ಮನೆಯಲ್ಲಿಯೇ ಜೈವಿಕ ವಿಘಟನೀಯ ಪ್ಯಾಡ್‌ಗಳನ್ನು ಉತ್ಪಾದಿಸುತ್ತಿರುವ ‘ಪ್ಯಾಡ್ ವುಮನ್’

ಜಯಶ್ರೀ ಪರ್ವಾರ್ ಎಂಬ‌ ಮಹಿಳೆಯೊಬ್ಬರು ಮನೆಯಲ್ಲಿಯೇ ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳನ್ನು ಉತ್ಪಾದಿಸುತ್ತಿದ್ದು, ಇದನ್ನು ಬೀಟೆ ಮರದ ಕಾಗದದಿಂದ ತಯಾರಿಸಲಾಗುತ್ತದೆ. ಜಯಶ್ರೀರವರ ನೇತೃತ್ವದ ಸ್ವ-ಸಹಾಯ ಗುಂಪು 2015 ರಿಂದ ದಿನಕ್ಕೆ ಸುಮಾರು 100 ಪ್ಯಾಡ್‌ಗಳನ್ನು ತಯಾರಿಸುತ್ತದೆ.

ಮನೆಯಲ್ಲಿಯೇ ಜೈವಿಕ ವಿಘಟನೀಯ ಪ್ಯಾಡ್‌ಗಳನ್ನು ಉತ್ಪಾದಿಸುತ್ತಿರುವ ‘ಪ್ಯಾಡ್ ವುಮನ್’

Friday September 20, 2019,

3 min Read

ಇಂದಿಗೂ ಭಾರತದಲ್ಲಿ ಮುಟ್ಟಿನ ಬಗ್ಗೆ ಅನೇಕ‌ ಕಟ್ಟುಪಾಡುಗಳಿವೆ. ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ವಿಷಯಕ್ಕೆ ಬಂದರೆ, ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಹಾಗೂ ಅದರ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಶಿಕ್ಷಣ ನೀಡಬೇಕಾಗಿದೆ. ಅಂದಹಾಗೆ, ಮುಟ್ಟಿನ ಬಗೆಗಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರಗಳು, ಇತರೆ ಸ್ವಯಂಸೇವಾ ಸಂಘಗಳು ಹಾಗೂ ಹಲವು ವ್ಯಕ್ತಿಗಳು ಸೇರಿದಂತೆ ಸಕಾರಾತ್ಮಕ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಸಂಗತಿ.


ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಗೋವಾದ ಜಯಶ್ರೀ ಪರ್ವಾರ್ ಕೂಡ ಒಬ್ಬರು. ತಮ್ಮ ಮೂವರು ಸ್ನೇಹಿತರ ಜೊತೆಗೂಡಿ ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳನ್ನು ತಯಾರಿಸುತ್ತಿದ್ದಾರೆ.


ನಮಗೆಲ್ಲರಿಗೂ ತಿಳಿದಿರುವಂತೆ, ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳು ಪರಿಸರ ಸ್ನೇಹಿಯಾಗಿದ್ದು ಮತ್ತು ಅವುಗಳನ್ನು ಬಹಳ ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡುವ ಗುರಿಯಿದೆ.


ಜಯಶ್ರೀ ಪರ್ವಾರ್ (ಚಿತ್ರಕೃಪೆ: ಇಂಡಿಯನ್ ವುಮನ್ ಬ್ಲಾಗ್)




ಗೋವಾದ ಪಂಜಿಮ್‌ನಿಂದ 45 ಕಿ.ಮೀ ದೂರದಲ್ಲಿರುವ ಬಿಚೋಲಿಮ್ ತಾಲ್ಲೂಕಿನ ಮುಲ್ಗಾವೊ ಗ್ರಾಮದಲ್ಲಿ ಸಾಹೇಲಿ ಎಂಬ ಮಹಿಳೆಯರ ಸ್ವ-ಸಹಾಯ‌ ಸಂಘವನ್ನು ಜಯಶ್ರೀ ಮುನ್ನಡೆಸುತ್ತಿದ್ದು, ಇಲ್ಲಿ 2015 ರಲ್ಲಿ ಪರಿಸರ ಸ್ನೇಹಿ ಮತ್ತು ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್ ಗಳನ್ನು ತಯಾರಿಸುವ ಉದ್ಯಮವನ್ನು ಆರಂಭಿಸಿತು.


ಈ ನೈರ್ಮಲ್ಯ ಪ್ಯಾಡ್‌ಗಳನ್ನು ಹೆಚ್ಚಾಗಿ ಬೀಟೆ ಮರದ ಕಾಗದದಿಂದ ತಯಾರಿಸಲಾಗುತ್ತದೆ, ಅಲ್ಲದೇ ಜೊತೆಗೆ ಸಿಲಿಕಾನ್ ಪೇಪರ್, ಬಟರ್ ಪೇಪರ್, ನೇಯ್ದ ಬಟ್ಟೆ ಮತ್ತು ಹತ್ತಿಯನ್ನು ಸಹಾ ಬಳಸಲಾಗುತ್ತದೆ. ಇಲ್ಲಿ ನಾಲ್ಕು ಯಂತ್ರಗಳ ಸಹಾಯದಿಂದ ದಿನಕ್ಕೆ 100 ಪ್ಯಾಡ್‌ಗಳನ್ನು ಉತ್ಪಾದಿಸಲಾಗುತ್ತದೆ, 2015 ರಿಂದ ಈ ಉತ್ಪಾದನೆ ಶುರುವಾಗಿದೆ.


ಸಖಿ ಎಂಬ ಹೆಸರಿನ ನೈರ್ಮಲ್ಯ ಪ್ಯಾಡ್ ಗಳು ಅಂತರರಾಷ್ಟ್ರೀಯ ಖ್ಯಾತಿಯನ್ನೂ ಗಳಿಸಿದ್ದು, ಆನ್‌ಲೈನ್ ಮೂಲಕ ಇತರ ದೇಶಗಳಲ್ಲಿಯೂ ಮಾರಾಟವಾಗುತ್ತಿದೆ.


ಎನ್‌ಡಿಟಿವಿಯೊಂದಿಗೆ ಮಾತನಾಡಿದ ಜಯಶ್ರೀ,


"ನಮಗೆ ಸ್ಥಳೀಯರಿಂದ ಹೆಚ್ಚಿನ ಪ್ರತಿಕ್ರಿಯೆ ಸಿಗಲಿಲ್ಲ, ಆದರೆ ಇದೀಗ ಆನ್‌ಲೈನ್ ನಲ್ಲಿ ಬೇಡಿಕೆ ಹೆಚ್ಚಾಗಿದೆ."


ಮತ್ತು


"ಸಾಮಾನ್ಯ ಸ್ಯಾನಿಟರಿ ಪ್ಯಾಡ್‌ಗಳ ಮೂಲ ಸಮಸ್ಯೆ ಎಂದರೆ ಅವುಗಳು ಬಳಕೆಯ ನಂತರ ಸುಲಭವಾಗಿ ವಿಘಟನೆಗೊಳ್ಳುವುದಿಲ್ಲ. ಆದರೆ, ನಾವು ಬೀಟೆ ಮರದ ಕಾಗದದಿಂದ ತಯಾರಿಸುವುದರಿಂದ‌ ಪ್ಯಾಡ್ ಗಳು ಬಳಕೆಯ ನಂತರ, ಮಣ್ಣಿನಲ್ಲಿ ಹೂತ ಎಂಟು ದಿನಗಳಲ್ಲಿ ವಿಘಟನೆಗೊಳ್ಳುತ್ತವೆ" ಎಂದರು.

‌ಯಶಸ್ಸಿನ ಹಿಂದಿನ ಸ್ಫೂರ್ತಿ

ಮಹಿಳೆಯರಿಗೆ ಕೈಗೆಟುಕುವ ದರದಲ್ಲಿ ಜೈವಿಕ ವಿಘಟನೀಯ ಪ್ಯಾಡ್‌ಗಳನ್ನು ತಯಾರಿಸಿ, ಭಾರತದ ಪ್ಯಾಡ್ ಮ್ಯಾನ್ ಎಂದೇ ಕರೆಯಲಾಗುವ ಸಮಾಜ ಕಾರ್ಯಕರ್ತ ಅರುಣಾಚಲಂ ಮುರುಗಾನಂತಂ ರವರು‌ ಜಯಶ್ರೀರವರ ಈ ಸಾಧನೆಗೆ ಸ್ಪೂರ್ತಿ.


ಅರುಣಾಚಲಂ ಮುರುಗನಾಂತಂ ತಮ್ಮ‌ ಮಾತುಗಳಿಂದಲೇ ಜನರನ್ನು ಆಕರ್ಷಿಸುತ್ತಾರೆ ಅಲ್ಲದೇ ತಮ್ಮ‌ ನೈಜ ಕಥೆಯಿಂದಲೇ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ.




ಟಿ 2 ಆನ್‌ಲೈನ್‌ನಲ್ಲಿ ಮಾತನಾಡಿದ ಜಯಶ್ರೀ,


"ಕೆಲವು ವರ್ಷಗಳ ಹಿಂದೆ ನ‌ನ್ನ ಸ್ನೇಹಿತನೊಬ್ಬ ನನ್ನನ್ನು ಮುರುಗನಾಂತ‌ಂ ರವರಿಗೆ ಪರಿಚಯಿಸಿದನು. ಅವರ ಭೇಟಿ ನನಗೆ ತುಂಬಾ ಸ್ಫೂರ್ತಿ ತುಂಬಿತು. ಏನೇ ಇರಲಿ, ಮೊದಲು ನಮ್ಮ ಹಳ್ಳಿಯಲ್ಲಿ‌ ತದನಂತರ ನಮ್ಮ ದೇಶದಲ್ಲಿ ನೈರ್ಮಲ್ಯ ಸಮಸ್ಯೆಗಳನ್ನು ನಿರ್ಮೂಲನೆಮಾಡಲು ನಾನು ಕೆಲಸ ಮಾಡುತ್ತೇನೆ‌ ಈ ಕಾರ್ಯದಲ್ಲಿ ಎಂದಿಗೂ ನನ್ನ ಹೆಜ್ಜೆಯನ್ನು ಹಿಂದಿಡಬಾರದೆಂದು ಅವತ್ತೇ ನಿರ್ಧರಿಸಿಬಿಟ್ಟೆ. ನಮ್ಮ ಹಳ್ಳಿಯಲ್ಲಿನ 10 ಮಹಿಳೆಯರನ್ನು ಒಗ್ಗೂಡಿಸಿದೆ, ಆರಂಭದಲ್ಲಿ ಈ ಬಗ್ಗೆ ಅವರು ಸ್ವಲ್ಪ‌ ಹಿಂಜರಿದರೂ ನಂತರದಲ್ಲಿ ನನ್ನೊಂದಿಗೆ ಕೆಲಸ ಮಾಡಲು ಒಪ್ಪಿದರು" ಎನ್ನುತ್ತಾರೆ.


ಆದರೆ, ಜಯಶ್ರೀಗೆ ಇದು ಸುಗಮ ಸವಾರಿಯಾಗಿರಲಿಲ್ಲ, ಆರಂಭದಲ್ಲಿ ಸರಿಯಾದ ಪ್ರೋತ್ಸಾಹ ದೊರಕದ ಕಾರಣ ವಿಫಲರಾದರು.


ಇಂಡಿಯನ್ ವುಮನ್ ಬ್ಲಾಗ್ ಪ್ರಕಾರ, ಜಯಶ್ರೀರವರು ಹಳ್ಳಿಗಳಲ್ಲಿನ‌ ವಸ್ತುಪ್ರದರ್ಶನಗಳಲ್ಲಿ ಅಂಗಡಿಗಳನ್ನು ಸ್ಥಾಪಿಸಿ ಪ್ಯಾಡ್ ಗಳನ್ನು ಮಾರಾಟ ಮಾಡುವಾಗ ಹಲವರು ಕೇವಲ ಅಂಗಡಿ ಕಡೆ ನೋಡಿಕೊಂಡು ಮಾತ್ರ ಹೋಗುತ್ತಿದ್ದರು, ಆದರೆ, ಅದರ ಬಗ್ಗೆ ತಿಳಿದಿದ್ದವರು ಮಾತ್ರ ಬಂದು ಖರೀದಿಸುತ್ತಿದ್ದರು.

ಉತ್ಪಾದನಾ ಕಾರ್ಯ

“ನಾನು ಅನೇಕ ಸ್ವ-ಸಹಾಯ ಸಂಘಗಳಿಂದ ಕೂಡಿದ ಮಹಿಳೆಯರ ಒಕ್ಕೂಟದಲ್ಲಿದ್ದೇನೆ. ಅಲ್ಲಿ ಹೀಗೆ ಒಂದು ದಿನ ಪರಿಸರ ಸ್ನೇಹಿ ನೈರ್ಮಲ್ಯ ಪ್ಯಾಡ್‌ಗಳ ತಯಾರಿಕೆಯಲ್ಲಿ ಯಾರಿಗೆ ಆಸಕ್ತಿಯಿದೆ ಎಂದು ಕೇಳಲಾಯಿತು. ಕೆಲಸವನ್ನು ಕೈಗೆತ್ತಿಕೊಂಡವರಲ್ಲಿ ನಾನು ಮೊದಲಿಗಳು. ಪರಿಸರ ಸ್ನೇಹಿ ನೈರ್ಮಲ್ಯ ಪ್ಯಾಡ್‌ಗಳ ಮುಖ್ಯ ಅಂಶವೆಂದರೆ ಬೀಟೆ ಮರದ ಕಾಗದ. ಇದು ಮಣ್ಣಿನಲ್ಲಿ ಹೂತುಹೋದ ಎಂಟು ದಿನಗಳಲ್ಲಿ ವಿಘಟನೆಗೊಳ್ಳುತ್ತದೆ” ಎಂದು ಜಯಶ್ರೀ ಇಂಡಿಯನ್ ವುಮೆನ್ ಬ್ಲಾಗ್ ಗೆ ತಿಳಿಸಿದರು.


ಚಿತ್ರಕೃಪೆ: ಇಂಡಿಯನ್ ವುಮನ್ ಬ್ಲಾಗ್


ಪ್ಯಾಡ್ ಗಳ ಸಂಪೂರ್ಣ ಉತ್ಪಾದನಾ ಪ್ರಕ್ರಿಯೆಯು ಜಯಶ್ರೀ ಅವರ ಮನೆಯಲ್ಲಿಯೇ ನಡೆಯುತ್ತದೆ ಹಾಗೂ ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳನ್ನು ತಯಾರಿಸುವ ಕೆಲಸದಿಂದಾಗಿ ಅವರು ತಮ್ಮ ಹಳ್ಳಿಯ ಮಹಿಳೆಯರಿಗೆ ಜೀವನೋಪಾಯವನ್ನೂ ಸಹಾ ನೀಡುತ್ತಿದ್ದಾರೆ. ಹತ್ತು ಮಹಿಳೆಯರನ್ನೊಳಗೊಂಡ ಸಂಘದಲ್ಲಿ‌ ಪ್ರತಿಯೊಬ್ಬರೂ ತಿಂಗಳಿಗೆ 200 ರೂ. ದೇಣಿಗೆ ನೀಡುತ್ತಾರೆ. ಅದನ್ನು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಬಯಸುವ ಮಹಿಳೆಯರಿಗೆ ನೀಡಲಾಗುತ್ತದೆ.


ಪ್ರಸ್ತುತ, ಈ ಪ್ಯಾಡ್‌ಗಳು ಆನ್‌ಲೈನ್‌ನಲ್ಲಿ ಅಮೆಜಾನ್‌ ನಲ್ಲಿ ಲಭ್ಯವಿದೆ‌. ಅಲ್ಲದೇ, ಮುಂದಿನ‌ ದಿನಗಳಲ್ಲಿ ಇಡೀ ಭಾರತದಾದ್ಯಂತ ಮಳಿಗೆಗಳನ್ನು ತೆರೆದು ಉತ್ಪನ್ನವನ್ನು ಎಲ್ಲರಿಗೂ ದೊರಕಿಸಿ ಕೊಡುವ ಮಹದಾಸೆಯನ್ನು ಜಯಶ್ರೀ ಹೊಂದಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.