ಎಸ್‌ಯುವಿ ಕಾರು ಮಾರಿ ಕೋವಿಡ್-19 ಸೋಂಕಿತರಿಗೆ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ವಿತರಿಸುತ್ತಿದ್ದಾರೆ ಈ ಮುಂಬೈ ನಿವಾಸಿ
ಜೂನ್ 5 ರಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ವಿತರಿಸಲು ಪ್ರಾರಂಭಿಸಿದ ಇವರು ಇಲ್ಲಿಯವರೆಗೂ ಕೋವಿಡ್-19 ರೋಗಿಗಳಿರುವ 250ಕ್ಕೂ ಹೆಚ್ಚು ಕುಟುಂಬಗಳಿಗೆ ಸಿಲಿಂಡರ್ ವಿತರಿಸಿದ್ದಾರೆ.
ಶಹವಾಜ್ ಶೇಖ್ ಅವರಿಗೆ ಕಾರೆಂದರೆ ಅಚ್ಚುಮೆಚ್ಚು. 2011 ರಲ್ಲಿ ಪೋರ್ಡ್ ಗಾಡಿಯನ್ನು ಖರೀದಿಸಿದಾಗ 007 ಎಂಬ ಕಾರ್ ನಂಬರನ್ನು ಪಡೆಯಲು ಹೆಚ್ಚುವರಿ ಹಣವನ್ನು ವ್ಯಯಿಸಿದ್ದರು.
ಕೊರೊನಾವೈರಸ್ ಹರಡಲು ಪ್ರಾರಂಭಿಸಿದಂತೆ ಶೇಖ್ ಅವರು ತಮ್ಮ ಕಾರನ್ನು ಆಂಬುಲೆನ್ಸ್‌ನಂತೆ ಬಳಸತೊಡಗಿದರು. ಮೇ 28 ರಂದು, ಅವರ ವ್ಯಾಪಾರ ಪಾಲುದಾರರ ಆರು ತಿಂಗಳ ಗರ್ಭಿಣಿ ಸಹೋದರಿ ಆಸ್ಪತ್ರೆಗೆ ಹೋಗುವ ದಾರಿಯ ಮಧ್ಯೆಯೆ ಆಟೋರಿಕ್ಷಾದಲ್ಲಿ ಕೊರೊನಾ ಸೋಂಕಿನಿಂದ ನಿಧನರಾದರು.
ನ್ಯೂಸ್18 ಪ್ರಕಾರ ಆ ಮಹಿಳೆಯನ್ನು 5 ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದಿದ್ದರು, ಆದರೆ ಬೆಡ್‌ಗಳು ಮತ್ತು ವೆಂಟಿಲೇಟರ್‌ಗಳ ಕೊರತೆಯಿಂದ ಅವರನ್ನು ಸೇರಿಸಲಿಲ್ಲ.
ಆ ಮಹಿಳೆಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ಸಿಕ್ಕಿದ್ದರೆ ಅವರು ಬದುಕುಳಿಯಬಹುದಿತ್ತು ಎಂದು ತಿಳಿದಾಗ ಶೇಖ್ ತಮ್ಮ ಕಾರನ್ನು ಮಾರಿ ಆಕ್ಸಿಜನ್ ಸಿಲಿಂಡರ್ ಖರೀದಿಸಲು ಮುಂದಾದರು.
ಇದೇ ಕಾರಣದಿಂದ ಮತ್ತೊಬ್ಬರು ತಮ್ಮ ಜೀವ ಕಳೆದುಕೊಳ್ಳಬಾರದು, ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಸಹಾಯ ಮಾಡಬೇಕೆಂಬುದು ಶೇಖ್ ಅವರ ಯೋಚನೆ.
ಜೂನ್ 5 ರಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ವಿತರಿಸಲು ಪ್ರಾರಂಭಿಸಿದ ಇವರು ಇಲ್ಲಿಯವರೆಗೂ ಕೋವಿಡ್-19 ರೋಗಿಗಳಿರುವ 250ಕ್ಕೂ ಹೆಚ್ಚು ಕುಟುಂಬಗಳಿಗೆ ಸಿಲಿಂಡರ್ ವಿತರಿಸಿದ್ದಾರೆ.
“ನನ್ನ ಗೆಳೆಯರೊಬ್ಬರು ಆಕ್ಸಿಜನ್ ಸಿಲಿಂಡರ್ ತಯಾರಿಸುವವರನ್ನು ಸಂಪರ್ಕಿಸಲು ಸಹಾಯ ಮಾಡಿದರು. ಈಗ ಆಕ್ಸಿಜನ್ ಸಿಲಿಂಡರ್‌ನ ಅವಷ್ಯಕತೆಯಿರುವವರು ನೇರವಾಗಿ ನಮ್ಮ ಬಳಿ ಬಂದು ವೈದ್ಯರ ಸೂಚಿಸಿದ ಆಕ್ಸಿಜನ್ ಮಟ್ಟದ ಚೀಟಿ ತೋರಿಸಿ ತೆಗೆದುಕೊಂಡು ಹೋಗುತ್ತಾರೆ,” ಎಂದರು ಶೇಖ್, ವರದಿ ಮುಂಬೈ ಮಿರರ್.
ಮನೆಯವರೆಲ್ಲ ಕ್ವಾರಂಟೈನ್‌ಗೆ ಒಳಪಟ್ಟಂತಹ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಶೇಖ್ ಮತ್ತು ಅವರ ತಂಡ ಸಿಲಿಂಡರ್ ಡೆಲಿವರಿ ಮಾಡುತ್ತದೆ.
ಅದಲ್ಲದೆ ಕೇರ್ ಆಸ್ಪತ್ರೆಯ ಡಾ. ಸಬುದ್ದಿನ್ ಶೇಖ್ ಸಿಲಿಂಡರ್ ಹೇಗೆ ಬಳಸಬೇಕು ಎಂಬ ವಿಡಿಯೋವನ್ನು ಮಾಡಿದ್ದಾರೆ.
ಅಮೆರಿಕದ ಖ್ಯಾತ ಬರಹಗಾರ ಮತ್ತು ಕವಿ ಫ್ರೆಡೆರಿಕ್ ಬ್ಯೂಕ್ನರ್ ಒಮ್ಮೆ, “ಜಗತ್ತಿಗೆ ಜೀವಗಳನ್ನು ಉಳಿಸುವ ಜನರ ಅಗತ್ಯವಿದೆ” ಎಂದು ಹೇಳದ್ದರು. ಶೇಖ್ ಇದಕ್ಕೆ ಉದಾಹರಣೆಯಾಗಿ ನಿಲ್ಲುವುದು ಮಾತ್ರವಲ್ಲದೆ ತನ್ನ ಅಮೂಲ್ಯವಾದ ಆಸ್ತಿಯನ್ನು ಈ ಕಾರಣಕ್ಕಾಗಿ ತ್ಯಾಗ ಮಾಡಿದ್ದಾರೆ.