ಶಾಲೆಯನ್ನು ವರ್ಣಮಯಗೊಳಿಸಿ ಸರ್ಕಾರಿ ಶಾಲೆಗೆ ಮಕ್ಕಳು ಮರಳುವಂತೆ ಮಾಡಿದ ಶಿಕ್ಷಕ
ಸರಕಾರ ಮಾಡದ ಕೆಲಸವನ್ನು ಸಮುದಾಯದ ಸಹಕಾರದೊಂದಿಗೆ ಮಾಡಬಹುದು. ಒಂದು ಬದಲಾವಣೆಯ ಹೆಜ್ಜೆ ಹಲವು ಹೊಸ ದಾರಿಗಳನ್ನು ಸೃಷ್ಟಿಸುತ್ತದೆ. ಅದೇ ರೀತಿಯಾಗಿ ಇಲ್ಲೊಬ್ಬ ಶಿಕ್ಷಕರು ತಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದಾರೆ.
ಮೂಲ ಸೌಕರ್ಯಗಳಿಲ್ಲದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಲಕ್ಷ್ಮೀ ಕ್ಯಾಂಪ್, ಕುಂಟೋಜಿ ಶಾಲೆಯು ಇದೀಗ, ದಾನಿಗಳ ಕೃಪೆಯಿಂದ ಸುಣ್ಣ-ಬಣ್ಣದಿಂದ ಕೂಡಿ ಹೊಸದಾಗಿ ಕಂಗೊಳಿಸುತ್ತಿದೆ. ಇದಕ್ಕೆ ಮುಖ್ಯ ರೂವಾರಿ ಈ ಶಾಲೆಯ ಶಿಕ್ಷಕ ಸೋಮು ಕುದರಿಹಾಳ ಎಂದರೆ ತಪ್ಪಾಗುವುದಿಲ್ಲ.
ಈ ಶಾಲೆಯು ಮೊದಲು ಅಷ್ಟೊಂದು ಆಕರ್ಷಕವಾಗಿರಲಿಲ್ಲ ಅದಕ್ಕಾಗಿ ಇಲ್ಲಿ ಕಲಿಯುತ್ತಿರುವ ಮಕ್ಕಳನ್ನು ಅವರ ಪಾಲಕರು ಬೇರೊಂದು ಖಾಸಗಿ ಶಾಲೆಗೆ ಸೇರಿಸುವುದರ ಕುರಿತು ಹೇಳಿದಾಗ, ಶಿಕ್ಷಕರಾದ ಸೋಮು ಕುದರಿಹಾಳರವರು ಪಾಲಕರ ಮನವೊಲಿಸಿ ಶಾಲೆಯನ್ನು ಮಾದರಿ ಶಾಲೆಯಾಗಿ ಮಾಡಿ ಆ ಮಕ್ಕಳನ್ನು ಅದೇ ಶಾಲೆಯಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರಿ ಶಾಲೆಗಳ ಬಗ್ಗೆ ಮೂಗು ಮುರಿಯುತ್ತಿದ್ದವರು ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದಾರೆ. ಸರ್ಕಾರಿ ಶಾಲೆ ನಮ್ಮ ಹೆಮ್ಮೆ ಎಂಬ ಅಭಿಯಾನವೇ ಮುಂಚೂಣಿಯಲ್ಲಿದೆ. ವಿಶೇಷ ಸಾಧನೆಗಳ ಮೂಲಕ ಶಿಕ್ಷಕರು ಮತ್ತು ಶಾಲೆಗಳ ಪ್ರಭಾವದಿಂದ ಬಹಳಷ್ಟು ಕಡೆಗಳಲ್ಲಿ ಕ್ರಿಯಾತ್ಮಕ ಕೆಲಸಗಳಾಗುತ್ತಿವೆ. ಇದೊಂದು ಆಶಾದಾಯಕ ಬೆಳವಣಿಗೆ. ಈ ಶೈಕ್ಷಣಿಕ ವರ್ಷದಿಂದ ಈ ಶಾಲೆಯೂ ಅನೇಕ ಪ್ರಯೋಗಗಳಿಗೆ ತೆರೆದುಕೊಂಡಿದ್ದು, ಶಾಲೆ ಬಿಟ್ಟ ಮಕ್ಕಳೆಲ್ಲ ಮರಳಿ ಶಾಲೆಗೆ ಬರುತ್ತಿದ್ದಾರೆ.
ಈ ಶಾಲೆಯೂ ಗಡಿಭಾಗದಲ್ಲಿದ್ದು, ಇಲ್ಲಿ ಒಂದರಿಂದ ಐದನೇ ತರಗತಿಯ ಪ್ರಾಥಮಿಕ ಶಾಲೆಯಾಗಿದೆ. ಇಲ್ಲಿ ಒಟ್ಟಾರೆ 19 ಮಕ್ಕಳು ಅಭ್ಯಸಿಸುತ್ತಿದ್ದು, ಈ ಎಲ್ಲ ಮಕ್ಕಳಿಗೆ ಹಾಗೂ ಎಲ್ಲ ತರಗತಿಗೂ ಸೋಮು ಕುದರಿಹಾಳ ಅವರೇ ಏಕೈಕ ಶಿಕ್ಷಕರಾಗಿದ್ದಾರೆ. ಸಕಲ ಕೆಲಸವನ್ನು ಇವರೊಬ್ಬರೆ ನೋಡಿಕೊಳ್ಳುತ್ತಿದ್ದಾರೆ.
ಯುವರ್ ಸ್ಟೋರಿ ಕನ್ನಡದೊಂದಿಗೆ ಮಾತನಾಡಿದ ಶಾಲೆಯ ಶಿಕ್ಷಕರಾದ ಸೋಮು ಕುದರಿಹಾಳ,
"ರಜೆಯ ಸಮಯದಲ್ಲಿಯೂ ಶಾಲೆಯ ಮಕ್ಕಳಿಗೆ ಬಿಸಿಯೂಟವನ್ನು ಒದಗಿಸಬೇಕಾಗಿದ್ದರಿಂದ ರಜೆಯಲ್ಲಿಯೂ ಶಾಲೆಗೆ ಬರುತ್ತಿದ್ದೆ, ಅದೇ ಸಮಯದಲ್ಲಿ ನನ್ನ ವಿದ್ಯಾರ್ಥಿನಿಯಾದ ಅನಿತಾ ಈ ವರ್ಷದ ಆರಂಭದಲ್ಲಿ ಬೇರೆ ಶಾಲೆಗೆ ಕಳುಹಿಸಬೇಕೆಂದು ನನ್ನ ತಂದೆ ಹೇಳುತ್ತಿದ್ದಾರೆ ಎಂದಳು. ಇದು ನನ್ನನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿತು. ಇರುವ ಮಕ್ಕಳನ್ನಾದರೂ ಶಾಲೆಯಲ್ಲಿ ಉಳಿಸಿಕೊಳ್ಳಬೇಕು, ಅದಕ್ಕಾಗಿ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿ, ಶಾಲೆಯನ್ನು ಮತ್ತಷ್ಟು ಸುಧಾರಿಸಬೇಕೆಂದು ಯೋಚಿಸಿದೆ. ಇದಕ್ಕೆ ವೀರಣ್ಣ ಮಡಿವಾಳರು ತಮ್ಮ ಶಾಲೆಯನ್ನು ಮಾದರಿ ಶಾಲೆಯಾರಿ ಮಾಡಿದ್ದು ಮತ್ತಷ್ಟು ಸ್ಪೂರ್ತಿ ನೀಡಿತು. ನಂತರ ಅನೇಕ ದಾನಿಗಳ ಕೃಪೆಯಿಂದ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಫಲನಾದೆ" ಎನ್ನುತ್ತಾರೆ.
ಶನಿವಾರ, ಭಾನುವಾರದ ಸಮಯದಲ್ಲಿ ಶಾಲೆಯ ಅಂಗಳದಲ್ಲಿ ಹಳೆಯ ವಿದ್ಯಾರ್ಥಿಗಳು ಕ್ರಿಕೆಟ್ ಆಟ ಆಡಲು ಬರುತ್ತಿದ್ದರು, ಆ ಸಂದರ್ಭದಲ್ಲಿ ಇವರು ಅವರೊಂದಿಗೆ ಶಾಲೆಗೆ ಬಣ್ಣ ಹಚ್ಚುವುದರ ಕುರಿತಾಗಿ ಚರ್ಚಿಸಿದಾಗ, ಅವರು ಸಂತಸದಿಂದಲೇ ಒಪ್ಪಿಗೆ ನೀಡಿ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಸೋಮುರವರು ದಾನಿಗಳನ್ನು ಸಂಪರ್ಕಿಸಿದಾಗ ಅವರು ಕೂಡ ಅಗತ್ಯ ಸಾಮಗ್ರಿಗಳಾದ ತರೇವಹಾರಿ ಬಣ್ಣಗಳು, ಮುಂತಾದ ಸಾಮಗ್ರಿಗಳನ್ನು ಒದಗಿಸಿ ಕೆಲಸ ಮತ್ತಷ್ಟು ಸುಲಭವಾಗುವಂತೆ ಮಾಡಿದ್ದಾರೆ.
ಶಾಲೆಯಲ್ಲರಳಿದ ಕಲಾಕುಸುಮ
ಜೂನ್ ಹಾಗೂ ಜುಲೈ ತಿಂಗಳುಗಳ ಪ್ರತಿ ರವಿವಾರಗಳು ಈ ಕಾರ್ಯಕ್ಕೆಂದೆ ಮೀಸಲಾಗಿದ್ದವು. ಇವರ ಈ ಕಾರ್ಯಕ್ಕೆ ಅನೇಕರು ಸಾಥ್ ನೀಡಿದ್ದು, ಬೇರೆ ಬೇರೆ ಶಾಲೆಯ ಶಿಕ್ಷಕರು ಬಂದು, ಶಾಲೆಯ ಗೋಡೆಗಳ ಮೇಲೆಲ್ಲಾ ಬಣ್ಣದ ಲೋಕವನ್ನೇ ಹರವಿಟ್ಟಿದ್ದಾರೆ. ಅಂಜೂರಿ ಕ್ಯಾಂಪ್ ಶಾಲೆಯ ತಿಪ್ಪೇರುದ್ರಾಚಾರ್, ಕೊಪ್ಪಳದ ಚಿತ್ರ ಕಲಾವಿದ ಕೃಷ್ಣ ಚಿತ್ರಗಾರ, ಮುದಗಲ್ ಕನ್ನಾಳ ಶಾಲೆಯ ಸೂಗುರೇಶ್ ಹಿರೇಮಠ, ಹಣವಾಳ ಕ್ಯಾಂಪ್ ಶಾಲೆಯ ಯೋಗಿಶ್ ಹಲವಾರು ಜನರು ಬಿಡುವು ಮಾಡಿಕೊಂಡು ಬಂದು ಶಾಲೆಯಲ್ಲಿ ಅನೇಕ ಬಗೆಯ ಚಿತ್ರಗಳನ್ನು ಬಿಡಿಸಿದ್ದಾರೆ. ಸೋಮುರವರ ಪತ್ನಿ ರೇಖಾ ಅವರು ಕೂಡ ಇದರಲ್ಲಿ ಪಾಲ್ಗೊಂಡಿದ್ದಾರೆ.
ಶಾಲಾ ಕಾಂಪೌಂಡ್ ಮೇಲೆ ವಿವಿಧ ಬಗೆಯ ಕಾರ್ಟೂನ್‌ಗಳು, ಹಸೆ ಚಿತ್ತಾರ, ಯಕ್ಷಗಾನ, ಕಥಾಚಿತ್ರಗಳು, ಅಕ್ಷರಮಾಲೆ ಹೀಗೆ ವಿವಿಧ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಶಾಲೆಯಲ್ಲಿಯೆ ಬೆಳೆಯಲಾಗುತ್ತಿದೆ ತರಕಾರಿ
ಶಾಲಾ ಆವರಣದಲ್ಲಿಯೆ ಪುಟ್ಟ ಉದ್ಯಾನವನ್ನು ನಿರ್ಮಿಸಿದ್ದು, ಆವರಣದ ಮಧ್ಯೆ ಒಂದು ಕಾರಂಜಿಯ ಫಾಂಟ್ ಅನ್ನು ನಿರ್ಮಿಸಲಾಗಿದೆ.
ಮಧ್ಯಾಹ್ನದ ಬಿಸಿಯೂಟಕ್ಕಾಗಿ ಶಾಲೆಯಲ್ಲಿಯೆ ಸಾವಯವ ಕೃಷಿಯ ಮೂಲಕ ಎಲ್ಲ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಯಲಾಗುತ್ತಿದ್ದು ಜೂನ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಶಾಲೆಯ ಹಿಂದೆ ಇರುವ ಜಾಗದಲ್ಲಿ ಮೆಂತ್ಯೆ, ಮೂಲಂಗಿ, ಕೊತ್ತಂಬರಿ, ಪುಂಡಿ, ಸಬ್ಬಸಿಗೆ, ಪಾಲಕ್, ರಾಜಗಿರಿ ಮುಂತಾದ ಸೊಪ್ಪುಗಳು ಮತ್ತು ಟೊಮ್ಯಾಟೊ, ಮೆಣಶಿನಕಾಯಿ, ಬೆಂಡೆಕಾಯಿ, ಬದನೆಕಾಯಿ ಅನ್ನು ಬೆಳೆಯುತ್ತಿದ್ದು, ಇದರ ಹೊರತಾಗಿ ಶಾಲೆಯಲ್ಲಿ ಯಾವುದನ್ನು ಬೆಳೆಯಲು ಸಾಧ್ಯವಾಗುವುದಿಲ್ಲವೊ ಅಂತಹ ತರಕಾರಿಗಳಾದ ಈರುಳ್ಳಿ, ಸೌತೆಕಾಯಿ, ಆಲೂಗಡ್ಡೆಯನ್ನು ಹೊರಗಡೆಯಿಂದ ತರಲಾಗುತ್ತದೆ. ಈ ಕೈತೋಟವನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಇದರಿಂದ ಮಕ್ಕಳಿಗೆ ಕೃಷಿಯ ಕುರಿತಾಗಿ ಪ್ರಾಯೋಗಿಕ ಜ್ಞಾನ ಕೂಡ ದೊರೆಯುತ್ತದೆ. ಗಿಡ-ಮರಗಳನ್ನು ಬೆಳೆಸುವುದಕ್ಕೆ ಸ್ಪೂರ್ತಿ ದೊರೆಯುತ್ತದೆ.
ಶಾಲೆಯ ಪುನರ್ರಚನೆಗೆ ಮೂವತ್ತು ಸಾವಿರದಷ್ಟು ಖರ್ಚಾಗಿದ್ದು, ಸರ್ಕಾರದಿಂದ ಯಾವುದೇ ಸಹಾಯ ಪಡೆಯದೇ, ಅದೆಲ್ಲವನ್ನೂ ಕೇವಲ ದಾನಿಗಳಿಂದಲೇ ಪಡೆಯಲಾಗಿದ್ದು ವಿಶೇಷ. ಇದಕ್ಕೆ ಸಹಕಾರ ನೀಡಿದಂತಹ ದಾನಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಊರಿನ ಹಿರಿಕರನ್ನು ನೆನಯಲೇಬೇಕೆಂದು ಸೋಮುರವರು ಹೇಳುತ್ತಾರೆ.
ಈ ಶಾಲೆಯನ್ನು ಕಂಡು ಊರಿನ ಅಕ್ಕ-ಪಕ್ಕದ ಅನೇಕ ಶಾಲೆಗಳ ಶಿಕ್ಷಕರು ಸ್ಪೂರ್ತಿಗೊಂಡು ಅವರು ಕೂಡ ತಮ್ಮ ಶಾಲೆಯನ್ನು ವಿಶೇಷವಾಗಿಸುವಲ್ಲಿ ತೊಡಗಿದ್ದಾರೆ.
"ಇನ್ನೂ ಅನೇಕ ಯೋಜನೆಗಳು ತಲೆಯಲ್ಲಿದ್ದು, ಶಾಲೆಯಲ್ಲಿ ಇನ್ನೂ ಹಲವಾರು ಮಾರ್ಪಾಡುಗಳನ್ನು ಮಾಡಬೇಕಾಗಿದ್ದು, ಅದೆಲ್ಲವನ್ನೂ ಹಂತ-ಹಂತವಾಗಿ ಜಾರಿಗೆ ತರುವ ಪ್ರಯತ್ನದಲ್ಲಿರುವೆ" ಎಂದು ಸೋಮುರವರು ತಮ್ಮ ಆಸೆಯನ್ನು ವ್ಯಕ್ತಪಡಿಸುತ್ತಾರೆ.
ಅದಲ್ಲದೆ ಶಾಲೆಯಲ್ಲಿಯೆ ಪರಿಸರ, ಶಿಕ್ಷಣ, ಆರೋಗ್ಯ ಜಾಥಾ, ಸ್ವಚ್ಛತೆಯ ಬಗ್ಗೆ ಹೀಗೆ ಅನೇಕ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿರುವುದು ಶಿಕ್ಷಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಒಬ್ಬ ಶಿಕ್ಷಕ ಮೊಂಬತ್ತಿ ಇದ್ದಂತೆ, ತಾನೇ ಉರಿದು ಉಳಿದವರಿಗೆ ಬೆಳಕಾಗುತ್ತಾನೆ ಎಂಬ ಮಾತಿನಂತೆ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಸೋಮು ಕುದರಿಹಾಳ ಅವರು ಯಶಸ್ವಿಯಾಗಿದ್ದಾರೆ.