ಬೌದ್ಧಿಕ ವಿಕಲಾಂಗತೆಯನ್ನು ಎದುರಿಸುತ್ತಿರುವ ಮಕ್ಕಳ ಪಾಲಿನ ಆಶಾಕಿರಣ ನಾರಾಯಣ ವಿಶೇಷ ಮಕ್ಕಳ ಶಾಲೆ

ತಮ್ಮ ಮಗುವಿನ ಸಮಸ್ಯೆಯ ಮೂಲಕವೇ ಇತರ ಮಕ್ಕಳ ನೋವಿಗೂ ಮಿಡಿದ ಮನಸ್ಸು ತಲ್ಲೂರು ಸುರೇಶ್ ಅವರದ್ದು. ಪ್ರಸ್ತುತ ಕುಂದಾಪುರದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿ ಬೌದ್ಧಿಕ ಅಂಗವೈಕಲ್ಯತೆಯನ್ನು ಎದುರಿಸುತ್ತಿರುವ ಮಕ್ಕಳಿಗಾಗಿ ತಮ್ಮ ಮನೆಯಂಗಳದಲ್ಲೇ ವಿಶೇಷ ಶಾಲೆಯೊಂದನ್ನು ಆರಂಭಿಸಿದ್ದಾರೆ.

ಬೌದ್ಧಿಕ ವಿಕಲಾಂಗತೆಯನ್ನು ಎದುರಿಸುತ್ತಿರುವ ಮಕ್ಕಳ ಪಾಲಿನ ಆಶಾಕಿರಣ ನಾರಾಯಣ ವಿಶೇಷ ಮಕ್ಕಳ ಶಾಲೆ

Monday January 20, 2020,

4 min Read

"ಎಲ್ಲಿಯವರೆಗೆ ಸಮಸ್ಯೆಗಳು ನಮ್ಮ ಮನೆಯ ಬಾಗಿಲನ್ನು ತಟ್ಟುವುದಿಲ್ಲವೋ ಅಲ್ಲಿಯವರೆಗೆ ಅದರ ನೋವು ನಮ್ಮ ಅರಿವಿಗೆ ಬರುವುದಿಲ್ಲ," ಎನ್ನುತ್ತಾರೆ ತಲ್ಲೂರು ಸುರೇಶ್.


ತಮ್ಮ ಮಗ ಉಲ್ಲಾಸಗೆ ಎದುರಾದ ಬೌದ್ಧಿಕ ಅಂಗವೈಕಲ್ಯತೆ, ಸಮಾಜದ ಕುರಿತಾದ ಅವರ ದೃಷ್ಟಿಕೋನವನ್ನೇ ಬದಲಾಯಿಸಿತು. ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಎಲ್ಲರ ಒಪ್ಪಿಗೆ ಮೇರೆಗೆ ತಮ್ಮ ತಂದೆಯ ಸಂಪೂರ್ಣ ಆಸ್ತಿಯನ್ನೆ ಮೂಲಧನವಾಗಿರಿಸಿಕೊಂಡು ತಲ್ಲೂರು ಫ್ಯಾಮಿಲ್ಯ ಟ್ರಸ್ಟ್ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿ ಬೌದ್ಧಿಕ ಅಂಗವೈಕಲ್ಯತೆಯನ್ನು ಎದುರಿಸುತ್ತಿರುವ ಮಕ್ಕಳಿಗಾಗಿ ತಮ್ಮ ಮನೆಯಲ್ಲಿಯೇ ವಿಶೇಷ ಶಾಲೆಯೊಂದನ್ನು ಆರಂಭಿಸಿಯೇಬಿಟ್ಟರು ತಲ್ಲೂರು ಸುರೇಶ್.


ವಿದ್ಯಾರ್ಥಿಗಳು ತಲ್ಲೂರು ಸುರೇಶ್ ಅವರೊಂದಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು


ಇದು ಕೇವಲ ತಲ್ಲೂರು ಫ್ಯಾಮಿಲ್ಯ ಟ್ರಸ್ಟ್‌ನ ಮಗುವನ್ನು ಮಾತ್ರ ಒಳಗೊಂಡಿಲ್ಲ. ತಮ್ಮ ಸುತ್ತಮುತ್ತಲಿನಲ್ಲಿ ಬೌದ್ಧಿಕ ಅಂಗವೈಕಲ್ಯತೆಯನ್ನು ಎದುರಿಸುತ್ತಿರುವಂಥ ಇತರ ಮಕ್ಕಳಿಗೂ ಹೊಸ ಬದುಕನ್ನು ಕಟ್ಟಿಕೊಡಲು ನಿರ್ಧರಿಸಿತು. ತಮ್ಮ ಪ್ರಾರಂಭದ ದಿನಗಳನ್ನು ನೆನಪಿಸುತ್ತಾ ತಲ್ಲೂರು ಸುರೇಶ್,


"ನಾವು ಪ್ರಾರಂಭದಲ್ಲಿ ನಮ್ಮ ಮನೆಯಲ್ಲೇ 4 ಜನ ವಿದ್ಯಾರ್ಥಿಗಳು ಮತ್ತು ಒಬ್ಬರು ಶಿಕ್ಷಕಿ ಒಬ್ಬರು ಸಹಾಯಕರೊಂದಿಗೆ ಶಾಲೆಯನ್ನು ಆರಂಭಿಸಿದೆವು. ಸುತ್ತಮುತ್ತ ಮನೆಗಳಿಗೆ ಭೇಟಿ ಕೊಟ್ಟು ಈ ರೀತಿಯ ಮಕ್ಕಳ ಹೆತ್ತವರೊಂದಿಗೆ ಮಾತನಾಡಿ ಅವರ ಮನವೊಲಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುತ್ತಿದ್ದೆವು, ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗತೊಡಗಿದ ಕಾರಣ ನಮ್ಮ ಕುಟುಂಬದ ಕಿರಿಯ ಸದಸ್ಯರು ಮುಂದೆ ಬಂದು ಪ್ರತ್ಯೇಕ ಶಾಲಾ ಕಟ್ಟಡವನ್ನು ಕಟ್ಟಿಕೊಟ್ಟರು, ಪ್ರಸ್ತುತ ನಮ್ಮ ಶಾಲೆ 34 ವಿದ್ಯಾರ್ಥಿಗಳು ಮತ್ತು 8 ಜನ ಶಿಕ್ಷಕರನ್ನು ಒಳಗೊಂಡಿದೆ."


ನಾರಾಯಣ ವಿಶೇಷ ಮಕ್ಕಳ ಶಾಲೆ

ನಾರಾಯಣ ವಿಶೇಷ ಮಕ್ಕಳ ಶಾಲೆ


ಹೌದು ಇದು ಹೆಸರಿಗೆ ತಕ್ಕಂತೆ ಬಹಳ ವಿಶೇಷವಾದ ಶಾಲೆ. ಮುಂಜಾನೆ ಸುಮಾರು 9:45ಕ್ಕೆ ಸರಿಯಾಗಿ ಮಕ್ಕಳ ಕಲರವ ಶಾಲಾವರಣದಲ್ಲಿ ಕೇಳಿಸುತ್ತದೆ. ತರಗತಿಯ ಪ್ರಥಮ ಪಾಠವೇ ಯೋಗಾಭ್ಯಾಸ, ಸರಳ ಆಸನ ಮತ್ತು ಪ್ರಣಾಯಾಮವನ್ನು ಕಲಿಸುವುದರೊಂದಿಗೆ ತರಗತಿ ಪ್ರಾರಂಭಗೊಳ್ಳುತ್ತದೆ.


ಇತರ ಔಪಚಾರಿಕ ಶಿಕ್ಷಣ ಪದ್ಧತಿಯಂತೆ ಇಲ್ಲಿ ವರ್ಷಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಪಠ್ಯಕ್ರಮದ ವ್ಯವಸ್ಥೆ ಇಲ್ಲಾ. ಪ್ರತಿಯೊಂದು ಮಗುವು ಒಂದಕ್ಕಿಂತ ಒಂದು ವಿಭಿನ್ನ ಮತ್ತು ಆ ಮಗುವಿನ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಪಠ್ಯಕ್ರಮವನ್ನು ರೂಪಿಸಲಾಗುತ್ತದೆ. ಸಮಯ ನೋಡುವುದು, ವೈಯಕ್ತಿಕ ಶುಚಿತ್ವ, ಸಂವಹನ, ಸರಳ ಲೆಕ್ಕ, ವರ್ಣಮಾಲೆ, ಸಂಗೀತ, ನೃತ್ಯ, ಕ್ರೀಡೆ ಹೀಗೆ ಎಲ್ಲವನ್ನು ಬೋಧಿಸಲಾಗುತ್ತದೆ.


ನೃತ್ಯ ಪ್ರದರ್ಶನದಲ್ಲಿ ನಾರಾಯಣ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು


ತಲ್ಲೂರು ಸುರೇಶ್ ಅವರ ಪತ್ನಿ ಮತ್ತು ವೃತ್ತಿಯಲ್ಲಿ ಶಾಲಾ ಶಿಕ್ಷಕಿಯೂ ಆಗಿರುವ ಮನೋರಮಾ ಟೀಚರ್ ಯುವರ್ ಸ್ಟೋರಿ ಕನ್ನಡ ದೊಂದಿಗೆ ಮಾತನಾಡುತ್ತಾ,


ನಮ್ಮ ಉದ್ದೇಶ ಬೌದ್ಧಿಕ ಅಂಗವೈಕಲ್ಯತೆಯನ್ನ ಹೊಂದಿರುವ ಮಕ್ಕಳು ಯಾರಿಗೂ ಭಾರವಾಗದೆ, ಅವರ ಕೆಲಸವನ್ನು ಅವರು ಸ್ವತಂತ್ರವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಅವರನ್ನು ರೂಪಿಸುವುದು.


ಈ ಹಿನ್ನಲೆಯಲ್ಲಿ 17 ವರ್ಷ ನಂತರದ ವಿದ್ಯಾರ್ಥಿಗಳಿಗೆ ನಾವು ಕರಕುಶಲ ಕಲೆಗಳಾದ ಸೀರೆಗೆ ಪಲ್ಲು ಹಾಕುವುದು, ಮ್ಯಾಟ್ ತಯಾರಿಸುವುದು, ಪೇಪರ್ ಬ್ಯಾಗ್, ಬಟ್ಟೆಯ ಬ್ಯಾಗ್, ಬಣ್ಣ ಬಣ್ಣದ ಹೂವುಗಳನ್ನು ಮಾಡುವುದು ಮೊದಲಾದ ತರಬೇತಿಯನ್ನು ನೀಡುತ್ತಿದ್ದೇವೆ, ಎಂದರು.


ವಿದ್ಯಾರ್ಥಿಗಳ ಕೈಯಲ್ಲಿ ಮೂಡಿಬಂದ ವಸ್ತುಗಳು


ಹೀಗೆ ವಿದ್ಯಾರ್ಥಿಗಳು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿಬಂದ ಹಣವನ್ನು ಅವರ ಕುಟುಂಬಕ್ಕೆ ನೀಡಲಾಗುತ್ತದೆ. ಶಾಲೆಯ ಶಿಕ್ಷಿಯಾಗಿರುವ ಪ್ರೇಮಾ ಲೂಯಿಸ್ ಅವರು ಮಾತನಾಡುತ್ತಾ,


ನಮ್ಮಲ್ಲಿ ಇರುವ ಮಕ್ಕಳು ಮೊಡರೇಟ್ ಮತ್ತು ಸಿವಿಯರ್ ಬೌದ್ಧಿಕ ಅಂಗವೈಕಲ್ಯತೆ ಹೊಂದಿರುವವರು. ಪ್ರತಿಯೊಂದು ಮಗುವನ್ನು ನೋಡುವಾಗ ನಾವು ಶಿಕ್ಷಕಿಯರು ಈ ಮಗು ಯಾವ ವಿಷಯಗಳನ್ನು ಕಲಿಯಬಹುದು, ನಾವು ಹೇಗೆ ಅದನ್ನು ಪರಿಣಾಮಾತ್ಮಕವಾಗಿ ಕಲಿಸಬಹುದು ಎಂದು ಸದಾ ಯೋಚಿಸುತ್ತಿರುತ್ತೇವೆ. ಮಕ್ಕಳ ಸಿಟ್ಟು, ನೋವು, ಹಠ ಎಲ್ಲವನ್ನು ಅರಿತುಕೊಂಡು ಅವರ ಮನಸ್ಸನ್ನು ಗೆದ್ದು ನಂತರ ಅವರಿಗೆ ಬೋಧಿಸಲು ಅಣಿಯಾಗುತ್ತೇವೆ. ಕೇವಲ ಸಂಬಳಕ್ಕಾಗಿ ದುಡಿಯುವವರಿಗೆ ಈ ವೃತ್ತಿ ರುಚಿಸಿವುದಿಲ್ಲ," ಎನ್ನುತ್ತಾರೆ.


ಹೂವು ತಯಾರಿಕೆಯಲ್ಲಿ ನಿರತಳಾಗಿರುವ ವಿದ್ಯಾರ್ಥಿ


ನಾವು ಆಟಕ್ಕೂ ಸೈ ಪಾಠಕ್ಕೂ ಸೈ

ಇದು ಕೇವಲ ನಾಲ್ಕುಗೋಡೆಯ ಮಧ್ಯ ಇರುವ ಶಿಕ್ಷಣ ಅಲ್ಲಾ, ಇಲ್ಲಿ ಮಕ್ಕಳು ಇತರ ಮಕ್ಕಳಂತೆ ಆಡುತ್ತಾರೆ, ಕುಣಿಯುತ್ತಾರೆ, ಕೆಲವೊಮ್ಮೆ ಹೊರಸಂಚಾರಕ್ಕೂ ಹೊರಡುತ್ತಾರೆ.


ಕ್ರೀಡಾ ಇಲಾಖೆ ಏರ್ಪಡಿಸಿದ ಆಟೋಟ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಬಹುಮಾನವನ್ನು ಬಾಚಿಕೊಂಡಿದ್ದಾರೆ, ವಿವಿಧ ಚಲನಚಿತ್ರಗೀತೆಗೆ ಹೆಜ್ಜೆಹಾಕುತ್ತಾರೆ, ನಾಡಿನ ಹಲವಾರು ವೇದಿಕೆಯಲ್ಲಿ ನೃತ್ಯರೂಪಕದ ಪ್ರದರ್ಶನವನ್ನು ನೀಡಿ ಜನಮನ ಗೆದ್ದಿದ್ದಾರೆ.


ವಿದ್ಯಾರ್ಥಿಗಳ ಸಾಧನೆಯ ಫಲಶ್ರುತಿ


ತಮ್ಮ ಶಿಕ್ಷಕರ ನೆರವಿನಿಂದ ಗಿಡ ಮರಗಳ ಕುರಿತು ಅವುಗಳ ಆರೈಕೆಯ ಕುರಿತು ತರಬೇತಿ ಪಡೆದುಕೊಳ್ಳುತ್ತಾರೆ, ವಿವಿಧ ಸಂಸ್ಥೆಗಳು ಏರ್ಪಡಿಸುವ ತರಬೇತಿಗಳಿಗೆ ಹಾಜರಾಗುತ್ತಾರೆ, ಸಂದರ್ಭೋಚಿತವಾಗಿ ಪ್ರವಾಸವನ್ನು ಕೈಗೊಳ್ಳುತ್ತಾರೆ. ವರ್ಷಕ್ಕೊಮ್ಮೆ ಜರುಗುವ ಶಾಲಾ ವಾರ್ಷಿಕೋತ್ಸವದಲ್ಲಿ ಕುಣಿದು ಕುಪ್ಪಳಿಸುತ್ತಾರೆ.


ಗಿಡ ನಡುವೆ ಕಾರ್ಯಕ್ರಮ


ಶಾಲೆ ನಡೆಯುವ ಪರಿ

ಇದು ಖಂಡಿತವಾಗಿ ಸುಲಭದ ಮಾತಲ್ಲ. ಸರಕಾರದ ಯಾವುದೇ ಸಹಕಾರವಿಲ್ಲದೆ, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗುವ ಪರಿಕರಗಳು, ಮಕ್ಕಳಿಗೆ ಹಾಲು, ತಿಂಡಿ, ವಿವಿಧ ಕಾರ್ಯಕ್ರಮಗಳಿಗೆ ಕೊಂಡುಹೋಗಲು ತಗಲುವ ಖರ್ಚು, ಶಿಕ್ಷಕರಿಗೆ ವೇತನ, ಇವೆಲ್ಲವನ್ನೂ ಸಂಬಾಳಿಸಲು ಸಂಸ್ಥೆ ಪರಿಶ್ರಮವಹಿಸುವುದನ್ನು ನೋಡಿದರೆ ನಿಬ್ಬೆರಗಾಗುತ್ತದೆ.


ಸುಮಾರು 12 ವಿದ್ಯಾರ್ಥಿಗಳು ವರ್ಷಕ್ಕೆ ಸುಮಾರು 24,000 ರೂಪಾಯಿಗಳ ವೆಚ್ಚದಲ್ಲಿ ವಿವಿಧ ದಾನಿಗಳ ಪ್ರಾಯೋಜಕತ್ವದಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಿದ್ದರೆ, ಉಳಿದ ವಿದ್ಯಾರ್ಥಿಗಳು ಉಚಿತವಾಗಿ ಟ್ರಸ್ಟ್‌ನ ವೆಚ್ಚದಲ್ಲೇ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ.


ಹತ್ತಿರದ ಊರುಗಳಿಗೆ ಟ್ರಸ್ಟ್‌ನ ಶಾಲಾವಾಹನ ತೆರಳಿ ವಿದ್ಯಾರ್ಥಿಗಳನ್ನು ಕರೆತಂದರೂ, ಹೆಚ್ಚಿನ ವಿಧ್ಯಾರ್ಥಿಗಳ ಪೋಷಕರು ಬಡವರಾಗಿರುವ ಕಾರಣದಿಂದ ಅವರಿಗೆ ಯಾವುದೇ ನಿರ್ದಿಷ್ಟ ಮೊತ್ತವನ್ನು ವಾಹನ ಬಾಡಿಗೆಯಾಗಿ ಟ್ರಸ್ಟ್ ವಿಧಿಸಿಲ್ಲ.


ಮದರ್ ತೆರೇಸಾ ಅವರು ಲೇಖಕ ಕುಷ್ವಂತ್ ಸಿಂಗ್ ಅವರೊಂದಿಗಿನ ಸಂದರ್ಶನ ಒಂದರಲ್ಲಿ ಹೇಳಿದಮಾತು ನನಗೆ ನೆನಪಾಗುತ್ತಿದೆ, ‘ನಮ್ಮಲ್ಲಿ ಒಮ್ಮೆ ಚಳಿಗಾಲದಲ್ಲಿ ರೋಗಿಗಳಿಗೆ ಅಗತ್ಯವಾದ ಹೊದಿಕೆಗಳ ಅಭಾವ ಉಂಟಾಯಿತು, ಅದೇ ಸಮಯಕ್ಕೆ ಕೋಲ್ಕತ್ತವನ್ನು ಬಿಟ್ಟು ಬೇರೆಡೆಗೆ ಹೋಗುತ್ತಿದ್ದ ಕುಟುಂಬವೊಂದು ತಮ್ಮ ಹೊದಿಕೆ ಚಾದರವನ್ನು ನಮಗೆ ದಾನ ಮಾಡಿ ಹೋದರು. ನಮ್ಮ ಉದ್ದೇಶಗಳು ಒಳ್ಳೆಯದಿದ್ದರೆ ದೇವರು ಯಾವತ್ತೂ ನಮ್ಮ ಕೈ ಬಿಡುವುದಿಲ್ಲ ಎಂಬುದಕ್ಕೆ ಇದೆ ಸಾಕ್ಷಿʼ.


ಮನೋರಮಾ ಟೀಚರ್ ಆಪ್ತವಾಗಿ ಮಾತನಾಡುತ್ತಾ, "ಕೆಲವೊಮ್ಮೆ ತುಂಬಾ ಕಷ್ಟ ಆಗುವುದುಂಟು, ಇನ್ನೇನು ಮಾಡುವುದು, ಸಂಬಳಕ್ಕೆ ಹೇಗೆ ಹೊಂದಿಸುವುದು ಎಂದು ಯೋಚಿಸುತ್ತಿರುವಾಗಲೇ ದೇವರ ರೂಪದಲ್ಲಿ ಯಾರಾದರೂ ದಾನಿಗಳು ಬರುತ್ತಾರೆ. ಈ ನಂಬಿಕೆಯಲ್ಲೇ ನಮ್ಮ ಶಾಲೆ 12 ವರ್ಷಗಳನ್ನು ಪೂರೈಸಿದೆ," ಎಂದರು.


ಹೆಚ್ಚುತ್ತಿರುವ ವಿದ್ಯಾರ್ಥಿಗಳು, ಮತ್ತು ಹೆಚ್ಚುತ್ತಿರುವ ಅಗತ್ಯತೆಗಳು, ಇವೆರಡು ಈಗ ಶಾಲೆಯ ಮುಂದಿರುವ ಸವಾಲುಗಳು. ಮಕ್ಕಳ ಪೋಷಕರು ಬಡವರೇ ಆದಕಾರಣ ಶಾಲೆ ಅವರ ಮೇಲೆ ಯಾವುದೇ ಹೊರೆಯನ್ನು ಹೊರೆಸುತ್ತಿಲ್ಲ. ತಮ್ಮ ಶಾಲೆಯ ಇಳಿಜಾರಿಗೆ ಅಗತ್ಯವಾದ ಮ್ಯಾಟ್, ವಾಟರ್ ಪ್ಯೂರಿಫಯರ್, ದೂರದ ಊರಿನಿಂದ ಮಕ್ಕಳನ್ನು ಕರೆದುತರುವ ತಾಯಂದಿರಿಗೆ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಹೋಲಿಗೆ ಯಂತ್ರ, ಮೊದಲಾದವುಗಳ ಈಡೇರಿಕೆಗಾಗಿ ಶಾಲೆ ಧಾನಿಗಳ ಸಹಕಾರವನ್ನು ಎದುರು ನೋಡುತ್ತಿದೆ.


ಮುಗಿಸುವ ಮುನ್ನ

ಬೌದ್ಧಿಕ ಅಂಗವೈಕಲ್ಯತೆಯನ್ನ ಎದುರಿಸುತ್ತಿರುವ ಮಕ್ಕಳನ್ನ ಅವರ ಹೆತ್ತವರೇ ಸಮಾಜಕ್ಕೆ ಅಂಜಿಯೋ, ಅರಿವಿನ ಕೊರತೆಯಿಂದಲೋ, ನಿರ್ಲಕ್ಷಿಸಿ ನಾಲ್ಕು ಗೋಡೆಗೆ ಸೀಮಿತವಾಗಿರಿಸಿ ಅವರನ್ನು ನಿಕೃಷ್ಟವಾಗಿ ಕಾಣುತ್ತಿರುವಾಗ, ಈ ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರ ಎಲ್ಲಾ ಹಠ-ಪ್ರೀತಿ-ಕೊಂಗಾಟವನ್ನು ಪ್ರೀತಿಯಿಂದಲೇ ಸಹಿಸಿಕೊಂಡು, ಸರಿಯಾಗಿ ನಿಲ್ಲಲೂ, ಮಾತನಾಡಲೂ ಬಾರದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಬದುಕಲು ಕಲಿಸಿದ ಈ ಶಾಲೆಯ ರೆಂಬೆ ಕೊಂಬೆಗಳು ಇನ್ನಷ್ಟು ವಿಸ್ತರಿಸಲಿ, ಈ ಕಾರ್ಯಕ್ಕೆ ಕೈಜೋಡಿಸುವ ದಾನಿಗಳ ಕೈ ಸಾಸಿರವಾಗಲಿ ಎಂದು ಆಶಿಸೋಣ.