ಹಳ್ಳಿಯಲ್ಲೊಂದು ಸ್ಮಾರ್ಟ್ ಸರ್ಕಾರಿ ಶಾಲೆ
ಈ ಶಾಲೆ ರಾಜ್ಯದ ಮೊದಲ ಸ್ಮಾರ್ಟ್ ಸರ್ಕಾರಿ ಶಾಲೆ. ಟಿವಿ ಮತ್ತು ಯೂಟ್ಯೂಬ್ ಮೂಲಕ ಪಾಠ ಮಾಡಲಾಗುವ ಈ ಶಾಲೆ ಇರುವುದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ.
ಅದೆಷ್ಟೋ ಸರ್ಕಾರಿ ಶಾಲೆಗಳನ್ನು ನೋಡಿದ್ದೇವೆ ಅವುಗಳೆಲ್ಲವೂ ಸರ್ಕಾರದ ಅನುದಾನದಿಂದ ಅಥವಾ ಅನುದಾನ ಇಲ್ಲದೆ ಅರ್ಧಮರ್ಧ ಅಭಿವೃದ್ಧಿಯಾಗಿಯೂ ಇಲ್ಲವೆಂಬಂತೆ ಕಾಣುತ್ತವೆ. ಮುರುಕಲು ಬೆಂಚು, ಬಿರುಕು ಬಿಟ್ಟ ಕಪ್ಪು ಬೋರ್ಡ್, ಕಂಪೌಂಡ್‌ಗಳೇ ಇಲ್ಲದ ಶಾಲೆ, ಶೌಚಾಲಯ ಇಲ್ಲದೆ ಮಕ್ಕಳು ಪರದಾಡುವುದು, ಶಾಲೆಯ ಬಿರುಕು ಬಿಟ್ಟ ಗೋಡೆಗಳಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಗಿಡಮರಗಳು ಬೆಳೆದುಕೊಂಡಿರುವುದನ್ನು ಕಾಣುತ್ತೇವೆ.
ಸರ್ಕಾರಿ ಶಾಲೆ ಎಂದೊಡನೆ ಮಕ್ಕಳನ್ನು ಆ ಶಾಲೆಗೆ ಸೇರಿಸಲು ಪಾಲಕರು ಹಿಂದೇಟು ಹಾಕುವರು. ಏಕೆಂದರೆ ಸರ್ಕಾರಿ ಶಾಲೆಯ ಅವ್ಯವಸ್ಥೆ, ಶಿಕ್ಷಕರ ಅಶಿಸ್ಥಿನ ಪಾಠ, ಶಾಲೆಯ ವಾತಾವರಣವೆಲ್ಲವೂ ಪಾಲಕರನ್ನು ಖಾಸಗಿ ಶಾಲೆಗಳತ್ತ ಮುಖಮಾಡುವಂತೆ ಮಾಡಿವೆ. ಆದರೆ ಇಲ್ಲೊಂದು ಶಾಲೆ ಇವೆಲ್ಲವನ್ನು ಅಲ್ಲಗಳೆದು ಖಾಸಗಿ ಶಾಲೆಗೂ ಸೆಡ್ಡು ಹೊಡೆಯುವಂತೆ ಬೆಳೆದು, ಬೇರೆಲ್ಲಾ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿ ನಿಂತಿದೆ.
ಈ ಸ್ಮಾರ್ಟ್ ಶಾಲೆ ಇರುವುದು ಕುಂದಾನಗರಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ. ಮೊದಮೊದಲು ಬೇರೆ ಎಲ್ಲಾ ಸರ್ಕಾರಿ ಶಾಲೆಗಳಂತೆಯೇ ಈ ಶಾಲೆಯಿತ್ತು. ಆದರೆ ಇಂದು ಈ ಶಾಲೆ ರಾಜ್ಯದ ಮೊದಲ ಸ್ಮಾರ್ಟ್ ಶಾಲೆಯಾಗಿ ಹೊರಹೊಮ್ಮಿದೆ. ಇದು ಸಾಧ್ಯವಾಗಿದ್ದು ವೃತ್ತಿಯಿಂದ ಶಿಕ್ಷಕ ಪ್ರವೃತ್ತಿಯಿಂದ ಸಾಹಿತಿಯಾದ ವೀರಣ್ಣ ಮಡಿವಾಳರ ಅವರಿಂದ.
ಕಳೆದ 3 ವರ್ಷಗಳಿಂದ ವೀರಣ್ಣ ಅವರು ಈ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಶಾಲೆಗೆ ಬಂದ ಹೊಸದರಲ್ಲಿ ಈ ಶಾಲೆಗೆ ಯಾವುದೇ ಮೂಲ ಸೌಕರ್ಯಗಳು ಇರಲಿಲ್ಲವಾದ್ದರಿಂದ ಶಿಕ್ಷಕ ವೀರಣ್ಣ ಮಡಿವಾಳರ ಈ ಶಾಲೆಯನ್ನೇ ತಮ್ನ ಕನಸಿನ ಶಾಲೆಯನ್ನಾಗಿ ಪರಿವರ್ತಿಸಲು ಮುಂದಾದರು.
1 ರಿಂದ 5 ತರಗತಿಗಳು ಇರುವ ಈ ಶಾಲೆಯು ಕೇವಲ 3 ಕೊಠಡಿಗಳನ್ನು ಹೊಂದಿದೆ. 1, 2, ಮತ್ತು 3ನೇ ತರಗತಿಯ ಮಕ್ಕಳಿಗೆ 2 ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದ್ದು 4 ಮತ್ತು 5 ನೇ ತರಗತಿ ಮಕ್ಕಳಿಗೆ ಶಾಲೆಯ ಆವರಣದಲ್ಲಿ ಪಾಠ ಮಾಡಲಾಗುತ್ತಿದೆ. ಈ ಹಿಂದೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ 5 ತರಗತಿಗಳು ಸೇರಿ ಕೇವಲ 75 ಮಕ್ಕಳು ಶಾಲೆಗೆ ಬರುತ್ತಿದ್ದರು.
"ತುಂಬಾ ದಿನಗಳಿಂದ ನನ್ನದೊಂದು ಕನಸಿನ ಶಾಲೆ ರೂಪಿಸುವ ಆಸೆ ಇತ್ತು. ನಾನು ಈ ಶಾಲೆಗೆ ಪ್ರಭಾರ ಮುಖ್ಯೋಪಾಧ್ಯಾಯನಾಗಿ ಬಂದ ನಂತರ ನನ್ನದೇ ಆದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುಲು ಸ್ವತಂತ್ರನಾದ್ದರಿಂದ ಈ ಸರ್ಕಾರಿ ಶಾಲೆಯನ್ನೇ ಕನಸಿನ ಶಾಲೆಯನ್ನಾಗಿ ರೂಪಿಸಲು ತಿರ್ಮಾನಿಸಿದೆ," ಎನ್ನುತ್ತಾರೆ ವೀರಣ್ಣ.
ವೀರಣ್ಣ ಮಡಿವಾಳರ ಈ ಶಾಲೆಗೆ ಸೇರಿಕೊಂಡ ನಂತರ ಶಾಲೆಯಲ್ಲಿರುವ ನೂನ್ಯತೆಗಳನ್ನು ಹೋಗಲಾಡಿಸಲು ತಮ್ಮದೇ ಆದ 70,000 ರೂಪಾಯಿಯ ಹಣದಲ್ಲಿ ಶಾಲೆಗೆ ಕಾಂಪೌಂಡ್ ಕಟ್ಟಿಸಿ, ಪುಟ್ಟ ಗಾರ್ಡನ್ ಒಂದನ್ನು ನಿರ್ಮಿಸಿದರು. ಹಗಲು-ರಾತ್ರಿ ಎನ್ನದೇ ತಮ್ಮ ಸಂಪೂರ್ಣ ಸಮಯವನ್ನು ಶಾಲೆಯ ಅಭಿವೃದ್ಧಿಗಾಗಿಯೇ ಮೀಸಲಿರಿಸಿದ್ದಾರೆ.
ಶಾಲೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಫೇಸ್‌ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಫೇಸ್‌ಬುಕ್ ಗೆಳೆಯರು, ವೀರಣ್ಣ ಅವರ ಕಾರ್ಯಗಳಿಗೆ ಬೆಂಬಲವಾಗಿ ನಿಂತು, ಶಾಲೆಯ ಗೋಡೆಗಳಿಗೆ ಬಣ್ಣಗಳನ್ನು ನೀಡಿದ್ದಾರೆ. ವಿಶೇಷವೆಂದರೆ ಶಿಕ್ಷಕರೇ ಶಾಲೆಯ ಗೋಡೆಗಳ ಮೇಲೆ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿದ್ದಾರೆ.
ಗಡಿನಾಡಿನ ಶಾಲೆಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಗಾಗಿ ಧನಸಹಾಯ ಮಾಡಲಾಗುವ ಯೋಜನೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿದ 1 ಲಕ್ಷ ಹಣದಲ್ಲಿ ಹಾಗೂ ತಮ್ಮ ಸಂಬಳದ ಮತ್ತು ದಾನಿಗಳ ನೀಡಿದ ಹಣದಿಂದ ಪೀಠೋಪಕರಣ ಮತ್ತು ಪಾಠೋಪಕರಣಗಳನ್ನು ತೆಗೆದುಕೊಳ್ಳಲಾಗಿದ್ದು ಇಂದು ಈ ಶಾಲೆಯಲ್ಲಿ 120 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನು ಈ ಶಾಲೆಯಲ್ಲಿ ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಶಾಲೆಯ ಪ್ರತಿ ಗೋಡೆಗಳ ಮೇಲೂ ಪಠ್ಯಕ್ಕೆ ಸಂಬಂಧಿಸಿದ ಕಲಿಕಾ ಚಿತ್ರಗಳನ್ನು ಬಿಡಿಸಲಾಗಿದೆ. ಹಾಗೂ ಪ್ರತಿ ಮಗುವಿಗೆ ಪ್ರತ್ಯೇಕ ಗ್ರೀನ್ ಬೋರ್ಡ್ ನೀಡಲಾಗಿದೆ.
ವೆಬ್ ಪೋರ್ಟಲ್
ಈ ಶಾಲೆಯ ಇನ್ನೊಂದು ವಿಶೇಷವೆಂದರೆ ಇದು ತನ್ನದೇ ಆದ ವೆಬ್ ಪೋರ್ಟಲ್ ಒಂದನ್ನು ಹೊಂದಿದೆ. ಈ ಶಾಲೆಯು ಸ್ವಂತ ವೆಬ್ ಪೋರ್ಟಲ್ ಹೊಂದಿದ ರಾಜ್ಯದ ಮೊದಲ ಕಿರಿಯ ಪ್ರಾಥಮಿಕ ಶಾಲೆ ಇದಾಗಿದೆ.
ಈ ಜಾಲತಾಣದಲ್ಲಿ ಶಾಲೆಯಲ್ಲಿ ಆದಂತಹ http://www.nannashale.in/klpsambedkarnidagundi ಕಾರ್ಯಕ್ರಮದ ಕುರಿತು, ಬದಲಾವಣೆ, ಅಭಿವೃದ್ಧಿಗಳ ಕುರಿತು ಫೋಟೋ ವಿಡಿಯೋಗಳ ಸಮೇತ ಎಲ್ಲ ಮಾಹಿತಿ ವಿವರಗಳನ್ನು ನೀಡಲಾಗುತ್ತದೆ.
ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ಪಾಠ
ಮಕ್ಕಳಿಗೆ ಓದುವ ಬರೆಯುವ ಅಥವಾ ಶಿಕ್ಷಕರು ಬಾಯಿಯಿಂದ ಮಾಡುವ ಪಾಠಕ್ಕಿಂತ ಹೆಚ್ಚಿನ ಪರಿಣಾಮ ಈ ಸ್ಮಾರ್ಟ್ ಕ್ಲಾಸ್ ನಿಂದ ಆಗುತ್ತದೆ. ಹಾಗೂ ಮಕ್ಕಳಲ್ಲಿ ಆಸಕ್ತಿಯು ಹೆಚ್ಚಾಗುತ್ತದೆ. ಮೊದಲೇ ಹೇಳಿದಂತೆ ಈ ಶಾಲೆಯಲ್ಲಿ ಮಕ್ಕಳಿಗೆ ಬರೀ ಪುಸ್ತಕ ಹಿಡಿದು ಪಾಠ ಮಾಡಲಾಗುವುದಿಲ್ಲ. ಇಂಟರ್ನೆಟ್ ಮೂಲಕ ಪಠ್ಯ ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು ಟಿವಿಯಲ್ಲಿ ತೋರಿಸಿ ಪಾಠ ಮಾಡಲಾಗುತ್ತದೆ. ಮಕ್ಕಳು ಇದರಿಂದ ಬೇಸರಿಸಿಕೊಳ್ಳದೆ ಉತ್ಸಾಹದಿಂದ ಪಾಠವನ್ನು ಕಲಿಯುತ್ತಾರೆ. ಅದಕ್ಕಾಗಿಯೇ ಈ ಶಾಲೆಯಲ್ಲಿ 40 ಇಂಚಿನ ಟಿವಿಯನ್ನು ತರಲಾಗಿದೆ.
ಇದಲ್ಲದೇ ಈ ಶಾಲೆಯ ಮಕ್ಕಳಿಗೆ ಇಂಗ್ಲೀಷ್ ಸ್ಪೀಕಿಂಗ್, ಸಾಮಾನ್ಯ ಜ್ಞಾನ, ವ್ಯಕ್ತಿತ್ವ ವಿಕಸನ, ಯೋಗ ಪರಿಸರ ಸಂರಕ್ಷಣೆಯಂತಹ ಎಲ್ಲ ವಿಷಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ.
ಮುಂದಿನ ಯೋಜನೆಗಳ ಕುರಿತು ಯುವರ್ ಸ್ಟೋರಿಯೊಂದಿಗೆ ಮಾತನಾಡಿದ ವೀರಣ್ಣ ಮಾಡಿವಾಳರ,
"ನನ್ನ ಇನ್ನೊಂದು ಆಶಯವೆಂದರೆ ನಮ್ಮ ಶಾಲೆಯಲ್ಲಿ ಇಂಗ್ಲೀಷ್ ಲರ್ನರ್ ಕಾರ್ನರ್ (ಭಾಷಾ ಪ್ರಯೋಗಾಲಯ) ಆರಂಭ ಮಾಡಬೇಕು ಎಂಬುದು. ಆದರೆ ಶಾಲೆಯಲ್ಲಿ ಬರಿ 2 ಕೊಠಡಿಗಳಿದ್ದು, 4 ಮತ್ತು 5 ನೇ ತರಗತಿಗಳಗೆ ಶಾಲೆಯ ಆವರಣದಲ್ಲಿ ಪಾಠ ಮಾಡಲಾಗುತ್ತಿದೆ. ಅದಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರಿ ಶಿಕ್ಷಕನಾಗಿ ನನಗೆ ಹೆಮ್ಮೆ ಇದೆ. ಕೈಲಾದಷ್ಟು ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡುತ್ತೇನೆ," ಎನ್ನುತ್ತಾರೆ ವೀರಣ್ಣ ಮಡಿವಾಳರ.
ಒಬ್ಬರ ಕನಸು ಹಲವಾರು ಜನರ ಕನಸಿಗೆ ನಾಂದಿಯಾಗಬಲ್ಲದು. ಹಾಗೆಯೇ ವೀರಣ್ಣ ಮಡಿವಾಳರ ಅವರ ಕನಸಿನ ಶಾಲೆಯು ಮಕ್ಕಳಿಗೆ ಭವಿಷ್ಯದ ಕನಸಿನ ಹಾದಿಯನ್ನು ತೋರಿಸಿಕೊಟ್ಟಿದೆ. ಇವರ ಈ ಕಾರ್ಯಗಳು ಹೀಗೆಯೇ ಮುಂದುವರೆಯಲಿ, ನಾಡಿನ ಎಲ್ಲ ಶಾಲೆಗೂ ಹೀಗೊಬ್ಬ ಶಿಕ್ಷಕ ಸಿಗಲಿ ಎಂಬುದು ನಮ್ಮ ಆಶಯ.