ಕಸದಿಂದ ರಸ ತೆಗೆದು ಸುಸ್ಥಿರ ದಾರಿ ನಿರ್ಮಿಸುತ್ತಿರುವ 26ರ ಯುವಕ
ಹಲವು ತರಹದ ಕೈಗಾರಿಕಾ ತ್ಯಾಜ್ಯದಿಂದ ಉಪಯೋಗಿ ವಸ್ತುಗಳನ್ನು ತಯಾರಿಸಿರುವ ಬಿನಿಶ್ ದೇಸಾಯಿ ಈವರೆಗೂ 1996 ಮೆಟ್ರಿಕ್ ಟನ್ ತ್ಯಾಜ್ಯವನ್ನು ಮರುಬಳಕೆ ಮಾಡಿದ್ದಾರೆ.
ಜಗತ್ತನ್ನು ಬದಲಾಯಿಸುವವರು ಸಣ್ಣವರಲ್ಲ ಎಂಬ ಮಾತಿದೆ. ಅದಕ್ಕೆ ಉದಾಹರಣೆಯಂತಿದ್ದಾರೆ ಡಾ. ಬಿನಿಶ್ ದೇಸಾಯಿ.
ಗುಜರಾತ್‌ನಲ್ಲಿ ಹುಟ್ಟಿ ಬೆಳೆದ ಬಿನಿಶ್ ಅವರಿಗೆ ಹೊಸದನ್ನು ಕಲಿಯಬೇಕೆಂಬ ಉತ್ಸಾಹ. ಅವರು ಇತರ ಮಕ್ಕಳಂತೆ ಆಟಪಾಠದಲ್ಲಿ ನಿರತರಾಗಿದ್ದರೂ ತಮ್ಮ ಮನೆಯಲ್ಲಿ ಸಣ್ಣದೊಂದು ಪ್ರಯೋಗಾಲಯವನ್ನು ಮಾಡಿಕೊಂಡಿದ್ದರು, ಅದೆ ಅವರನ್ನು ವಿಭಿನ್ನವಾಗಿ ಯೋಚಿಸುವಂತೆ ಪ್ರೇರೆಪಿಸಿದ್ದು.
ಅಡುಗೆ ಮನೆಯ ಹವೆಯಿಂದ ನೀರನ್ನು ತಯಾರಿಸುವ ಯಂತ್ರ ಸಿದ್ಧಪಡಿಸುವುದರಿಂದ ಹಿಡಿದು ಕೈಗಾರಿಕಾ ತ್ಯಾಜ್ಯದಿಂದ ಪಿ-ಬ್ರಿಕ್ಸ್‌ಗಳನ್ನು(ಇಟ್ಟಿಗೆ) ತಯಾರಿಸುವವರೆಗೂ ಬಿನಿಶ್ ಅವರ ಪಯಣ ಸಾಗಿದೆ.
2004 ಬಿನಿಶ್ ಅವರ ಬದುಕಿಗೆ ತಿರುವು ನೀಡಿತು. ಆಗ 6 ನೇ ತರಗತಿಯಲ್ಲಿ ಓದುತ್ತಿದ್ದ ಬಿನಿಶ್ ಅವರ ಪ್ಯಾಂಟಿಗೆ ಗೆಳೆಯ ಚೇವಿಂಗ್ ಗಮ್ ಅಂಟಿಸಿದ್ದ, ಕಾಗದದಿಂದ ಅದನ್ನು ತೆಗೆಯಹೋದಾಗ ಅದು ಗಮ್‌ಗೆ ಅಂಟಿತು. ಮನೆಯಿಂದ ಹೊರಡಬೇಕಾದರೆ ಅದು ಗಟ್ಟಿಯಾಗಿತ್ತು.
“ನನಗಿನ್ನೂ ನೆನಪಿದೆ. ಅದರಿಂದ ಏನಾದರೂ ಉಪಯೋಗವಾಗಬಹುದೆಂದು ನಾನು ಅದನ್ನು ಮನೆಗೆ ತೆಗೆದುಕೊಂಡು ಹೋದೆ. ಪ್ರತಿದಿನ ಅದಕ್ಕೆ ಏನಾದರೂ ಸೇರಿಸಿ ಗಟ್ಟಿ ಮಾಡುತ್ತಿದ್ದೆ. ನಂತರ ಅದರಿಂದ ಇಟ್ಟಿಗೆ ಮಾಡಬಹುದೆಂಬ ಯೋಚನೆ ಬಂತು. ವಿಶ್ವದ ಅತಿ ಅಗ್ಗದ ಮನೆ ನಿರ್ಮಿಸುವ ಕನಸು ಜತೆಗೂಡಿತು,” ಎನ್ನುತ್ತಾರೆ ಬಿನಿಶ್.
ಕಟ್ಟಡ ಕೆಲಸಕ್ಕೆ ಬಳಸುವ ಅಗ್ಗದ ಇಟ್ಟಿಗೆ ತಯಾರಿಸಲು ಎರಡು ವರ್ಷ ಬೇಕಾಯಿತು. ಆಗ ಅವರ ವಯಸ್ಸು 16. ತಮ್ಮದೆ ಉದ್ಯಮ ಸೃಷ್ಟಿಸುವ ಹಾದಿಯಲ್ಲಿ ಅವರಿದ್ದರು. ದಾರಿ ಸುಲಭವಾಗಿರಲಿಲ್ಲ.
“ಗೆಳೆಯರು, ಸಂಬಂಧಿಕರು ಮತ್ತು ಕುಟುಂಬದವರಿಂದ ವಿರೋಧ ಉಂಟಾಯಿತು. ಅವರಿಗೆ ನಾನೊಬ್ಬ ಹುಚ್ಚ, ನನ್ನ ಜೀವನ ಹಾಳಾಗುತ್ತಿದೆ ಎನಿಸುತ್ತಿತ್ತು. ಅದು ನನ್ನನ್ನು ಕಾಡಿತು. ಆದರೆ ನಾನು ನನ್ನ ಹೃದಯ ಹೇಳಿದ್ದನ್ನೆ ಮಾಡಿದೆ. ಜೇಬಿನಲ್ಲಿ ಕೇವಲ 1,600 ರೂ. ಇಟ್ಟುಕೊಂಡು ನಾನು ಬಿಡ್ರೀಮ್ ಫೌಂಡೇಶನ್ ಪ್ರಾರಂಭಿಸಿದೆ,” ಎನ್ನುತ್ತಾರೆ ಬಿನಿಶ್.
ಬಿನಿಶ್ ಹತ್ತಿರ ಸ್ಥಳ ಅಥವಾ ಕಾರ್ಮಿಕರಿರಲಿಲ್ಲ ಅಥವಾ ಹಣವೂ ಇರಲಿಲ್ಲ. ಆದರೆ ಹೇಗಾದರೂ ಶುರುಮಾಡಲಲೇಬೇಕಿತ್ತು. ಕಾಗದ, ಚೇವಿಂಗ್ ಗಮ್, ಆರ್ಗ್ಯಾನಿಕ್ ಬೈಂಡರ್ ಮತ್ತು ಸಸ್ಯದ ಸಾರದಿಂದ ಅವರು ಪಿ-ಬ್ರಿಕ್ ತಯಾರಿಸಿದ್ದರು. ಹಾಗಾಗಿ ಪೇಪರ್ ಮಿಲ್ ಅನ್ನು ಸಂಪರ್ಕಿಸಿ ಅಲ್ಲಿ ಉಳಿದ ಕಾಗದ ತ್ಯಾಜ್ಯ ಮತ್ತು ಇರುವ ಸ್ವಲ್ಪ ಜಾಗದಲ್ಲೆ ಇಟ್ಟಿಗೆ ತಯಾರಿಸಲು ಮನವಿ ಮಾಡಿಕೊಂಡರು.
“ಅದೃಷ್ಟವೆಂಬಂತೆ ಒಂದು ಮಿಲ್ ತನ್ನ ಪಾರ್ಕಿಂಗ್ ಜಾಗದಲ್ಲಿ ಕೆಲಸ ಮಾಡಲು ಅನುಮತಿ ನೀಡಿತು. 11 ತಿಂಗಳು ನಾನು ಬೆಳಿಗ್ಗೆ ಕಾಲೇಜಿಗೆ ಹೋಗುವುದು ಸಂಜೆ ಇಟ್ಟಿಗೆ ತಯಾರಿಸುವುದರಲ್ಲೆ ಕಳೆದಿದ್ದೇನೆ. ಕಡೆಯಲ್ಲಿ 3,000 ಇಟ್ಟಿಗೆ ತಯಾರಿಸಿ, ಅದರಿಂದ ಮನೆಯ ಮಾದರಿ ಸಿದ್ಧಪಡಿಸಿದೆ. ಅದನ್ನು ಆವಿಷ್ಕಾರ ಮೇಳದಲ್ಲಿ ಪ್ರದರ್ಶಿಸಿದಾಗ ಕಾರ್ಪೋರೆಟ್, ಎನ್‌ಜಿಒ ಮತ್ತು ಜನರಿಂದ ಆರ್ಡರ್ ಬರತೊಡಗಿತು,” ಎಂದು ವಿವರಿಸುತ್ತಾರೆ ಬಿನಿಶ್.
ಕಾಲಾನಂತರದಲ್ಲಿ ಬಿನಿಶ್ ಅವರ ಬಿಡ್ರೀಮ್ ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಗ್ರಾಮೀಣ ಭಾಗದಲ್ಲಿ 11,000 ಶೌಚಾಲಯಗಳನ್ನು, ಮನೆಗಳನ್ನು ನಿರ್ಮಿಸಿದೆ.
ಆದರೆ ಕೆಲವೆ ದಿನಗಳಲ್ಲಿ ಇಡೀ ಚಿತ್ರಣವೆ ಬದಲಾಯಿತು. 2016ರಲ್ಲಿ ಹೂಡಿಕೆದಾರರು ಪಿ-ಬ್ರಿಕ್‌ಗಾಗಿ ಪಡೆದ ಪೆಟೆಂಟ್ ನೀಡಿ ಎಂದು ಒತ್ತಾಯಿಸತೊಡಗಿದರು. ಬಿನಿಶ್ ತಮ್ಮ ಸಂಸ್ಥೆಯಿಂದಲೆ ಹೊರನಡೆಯದೆ ಬೇರೆ ದಾರಿಯಿರಲಿಲ್ಲ.
ಆದರೆ ಕುಗ್ಗದೆ ಅದೇ ವರ್ಷ ಎಕೊ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಶುರುಮಾಡಿದರು.
ಬದಲಾವಣೆಯ ಅಲೆ ಸೃಷ್ಟಿಸುವುದು
ತಮ್ಮ ಹೊಸ ಸಂಸ್ಥೆಯೊಂದಿಗೆ ಅವರು ತ್ಯಾಜ್ಯ ನಿರ್ವಹಣಾ ಕ್ಷೇತ್ರಕ್ಕೆ ಕಾಲಿಟ್ಟರು. ಅವರ ಕೆಲಸ, ಸಂಶೋಧನೆ ಅವರಿಗೆ ಗೌರವ ನೀಡಿತು ಮತ್ತು ಅನುದಾನದ ರೂಪದಲ್ಲಿ ಹಣವನ್ನು ನೀಡಿತು. ಅವರು ತಯಾರಿಕಾ ಘಟಕವನ್ನು ಸ್ಥಾಪಿಸಿದ್ದಲ್ಲದೆ, ಕೈಗಾರಿಕಾ ತ್ಯಾಜ್ಯವನ್ನು ಮರುಬಳಕೆಗಾಗಿ ಪ್ರಯೋಗ ಮಾಡಲೆಂದೆ ಮೀಸಲಾದ ಸಂಶೋಧನಾ ಲ್ಯಾಬ್ ಸ್ಥಾಪಿಸಿದರು.
“ನಾನು ಕಾಗದದ ತ್ಯಾಜ್ಯದಿಂದ ಇಟ್ಟಿಗೆ ತಯಾರಿಸುವುದಕ್ಕೆ ಸೀಮಿತವಾಗದೆ ನನ್ನ ತಂಡದೊಂದಿಗೆ ಲೋಹ, ಕಟ್ಟಿಗೆ ಮತ್ತು ಜವಳಿ ತ್ಯಾಜ್ಯ ಸೇರಿದಂತೆ 50 ವಿವಿಧ ಬಗೆಯ ಕೈಗಾರಿಕಾ ತ್ಯಾಜ್ಯದೊಂದಿಗೆ ಪ್ರಯೋಗ ಮಾಡತೊಡಗಿದೆವು. ಅವುಗಳನ್ನು ಒಡೆದೆವು, ವಿಶ್ಲೇಷಿಸಿದೆವು. ಅವುಗಳಿಂದ ಕೃತಕ ಕಟ್ಟಿಗೆ, ಫ್ಯಾಬ್ರಿಕ್ ಲಿಂಟ್, ಪ್ರೀಕಾಸ್ಟ್ ರೂಪ್ಸ್, ಸೌಂಡ್‌ಪ್ರೂಪಿಂಗ್, ಅಕೌಸ್ಟಿಕ್, ವಾಲ್ ಪ್ಯಾನೆಲ್ಸ್, ಕ್ರೂಡ್ ಆಯಿಲ್ ಅಬ್ಸೋರ್ಬೆಂಟ್ ಇತ್ಯಾದಿಗಳನ್ನು ತಯಾರಿಸಿದೆವು,” ಎನ್ನುತ್ತಾರವರು.
ಎಕೊ ಲೈಟ್ ಸ್ಟುಡಿಯೋ ಎಂಬ ಇನ್ನೊಂದು ಉದ್ಯಮವನ್ನು ಬಿನಿಶ್ ಪ್ರಾರಂಭಿಸಿದರು. ವಿಧವೆಯರು ಮತ್ತು ಗ್ರಾಮೀಣ ಭಾಗದ ಅಶಿಕ್ಷಿತ ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವುದು ಇದರ ಉದ್ದೇಶ. ತ್ಯಾಜ್ಯದಿಂದ ಗಡಿಯಾರ, ಚೀಲ ಮತ್ತು ಇತ್ಯಾದಿ ವಸ್ತುಗಳನ್ನು ತಯಾರಿಸಲು ಬಿನಿಶ್ ಗುಜರಾತ್ ಸುತ್ತಮುತ್ತಲಿನ ಹಳ್ಳಿಯ ಸೌಲಭ್ಯವಂಚಿತ ಮಹಿಳೆಯರಿಗೆ ತರಬೇತಿ ನೀಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಬಿನಿಶ್ 1966 ಮೆಟ್ರಿಕ್ ಟನ್ ತ್ಯಾಜ್ಯವನ್ನು ಉಪಯೋಗಿ ವಸ್ತುಗಳನ್ನಾಗಿ ಮಾರ್ಪಡಿಸಿದ್ದಾರೆ. ಇದರಿಂದ 3592 ಟನ್‌ನಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಡೆದಿದ್ದಾರೆ.
ಯಶಸ್ವಿ ಸಾಮಾಜಿಕ ಉದ್ಯಮ 2018ರ ಫೋರ್ಬ್‌ನ 30 ಅಂಡರ್ 30 ಏಷ್ಯಾದ ಪಟ್ಟಿಯಲ್ಲೂ ಬಿನಿಶ್ ಕಾಣಿಸಿಕೊಂಡಿದ್ದಾರೆ. ನಿಖಿಲ್ ಚಂದ್ವಾನಿಯಾ ದಿ ರಿಸೈಕಲ್ ಮ್ಯಾನ್ ಪುಸ್ತಕದಲ್ಲಿ ಅವರ ಕಥೆಯನ್ನು ದಾಖಲಿಸಿದ್ದಾರೆ.