ಪುಣೆಯಲ್ಲೊಂದು ತ್ಯಾಜ್ಯ ನಿರ್ವಹಣಾ ಪಾರ್ಕ್

2017ರಲ್ಲಿ ಪ್ರಾರಂಭವಾದ ಟಿಇಎಫ್‌ನ ಸುಹಾನ ಫಾರ್ಮ್ಸ್ ಭಾರತದಲ್ಲಿನ ತ್ಯಾಜ್ಯ ನಿರ್ವಹಣಾ ಸಮಸ್ಯೆಯನ್ನು ಮರುಬಳಕೆ, ಅಪ್-ಸೈಕ್ಲಿಂಗ್ ತ್ಯಾಜ್ಯವನ್ನು ಕಡಿಮೆ ಮಾಡುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪರಿಹರಿಸುತ್ತಿದೆ.

ಪುಣೆಯಲ್ಲೊಂದು ತ್ಯಾಜ್ಯ ನಿರ್ವಹಣಾ ಪಾರ್ಕ್

Friday January 17, 2020,

4 min Read

ತ್ವರಿತಗತಿಯಲ್ಲಿ ಸಾಗುತ್ತಿರುವ ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ದೇಶದಾದ್ಯಂತ ಸಾಕಷ್ಟು ದೇಶೀಯ, ರಾಸಾಯಿನಿಕ ಮತ್ತು ಕೈಗಾರಿಕ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿರುವುದುನ್ನು ನಾವು ಕಾಣುತ್ತಿದ್ದೇವೆ. ಈ ತ್ಯಾಜ್ಯವನ್ನು ಸಂಸ್ಕರಿಸದೆ ಇದ್ದರೆ ಹಾನಿಕಾರಕ ಖಾಯಿಲೆಗಳ ಹರಡುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಉದ್ಭವಿಸಬಹುದು.


ಸಿವಿಲ್ ಡಿಜಿಟಲ್‌ನ ಇತ್ತೀಚಿನ ಅಧ್ಯಯನದ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ ಸುಮಾರು 42 ದಶಲಕ್ಷದಷ್ಟು ಟನ್ ತ್ಯಾಜ್ಯವು ಉತ್ಪಾದನೆಯಾಗುತ್ತಿದ್ದು, ಪ್ರತಿ ವರ್ಷ ಶೇ. 1.3 ರಷ್ಟು ತ್ಯಾಜ್ಯ ಹೆಚ್ಚುತ್ತಿದೆ.


ತ್ಯಾಜ್ಯ ಕಡಿಮೆಗೊಳಿಸುವಿಕೆ, ಮರುಬಳಕೆ ಅಥವಾ ಸರಿಯಾದ ತ್ಯಾಜ್ಯ ವಿಲೇವಾರಿ ಮೂಲಕ- ಮೂಲದಲ್ಲಿಯೇ ತ್ಯಾಜ್ಯವನ್ನು ಪ್ರತ್ಯೇಕಿಸುವುದು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಯ ಪ್ರಮುಖ ಅಂಶವಾಗಿದೆ.


ಈ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸಲು, 2016ರಲ್ಲಿ ಆನಂದ್ ಚೋರ್ಡಿಯಾರವರು ಸ್ಥಾಪಿಸಿದ ದಿ ಇಕೋ ಫ್ಯಾಕ್ಟರಿ ಫೌಂಡೇಶನ್(ಟಿಇಎಫ್ಎಫ್) ಎನ್‌ಜಿಓ ದೇಶದ ಮೊಟ್ಟ ಮೊದಲ ತ್ಯಾಜ್ಯ ನಿರ್ವಹಣಾ ಉದ್ಯಾನವನ್ನು ಪುಣೆ ಬಳಿಯ ಯವಾತ್ ಎಂಬಲ್ಲಿ ಸುಹಾನ ಫಾರ್ಮ್ಸ್ ಎಂಬ ಹೆಸರಿನಿಂದ ರಚಿಸಲಾಗಿದೆ.


ಪರಿಸರ ಕಾರ್ಖಾನೆ ಪ್ರತಿಷ್ಠಾನದ ಸ್ಥಾಪಕ ಆನಂದ್ ಚೋರ್ಡಿಯಾ


ಇದು ಸ್ವಚ್ಛ, ಹಸಿರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಸರಿಯಾದ ತ್ಯಾಜ್ಯ ವಿಲೇವಾರಿಯ ಮಹತ್ವದ ಕುರಿತಾಗಿ ನಾಗರಿಕರಲ್ಲಿ ಅರಿವು ಮೂಡಿಸುವ ಆಶಯವನ್ನು ಹೊಂದಿದೆ.


ಪರಿಣಾಮಕಾರಿಯಾದ ತ್ಯಾಜ್ಯ ನಿರ್ವಹಣೆಯನ್ನು ನಿರ್ವಹಿಸಲು ಇಂದು ರಾಷ್ಟ್ರಾದಾದ್ಯಂತ ಎಸ್‌ಎನ್‌ಡಿಟಿ ಕಾಲೇಜ್ ಆಫ್ ಹೋಮ್ ಸೈನ್ಸ್, ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್, ಇಸ್ಕಾನ್ ಟೆಂಪಲ್, ಕತ್ರಜ್, ಪುಣೆ, ಮತ್ತು ಐಐಟಿ ತಿರುಪತಿ ಸೇರಿದಂತೆ ಹಲವಾರು ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಟಿಇಎಫ್‌ನೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ಹಸಿರು ಉದ್ಯಾನ

ಸುಹಾನ ಫಾರ್ಮ್ಸ್ ಮುಖ್ಯವಾಗಿ ತ್ಯಾಜ್ಯದ ಬಳಕೆ ಕಡಿಮೆ ಮಾಡುವುದು, ಮರುಬಳಕೆ‌ ಮಾಡುವುದು ಮತ್ತು ಅಪ್-ಸೈಕ್ಲಿಂಗ್ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದರತ್ತ ಹೆಚ್ಚು ಗಮನವನ್ನು ಕೇಂದ್ರಿಕರಿಸಿದೆ.


ಈ ತಂಡವು ಉದ್ಯಾನವನವನ್ನು ಸ್ಥಾಪಿಸುವ ಮೊದಲು ಹಲವಾರು ವಿಜ್ಞಾನಿಗಳನ್ನು ಭೇಟಿಯಾಗಿ ಸಾಕಷ್ಟು ಸಂಶೋಧನೆ ನಡೆಸಿದೆ. ಗ್ರಾಮೀಣ ಮತ್ತು ನಗರ ಕ್ಷೇತ್ರಗಳಲ್ಲಿ ಪರಿಸರಸ್ನೇಹಿ ಮತ್ತು ಸುಸ್ಥಿರ ಜೀವನಶೈಲಿಯ ಮಾಹಿತಿಯನ್ನು ಒದಗಿಸಲು ಈ ಉದ್ಯಾನವನ್ನು ನಿರ್ಮಿಸಲಾಗಿದೆ.


ತ್ಯಾಜ್ಯ ನಿರ್ವಹಣಾ ಉದ್ಯಾನವನ


ಇದು ವಿವಿಧ ಎನ್‌ಜಿಓಗಳು ಕಂಡು ಹಿಡಿದ ಮತ್ತು ಬಳಸಿದ ವಿಭಿನ್ನ ವಿಧಾನಗಳನ್ನು ಒಟ್ಟುಗೂಡಿಸಿ, ಅವುಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುತ್ತದೆ. ಭೇಟಿ ನೀಡುವವರು ಪರಿಕಲ್ಪನೆಯನ್ನು ಉತ್ತಮವಾಗಿ ಗ್ರಹಿಸಲೆಂದು, ಮಾಹಿತಿಯುಕ್ತ ವಿಡಿಯೋಗಳು ಮತ್ತು ಒಂದಷ್ಟು ಚಟುವಟಿಕೆಗಳನ್ನು ನೀಡಲಾಗುತ್ತದೆ.


"ತ್ಯಾಜ್ಯವು ಕೂಡ ಒಂದು ಸಂಪತ್ತು ಎಂದು ನಾನು ಯಾವಾಗಲೂ ನಂಬಿದ್ದೇನೆ ಮತ್ತು ಅದನ್ನು ನಿರ್ವಹಿಸಲು ನಾವು ಏನನ್ನಾದರೂ ಮಾಡಬೇಕಾಗಿದೆ. ಅದರಿಂದ ಉತ್ತಮವಾದುದ್ದನ್ನು ರಚಿಸಲು ನಾವು ಅದನ್ನು ಬಳಸಿಕೊಳ್ಳಬೇಕು. ಇದರಿಂದ ತ್ಯಾಜ್ಯವನ್ನು ಎಸೆಯುವುದು ಅಥವಾ ಸುಡುವುದನ್ನು ತಡೆಗಟ್ಟಬಹುದಾಗಿದೆ‌. ಇದಕ್ಕಾಗಿ ನಾನು ಒಂದು ಯೋಜನೆಯನ್ನು ತರಲು ನಿರ್ಧರಿಸಿದೆ ಮತ್ತು ನಾವು ಎಷ್ಟು ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದೇವೆ ಎಂದು ತಿಳಿಯಲು ಸರಿಯಾದ ಲೆಕ್ಕಪರಿಶೋಧನೆಯ ಮೂಲಕ ಇ-ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಜೈವಿಕ ವಿಘಟನೀಯ ತ್ಯಾಜ್ಯ ಇದ್ದರೆ ನಾವು ಅದನ್ನು ಹೇಗೆ ಉತ್ತಮವಾಗಿ ಬೇರ್ಪಡಿಸಲು ಸಾಧ್ಯ, ಮತ್ತು ನಾವು ಎಷ್ಟು ಉತ್ಪಾದಿಸುತ್ತೇವೆ, ಏನನ್ನು ಉತ್ಪಾದಿಸುತ್ತೇವೆ, ಉತ್ಪಾದಿಸುವಾಗ ನಾವು ಎಷ್ಟು ಉತ್ತಮವಾಗಿ ಪರಿಹಾರಗಳನ್ನು ನೀಡಬಲ್ಲೆವು ಎಂದು ನೋಡಲು ನಾನು ಬಯಸುತ್ತೇನೆ" ಎಂದು ಆನಂದ್ ಹೇಳುತ್ತಾರೆ.


ಈ ಉದ್ಯಾನವನದ ಪ್ರತಿ ಭೇಟಿಗೆ 100 ರಿಂದ 1,200 ರೂ.ಗಳ ಪರಿಮಿತಿಯವರೆಗಿನ ಪ್ರವೇಶ ಶುಲ್ಕವನ್ನು ವಿಧಿಸುತ್ತದೆ ಮತ್ತು ಅದನ್ನು ಭರಿಸಲು ಸಾಧ್ಯವಿಲ್ಲದವರಿಗೆ ಪ್ರವೇಶ ಉಚಿತವಾಗಿರುತ್ತದೆ. ಉದ್ಯಾನವನವು ನಗರ ಕೃಷಿ ಕೌಶಲ್ಯ ಅಭಿವೃದ್ಧಿ ಕೇಂದ್ರ, ಸುಸ್ಥಿರ ಕೃಷಿ ಕೌಶಲ್ಯ ಅಭಿವೃದ್ಧಿ ಮತ್ತು ಗ್ರಾಮೀಣ ಉದ್ಯಮಶೀಲತೆ ಕೇಂದ್ರದಂತಹ ಹಲವಾರು ಸುಸ್ಥಿರ ಉಪಕ್ರಮಗಳನ್ನು ಕೈಗೊಂಡಿದೆ.


ಆರಂಭಿಕ ಸವಾಲುಗಳು

"ನಮ್ಮ ಸ್ವಂತ ಜನರನ್ನು- ಕಾರ್ಖಾನೆಯಲ್ಲಿ ಕೆಲಸ ಮಾಡುವ ಜನರು ಮತ್ತು ರೈತರು- ತ್ಯಾಜ್ಯವನ್ನು ನಿರ್ವಹಿಸುವ ಮಹತ್ವವನ್ನು ಅರಿತುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಪ್ಲಾಸ್ಟಿಕ್‌ನೊಂದಿಗೆ ವ್ಯವಹರಿಸುವಾಗ ತಂತ್ರಜ್ಞಾನವೂ ಒಂದು ಸಮಸ್ಯೆಯಾಗಿದೆ," ಎಂದು ಅವರು ಹೇಳುತ್ತಾರೆ.


ಸವಾಲುಗಳನ್ನು ನಿವಾರಿಸುವ ಕುರಿತು ಅವರು ಮಾತನಾಡುತ್ತಾ,


"ಇನ್ನೂ ಸವಾಲುಗಳು ಸಾಕಷ್ಟು ಉಳಿದಿವೆ, ಆದರೆ ಅದು ಅದರ ಸೌಂದರ್ಯವಾಗಿದೆ. ನಾವು ಅದನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ಪರಿಹಾರಗಳನ್ನು ಹುಡುಕುತ್ತೇವೆ ಮತ್ತು ಮುಂದುವರೆಯುತ್ತೇವೆ," ಎನ್ನುತ್ತಾರೆ.


ಸ್ಥಾಪಿಸಿದ ಕಥೆ

ದಿ ಇಕೋ ಫ್ಯಾಕ್ಟರಿ ಫೌಂಡೇಶನ್ ಹೊರತಾಗಿ, ಆನಂದ್‌ರವರು 2017ರಲ್ಲಿ ಪುಣೆಯಲ್ಲಿ ಜನರಿಗೆ ತರಬೇತಿ ನೀಡಲು ಮತ್ತು ಪರಿಣಾಮಕಾರಿಯಾದ ತ್ಯಾಜ್ಯ ನಿರ್ವಹಣಾ ಅಭ್ಯಾಸಗಳ ಬಗ್ಗೆ ಅರಿವು ಮೂಡಿಸಲು ಭಾರತದ ಮೊದಲ ತ್ಯಾಜ್ಯ ನಿರ್ವಹಣಾ ಉದ್ಯಾನ- ಕಲಿಕೆ ಮತ್ತು ಜಾಗೃತಿ ಕೇಂದ್ರವನ್ನು ಸ್ಥಾಪಿಸಿದರು.


ಅವರು ಜೊಹರತ್, ಲಕ್ನೋ ಮತ್ತು ಪಾಲಂಪುರಲ್ಲಿರುವ ಸಿಎಸ್ಐಆರ್ ಸಂಸ್ಥೆಗಳ ಸಂಶೋಧನಾ ಮಂಡಳಿಯ ಸದಸ್ಯರಾಗಿದ್ದಾರೆ‌ ಮತ್ತು ಇವರನ್ನು ಐಐಟಿ ಬಾಂಬೆ, ಐಐಟಿ ದೆಹಲಿಯು ಪ್ರೇರಕ ಭಾಷಣಕಾರರಾಗಿ ಮತ್ತು ಕೈಗಾರಿಕಾ ಸಚಿವಾಲಯವು ಗೌರವಾನ್ವಿತ ಅತಿಥಿಯಾಗಿ ಆಹ್ವಾನಿಸಿದೆ.


ಆನಂದ್ ಫರ್ಗುಸನ್ ಕಾಲೇಜಿನಿಂದ ಸಸ್ಯಶಾಸ್ತ್ರ ವಿಷಯದಲ್ಲಿ‌ ಪದವಿ ಪಡೆದಿದ್ದು, ಆಕ್ಲೆಂಡ್ ವಿಶ್ವವಿದ್ಯಾಲಯದಿಂದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.


ಮೊದಲಿಗೆ, 2003ರಲ್ಲಿ ಅವರು ಕೃಷಿ ಆಧಾರಿತ ಉದ್ಯಮವಾದ ಸುಹಾನ ಸ್ಪೈಸ್‌ನಲ್ಲಿ ಕೆಲಸ ಮಾಡಿದರು. ಇದು ಅವರ ಕುಟುಂಬದ ಉದ್ಯಮವಾಗಿತ್ತು. ‘ಇದು ಆಹಾರ ಸಂಸ್ಕರಣೆ, ಕೃಷಿ ಮತ್ತು ರೈತರ ಒಳಗೊಳ್ಳುವಿಕೆಯ ಬಗ್ಗೆ ಬಹಳಷ್ಟು ಕಲಿಯಲು ಸಹಕಾರಿಯಾಯಿತು' ಎಂದು ಅವರು ಹೇಳುತ್ತಾರೆ.


"ನಾನು ಸುಹಾನದಲ್ಲಿ ಕೆಲಸ ಮಾಡುತ್ತಿದ್ದೆ, ಆದರೆ ನನ್ನ ಮನಸ್ಸಿನಲ್ಲಿ, ನಾವು ಉತ್ಪಾದಿಸುವ ತ್ಯಾಜ್ಯದಿಂದ ಏನು ಮಾಡಬೇಕು, ಕೃಷಿ ಕ್ಷೇತ್ರದಲ್ಲಿ ನಿಜವಾಗಿಯೂ ಹೇಗೆ ಕೆಲಸ ಮಾಡುವುದು, ಇದರಲ್ಲಿ ಸುಸ್ಥಿರತೆಯ ಅಭ್ಯಾಸವನ್ನಳವಡಿಸುವದೇಗೆ ಮತ್ತು ಈ ವಲಯದಲ್ಲಿ ಬದಲಾವಣೆ ತರುವುದು ಹೇಗೆ ಎಂದು ಯಾವಾಗಲೂ ಯೋಚಿಸುತ್ತಿದ್ದೆ," ಎಂದು ಅವರು ಹೇಳುತ್ತಾರೆ.


2014ರಲ್ಲಿ ಅವರು, ಸುಸ್ಥಿರತೆ, ಕೃಷಿ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಹೆಚ್ಚು ಕಠಿಣವಾಗಿ ಕೈಗೊಳ್ಳಲು ನಿರ್ಧರಿಸಿದರು. ಇದನ್ನು ಸಾಕಣೆ ಕೇಂದ್ರಗಳಲ್ಲಿ, ಕೈಗಾರಿಕೆಗಳಲ್ಲಿ ಮತ್ತು ತಮ್ಮ ಮನೆಯಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದರು.


"ಎಕೋ-ಪಾಕ್ಟರಿ ಪ್ರತಿಷ್ಠಾನವನ್ನು ಸ್ಥಾಪಿಸುವ ಮೊದಲು, ನಾನು ಕೆಲವು ಸಮಯ ಕೃಷಿ ಮತ್ತು ಸುಸ್ಥಿರತೆಗಾಗಿ ಕೆಲಸ ಮಾಡುತ್ತಿದ್ದೆ. ಶಿಕ್ಷಣ ಮುಗಿಸಿದ ನಂತರ, ಜಮೀನಿನಲ್ಲಿ ಕೆಲಸ ಮಾಡಿದ್ದೇನೆ, ಇದು ಸುಸ್ಥಿರ ವಿನ್ಯಾಸದ‌ ಆಧಾರದಲ್ಲಿ ಕೆಲಸ ಮಾಡುವ ಪರ್ಮಾ ಸಂಸ್ಕೃತಿಯ (ಶಾಶ್ವತ ಕೃಷಿ) ಪರಿಕಲ್ಪನೆಯನ್ನು ಆಧರಿಸಿತ್ತು. ಅದರ ಹಿಂದಿನ ಸ್ವರೂಪವನ್ನು ಗಮನಿಸಿದಾಗ ಒಬ್ಬರು ಹೇಗೆ ಪರಿಸರವನ್ನು ಗೌರವಿಸುತ್ತ ಫಾರ್ಮ್‌ಗಳನ್ನು ವಿನ್ಯಾಸಗೊಳಿಸಬಹುದು ಮತ್ತು ನಿರ್ಮಿಸಬಹುದು ಎಂಬುದನ್ನು ತಿಳಿಯಬಹುದಾಗಿತ್ತು. ಭಾರತಕ್ಕೆ ಇದು ದೊಡ್ಡ ಮಟ್ಟದಲ್ಲಿ ಅಗತ್ಯವಿದೆ ಎಂದು ನಾನು ಅರಿತುಕೊಂಡೆ," ಎಂದು ಆನಂದ್ ಹೇಳುತ್ತಾರೆ.


ಉದ್ಯಾನದಲ್ಲಿರುವ ತ್ಯಾಜ್ಯ ವಿಭಜನಾ ಘಟಕ




ಸುಸ್ಥಿರ ಭವಿಷ್ಯದ ಹಾದಿ

ಕಳೆದ ಎರಡೂವರೆ ವರ್ಷಗಳಲ್ಲಿ, ಟಿಇಎಫ್‌ನ ಕಲಿಕೆ ಮತ್ತು ಜಾಗೃತಿ ಕೇಂದ್ರಕ್ಕೆ 10,000ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು ಇದರಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಕಾರ್ಪೋರೆಟ್‌ನವರು, ಸರ್ಕಾರಿ ಅಧಿಕಾರಿಗಳು ಮತ್ತು ಸಾಮಾನ್ಯ ಜನರು ಸೇರಿದ್ದಾರೆ. ಆನಂದ್‌ರವರ ಪ್ರಕಾರ, ಆನ್-ಸೈಟ್ ಭೇಟಿಗಳು, ರಾಷ್ಟ್ರ ಮಟ್ಟದ ಅಭಿಯಾನಗಳಲ್ಲಿ ಭಾಗವಹಿಸುವುದು, ಕ್ಯಾಂಪಸ್ ತರಬೇತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಎನ್‌ಜಿಓ ಇರುವಿಕೆಯು ತ್ಯಾಜ್ಯ ನಿರ್ವಹಣೆ ಬಗ್ಗೆ ಅನೇಕರಿಗೆ ಜ್ಞಾನವನ್ನು ನೀಡಿದೆ ಎನ್ನುತ್ತಾರೆ.


ಸುಹಾನದಲ್ಲಿ, ಟಿಇಎಫ್ ಸಹಾಯದಿಂದ, ಎಲ್‌ಪಿಜಿ ಬಳಸುವ ಕ್ಯಾಂಟೀನ್‌ಗಳಲ್ಲಿ ಅದರ ಬಳಕೆಯನ್ನು 50% ಕಡಿಮೆ ಮಾಡಿದೆ ಜೈವಿಕ ಅನಿಲ. ಮೂಲ ವಲಯದ ನೀರಿನ ಸಂಸ್ಕರಣೆಯು ದಿನಕ್ಕೆ 30,000 ಲೀಟರ್‌ಗಳಷ್ಟು ನೀರನ್ನು ಉಳಿಸಿದ್ದು ಮತ್ತು ತ್ಯಾಜ್ಯವನ್ನು ಮರುಬಳಕೆ ಮಾಡಿ ಕೃಷಿ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ.


ಇದಲ್ಲದೆ, ಅವರು ಕಳೆದ ಐದು ವರ್ಷಗಳಲ್ಲಿ 20,000 ಮೆಟ್ರಿಕ್ ಟನ್ ಜೈವಿಕ ವಿಘಟನೀಯ ತ್ಯಾಜ್ಯವನ್ನು ಮಿಶ್ರಗೊಬ್ಬರ ಮತ್ತು ಹಸಿ ಗೊಬ್ಬರದ ಮೂಲಕ ಬಳಕೆ ಮಾಡಿದ್ದು, ಇದು ಬೆಳೆ ಉತ್ಪನ್ನಗಳ ಪೌಷ್ಠಿಕಾಂಶದ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಇದು ಸುಹಾನಕ್ಕೆ ಅನೇಕ ಪ್ರಶಸ್ತಿಗಳು ಸಿಗಲು ಕಾರಣವಾಗಿದೆ.


ಉದ್ಯಾನದಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಕಲಿಯುತ್ತಿರುವ ವಿದ್ಯಾರ್ಥಿಗಳು


ಭವಿಷ್ಯದ ಯೋಜನೆಗಳು

ಮುಂದಿನ ಯೋಜನೆಗಳ ಕುರಿತಾಗಿ ಮಾತನಾಡಿದ ಆನಂದ್,


"ನಾವು ತ್ಯಾಜ್ಯ ನಿರ್ವಹಣೆ, ಸುಸ್ಥಿರ ಕೃಷಿ ಮತ್ತು ಗ್ರಾಮೀಣ ಉದ್ಯಮಶೀಲತೆಗಳ ಬಗ್ಗೆ ಮಾಹಿತಿ ಶಿಬಿರಗಳನ್ನು ಪ್ರಾರಂಭಿಸಲು‌ ಯೋಜಿಸುತ್ತಿದ್ದು, ಇದರಿಂದ ದೊಡ್ಡ ಪರಿಣಾಮವನ್ನು ಉಂಟು ಮಾಡಲಿದ್ದೇವೆ."


ಈ ಸಂಸ್ಥೆಯು ಭಾರತದ ಮೊದಲ ತ್ಯಾಜ್ಯ ನಿರ್ವಹಣಾ ಕೈಪಿಡಿಯಾದ "ಗ್ರೀನ್ ಪೇಜಸ್"ಅನ್ನು ಪ್ರಾರಂಭಿಸುವ ಆಲೋಚನೆಯನ್ನು ಹೊಂದಿದೆ. ಇದರಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಉಲ್ಲೇಖಿಸುವ ಸಂಪನ್ಮೂಲ ಪುಸ್ತಕವಾಗಿರುತ್ತದೆ.