸಿ ಅಥವಾ ನಾಗರಿಕ ಸೇವೆಗಳ ಪರೀಕ್ಷೆಯನ್ನು ಭೇದಿಸಲು ಕಠಿಣವಾದದ್ದು ಎಂದು ಪರಿಗಣಿಸಲಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವ ಪ್ರಮಾಣ ಕೇವಲ 25 ಪ್ರತಿಶತ. 2018 ರಲ್ಲಿ, ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಗೆ ಹಾಜರಾದ ಒಟ್ಟು ಎಂಟು ಲಕ್ಷ ಅಭ್ಯರ್ಥಿಗಳಲ್ಲಿ ಕೇವಲ 10,500 ಮಂದಿ ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದರು.
ಪ್ರತಿ ವರ್ಷ, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಲ್ಲಿ, ದೃಷ್ಟಿಹೀನ ವ್ಯಕ್ತಿಗಳು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಅವರು ಇಡೀ ಪರೀಕ್ಷೆಯ ಪಠ್ಯಕ್ರಮದ ಶೇಕಡಾ 20 ರಷ್ಟನ್ನು ಮಾತ್ರ ಬ್ರೈಲ್ ಲಿಪಿಯಲ್ಲಿ ಪಡೆಯಬಹುದು. ಈ ಕಳವಳವನ್ನು ಪರಿಹರಿಸಲು ಹೈದರಾಬಾದ್ ಮೂಲದ ಅಕೆಲ್ಲಾ ರಾಘವೇಂದ್ರ ರವರು 2016 ರಲ್ಲಿ ದೃಷ್ಟಿಹೀನ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಪ್ರಾರಂಭಿಸಿದರು.
ಅವರು ಯುಪಿಎಸ್ಸಿಗೆ ಬ್ರೈಲ್ ಮತ್ತು ಧ್ವನಿ ಮುದ್ರಿಕೆ ಸ್ವರೂಪದಲ್ಲಿ ಸಮಗ್ರ ಅಧ್ಯಯನ ಸಾಮಗ್ರಿಗಳನ್ನು ಪ್ರಕಟಿಸಿದ್ದಾರೆ, ಎರಡನೆಯದಾಗಿ ಇದು ಭಾರತದಲ್ಲಿ ಪ್ರಥಮ ಎನ್ನುವುದು ವಿಶೇಷ. ಇದನ್ನು ಸಾಧಿಸಲು, ಅಕೆಲ್ಲಾರವರು ಪುಸ್ತಕವನ್ನು ಸಿದ್ಧಪಡಿಸುವ ವಿಧಾನಗಳನ್ನು ಸಂಶೋಧಿಸಲು ಮತ್ತು ಅಧ್ಯಯನ ಮಾಡಲು ಏಳು ವರ್ಷ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ತೆಲಂಗಾಣ ಟುಡೆ ಯೂಂದಿಗೆ ಮಾತನಾಡುತ್ತಾ ಅವರು, “ನಾನು ಸಮಗ್ರ, ವಾಸ್ತವಿಕ, ಸಂಪೂರ್ಣ ಮತ್ತು ವಿಷಯ ವಸ್ತುಗಳನ್ನು ವಿನ್ಯಾಸಗೊಳಿಸಿದ್ದೇನೆ. ಇತ್ತೀಚಿನ ದಿನಮಾನಗಳಲ್ಲಿ ಹಲವಾರು ಪುಸ್ತಕಗಳು ಇದ್ದರೂ ಸಹ ಯಾರೂ ಅವುಗಳನ್ನು ಓದುವುದಿಲ್ಲ. ಅದನ್ನು ಗಮನದಲ್ಲಿರಿಸಿ, ನಾನು ಮಾಸ್ಟರ್ ಫೈಲ್ ಮತ್ತು ಆಡಿಯೊ ಆವೃತ್ತಿಯನ್ನು ಸಿದ್ಧಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಹೊಂದಿದ್ದಾರೆ, ಆದ್ದರಿಂದ, ಪ್ರತಿದಿನ, ನಾನು ಆ ದಿನ ಕಲಿಯಬೇಕಾದ ಎರಡು ಅಥವಾ ಮೂರು ಪಾಠಗಳನ್ನು ಅಪ್‌ಲೋಡ್ ಮಾಡುತ್ತೇನೆ. ಅವರು ಕಲಿತದ್ದನ್ನು ಮೇಲ್ವಿಚಾರಣೆ ಮಾಡುವುದು ಮೂರನೆಯ ಹಂತವಾಗಿದೆ.”
ಅಕೆಲ್ಲಾ ಸ್ವತಃ ಒಂದು ಕಾಲದಲ್ಲಿ ನಾಗರಿಕ ಸೇವೆಗಳ ಮಹತ್ವಾಕಾಂಕ್ಷೆಯ ಅಭ್ಯರ್ಥಿಯಾಗಿದ್ದರು ಮತ್ತು 1994 ಮತ್ತು 1999 ರ ನಡುವೆ ಪರೀಕ್ಷೆಗೆ ತಮ್ಮ ಪ್ರಯತ್ನಗಳನ್ನು ನೀಡಿದರು. ದುರದೃಷ್ಟವಶಾತ್, ಅವರು ಕೇವಲ 12 ಅಂಕಗಳ ಅಂತರದಲ್ಲಿ ಅದನ್ನು ತಪ್ಪಿಸಿಕೊಂಡರು ಎಂದು ಅವರು ಹೇಳುತ್ತಾರೆ.
“ನನ್ನ ಕಠಿಣ ಪರಿಶ್ರಮದ ಹೊರತಾಗಿಯೂ ನಾನು ಎಲ್ಲಿ ತಪ್ಪಿದೆ ಎಂದು ವಿಶ್ಲೇಷಿಸಿದಾಗ ಮತ್ತು ಲೋಪದೋಷಗಳು ಮತ್ತು ನ್ಯೂನತೆಗಳನ್ನು ಅರ್ಥಮಾಡಿಕೊಂಡೆ. ಆದರೆ, ಅಷ್ಟೊತ್ತಿಗೆ ನನ್ನ ಎಲ್ಲ ಪ್ರಯತ್ನಗಳನ್ನು ಕಳೆದುಕೊಂಡಿದ್ದೆ. ಆದ್ದರಿಂದ ಭವಿಷ್ಯದ ಆಕಾಂಕ್ಷಿಗಳಿಗೆ ಅವರ ಯುಪಿಎಸ್ಸಿ ಪರೀಕ್ಷೆಗೆ ಮಾರ್ಗದರ್ಶನ ನೀಡಲು ನಾನು ನಿರ್ಧರಿಸಿದ್ದನೆ ಮತ್ತು 2001 ರಲ್ಲಿ ಹೈದರಾಬಾದಿನ ದಿಲ್ಸುಖ್‌ನಗರದಲ್ಲಿ ನನ್ನ ಐಎಎಸ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದೆ” ಎಂದು ತೆಲಂಗಾಣ ಟುಡೆ ವರದಿ ಮಾಡಿದೆ.
ಅಕೆಲ್ಲಾ ಅವರು 2016 ರಲ್ಲಿ ಯುಎಸ್‌ಗೆ ಭೇಟಿ ನೀಡಿದಾಗ ಪುಸ್ತಕದ ಪರಿಕಲ್ಪನೆ ಬಂದಿತು. ಅವರು ಎಫರ್ಟ್ಸ್ ಫಾರ್ ಗುಡ್ ನೊಂದಿಗೆ ಮಾತನಾಡುತ್ತಾ,
“ದೃಷ್ಟಿ ಮತ್ತು ದೈಹಿಕವಾಗಿ ಸವಾಲಿನ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಇದನ್ನು ಭಾರತೀಯ ವಿದ್ಯಾರ್ಥಿಗಳಿಗೆ ಹೋಲುವಂತೆ ಅಭಿವೃದ್ಧಿಪಡಿಸಲು ನನಗೆ ಪ್ರೇರಣೆ ನೀಡಿತು” ಎಂದರು.
ಅವರ ಯುಎಸ್ ಭೇಟಿಯ ನಂತರ, ಅಕೆಲ್ಲಾ ಮತ್ತು ಅವರ ಇಬ್ಬರು ದೃಷ್ಟಿಹೀನ ವಿದ್ಯಾರ್ಥಿಗಳಾದ ಸಾಗರ್ ಮತ್ತು ಶಿವಪ್ರಕಾಶ್ ಅವರೊಂದಿಗೆ ಈಗ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ, ಯುಪಿಎಸ್ಸಿ ಗೆ 30 ರಿಂದ 35 ರವರೆಗೆ ಅಧ್ಯಯನ ಮಾಡಲೇಬೇಕಾದ ಪುಸ್ತಕಗಳನ್ನು ಆಡಿಯೊಬುಕ್ ರೂಪದಲ್ಲಿ ಸಂಗ್ರಹಿಸಿದ್ದಾರೆ. ಈ ಯೋಜನೆಯು ಅಂತಿಮವಾಗಿ 2018 ರ ಆರಂಭದಲ್ಲಿ ಪೂರ್ಣಗೊಂಡಿತು. ಇದಕ್ಕಾಗಿ 5 ಲಕ್ಷ ರೂಪಾಯಿಗಳನ್ನು ಸ್ವತಃ ಖರ್ಚು ಮಾಡಿದ್ದಾರೆ.
ತಮ್ಮ ಪುಸ್ತಕದ ಬಗ್ಗೆ ಎಫರ್ಟ್ಸ್ ಫಾರ್ ಗುಡ್ ನೊಂದಿಗೆ ಮಾತನಾಡಿದ ಅಕೆಲ್ಲಾರವರು,
“ಇಬ್ಬರು ವಿದ್ಯಾರ್ಥಿಗಳು ಮತ್ತು ನಮ್ಮ ಅನೇಕ ಸ್ವಯಂಸೇವಕರಿಂದ ಹಂತ-ಹಂತವಾದ ಪ್ರತಿಕ್ರಿಯೆಯ ನಂತರ ಪುಸ್ತಕದ ಅಂತಿಮ ಆವೃತ್ತಿಯನ್ನು ಪ್ರಕಟಿಸಲಾಗಿದೆ. ಆದ್ದರಿಂದ, ಈ ಪುಸ್ತಕವನ್ನು ನೀವು ಫುಲ್-ಪ್ರೂಫ್ ಎಂದು ಪರಿಗಣಿಸಬಹುದು. ನಾನು ಚೂರು ಪರಿಪೂರ್ಣತಾವಾದಿ” ಎಂದು ತಿಳಿಸಿದರು.
ಇಂಗ್ಲೀಷ್ ನಲ್ಲಿರುವ ಆಡಿಯೋ ಬುಕ್ online-ias.com ನಲ್ಲಿ ಲಭ್ಯವಿದೆ ಮತ್ತು ಅದನ್ನು ದೇಶದ ಎಲ್ಲ ಭಾಗಗಳಿಂದಲೂ ಉಪಯೋಗಿಸಬಹುದಾಗಿದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.