ಜಗತ್ತು ಕಂಡ ಮಹಾತ್ಮನಿಗೆ ಹೀಗೊಂದು ಕೃತಜ್ಞತೆ
ಸತ್ಯ, ಅಹಿಂಸೆ ಮತ್ತು ಶಾಂತಿಯನ್ನು ಅಸ್ತ್ರವಾಗಿ ಬಳಸಿ ಹೋರಾಟ ನಡೆಸಿದ ಗಾಂಧೀಜಿಯವರ 150ನೇ ಜನ್ಮ ದಿನವಿದು. ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಕೊಡುಗೆ ಅನನ್ಯ. ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟ ಇವರ ಗ್ರಾಮ ರಾಜ್ಯದ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಅವರು ನೀಡಿದ ಆಧ್ಯತೆಯನ್ನು ನಾವು ಅಳವಡಿಸಿಕೊಳ್ಳುವುದು ಅತ್ಯಗತ್ಯ.
ಸತ್ಯ, ಅಹಿಂಸೆ ಮತ್ತು ಶಾಂತಿಯನ್ನು ಅಸ್ತ್ರವಾಗಿ ಬಳಸಿಕೊಂಡು ಹೋರಾಟ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅತಿ ಮುಖ್ಯ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನವಿದು. ಇವರ ಜನ್ಮ ದಿನವನ್ನ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ ಎನ್ನುವುದು ಹೆಮ್ಮೆಯ ವಿಚಾರ. ಅವರನ್ನು ಒಂದು ವ್ಯಕ್ತಿಯ ರೂಪದಲ್ಲಿ ನೋಡದೇ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಅವರ ಆದರ್ಶಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ಅತಿ ದೊಡ್ಡ ಕೃತಜ್ಞತೆಯಾಗಲಿದೆ.
ಇಂದು, ಜಗತ್ತಿಗೆ ಅಹಿಂಸೆ ಮತ್ತು ಶಾಂತಿಯ ಪಾಠ ಮಾಡಿದ ಮಹಾತ್ಮ ಗಾಂಧೀಯವರ 150ನೇ ಜನ್ಮ ದಿನ. ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಹೊಂದಿದ್ದ ಅವರು, “ಗ್ರಾಮಗಳ ಅಭಿವೃದ್ಧಿಯಾಗದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಹೇಳಿದ್ದರು. ನಿರ್ಮಲ ಗ್ರಾಮ ನಿರ್ಮಾಣವಾಗಿ ರಾಮ ರಾಜ್ಯವಾಗಿ ಪರಿವರ್ತನೆ ಹೊಂದಬೇಕು ಎನ್ನುವುದು ಅವರ ಬಹುದೊಡ್ಡ ಕನಸಾಗಿತ್ತು.
ಗಾಂಧೀಜಿಯವರ ಸತ್ಯ, ಅಹಿಂಸೆ, ಶಾಂತಿ, ಶ್ರಮ ಜೀವನ, ಸ್ವಚ್ಛತೆ, ರಾಮ ರಾಜ್ಯದ ಪರಿಕಲ್ಪನೆ, ಇವೆಲ್ಲವೂ ಭಾರತೀಯರಾಗಿ ನಾವು ಪಾಲಿಸಲೇ ಬೇಕಾದ ಸಾರ್ವಕಾಲಿಕ ಸೂತ್ರಗಳು. ಇವರ ಅಹಿಂಸಾ ತತ್ವದ ಸಂದೇಶವನ್ನು ಜಗತ್ತಿಗೆ ಸಾರುವ ದೃಷ್ಟಿಯಿಂದ, 2007ರ ಜೂನ್ 15 ರಂದು ವಿಶ್ವ ಸಂಸ್ಥೆಯು, ಮಹಾತ್ಮ ಗಾಂಧಿಜೀಯವರ ಜನ್ಮ ದಿನವಾದ ಅಕ್ಟೋಬರ್ 2ನ್ನು “ಅಂತರಾಷ್ಟ್ರೀಯ ಅಹಿಂಸಾ ದಿನ” ಎಂದು ಘೋಷಣೆ ಮಾಡಿತು.
ಬಾಪೂಜಿ ನಡೆದುಬಂದ ಹಾದಿ
1869ರ ಅಕ್ಟೋಬರ್ 2ರಂದು ಗುಜರಾತಿನ ಪೋರ್ ಬಂದರ್‌ನಲ್ಲಿ, ಕರಮಚಂದ ಗಾಂಧಿ ಮತ್ತು ಪುತಲೀಬಾಯಿಯವರಿಗೆ ಮೋಹನದಾಸ ಕರಮಚಂದ ಗಾಂಧಿ ಜನಿಸಿದರು. 1876ರಲ್ಲಿ ರಾಜ್‌ಕೋಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರಿಗೆ, 13 ನೇವಯಸ್ಸಿನಲ್ಲಿ ಅಂದರೆ 1883 ರಲ್ಲಿ ಕಸ್ತೂರ್ ಬಾ ರವರನ್ನು ವಿವಾಹವಾದರು. ತನ್ನ ಹದಿನೈದನೇ ಯವಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅವರು 1889 ರ ಸೆಪ್ಟೆಂಬರ್ 4ರಂದು ಕಾನೂನು ಅಧ್ಯಯನಕ್ಕಾಗಿ ಲಂಡನ್‌ಗೆ ತೆರಳುತ್ತಾರೆ, 1891 ರಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಹಿಂದಿರುಗಿದ ಅವರು 1892ರಲ್ಲಿ ಬಾಂಬೆ ಹೈ ಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸುತ್ತಾರೆ. 1893ರಲ್ಲಿ ಪೋರ್ ಬಂದರ್ ಕಂಪನಿಯ ಪರ ವಾದಿಸಲು ದಕ್ಷಿಣಾಪ್ರಿಕಾಗೆ ತೆರಳಿದ ಅವರು, ಪ್ರಥಮ ದರ್ಜೆ ಟಿಕೆಟ್ ಇದ್ದರೂ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆ ಡಬ್ಬಿಯಲ್ಲಿ ಪ್ರಯಾಣಿಸುವಂತೆ ರೈಲ್ವೇ ಸಿಬ್ಬಂದಿ ಹೇಳಿದರು. ಅದನ್ನು ನಿರಾಕರಿಸಿದ್ದಕ್ಕೆ ಪೀಟರ್‌ಮೆರಿಟ್ಜ್‌ಬರ್ಗ್‌ನಲ್ಲಿ ಬಲವಂತವಾಗಿ ಕೆಳಗಿಳಿಸಲಾಗಿತ್ತು. ವರ್ಣ ತಾರತಮ್ಯದ ವಿರುದ್ಧ ಹೋರಾಡಲು 1894ರಲ್ಲಿ ನತಾಲ್ ಇಂಡಿಯಾ ಕಾಂಗ್ರೆಸ್ ಸ್ಥಾಪನೆ ಮಾಡಿದರು. 1896ರಲ್ಲಿ ಆರು ತಿಂಗಳ ಮಟ್ಟಿಗೆ ಭಾರತಕ್ಕೆ ಮರಳಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ದಕ್ಷಿಣಾಪ್ರಿಕಾಗೆ ತೆರಳುತ್ತಾರೆ. ನಂತರ 1899ರ ಬೋಯರ್ ಯುದ್ಧದಲ್ಲಿ ಬ್ರಿಟಿಷ್ ಪರ 'ಇಂಡಿಯನ್ ಆಂಬುಲೆನ್ಸ್ ಕಾರ್ಪ್ಸ್' ಸ್ಥಾಪನೆ ಮಾಡಿದ್ದರು. ತದ ನಂತರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ವಾಪಸ್ಸಾದ ಗಾಂಧೀಜಿಯವರು, ಭಾರತೀಯ ಸಮುದಾಯದ ಒತ್ತಾಯದ ಮೇರೆಗೆ 1902ರಲ್ಲಿ ಮತ್ತೊಮ್ಮೆ ದಕ್ಷಿಣಾಪ್ರಿಕಾಗೆ ತೆರಳುತ್ತಾರೆ. 1904ರಲ್ಲಿ ಇಂಡಿಯನ್ ಒಪಿನಿಯನ್ ಪತ್ರಿಕೆ ಆರಂಭಿಸುತ್ತಾರೆ ಮತ್ತು ಅಲ್ಲಿ ಭಾರತ ವಿರೋಧಿ ಕಾನೂನಿನ ವಿರುದ್ಧ ಪ್ರತಿಭಟನೆ ಆರಂಭಿಸಿದ್ದ ಗಾಂಧೀಜಿಯವರು, 1906ರಲ್ಲಿ ಸೆರೆ ವಾಸ ಅನುಭವಿಸುತ್ತಾರೆ. 1915ರಲ್ಲಿ ಭಾರತಕ್ಕೆ ಮರಳಿದ ಅವರು ಅದೇ ವರ್ಷ ತಮ್ಮ ಅನುಯಾಯಿಗಳ ಜತೆ ಸೇರಿ ಅಹಮದಾಬಾದ್‌ನಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪನೆ ಮಾಡುತ್ತಾರೆ.
1917ರಲ್ಲಿ ನೇರವಾಗಿ ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಚಳವಳಿ ಆರಂಭಿಸಿದ ಅವರು, 1919ರ ಏಪ್ರಿಲ್ 6 ರಂದು ರೌಲತ್ ಕಾಯ್ದೆ ವಿರೋಧಿಸಿ, ಯಂಗ್ ಇಂಡಿಯಾ ಪತ್ರಿಕೆ ಮೂಲಕ ದೇಶಾದ್ಯಂತ ಹರತಾಳ ಮತ್ತು ಉಪವಾಸಕ್ಕೆ ಕರೆ ನೀಡುತ್ತಾರೆ, 1920ರ ಆಗಸ್ಟ್ 1 ರಂದು ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಗೆ ಕರೆ ನೀಡಿದರು. 1922ರ ಮಾರ್ಚ್ 10ರಂದು ದೇಶ ದ್ರೋಹ ಆರೋಪದ ಮೇಲೆ ಬಂಧಿಸಲಾಗುತ್ತದೆ. ನಂತರ 1924 ಮಾರ್ಚ್‌ನಲ್ಲಿ ಬಿಡುಗಡೆ ಹೊಂದಿದ ಗಾಂಧೀಜಿಯವರು, ಅದೇ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿ ಭಾಷಣ ಮಾಡುತ್ತಾರೆ. 1930ರಂದು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನದ ಪ್ರತಿಜ್ಞೆ ಕೈಗೊಂಡ ಇವರು, ಅದೇ ವರ್ಷ ಉಪ್ಪಿನ ಮೇಲೆ ತೆರಿಗೆ ಹೇರಿದ್ದನ್ನು ವಿರೋಧಿಸಿ ದಂಡಿಯಾತ್ರೆ ಕೈಗೊಳ್ಳುತ್ತಾರೆ, ಈ ಕಾರಣಕ್ಕಾಗಿ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸುತ್ತದೆ. 1932 ರಲ್ಲಿ ಅಸ್ಪೃಶ್ಯತೆ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ ಗಾಂಧೀಜಿಯವರು 1942ರ ಆಗಸ್ಟ್ 8ರಂದು ದೇಶವ್ಯಾಪಿ ಭಾರತ ಬಿಟ್ಟು ತೊಲಗಿ ಚಳುವಳಿ ಆರಂಭಿಸುತ್ತಾರೆ, ಅವರನ್ನು ಆಗಾ ಖಾನ್ ಅರಮನೆಯಲ್ಲಿ ಸೆರೆ ವಾಸದಲ್ಲಿಡಲಾಗುತ್ತದೆ, ಅಲ್ಲಿದ್ದುಕೊಂಡೇ ಬ್ರಿಟಿಷರ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಬಿಸಿದ ಅವರನ್ನು 1944ರ ಮೇ 6ರಂದು ಬಿಡುಗಡೆ ಮಾಡಲಾಗುತ್ತದೆ. 1947ರಲ್ಲಿ ಭಾರತಕ್ಕೆ ಅಧಿಕೃತವಾಗಿ ಸ್ವಾತಂತ್ರ್ಯ ಘೋಷಣೆಯಾಗುತ್ತದೆ. 1948ರ ಜನೇವರಿ13ರಂದು ಹಿಂದೂ-ಮುಸ್ಲಿಂ ಕೋಮು ಗಲಭೆ ನಿಲ್ಲಿಸುವಂತೆ ಒತ್ತಾಯಿಸಿ ಆಮರಣಾಂತ ಉಪವಾಸ ಕೈಗೊಂಡ ಅವರು ಜನೇವರಿ 18ಕ್ಕೆ ಉಪವಾಸ ಅಂತ್ಯಗೊಳಿಸುತ್ತಾರೆ. 1948ರ ಜನೇವರಿ 30ರಂದು ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದರು, ಮಹಾತ್ಮರ ಈ ಪುಣ್ಯ ತಿಥಿಯನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.
150ನೇ ಜನ್ಮ ದಿನಕ್ಕೆ ಹೀಗೊಂದು ಕೃತಜ್ಞತೆ
ಗಾಂಧೀಜಿಯವರ ಗ್ರಾಮ ನೈರ್ಮಲ್ಯದ ಪರಿಕಲ್ಪನೆಯನ್ನು ದೇಶಾದ್ಯಂತ ಚಳವಳಿ ರೂಪದಲ್ಲಿ ಜಾರಿಗೆ ತರುವ ಉದ್ದೇಶ ಹೊಂದಿದ್ದ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು, 2014ರ ಅಕ್ಟೋಬರ್ 2ರಂದು ರಾಜ ಪಥದಲ್ಲಿ ‘ಸ್ವಚ್ಛ ಭಾರತ ಅಭಿಯಾನಕ್ಕೆ’ ಚಾಲನೆ ನೀಡಿದ್ದರು. ಆವೇಳೆ ಮಾತನಾಡಿದ ಅವರು “2019ರ ವೇಳೆಗೆ ಸ್ವಚ್ಛ ಭಾರತದ ನಿರ್ಮಾಣವೇ ನಾವು ಗಾಂಧೀಜಿಯವರ 150ನೇ ಜನ್ಮ ದಿನಕ್ಕೆ ನೀಡುವ ಅತ್ಯಂತ ದೊಡ್ಡ ಕೃತಜ್ಞತೆ” ಎಂದು ಹೇಳಿದ್ದರು.
ಸ್ವಚ್ಛ ಭಾರತ ಅಭಿಯಾನ
ಸ್ವಚ್ಛ ಭಾರತ ಅಭಿಯಾನವು ಬಯಲು ಶೌಚ ನಿಮರ್ಮೂಲನೆ (ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ), ತ್ಯಾಜ್ಯಗಳ ಸಂಪೂರ್ಣ ನಿರ್ವಹಣೆ-ಮರುಬಳಕೆ ಮತ್ತು ಸಂಸ್ಕರಣೆ, ಕೊಳಗೇರಿಗಳ ನಿರ್ಮೂಲನೆ, ಸಾರ್ವಜನಿಕರಿಗೆ ನೈರ್ಮಲ್ಯ ಮತ್ತು ಸ್ವಾಸ್ಥ್ಯದ ಕುರಿತು ಜಾಗೃತಿ ಮೂಡಿಸುವುದು, ಹಾಗೂ ಇತ್ಯಾದಿ ಉದ್ದೇಶಗಳನ್ನು ಹೊಂದಿದ್ದು 2019ರ ಅಕ್ಟೋಬರ್ 2, ಗಾಂಧೀಜಿಯವರ 150ನೇ ಜನ್ಮ ದಿನಕ್ಕೂ ಮುನ್ನ ತನ್ನ ಗುರಿ ತಲುಪುವ ಉದ್ದೇಶ ಹೊಂದಿತ್ತು.
ಸ್ವಚ್ಛ ಭಾರತ ಅಭಿಯಾನವು ದೇಶಾದ್ಯಂತ ಭಾರೀ ಪ್ರಶಂಶೆಗೆ ಪಾತ್ರವಾಯಿತು. ಖ್ಯಾತ ಚಲನ ಚಿತ್ರ ನಟರಾದ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಅಮಿರ್ ಖಾನ್, ಪ್ರಿಯಾಂಕ ಚೋಪ್ರಾ, ಮುಂತಾದವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಪ್ರಖ್ಯಾತ ಕ್ರೀಡಾಪಟುಗಳಾದ ಸಚಿನ್ ತೆಂಡುಲ್ಕರ್, ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್, ಮೇರಿ ಕೋಂ ಮೊದಲಾದವರು ಭಾಗಿಯಾಗಿದ್ದರು ಅಷ್ಟೇ ಅಲ್ಲದೇ ದೇಶದ್ಯಂತ ಹಲವಾರು ಕಾರ್ಯಾಗಾರಗಳು, ಬೀದಿ ನಾಟಕಗಳು, ಹೀಗೆ ಹಲವಾರು ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗಿತ್ತು. ಇದೆಲ್ಲದರ ಫಲವಾಗಿ ಸ್ವಚ್ಛ ಭಾರತ ಅಭಿಯಾನವು ಅತ್ಯಂತ ಯಶಸ್ವಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಬಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.
ಸ್ವಚ್ಛ ಭಾರತ ಅಭಿಯಾನದಡಿ 2014ರ ಅಕ್ಟೋಬರ್ 2ರಿಂದ ಇಲ್ಲಿಯವರೆಗೆ ಅಂದಾಜು 10,06,39,170 ಮನೆಗಳಿಗೆ ಶೌಚಾಯಲ ನಿರ್ಮಿಸಲಾಗಿದೆ. ದೇಶಾದ್ಯಂತ 5,99,963 ಗ್ರಾಮಗಳು ಮತ್ತು 699 ಜಿಲ್ಲೆಗಳು ಬಯಲು ಮಲ ವಿಸರ್ಜನೆಯಿಂದ ಮುಕ್ತವಾಗಿದೆ. ಶೇಕಡಾ 63.3 ರಷ್ಟು ಗ್ರಾಮಸ್ಥರು ದ್ರವ ಮತ್ತು ಘನತ್ಯಾಜ್ಯ ನಿರ್ವಹಣೆನ್ನು ಮಾಡಲು ಪ್ರಾರಂಭಿಸಿದ್ದಾರೆ ಎಂದು ಸ್ವಚ್ಛ ಭಾರತ ಮಿಷನ್ ಹೇಳಿದೆ.
'ಸ್ವಚ್ಛ ಭಾರತ ಅಭಿಯಾನ' ದೇಶದೆಲ್ಲೆಡೆ ಪ್ರಸಂಶನೀಯವಾಗಿತ್ತು. ಈಗ ಜಾಗತಿಕವಾಗಿಯೂ ಮನ್ನಣೆ ಗಳಿಸಿದ್ದು, ಈ ಆಂದೋಲನದ ರೂವಾರಿಯಾಗಿರುವ ನರೇಂದ್ರ ಮೋದಿಯವರಿಗೆ ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ‘ಗ್ಲೋಬಲ್ ಗೋಲ್‍ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್‌ಗೆ ಹೇಳಿ ಗುಡ್ ಬೈ
ಇಂದು ಜಗತ್ತು ಪ್ಲ್ಯಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ವಿರುದ್ಧ ಹೋರಾಡುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 2 ರಿಂದ ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ. ಪ್ಲ್ಯಾಸ್ಟಿಕ್ ಬಳಕೆಯ ಕುರಿತು ಜಾಗೃತಿ ಮೂಡಿಸಲು ರದ್ದಿ ಮಹಿಳೆಯರ ಜತೆ ಸೇರಿ ಸ್ವತಃ ಪ್ರಧಾನಿಯವರೇ ಕಸದಿಂದ ಪ್ಲ್ಯಾಸ್ಟಿಕ್ ಕವರ್‌ಗಳನ್ನು ಬೇರ್ಪಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಗಾಂಧೀಜಿಯವರ ನಿರ್ಮಲ ಭಾರತದ ಕನಸಿನಲ್ಲಿ ಸಂಪೂರ್ಣ ನಂಬಿಕೆಯಿಟ್ಟಿರುವ ಪ್ರಧಾನಿಯವರು, 2022 ರ ವೇಳೆಗೆ ಪ್ಲ್ಯಾಸ್ಟಿಕ್ ಮುಕ್ತ ಭಾರತದ ಗುರಿಯನ್ನು ಹೊಂದಿದ್ದಾರೆ. ಅಕ್ಟೋಬರ್ 2 ರಿಂದ 6 ವಿಧದ ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗಿದೆ.
ಜನಾಂದೋಲನವಾಗಿ ಮಾರ್ಪಟ್ಟಿರುವ ಸ್ವಚ್ಛ ಭಾರತ ಅಭಿಯಾನ ಮತ್ತು ಪ್ಲ್ಯಾಸ್ಟಿಕ್ ಮುಕ್ತ ಪರಿಕಲ್ಪನೆಯು ನಗರ ಪ್ರದೇಶಗಳಿಂದ ಹಿಡಿದು ಗ್ರಾಮೀಣ ಪ್ರದೇಶದವರೆಗೂ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತು ಅರಿವನ್ನು ಮೂಡಿಸಲು ಯಶಸ್ವಿಯಾಗಿದೆ. ಈ ಆಂದೋಲನವು, ಗ್ರಾಮೀಣ ಪ್ರದೇಶದ ಜನರಿಗೆ ಸ್ವಾಸ್ಥ್ಯದ ಕುರಿತು ಮಾಹಿತಿ ನೀಡಲು ಮತ್ತು ತ್ಯಾಜ್ಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲು ಯಶಸ್ವಿಯಾಗಿದ್ದು, ಗಾಂಧೀಜಿಯವರ ನಿರ್ಮಲ ಗ್ರಾಮದ ಕನಸನ್ನು ನನಸು ಮಾಡುವತ್ತ ದಾಪುಗಾಲನ್ನಿಟ್ಟಿದೆ.