ದೆಹಲಿಯ ಈ ಕುಖ್ಯಾತ ಕಸದಗುಡ್ಡವು ಇದೀಗ ಪರಿಸರ ಸ್ನೇಹಿ ಉದ್ಯಾನವಾಗಲು ಸಜ್ಜಾಗುತ್ತಿದೆ

58 ಮೀಟರ್ ಎತ್ತರವಿದ್ದ ದಿಲ್ಲಿಯ ಓಖ್ಲಾ ಕಸದಗುಡ್ಡವು ಇದೀಗ 38 ಮೀಟರ್‌ಗೆ ಇಳಿದಿದೆ. ಸುಮಾರು 7,000 ಚದರ ಮೀಟರಿನಷ್ಟು ನೆಲವು ಹಸಿರು ಹುಲ್ಲಿನಿಂದ ಕಂಗೊಳಿಸುತ್ತಿದ್ದು, ಇಷ್ಟರಲ್ಲೇ ಪರಿಸರ ಸ್ನೇಹಿ ಉದ್ಯಾನವಾಗಲು ಸಜ್ಜಾಗುತ್ತಿದೆ.

ದೆಹಲಿಯ ಈ ಕುಖ್ಯಾತ ಕಸದಗುಡ್ಡವು ಇದೀಗ ಪರಿಸರ ಸ್ನೇಹಿ ಉದ್ಯಾನವಾಗಲು ಸಜ್ಜಾಗುತ್ತಿದೆ

Monday July 29, 2019,

2 min Read

ನಮ್ಮ ಮನೆಯ ತ್ಯಾಜ್ಯವೆಲ್ಲಾ ಹೊರಗೋದರೆ ಸಾಕು ಎಂದಷ್ಟೇ ನಾವು ಅಂದುಕೊಳ್ಳುತ್ತೇವೆ. ತ್ಯಾಜ್ಯವು ಮನೆಯಿಂದ ಹೊರಗೆ ಹೋದ ಮೇಲೆ ನಿರಾಳರಾಗುತ್ತೇವೆ. ಆದರೆ ಈ ತ್ಯಾಜ್ಯವೆಲ್ಲಾ ಎಲ್ಲಿಗೆ ಹೋಗುತ್ತದೆ, ಏನಾಗುತ್ತದೆ ಎಂದು ಯೋಚಿಸುವುದೇ ಇಲ್ಲ. ಆ ತ್ಯಾಜ್ಯವನ್ನೆಲ್ಲಾ ಹೇಗೋ ಬೇರ್ಪಡಿಸಲಾಗುವುದು ಎಂದುಕೊಂಡು ಸುಮ್ಮನಾಗುತ್ತೇವಷ್ಟೇ.


ನೀವು ದೆಹಲಿಯ ನಿವಾಸಿಯಾಗಿದ್ದಲ್ಲಿ, ಗಾಜೀಪುರ ಮತ್ತು ಓಖ್ಲಾದಲ್ಲಿರುವ ಈ ಕುಖ್ಯಾತ ಕಸದಗುಡ್ಡೆಗಳ ಬಗ್ಗೆ ಕೇಳಿರಬಹುದು. ನಗರದ ತ್ಯಾಜ್ಯವೆಲ್ಲಾ ದಿನೇ ದಿನೇ ಟನ್ನುಗಟ್ಟಲೆ ಅಲ್ಲಿ ಸಂಗ್ರಹವಾಗಿ ಹತ್ತು ವರ್ಷಗಳಲ್ಲಿ ಅವು ಬೃಹತ್ ಕಸದಗುಡ್ಡೆಗಳಾಗಿ ಇನ್ನಿಲ್ಲದ ಖ್ಯಾತಿಯನ್ನು ಪಡೆದುಬಿಟ್ಟಿವೆ.


ಕ

ಓಖ್ಲಾ ಕಸದಗುಡ್ಡೆ (ಚಿತ್ರ: ಎನ್‌ಡಿಟಿವಿ)


ಆದರೆ ಮೆಚ್ಚಬಹುದಾದ ಸಂಗತಿಯೆಂದರೆ, ಇದೀಗ ಓಖ್ಲಾದ ರೂಪುರೇಖೆಗಳು ಬದಲಾಗುತ್ತಿವೆ. 58 ಮೀಟರ್ ಎತ್ತರಕ್ಕೆ ಪರಿಣಮಿಸಿದ ಈ ಗುಡ್ಡವು 38 ಮೀಟರ್‌ಗೆ ಇಳಿಯುವುದಷ್ಟೇ ಅಲ್ಲದೆ, ಅದರ ಸುತ್ತಲೂ ಹಚ್ಚಹಸಿರಿನ ಹುಲ್ಲುಹಾಸುಗಳಿಂದ ಕಂಗೊಳಿಸುತ್ತಿದೆ.


1996 ರಲ್ಲಿ ನಿಯೋಜಿಸಲ್ಪಟ್ಟ ಈ ಜಾಗವನ್ನು ದಕ್ಷಿಣ ದೆಹಲಿ ನಗರಸಭೆಯು (ಎಸ್‌ಡಿಎಂಸಿ) ನಗರದೊಳಗಿನ ತ್ಯಾಜ್ಯವನ್ನೆಲ್ಲಾ ಅಲ್ಲಿ ಚೆಲ್ಲಲು ಬಳಸುತ್ತಿತ್ತು. ಎನ್‌ಡಿಟಿವಿ ವರದಿಯ ಪ್ರಕಾರ, ಪ್ರತಿದಿನ ಸಂಗ್ರವಾಗುತ್ತಿದ್ದ 3,500 ಟನ್‌ಗಳಲ್ಲಿ, ಎಸ್‌ಡಿಎಂಸಿ 1,200 ಟನ್‌ಗಳ ತ್ಯಾಜ್ಯವನ್ನು ಓಖ್ಲಾ ಕಸದಗುಡ್ಡೆಗೆ ಚೆಲ್ಲುತ್ತಿತ್ತು. 2018 ರವರೆಗೂ ಇದೇ ಕಥೆ.


ಆದರೆ, ಇತ್ತೀಚಿಗೆ ದೆಹಲಿಯ ನಗರಸಭೆಯು ಈ ಕಥೆಗೆ ಅಂತ್ಯ ಹಾಡಿದೆ. ಎಸ್‌ಡಿಎಂಸಿ ಯ ಮಾಜಿ ಕಮಿಷನರ್ ಆಗಿದ್ದ ಪುನೀತ್ ಗೋಯೆಲ್ ಅವರ ನಿರ್ಧಾರಾನುಸಾರ ಓಖ್ಲಾ ಕಸದಗುಡ್ಡವನ್ನೇ ಪರಿಸರ ಸ್ನೇಹಿ ಉದ್ಯಾನ (ಇಕೋ ಪಾರ್ಕ್)ವಾಗಿ ಬದಲಿಸಲು ಹೊಸ ಕ್ರಮವನ್ನು ಕೈಗೊಳ್ಳಲಾಗಿದೆ.


ಕ

ಹಸಿರು ಕಂಬಳಿ (ಚಿತ್ರ: ಎನ್‌ಡಿಟಿವಿ)

ನಗರ ಸಭೆಯು, ಐಐಟಿ ದೆಹಲಿಯ ಓರ್ವ ತಜ್ಞರೊಡನೆ ಕೈಜೋಡಿಸಿ, ಹಸಿಹಸಿಯಾದ ಕಸದಗುಡ್ಡೆಯ ಜಾಗವನ್ನು ಹಸಿರು ದಿಬ್ಬವನ್ನಾಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಅಂದಿನಿಂದ, ಶೇಕಡಾ 70 ರಷ್ಟು ಕೆಲಸಗಳು ಪೂರ್ಣಗೊಂಡಿದ್ದು, ಸುಮಾರು 7,000 ಚದರ ಮೀಟರ್ ನೆಲದಲ್ಲಿ ಹುಲ್ಲನ್ನು ಬೆಳಸಲಾಗಿದೆ.


ದಿ ಹಿಂದೂ ಪತ್ರಿಕೆಯೊಡನೆ ಮಾತನಾಡಿದ ಹೆಚ್ಚುವರಿ ಆಯುಕ್ತರಾದ ರಮೇಶ್ ವರ್ಮಾ,


“ಕಸದಗುಡ್ಡೆಯ ಎತ್ತರವನ್ನು ಕೊನೆಗೂ 30 ಮೀಟರ್‌ಗೆ ಇಳಿಸಲಾಗುತ್ತದೆ. ಇದರ ಒಂದು ಬದಿಯು ಈಗಾಗಲೇ ಸಂಪೂರ್ಣವಾಗಿ ಹಸಿರೀಕರಣಗೊಂಡಿದೆ. ಈ ನಮ್ಮ ಯೋಜನೆಯು ಕಳೆದ ಹತ್ತು ತಿಂಗಳುಗಳಲ್ಲಿ ಎರಡು ಪಾಳಿಯಲ್ಲಿ 58 ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ನಡೆಸುತ್ತಿದೆ.” ಎಂದು ತಿಳಿಸಿದ್ದಾರೆ.


ಜಾರಿಗೊಂಡ ಆದೇಶದನುಸಾರ ಸಂಸ್ಕರಣಾ ಘಟಕದಿಂದ ತ್ಯಾಜ್ಯ ನೀರನ್ನು ಬಳಸುವ ಮೂಲಕ ಈ ಹುಲ್ಲಿನ ಹೊದಿಕೆಯನ್ನು ನಿರ್ವಹಿಸಲಾಗುತ್ತಿದೆ.


ಇದರ ಜೊತೆಗೆ, ನಗರಸಭೆಯು ಶ್ರೀ ರಾಮ್ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯನ್ನು ಓಕ್ಲಾ ಸೈಟಿನ ಪರಿಶೀಲನೆ ಮತ್ತು ವಿಶ್ಲೇಷನೆಗಾಗಿ ಸಂಪರ್ಕಿಸಿದೆ. ನೆಲದ ಸ್ಥಿರೀಕರಣಕ್ಕಾಗಿ ಈ ಅಧ್ಯಯನವನ್ನು ಮಾಡಲಾಗಿದ್ದು, ಅದರ ಮೂಲಕ ಮಣ್ಣಿನ ಭೌತಿಕ ಗುಣಲಕ್ಷಣಗಳನ್ನು ಸುಧಾರಿಸಲಾಗುತ್ತದೆ. 2018ರಲ್ಲಿ ಸಂಸ್ಥೆಯ ಅಧ್ಯಯನದ ಪ್ರಕಾರ, ಸಾವಯವ ತ್ಯಾಜ್ಯವೆಲ್ಲಾ ಕೊಳೆತುಹೋಗಿ ಬರೀ ಕೈಗಾರಿಕಾ ತ್ಯಾಜ್ಯ ಉಳಿದಿರುವುದಾಗಿ ತಿಳಿದುಬಂದಿದೆ.