ಹೆಚ್‌‌ಐವಿ ಪೀಡಿತ ಮಕ್ಕಳಿಗೆ ಆಶ್ರಯವಾದ ಬೆಳಗಾವಿಯ 'ಮಹೇಶ್ ಫೌಂಡೇಶನ್'

ಬೆಳಗಾವಿಯ ಮಹೇಶ ಜಾಧವ ಇದುವರೆಗೂ ತಮ್ಮ ಮಹೇಶ್ ಫೌಂಡೇಶನ್‌ನ 14 ವಿಭಿನ್ನ ಯೋಜನೆಗಳ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 4,800 ಎಚ್‌ ಐ ವಿ ಪೀಡಿತ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಇವರ ಕೆಲಸವನ್ನು ಗಮನಿಸಿ ಭಾರತ ಸರಕಾರ 2016 ರ ಸಾಲಿನ ಮಕ್ಕಳ ಕಲ್ಯಾಣಕ್ಕಾಗಿ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.

ಹೆಚ್‌‌ಐವಿ ಪೀಡಿತ ಮಕ್ಕಳಿಗೆ ಆಶ್ರಯವಾದ ಬೆಳಗಾವಿಯ 'ಮಹೇಶ್ ಫೌಂಡೇಶನ್'

Monday January 13, 2020,

5 min Read

ಅದು 2010. ವೈದ್ಯರು ಕೆಲವೇ ದಿನಗಳಷ್ಟೇ ಬದುಕಲು ಸಾಧ್ಯ ಎಂದು ನಾಲ್ಕು ವರ್ಷದ ಎಚ್ಐವಿ ಪೀಡಿತ ಮಗುವಿಗೆ ಹೇಳುತ್ತಾರೆ‌. ಕೊನೆಯ ದಿನಗಳನ್ನು ಖುಷಿಯಿಂದ ಕಳೆಯಲಿ ಎಂದು ಮಹೇಶ ಜಾಧವರವರು ಆ ಮಗುವನ್ನು ತಮ್ಮ ಮನೆಗೆ ಕರೆ ತರುತ್ತಾರೆ‌. ಅಲ್ಲಿ ಸಿಕ್ಕ ಪ್ರೀತಿ, ಹಾರೈಕೆಯಿಂದ ಆ ಮಗು ಈಗಲೂ ಮಹೇಶ್ ಫೌಂಡೇಶನ್ ಎನ್ಜಿಓದಲ್ಲಿ ಆರೋಗ್ಯವಾಗಿ ಎಲ್ಲರಂತೆ ಸುಂದರ ಕನಸುಗಳನ್ನು ಕಾಣುತ್ತಾ ಬದುಕುತ್ತಿದೆ.


ಈ ಮಗುವಿನ ಹಾಗಿರುವ 100ಕ್ಕೂ ಹೆಚ್ಚಿನ ಎಚ್ಐವಿ ಪೀಡಿತ ಮಕ್ಕಳು ಮಹೇಶ್ ಫೌಂಡೇಶನ್ ಅಲ್ಲಿ ಬದುಕಿನ ಹೊಸ ನೆಲೆಯನ್ನು ಕಂಡುಕೊಂಡಿದ್ದಾರೆ. ಮಹೇಶ ಫೌಂಡೇಶನ್ ಈ ಮಕ್ಕಳಿಗೆ ಕಳೆದ ಎಂಟು ವರ್ಷಗಳಿಂದ ಊಟ ವಸತಿ ಹಾಗೂ ಶಿಕ್ಷಣದ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.


ಇದರ ಹಿಂದಿನ ರೂವಾರಿ

ಮಹೇಶ ಜಾಧವ


ಈ ಕೆಲಸದ ಹಿಂದಿರುವ ರೂವಾರಿ 32 ವರ್ಷದ ಬೆಳಗಾವಿಯ ಮಹೇಶ ಜಾಧವ. ಇದುವರೆಗೂ ತಮ್ಮ ಫೌಂಡೇಶನ್‌ 14 ವಿಭಿನ್ನ ಯೋಜನೆಗಳ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 4,800 ಎಚ್‌ ಐ ವಿ ಪೀಡಿತ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಇವರ ಕೆಲಸವನ್ನು ಗಮನಿಸಿ ಭಾರತ ಸರಕಾರ 2016 ರ ಸಾಲಿನ ಮಕ್ಕಳ ಕಲ್ಯಾಣಕ್ಕಾಗಿ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.


2018ರಲ್ಲಿ ಮಹೇಶ್ ಜಾಧವ್ ರವರು ಡಿಪ್ಲೋಮಾ ಓದುತ್ತಿರುವ ಸಂದರ್ಭದಲ್ಲಿ ಗೆಳೆಯನ ಹುಟ್ಟುಹಬ್ಬದಂದು ರೋಗಿಗಳಿಗೆ ಹಣ್ಣು-ಹಂಪಲು ಕೊಡಲು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಗೆಳೆಯರೊಂದಿಗೆ ಹೋಗಿದ್ದರು‌. ಅಲ್ಲಿ ನಾಲ್ಕು ವರ್ಷದ ಚಿಕ್ಕಮಗು ಇತ್ತು, ಆ ಮಗುವಿಗೆ ಏನಾಗಿದೆ ಎಂದು ಅವರ ತಾಯಿಯನ್ನು ವಿಚಾರಿಸಿದಾಗ, ತನಗೂ ಹಾಗೂ ಆ ಮಗುವಿಗೂ ಏಡ್ಸ್ ಇದೆ ಎಂದು ನೇರವಾಗಿಯೆ ಹೇಳಿದಳು. ಎರಡು ವರ್ಷಗಳ ನಂತರ ಆ ಮಗುವಿನ ತಾಯಿ ಮರಣ ಹೊಂದಿದಳು. 


ಮಗುವಿಗೆ ಹೆಚ್ಐವಿ ಇದೆ ಎಂಬ ಕಾರಣಕ್ಕೆ ಕುಟುಂಬದವರು ಮಗುವನ್ನು ಆಸ್ಪತ್ರೆಯಲ್ಲಿಯೆ ಬಿಟ್ಟರು. ವಿಷಯ ತಿಳಿದ ಮಹೇಶರವರು ಮಗುವನ್ನು ಸರ್ಕಾರಿ ವಸತಿ ನಿಲಯಕ್ಕೆ ಸೇರಿಸಲು ಮುಂದಾದಾಗ ಅಲ್ಲಿ ಪ್ರವೇಶ ದೊರಕಲಿಲ್ಲ. ಮಾನಸಿಕ ನಿಂದನೆಗೊಳಪಟ್ಟ ಮಗುವಿನ ಆರೋಗ್ಯಸ್ಥಿತಿ ಕೆಟ್ಟು ಮತ್ತೆ ಆಸ್ಪತ್ರೆಗೆ ಸೇರಿಸಲಾಯಿತು‌. ಆಗ ವೈದ್ಯರು ಈ ಮಗು ಎರಡು ದಿನಕ್ಕಿಂತ ಹೆಚ್ಚು ಬದುಕುವುದಿಲ್ಲವೆಂದು ಕೈಚೆಲ್ಲಿದರು. ವೈದ್ಯರಲ್ಲಿ ವಿನಂತಿಸಿಕೊಂಡ ಮಹೇಶರವರು ಮಗು ತನ್ನ ಕೊನೆಯ ದಿನಗಳನ್ನು ಸಂತೋಷದಿಂದ ಕಳೆಯಲಿ ಎಂದು ತಮ್ಮ ಮನೆಗೆ ಕರೆತಂದರು. ಮನೆಯವರ ಪ್ರೀತಿ, ಮಮತೆ ಹಾಗೂ ಆರೈಕೆಯಿಂದ ಒಂದೇ ವಾರದಲ್ಲಿ ಮಗು ಗೆಲುವಾಗಿ ಓಡಾಡಲು ಪ್ರಾರಂಭಿಸಿ ಆ ಮನೆಯ ಸದಸ್ಯರಲ್ಲೊಬ್ಬನಾದ‌.


ಈ ಸುದ್ದಿ ವರದಿಗಾರರಿಗೆ ತಲುಪಿ ಮಹೇಶ್ ರವರನ್ನು ಸುದ್ದಿಪತ್ರಿಕೆಗಳು "ನಾಯಕ" ನಂತೆ ಬಿಂಬಿಸಿದವು. ಈ ಥರಹದ ಅನಾಥ ಮಕ್ಕಳೆಲ್ಲ ಅವರೆಡೆಗೆ ಬರಲು ಪ್ರಾರಂಭಿಸಿದವು.


ಯುವರ್‌ ಸ್ಟೋರಿ ಕನ್ನಡ ದೊಂದಿಗೆ ಮಾತನಾಡುತ್ತಾ ಮಹೇಶ್‌,


"ಆ ಮಕ್ಕಳ ಕಥೆಗಳನ್ನು ಕೇಳಿದ ನನಗೆ ಅವರನ್ನು ಹಿಂತರುಗಿ ಕಳಿಸಲು ಮನಸ್ಸಾಗಲಿಲ್ಲ‌. ಏನಾದರಾಗಲಿ ಎಂದು ನಿರ್ಧರಿಸಿ ಮನೆಯಲ್ಲಿಯೆ ಇಟ್ಟಿಕೊಳ್ಳಬೇಕೆಂದು ತಿರ್ಮಾನಿಸಿದೆ‌. ಇದಕ್ಕೆ ಮನೆಯಲ್ಲಿಯೂ ಬೆಂಬಲ ದೊರಕಿತು. ಅದರಲ್ಲಿಯೂ ನನ್ನ ತಾಯಿ ಈ ನಿರ್ಧಾರದಿಂದ ತುಂಬಾ ಖುಷಿಪಟ್ಟರು. ಮಕ್ಕಳು ನಮ್ಮ ಕುಟುಂಬದ ಸದಸ್ಯರಂತಾದರು," ಎನ್ನುತ್ತಾರೆ.


ಕೆಲವೇ ತಿಂಗಳಲ್ಲಿ ಅವರ ಮನೆ ಚಿಣ್ಣರ ಅಂಗಳವಾಯಿತು. ಒಂದೇ ವರ್ಷದಲ್ಲಿ ಮಕ್ಕಳ ಸಂಖ್ಯೆ 26ಕ್ಕೇರಿತು. ಮನೆಯಲ್ಲಿ ಸ್ಥಳ ಸಾಲದಾದಾಗ ಬಾಡಿಗೆ ಮನೆಯೊಂದನ್ನು ಕೊಂಡು ಮಕ್ಕಳನ್ನೆಲ್ಲ ಅಲ್ಲಿ ನೋಡಿಕೊಳ್ಳಲಾರಂಭಿಸಿದರು. ಹೀಗೆ ಮಹೇಶ್ ಫೌಂಡೇಶನ್ ಜನ್ಮ ತಾಳಿತು‌.


ಪಯಣಿಸಿದ ದಾರಿ ಸುಲಭವಿರಲಿಲ್ಲ

ಇದಕ್ಕಾಗಿ ಮಹೇಶರವರು ಪಯಣಿಸಿದ ದಾರಿಯು ಹೂ ಹಾಸಿದುದಾಗಿರಲಿಲ್ಲ. ತಮ್ಮ ಉದ್ದೇಶ, ಅದರ ಅಗತ್ಯತೆಯ ಅರಿವು ಅವರಿಗಿತ್ತು. ಇದರಿಂದಲೇ ಅವರು ತಮಗೆದುರಾದ ಸಮಸ್ಯೆಗಳಿಂದ ಹೊರಬರಲು ಸುಲಭವಾಯಿತು. ನೆರೆ-ಹೊರೆಯವರು, ಸಂಬಂಧಿಕರಿಂದಲೇ ಅವರಿಗೆ ನಿರಾಕರಣೆ ಉಂಟಾಯಿತು. ಮಹೇಶ ಹಾಗೂ ಕುಟುಂಬದವರೊಂದಿಗೆ ಇವರೆಲ್ಲರ ಒಡನಾಟ ಕಡಿಮೆಯಾಯಿತು.


ಮಕ್ಕಳ ಸಂಖ್ಯೆ ಹೆಚ್ಚಾದಾಗ ಮಹೇಶ ಬಾಡಿಗೆ ಮನೆ ಹುಡುಕಾಟದಲ್ಲಿದ್ದರು, ಎಚ್ಐವಿ ಮಕ್ಕಳಿಗಾಗಿ ಎಂದೊಡನೆ ಬಾಡಿಗೆ ಮನೆಯವರು ಹಿಂದೇಟು ಹಾಕುತ್ತಿದ್ದರು. ಕೊನೆಗೆ ಅವರ ಬೆಂಬಲಿಗರೊಬ್ಬರು ಅವರ ಮನೆಯನ್ನೇ ಬಿಟ್ಟು ಕೊಟ್ಟರು. ಮಕ್ಕಳನ್ನೆಲ್ಲ‌ ಅಲ್ಲಿಟ್ಟು ಸರಕಾರಿ ಶಾಲೆಗೆ ಸೇರಿಸಲು ಮುಂದಾದಾಗ ಅಲ್ಲಿ ಸಹ ವಿರೋಧವುಂಟಾಯಿತು.


ವಿರೋಧಗಳಿಗೆ ಮಣಿಯದೆ ನ್ಯಾಯಾಲಯದಲ್ಲಿ ಮಹೇಶ ದಾವೆ ಹೂಡಿದರು. ತೀರ್ಪು ಮಹೇಶರವರ ಪರವಾಗಿತ್ತು. ಎಚ್ಐವಿ ಪೀಡಿತ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳದೆ ತಕರಾರು ಮಾಡಿದ್ದ ಶಿಕ್ಷಕರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಯಿತು.


ಇದರ ಕುರಿತು ಮಹೇಶ, "ನಮ್ಮ‌ ಫೌಂಡೇಶನ್‌ ನ ಮುಖ್ಯ ಉದ್ದೇಶ ಎಚ್ಐವಿ ಪೀಡಿತರನ್ನು ಸಮಾಜದ ಮುಖ್ಯರಂಗಕ್ಕೆ ತರುವುದು. ಮನುಷ್ಯ ಹುಟ್ಟಿನಿಂದಲೇ ಎಲ್ಲ‌ ಮೂಲಭೂತ ಹಕ್ಕುಗಳನ್ನು ಪಡೆದಿರುತ್ತಾನೆ. ಅವು ಪ್ರತಿಯೊಬ್ಬರಿಗೂ ದೊರಕಬೇಕು," ಎನ್ನುತ್ತಾರೆ.


ತಮ್ಮ ಪಯಣವನ್ನು ನೆನೆಯುತ್ತಾ ಮಹೇಶ,


"ವಸತಿನಿಲಯದ ಸುತ್ತ-ಮುತ್ತಲಿನ ಜನರಿಂದ ಎಷ್ಟೋ ಸಾರಿ ಕಷ್ಟ ಅನುಭವಿಸಿದ್ದಿದೆ. 2010ರಿಂದ 2016ರ ವರೆಗೆ ನನಗೂ ಹಾಗೂ ನನ್ನ ಕುಟುಂಬಕ್ಕೆ ಅಕ್ಷರಶಃ ವನವಾಸದಂತಾಗಿತ್ತು. ಅದಕ್ಕೆ ನನಗೇನು ಬೇಜಾರಿಲ್ಲ. ಆದರೆ ಈ ಕೆಲಸದಿಂದ ಸಂತೃಪ್ತಿಯಿದೆ," ಎನ್ನುತ್ತಾರೆ.


2 ಬಿಎಚ್ಕೆಯ ಬಾಡಿಗೆ ಮನೆಯಲ್ಲಿ ಫೌಂಡೇಶನ್‌ನ 55 ಮಕ್ಕಳು ಆರು ವರ್ಷ ಕಳೆದಿದ್ದಾರೆ. ಸರ್ಕಾರದಿಂದ ಜಾಗ ಸಿಗುತ್ತದೆಂದು 5 ವರ್ಷ ಕಾದರೂ ಏನು ಪ್ರಯೋಜನವಾಗದೆಯಿದ್ದಾಗ ಮಹೇಶರವರ ಪರದಾಟವನ್ನು ನೋಡಿ ಅವರ ಕುಟುಂಬದವರೇ ತಾವಿರುವ ಮನೆಯನ್ನು ಬಿಟ್ಟು ಕೊಡಲು ನಿರ್ಧರಿಸಿದರು. ಇದು ಮಹೇಶರವರಿಗೂ ಅಚ್ಚರಿ ಹಾಗೂ ಸಂತೋಷದ ವಿಷಯವಾಗಿತ್ತು.


ಈಗ ಆರು ಕೋಟಿ ವೆಚ್ಚದಲ್ಲಿ ಮಹೇಶರವರ ಮನೆಯಿದ್ದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಮಹೇಶ ಕುಟುಂಬದವರು ಪ್ರಸ್ತುತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ‌. ತಮ್ಮ ಫೌಂಡೇಶನ್ಗಾಗಿಯೇ ಸ್ವಂತ ಗೂಡೊಂದು ಸಿದ್ಧವಾಗುತ್ತಿರುವದರ ಕುರಿತು ಅತೀವ ಹರ್ಷ ವ್ತಕ್ತಪಡಿಸಿದ ಮಹೇಶ,


"ನನಗೆ ಯಾವಾಗಲೂ ಒಂದು ಭಯ ಕಾಡುತ್ತಲಿತ್ತು, ನನಗೆ ಏನಾದರೂ ಆದರೆ, ಇಷ್ಟು ವರ್ಷದಿಂದ ನೋಡಿಕೊಂಡು ಬಂದು ಮಕ್ಕಳ ಮತ್ತು ಫೌಂಡೇಶನ್ ನ ಗತಿಯೇನು? ಅವರನ್ನು ನೋಡಿಕೊಳ್ಳುವರಾರು? ಅವರು ಮತ್ತೆ ಅನಾಥರಾಗುತ್ತಾರೆ ಎಂದು ಭಯ ಕಾಡುತ್ತಿತ್ತು. ಆದರೆ ಈಗ ಹಾಗಿಲ್ಲ ನಮ್ಮದೇ ಸ್ವಂತ ಕಟ್ಟಡವಿದೆ ಹಾಗೂ ಶಾಲೆಯಿದೆ. ಒಂದು ವೇಳೆ ನಾನಿಲ್ಲದಿದ್ದರೂ ಫೌಂಡೇಶನ್ ಸರಾಗವಾಗಿ ನಡೆದುಕೊಂಡು ಹೋಗುವಂತಹ ವ್ಯವಸ್ಥೆಯಿದೆ ಹಾಗೂ ನೋಡಿಕೊಳ್ಳಲು ಜನರಿದ್ದಾರೆ," ಎಂದೆನ್ನುತ್ತಾರೆ.


ಮಹೇಶರವರ ಮನೆಯಿದ್ದ ಜಾಗದಲ್ಲೆ ನಿರ್ಮಾಣವಾದ ಮಹೇಶ ಫೌಂಡೇಶನ್‌ನ ಹೊಸ ಕಟ್ಟಡ


ಗ್ರಾಮೀಣ ಭಾಗದಲ್ಲಿಯೂ ಎಚ್ಐವಿ ಪೀಡಿತರ ಸಂಖ್ಯೆ ಜಾಸ್ತಿ ಇರುವುದರಿಂದ ಗೋಕಾಕ್ ನಲ್ಲಿಯೂ ಒಂದು ಶಾಖೆಯನ್ನು ಪ್ರಾರಂಭಿಸಿದ್ದಾರೆ. 


ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 36,000 ನೊಂದಾಯಿತ ಏಡ್ಸ್ ರೋಗಿಗಳಿದ್ದಾರೆ. ಹೆಚ್ಐವಿ ರೋಗಿಗಳು ಕೆಲವೊಮ್ಮೆ ತಮಗಿರುವ ಖಾಯಿಲೆಯನ್ನು ಗುಟ್ಟಾಗಿರಿಸಿ ಸುಳ್ಳು ಹೇಳಿ ಮದುವೆಯಾದಂತಹ ಸುಮಾರು ಉದಾಹರಣೆಗಳಿವೆ. ಮಹೇಶ ಫೌಂಡೇಶನ್ 2010ರಿಂದ ಇಲ್ಲಿಯಯವರೆಗೆ ಅಂತಹ 72 ವಿವಾಹಗಳನ್ನು ತಡೆದಿದ್ದಾರೆ.


ಶಾಲೆಯ ವಿಶೇಷತೆಯೇನು

ಈ ಶಾಲೆಯು ಕೌಶಲ್ಯ ಆಧರಿತ ವಿದ್ಯಾಭ್ಯಾಸ ಮಾದರಿಯನ್ನು ಹೊಂದಿದ್ದು, ಇದರಿಂದ ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳು ತಮಗೆ ಆಸಕ್ತಿಯಿರುವ ವಿಷಯದೊಂದಿಗೆ ಕಳೆದು, ಜೊತೆಗೆ ಮಿಕ್ಕ ವಿಷಯಗಳನ್ನು ಕಲಿಯುತ್ತಾರೆ.


ಈ ವಿಧಾನವು ಮೊದಲ ಬಾರಿ ಕಲಿಯುವ(ಅನಕ್ಷರಸ್ಥ ಪಾಲಕರ ಮಕ್ಕಳು) ಮಕ್ಕಳಿಗೆ ಪರಿಣಾಮಕಾರಿಯಾಗಿದೆ. ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡಲು ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ವ್ಯವಸ್ಥೆಯಿದೆ. ಇನ್ನೊಂದು ವಿಶೇಷತೆಯೆನೆಂದರೆ ಶಾಲೆಗಳಲ್ಲಿ‌ ಪಾಲಕರ ಸಭೆ ನಡೆಯುವಂತೆ, ಇಲ್ಲಿ ಮಕ್ಕಳೆ ತಮ್ಮ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ವರದಿಯನ್ನು ಸಲ್ಲಿಸುತ್ತಾರೆ‌.




"ಈ ಮಕ್ಕಳು ನನ್ನೊಂದಿಗೆ ಸಾಥ್ ನೀಡಿರದಿದ್ದರೆ, ಆ ಚಿಕ್ಕ ಮನೆಯಲ್ಲಿ ಆರು ವರ್ಷ ಇರುತ್ತಿಲ್ಲದಿದ್ದರೆ, ಈ ಕನಸು ಸಾಕಾರಗೊಳ್ಳುತ್ತಿರಲಿಲ್ಲ. ಈ ಯಶಸ್ಸಿನ ಹಿಂದೆ ಮಕ್ಕಳ ಸಹನೆ ಹಾಗೂ ಬೆಂಬಲವು ಇದೆ," ಎನ್ನುವುದು ಮಹೇಶರವರ ಅಭಿಪ್ರಾಯ.


ದಾನಿಗಳ ಬೆಂಬಲ

ಫೌಂಡೇಶನ್ ನಡೆಸಲು ವಾರ್ಷಿಕವಾಗಿ ಅಂದಾಜು 6 ಕೋಟಿ ಬೇಕಾಗುತ್ತದೆ. ಇಷ್ಟು ದೊಡ್ಡ ಮೊತ್ತದ ಹಣ ಯಾರೋ ಉಳ್ಳವರಿಂದಲೇ ಬಂದಿರಬಹುದೆಂದು ನಿಮಗನಿಸಿದರೆ ಅದು ತಪ್ಪು. 


"ಫೌಂಡೇಶನ್ ನಡೆಯುತ್ತಿರುವುದು ಯಾವುದೋ ದೊಡ್ಡ ಪ್ರಮಾಣದ ದಾನದಿಂದಲ್ಲ, ಬದಲಾಗಿ ದೊಡ್ಡ ಮನಸ್ಸಿನ ಜನಸಾಮಾನ್ಯರು ನೀಡುವ ಚಿಕ್ಕ ಚಿಕ್ಕ (Retail Donation) ದಾನದಿಂದ ನಡೆಯುತ್ತದೆ," ಎನ್ನುತ್ತಾರೆ ಮಹೇಶ.


ಜಾಗೃತಿ ಮೂಡಿಸುವ ಪ್ರಯತ್ನ

ಫೌಂಡೇಶನ್ ವಿದ್ಯಾರ್ಥಿಗಳಲ್ಲಿ, ಜನಸಾಮಾನ್ಯರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದು, ಕಾಲೇಜು, ಕೈಗಾರಿಕಾ ಸಂಸ್ಥೆ ಮುಂತಾದ ಕಡೆ ತೆರಳಿ ಜನರಲ್ಲಿ ಅರಿವು ಮೂಡಿಸುತ್ತಿದೆ. ತಮ್ಮ ಈ ಕಾರ್ಯದಲ್ಲಿ ಸಹಾಯ ಮಾಡಬಯಸುವವರಿಗೆ ಅವಕಾಶ ನೀಡುತ್ತಾರೆ‌.


ಏನಿದು ಏಡ್ಸ್

ಏಡ್ಸ್ ರೋಗವು ನಾಲ್ಕು ರೀತಿಯಲ್ಲಿ ಹರಡುತ್ತದೆ. ತಾಯಿಯಿಂದ ಮಗುವಿಗೆ, ಪರೀಕ್ಷೆಗೊಳಪಡಿಸಿದ ರಕ್ತದ ವರ್ಗಾವಣೆ ಮತ್ತು ಬಳಸಿದ ಸಿರಿಂಜುಗಳ ಮರುಬಳಕೆ ಇತ್ಯಾದಿಗಳಿಂದ ಹರಡುತ್ತದೆ.


ಬದಲಾದ ಜೀವನಶೈಲಿಯಲ್ಲ 28ಕ್ಕಿಂತ ಕಡಿಮೆ ವಯಸ್ಸಿನವರ ಅಸುರಕ್ಷಿತ ಹಾಗೂ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೆಯಿರುವ ಲೈಂಗಿಕ ಕ್ರಿಯೆಯಿಂದಲೇ ಶೇಕಡಾ 90% ಏಡ್ಸ್ ರೋಗ ಹರಡುತ್ತದೆ.


ಸರ್ಕಾರದಿಂದ ಇದುವರೆಗೂ ಯಾವುದೇ ಅನುದಾನ ಬರದೆಯಿದ್ದರು ಸರ್ಕಾರದಿಂದ ಅನೇಕ ಬಹುಮಾನಗಳು ಬಂದಿವೆ. ಸರ್ಕಾರದ ಹೆಚ್ಚಿನ ಸಹಕಾರದ ಅಗತ್ಯವಿರುವಲ್ಲಿ ಭ್ರಷ್ಟಾಚಾರವೇ ಅತಿಯಾಗಿದೆ ಮಹೇಶ ಹೇಳುತ್ತಾರೆ‌.


ಮಹೇಶರವರು ತಮ್ಮ ಜೀವನಾಧಾರಕ್ಕೆ ಜೆನೆರಿಕ್ ಮೆಡಿಸಿನ್ ಎಂಬ ಸಾಮಾಜಿಕ ಉದ್ಯಮವೊಂದನ್ನು ನಡೆಸುತ್ತಿದ್ದು, ಇಲ್ಲಿ ಕೈಗೆಟಕುವ ಬೆಲೆಯಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತದೆ. 3 ಜನ ಪಾಲುದಾರರಿರುವ ಉದ್ಯಮವು ಬೆಳಗಾವಿಯಲ್ಲಿ 24 ಶಾಖೆಗಳನ್ನು ಹೊಂದಿದೆ.


ಕರ್ನಾಟಕದ ಮಕ್ಕಳ ಹಕ್ಕು ಪ್ರಾಧಿಕಾರದ ಹುದ್ದೆಗೆ ಮಹೇಶರವರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಅವರಿಗೆ ಚಿಕ್ಕ ವಯಸ್ಸು ಎಂದು ತಿರಸ್ಕರಿಸಲಾಯಿತು‌.


"ಸಮಾಜ ಸೇವೆ ಮಾಡಲು ದುಡ್ಡಿಗಿಂತ, ಜನರಿಗಾಗಿ ಮಿಡಿಯುವ ಮನಸ್ಸಿರಬೇಕು" ಇವರ ಸಂಸ್ಥೆ ಹೀಗೆ ಬೆಳಯಲಿ, ಇವರಿಗೆ ನಮ್ಮ ಕಡೆಯಿಂದ ಒಂದು ಸಲಾಮ್!!

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.