ನೀತಿ ಆಯೋಗದ ನಾವೀನ್ಯ ಸೂಚ್ಯಂಕ: ಕರ್ನಾಟಕಕ್ಕೆ ಮೊದಲ ಸ್ಥಾನ
ನಾವೀನ್ಯ ಸೂಚ್ಯಂಕದಲ್ಲಿ ಎರಡನೇ ಬಾರಿಗೆ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದು, ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಮುಂಚೂಣಿಯಲ್ಲಿದೆ.
ಬುಧವಾರ ನೀತಿ ಆಯೋಗ ಬಿಡುಗಡೆಗೊಳಿಸಿದ ನಾವೀನ್ಯ ಸೂಚ್ಯಂಕದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಕೇರಳ ರಾಜ್ಯಗಳು ನಾವೀನ್ಯತೆಗಾಗಿ ಮೊದಲ ಐದು ಸ್ಥಾನಗಳನ್ನು ಅಲಂಕರಿಸಿವೆ.
ಈ ಸೂಚ್ಯಂಕವನ್ನು ಆಯೋಗದ ಉಪಾಧ್ಯಕ್ಷರಾದ ರಾಜೀವ್ ಕುಮಾರ್ ಮತ್ತು ಸಿಇಓ ಅಮಿತಾಬ್ ಕಾಂತ್ ಬಿಡುಗಡೆಗೊಳಿಸಿದ್ದು, ಜಾಗತಿಕ ನಾವೀನ್ಯ ಸೂಚ್ಯಂಕದ ಹಾದಿಯಲ್ಲೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಜಾರ್ಖಂಡ್. ಛತ್ತೀಸ್‌ಗಡ್ ಮತ್ತು ಬಿಹಾರ ಸೂಚ್ಯಂಕದ ಕೊನೆಯ ಸ್ಥಾನದಲ್ಲಿವೆ.
ಎರಡನೇ ಬಾರಿಗೆ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದು, ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಮುಂಚೂಣಿಯಲ್ಲಿದೆ.
“ಪ್ರಮುಖ ರಾಜ್ಯಗಳ ಸರಾಸರಿ ನಾವೀನ್ಯ ಶ್ರೇಯಾಂಕ 25.35 ಆಗಿದೆ. 42.5 ಶ್ರೇಯಾಂಕದೊಂದಿಗೆ ಕರ್ನಾಟಕ ತನ್ನ ಪ್ರಬಲ ವೆಂಚರ್ ಕ್ಯಾಪಿಟಲ್ ಡೀಲ್‌ಗಳು, ನೋಂದಾಯಿತ ಜಿಐಗಳು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ರಫ್ತಿನಿಂದ ಮೊದಲ ಸ್ಥಾನ ಪಡೆದಿದೆ. ಹೆಚ್ಚಿನ ವಿದೇಶಿ ನೇರ ಹೂಡಿಕೆಗಳೊಂದಿಗೆ ರಾಜ್ಯದ ಇನ್ನೊವೇಷನ್ ಸಾಮರ್ಥ್ಯ ಹೆಚ್ಚಾಗಿದೆ,” ಎಂದು ಇಂಡಿಯಾ ಇನ್ನೊವೇಷನ್ ಇಂಡೆಕ್ಸ್ 2020ನಲ್ಲಿ ತಿಳಿಸಲಾಗಿದೆ.
ಸೂಚ್ಯಂಕದ ಪ್ರಕಾರ ಈಶಾನ್ಯ ರಾಜ್ಯಗಳು ಸರಾಸರಿ 17.89 ಶ್ರೇಯಾಂಕವನ್ನು ಗಳಿಸಿದ್ದು ಹಿಮಾಚಲ ಪ್ರದೇಶ 25 ಶ್ರೇಯಾಂಕದೊಂದಿಗೆ ಉತ್ತಮ ಸ್ಥಾನ ಗಳಿಸಿದೆ, ನಂತರದ ಸ್ಥಾನದಲ್ಲಿ ಮನಿಪುರ, ಸಿಕ್ಕಿಂ ರಾಜ್ಯಗಳಿವೆ.
ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ನಂತರದ ಸ್ಥಾನದಲ್ಲಿ 38.57 ಶ್ರೇಯಾಂಕದೊಂದಿಗೆ ಚಂದಿಗಡ್, ಕೊನೆಯ ಎರಡು ಸ್ಥಾನಗಳನ್ನು ಲಕ್ಷದ್ವೀಪ ಮತ್ತು ಜಮ್ಮು ಮತ್ತು ಕಾಶ್ಮೀರ ಪಡೆದುಕೊಂಡಿದೆ
ಇಂಡಿಯಾ ಇನ್ನೊವೇಷನ್ ಇಂಡೆಕ್ಸ್ 2020 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಾವೀನ್ಯತೆಗೆ ಬೆಂಬಲ ನೀಡುವ ಸಾಮರ್ಥ್ಯವನ್ನು ಆಧರಿಸಿ ಶ್ರೇಯಾಂಕ ನೀಡುತ್ತದೆ ಮತ್ತು ಅವುಗಳ ಶಕ್ತಿ ಮತ್ತು ಬಲಹೀನತೆಯನ್ನು ಎತ್ತಿಹಿಡಿದು ಅಭಿವೃದ್ಧಿಗೆ ದಾರಿ ಮಾಡಿಕೊಡುವುದು ಸೂಚ್ಯಂಕದ ಗುರಿಯಾಗಿದೆ.