ಕಳೆದ 26 ವರ್ಷಗಳಿಂದ 5000 ಹೆಣ್ಮಕ್ಕಳನ್ನು ಮಾನವಕಳ್ಳಸಾಗಣಿಕೆಯಿಂದ ರಕ್ಷಿಸಿ ಅವರ ಬದುಕಿಗೆ ಬೆಳಕಾದ ಮಹಾನಗರಿ ಮುಂಬೈನ ಸರ್ಕಾರೇತರ ಸಂಸ್ಥೆ

ಮಾನವಕಳ್ಳಸಾಗಣಿಕೆಯಲ್ಲಿ ಬಲಿಯಾಗುತ್ತಿರುವ ಅಮಾಯಕರನ್ನು ರಕ್ಷಿಸುವ ಸಲುವಾಗಿ "ತ್ರಿವೇಣಿ ಆಚಾರ್ಯ" ರ ನೇತೃತ್ವದಲ್ಲಿ ಸೃಷ್ಟಿಯಾದ ಈ ಸರ್ಕಾರೇತರ ಸಂಸ್ಥೆ 90 ರ ದಶಕದಿಂದಲೂ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ದೇಶದ ಹಲವೆಡೆಯಲ್ಲಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳಲ್ಪಟ್ಟ ಸುಮಾರು 5000ಕ್ಕೂ ಅಧಿಕ ಮುಗ್ಧ ಹೆಣ್ಣುಮಕ್ಕಳನ್ನು ರಕ್ಷಿಸಿದೆ.

ಕಳೆದ 26 ವರ್ಷಗಳಿಂದ 5000 ಹೆಣ್ಮಕ್ಕಳನ್ನು ಮಾನವಕಳ್ಳಸಾಗಣಿಕೆಯಿಂದ ರಕ್ಷಿಸಿ ಅವರ ಬದುಕಿಗೆ ಬೆಳಕಾದ ಮಹಾನಗರಿ ಮುಂಬೈನ ಸರ್ಕಾರೇತರ ಸಂಸ್ಥೆ

Monday September 09, 2019,

3 min Read

ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಪ್ರಕಾರ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ಅಪರಾಧ. ಆದಾಗ್ಯೂ, ನಮ್ಮ ದೇಶದಲ್ಲಿ ಕಣ್ಮರೆಯಾಗುವ ಹೆಣ್ಣುಮಕ್ಕಳ ಸಂಖ್ಯೆ ಏನು ಕಡಿಮೆಯಾಗಿಲ್ಲ. ಮುಂಬಯಿಯಲ್ಲಿ ಹೀಗೆ ಕಣ್ಮರೆಯಾದ ನರಕದಕೂಪಕ್ಕೆ ನೂಕಲ್ಪಟ್ಟ ಹಲವಾರು ಮಹಿಳೆಯರು ಮತ್ತು ಹುಡುಗಿಯರನ್ನು ರಕ್ಷಿಸುತ್ತಾ ಬಂದಿದೆ ತ್ರಿವೇಣಿ ಆಚಾರ್ಯರ ಈ ಎನ್ ಜಿ ಓ.


ಈ ಸಂಸ್ಥೆ 90 ರ ದಶಕದ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿದೆ ಮತ್ತು ಇಲ್ಲಿಯವರೆಗೆ ಮುಂಬೈ, ಪುಣೆ, ದೆಹಲಿ, ಆಗ್ರಾ, ಬಿಹಾರ ಮತ್ತು ರಾಜಸ್ಥಾನ ಸೇರಿದಂತೆ ಭಾರತದಾದ್ಯಂತ 5,000 ಕ್ಕೂ ಹೆಚ್ಚು ಹುಡುಗಿಯರನ್ನು ಮಾನವ ಕಳ್ಳಸಾಗಣೆಯಿಂದ ರಕ್ಷಿಸಿದೆ.


ತ್ರಿವೇಣಿ ಆಚಾರ್ಯ (ಚಿತ್ರ ಕೃಪೆ: ಏಷ್ಯನ್ ಏಜ್)


ಎಡೆಕ್ಸ್‌ ಲೈವ್ ಗೆ ನೀಡಿದ ಸಂದರ್ಶನ ಒಂದರಲ್ಲಿ ತ್ರಿವೇಣಿ ಅವರು ತಮ್ಮ ಸಂಸ್ಥೆ ಹೇಗೆ ಹೆಣ್ಣುಮಕ್ಕಳನ್ನು ರಕ್ಷಿಸುತ್ತೆ ಎಂದು ವಿವರಿಸಿದ್ದಾರೆ


"ಮೊದಲು ನಮಿಗೆ ಸಿಕ್ಕಿದ ಮಾಹಿತಿ ಆಧಾರದ ಮೇಲೆ ಈ ಕಳ್ಳಸಾಗಣಿಕೆಯನ್ನು ಪತ್ತೆಹಚ್ಚಿ ಪೊಲೀಸರಿಗೆ ತಿಳಿಸುವ ಮೂಲಕ ಅವರ ರಕ್ಷಣೆ ಮಾಡುತ್ತೇವೆ. ಒಮ್ಮೆ ಹುಡುಗಿಯರು 25 ವರ್ಷ ದಾಟಿದ ಕೂಡಲೇ ಅವರು ಈ ಧಂದೆಯಿಂದ ಹೊರತಳ್ಳಲಪಡುತ್ತಾರೆ, ಆದ್ದರಿಂದ ಯಾವಾಗಲೂ ಚಿಕ್ಕಪ್ರಾಯದ ಹೆಣ್ಣುಮಗಳಿಗೆ, ಕನ್ಯೆಯರಿಗೆ ಅವರು ಹೊಂಚುಹಾಕುತ್ತಾರೆ. ಈ ಆಧಾರದ ಮೇಲೆ ನಾವು ಅವರ ರಕ್ಷಣೆಗಾಗಿ ಸಿದ್ಧತೆ ಮಾಡಿಕ್ಕೊಳ್ಳುತ್ತೇವೆ.


ಈ ರೀತಿ ಹೊಸದಾಗಿ ವ್ಯವಹಾರಕ್ಕೆ ಕರೆತಂದ ಹುಡುಗಿಯರನ್ನು ಪತ್ತೆಹಚ್ಚುವುದು ಸಲೀಸು. ತ್ರಿವೇಣಿ ಅವರೇ ಹೇಳುವಂತೆ ಈ ಹುಡುಗಿಯರು ಆಕರ್ಷಕವಾಗಿ ಅಲಂಕಾರಸಿಕೊಂಡಿರುತ್ತಾರೆ ಮತ್ತೆ ಭಯದಲ್ಲಿ ಇರುವಂತೆ ಕಾಣುತ್ತಾರೆ. ಯಾವುದೇ ಮಹಿಳೆಯನ್ನು ಈ ಧಂಧೆಯಿಂದ ರಕ್ಷಿಸುವ ಮೊದಲು ಅವಳ ಒಪ್ಪಿಗೆ ಪಡೆಯುವುದು ಮುಖ್ಯ, ಆದ್ದರಿಂದ ಸಂಸ್ಥೆಗಾಗಿ ಕೆಲಸ ಮಾಡುವ ಗುಪ್ತಚರರು ಮೊದಲು ಈ ಹೆಣ್ಣುಮಕ್ಕಳ ಬಳಿ ಮಾತನಾಡಿ ಅವರ ಒಪ್ಪಿಗೆ ಪಡೆಯುತ್ತಾರೆ. ತಮ್ಮನ್ನು ಬಲವಂಥವಾಗಿ ಈ ಕೆಲಸಗಳಿಗೆ ಬಳಸಿಕೊಂಡಿದ್ದಾರೆ ಎಂದು ಅವರು ಒಪ್ಪಿ ಹೇಳಿಕೆ ನೀಡಿದರೆ ಪೊಲೀಸರು ಎಫ್‌ ಐ ಆರ್ ಅನ್ನು ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸುತ್ತಾರೆ.


ಹೋರಾಟದ ಆರಂಭ

ತ್ರಿವೇಣಿ ಅವರ ಪತಿ ಬಾಲಕೃಷ್ಣ ಆಚಾರ್ಯ 12 ವರ್ಷ ಮಿಲಿಟರಿಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ಬಳಿಕ, ಪತಿ ಪತ್ನಿಯರಿಬ್ಬರು 1993 ರಲ್ಲಿ ಮುಂಬೈಗೆ ಬಂದು ನೆಲೆಸಿದರು. ನಂತರ ಪತ್ರಕರ್ತೆಯಾಗಿ ದುಡಿಯಲು ಆರಂಭಿಸಿದ ತ್ರಿವೇಣಿ ಅವರಿಗೆ ಕೆಲಸದ ಮೇಲೆ ಏಷಿಯಾ ದ ದೊಡ್ಡ ವ್ಯೆಶ್ಯಾವಾಟಿಕಾ ಸ್ಥಳವಾದ "ಗ್ರಾಂಟ್ ರೋಡ್" ನ "ಫಾಕ್ಲ್ಯಾಂಡ್ ರಸ್ತೆ" ಗೆ ಭೇಟಿನೀಡಬೇಕಾಯಿತು.


ಏಷ್ಯನ್ ಏಜ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ತ್ರಿವೇಣಿ ಅವ್ರು ಹೀಗೆ ಹೇಳುತ್ತರೆ


"ಮೊದಲು ಈ ವೇಶ್ಯಾವಾಟಿಕೆ ಆಗಲಿ ಮಾನವ ಕಳ್ಳಸಾಗಣಿಕೆ ಆಗಲಿ ಇವುಗಳ ಬಗ್ಗೆ ನನಗೆ ಕಿಂಚಿತ್ತೂ ಅರಿವಿರಲಿಲ್ಲ. ರಸ್ತೆಯ ಬದಿಗಳಲ್ಲಿ ಕಡುಬಣ್ಣದ ಲಿಪ್ಸ್ಟಿಕ್ ಹಚ್ಚಿ, ಕಂಡವರನು ಉದ್ರೇಕಿಸುವ ಬಟ್ಟೆತೊಟ್ಟು ನಿಂತಿರುವ ಹುಡುಗಿಯರನ್ನು ಕಂಡಾಗ ಅವ್ರು ತಾವೇ ಇಷ್ಟಪಟ್ಟು ಈ ಕೆಲಸಕ್ಕೆ ಇಳಿದಿದ್ದಾರೆ ಎಂದೇ ನಂಬಿದ್ದೆ. ನನ್ನ ಪತಿ ಈ ವ್ಯವಸ್ಥೆಯ ನಿಜ ರೂಪದ ಬಗ್ಗೆ ವಿವರಿಸಿದಾಗಲೇ ನಂಗೆ ಅರಿವಾಗಿದ್ದು ಇವರು ಬಲವಂಥವಾಗಿ ನೂಕಲ್ಪಟ್ಟವರು ಎಂದು."


ತ್ರಿವೇಣಿ ಆಚಾರ್ಯ(ಚಿತ್ರ ಕೃಪೆ:ಎಡೆಕ್ಸ್‌ ಲೈವ್)


ಲೈಂಗಿಕ ಕಾರ್ಯಕರ್ತೆಯರಿಂದ ರಕ್ಷಾಬಂಧನ ಸಮಾರಂಭದಲ್ಲಿ ರಾಖಿ ಕಟ್ಟಿಸಿಕೊಂಡ ಬಾಲಿವುಡ್ ನಟ ದಿವಂಗತ ಸುನಿಲ್ ದತ್ತ ಅವರನ್ನು ಒಳಗೊಂಡ ಕಾರ್ಯಕ್ರಮ ಒಂದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ತ್ರಿವೇಣಿ ಅವರು ಸುಮಾರು 14 ವರ್ಷದ ಹೆಣ್ಣುಮಗುವನ್ನು ಭೇಟಿ ಮಾಡಿದರು. ಆಕೆಯನ್ನು ಯಾರದ್ದೂ ಮಗಳೆಂದು ತಪ್ಪಾಗಿ ಭಾವಿಸಿದ್ದ ತ್ರಿವೇಣಿ ಅವರಿಗೆ ಮತ್ತೆ ತಿಳಿಯಿತು ಆಕೆಗೆ ಉದ್ಯೋಗದ ಆಸೆ ತೋರಿಸಿ ನೇಪಾಲದಿಂದ ಮುಂಬೈಗೆ ತಂದು ಪಿಂಪ್ಸ್ (ವ್ಯೆಶವಾಟಿಕಯನ್ನು ನಡೆಸುವವರು) ಗೆ ಮಾರಿದ್ದಾರೆ ಎಂದು.


"ಈ ಘಟನೆಯ ಬಳಿಕ ನಾನು ಮತ್ತು ನನ್ನ ಪತಿ ಈ ರೀತಿ ನಲುಗುತ್ತಿರುವ ಹೆಣ್ಣುಮಕ್ಕಳನ್ನು ರಕ್ಷಿಸಲು ನಿರ್ಧರಿಸಿದೆವು, ನನ್ನ ಪತಿ ತಮ್ಮ ವ್ಯವಹಾರವನ್ನು ಬದಿಗಿಟ್ಟು ಹೆಣ್ಣುಮಕ್ಕಳ ರಕ್ಷಣೆಗೆ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ನಾನು ಆರ್ಥಿಕವಾಗಿ ನೆರವಾಗಲು ಮತ್ತು ಈ ರಕ್ಷಣೆಗಾಗಿ ಅಗತ್ಯ ಇರುವವರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಕೆಲಸದಲ್ಲೇ ಮುಂದುವರೆದೆ" ಎಂದು ಏಷ್ಯನ್ ಏಜ್ ನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.


ಅಂದಿನಿಂದ ತ್ರಿವೇಣಿ ಅವರ ನೇತೃತ್ವದಲ್ಲಿ ಮುಗ್ದ ಹುಡುಗಿಯರನ್ನು ರಕ್ಷಿಸುವ ಈ ಸರ್ಕಾರೇತರ ಸಂಸ್ಥೆ ಆರಂಭಗೊಂಡಿತು.

ರಕ್ಷಣೆಯ ನಂತರದ ಹೆಜ್ಜೆಗಳು

ಹುಡುಗಿಯರನ್ನು ವೇಶ್ಯಾಗೃಹಗಳಿಂದ ರಕ್ಷಿಸಿದ ನಂತರ, ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ಎಚ್ಐವಿ ಮತ್ತು ಗರ್ಭಧಾರಣೆಯ ಪರೀಕ್ಷೆಗಳು ಸೇರಿದಂತೆ ಹಲವಾರು ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತದೆ. ಆಘಾತದಿಂದ ಹೊರಬರಲು ಹುಡುಗಿಯರಿಗೆ ಮಾನಸಿಕವಾಗಿ ಧೈರ್ಯ ತುಂಬಲು ಆಪ್ತ ಸಮಾಲೋಚನೆ ನೆಡಸಲಾಗುವುದು, ಅಂತೆಯೇ ದೈಹಿಕವಾಗಿ ಸಧೃಢರಾಗಲು ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತದೆ.


ರಕ್ಷಿಸಿದ ಯಾವುದೇ ಹುಡುಗಿಯರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗುತ್ತದೆ ಹಾಗೂ ಅವರ ಕುಟುಂಬಕ್ಕೆ ಅವರನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.


ಕೇವಲ ಹೆಣ್ಣುಮಕ್ಕಳನ್ನು ವೇಶ್ಯಾ ಗೃಹದಿಂದ ರಕ್ಷಿಸುವುದು ಮಾತ್ರವಲ್ಲದೇ ಅವರ ಪರ ನ್ಯಾಯಾಲಯದಲ್ಲಿ ಧಾವೆಹೂಡಿ ಪ್ರತಿ ತಿಂಗಳು ಅದರ ಪ್ರಗತಿ ಪರಿಶೀಲಿಸುತ್ತಾರೆ. ಒಂದು ವೇಳೆ ಕುಟುಂಬಗಳು ತಮ್ಮ ಮಕ್ಕಳನ್ನು ಕಳ್ಳಸಾಗಣೆ ಮಾಡುವ ಕಾರ್ಯದಲ್ಲಿ ಶಾಮೀಲಾಗಿದ್ದರೆ, ಅಂತಹ ಮಕ್ಕಳನ್ನು ಅವರಿಗೆ 18 ವರ್ಷ ತುಂಬುವವರೆಗೆ ಆಶ್ರಯ ನೀಡಲಾಗುವುದು. ನಂತರ ಇತರ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಈ ಸಂಸ್ಥೆಯ ಅಂಗಸಂಸ್ಥೆಗಳಿಗೆ ಕಳುಹಿಸಿ, ಇದೇ ರೀತಿ ವ್ಯೆಶ್ಯಗೃಹದಲ್ಲಿ ನರಳುತ್ತಿರುವ ಹೆಣ್ಮಕ್ಕಳಿಗೆ ಹೊಸ ಬದುಕಿನ ಆಶಾಕಿರಣವಾಗಿ ಅವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅನುವುಮಾಡಿಕೊಡಲಾಗುತ್ತದೆ.