ಬಿಕಾಂ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಅಗ್ರಸ್ಥಾನ ಪಡೆದ ಬಿಬಿಎಂಪಿ ಕಾಲೇಜಿನ ವಿದ್ಯಾರ್ಥಿನಿ
ಬೆಂಗಳೂರಿನ ಬಿಬಿಎಂಪಿ ಸಂಸ್ಥೆ ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಬಿ.ಕಾಂ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲಿಗಳಾಗಿದ್ದಾಳೆ.
ಬದುಕಿಗೆ ಶಿಕ್ಷಣವೆಂಬುದು ಬಹು ಮುಖ್ಯ. ಇಂದು ಶಿಕ್ಷಣಕ್ಕಾಗಿಯೇ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಖಾಸಗಿ ಶಾಲೆ, ಟ್ಯೂಷನ್‌ಗಳಿಗೆ ಸೇರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಕೇವಲ ಖಾಸಗಿ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಸರ್ಕಾರಿ ಶಾಲಾ-ಕಾಲೇಜಿನಲ್ಲಿಯೂ ಬುದ್ಧಿವಂತ ವಿದ್ಯಾರ್ಥಿಗಳಿದ್ದಾರೆ ಎಂದು ಈ ವಿದ್ಯಾರ್ಥಿನಿ ಸಾಬೀತುಪಡಿಸಿದ್ದಾಳೆ.
ಬೆಂಗಳೂರಿನ ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ನಡೆಸುತ್ತಿರುವ ಕ್ಲೇವ್‌ಲ್ಯಾಂಡ್ ಟೌನ್‌ನ ಪದವಿ- ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭ್ಯಸಿಸಿದ 20ರ ಹರೆಯದ ರಹಮತುನ್ನಿಸಾ ಬಿ.ಕಾಂ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಬರುವ ಮೂಲಕ ಗೆಲುವಿನ ನಗೆಯನ್ನು ಬೀರಿದ್ದಾಳೆ.
ಇತ್ತೀಚೆಗೆ, ಬೆಂಗಳೂರು ವಿಶ್ವವಿದ್ಯಾಲಯವು 2018-2019ರ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ತಾತ್ಕಾಲಿಕ ಶ್ರೇಣಿಯ ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ ಬಿ.ಕಾಂ ಪದವಿಯಲ್ಲಿ ಈ ವಿದ್ಯಾರ್ಥಿನಿಯು 91.87% ಅಂಕಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾಲಯಕ್ಕೆ ಅಗ್ರಸ್ಥಾನ ಪಡೆದಿದ್ದಾಳೆ.
ಈ ಮೂಲಕ ಬಿಬಿಎಂಪಿ ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೊರ್ವಳು ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಡೆಕನ್ ಹೆರಾಲ್ಡ್‌ನೊಂದಿಗೆ ತಮ್ಮ ಸಂತಸ ಹಂಚಿಕೊಂಡ ರಹಮತುನ್ನಿಸಾ,
"ಉತ್ತಮ ಅಂಕಗಳನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದ್ದೆ, ಆದರೆ ಅಗ್ರಸ್ಥಾನ ಪಡೆಯುವ ನಿರೀಕ್ಷೆ ಇರಲಿಲ್ಲ. ನಾನು ಬಿಕಾಂನಲ್ಲಿ ಮೊದಲ ಸ್ಥಾನ ಪಡೆದಿದ್ದೇನೆ ಎಂದು ತಿಳಿಸಲು ಪ್ರಾಂಶುಪಾಲರು ನನಗೆ ಕರೆ ಮಾಡಿದಾಗ, ಸಂತೋಷದಿಂದ ಮಾತೇ ಹೊರಡದಂತಾಯಿತೆಂದು," ಎಂದಿದ್ದಾರೆ.
ಈಕೆ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ 96% ಅನ್ನು ಗಳಿಸಿದ್ದಳು.
ಅವಳ ನಾಲ್ವರು ಒಡಹುಟ್ಟಿದವರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಲಾಗಿರಲಿಲ್ಲ. ಹಿರಿಯ ಸಹೋದರ ಅವರ ತಂದೆ ತೀರಿಕೊಂಡಾಗ 6ನೇ ತರಗತಿಗೆ ಶಾಲೆಯನ್ನು ಮೊಟಕುಗೊಳಿಸಿ, ಕುಟುಂಬದ ಜವಾಬ್ದಾರಿ ತೆಗೆದುಕೊಂಡರು. ಮೂವರು ಸಹೋದರಿಯರಲ್ಲಿ ಇಬ್ಬರು 10ನೇ ತರಗತಿ, ಇನ್ನೊಬ್ಬರು 12ನೇ ತರಗತಿಗೆ ಶಾಲೆಯನ್ನು ನಿಲ್ಲಿಸಿದ್ದಾರೆ. ಈ ಮೂಲಕ ತಮ್ಮ ಕುಟುಂಬದ ಮೊದಲ ಪದವೀಧರೆಯಾಗಿದ್ದಾರೆ, ವರದಿ ಡೆಕನ್ ಹೆರಾಲ್ಡ್.
"ಬಿಬಿಎಂಪಿ ನಡೆಸುವ ಕಾಲೇಜುಗಳು ಗುಣಮಟ್ಟದ ಶಿಕ್ಷಣವನ್ನು ನೀಡುವುದಿಲ್ಲ ಎಂಬ ಮಾತನ್ನು ಮುರಿಯಲು ಬಯಸುತ್ತೇನೆ. ಇಲ್ಲಿನ ಶಿಕ್ಷಕರು ಹೆಚ್ಚು ಅರ್ಹತೆ ಪಡೆದಿದ್ದಾರೆ ಮತ್ತು ನಮಗೆ ಬೆಂಬಲವನ್ನು ನೀಡುತ್ತಾರೆ," ಎಂದು ರಹಮತುನ್ನಿಸಾ ಹೇಳುತ್ತಾರೆ, ವರದಿ ದಿ ಹಿಂದೂ.
ರಹಮತುನ್ನಿಸಾರವರನ್ನು ಅಭಿನಂದಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ್ ತಮ್ಮ ಫೇಸ್‌ಬುಕ್ ಪುಟದಲ್ಲಿ "ಈ ಹುಡುಗಿ ಬಿಕಾಂನಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಮೂಲಕ ನಮಗೆ ಹಾಗೂ ಬಿಬಿಎಂಪಿಗೆ ಹೆಮ್ಮೆ ತಂದಿದೆ," ಎಂದು ಬರೆದಿದ್ದಾರೆ.
"ನಾನು ಚೆನ್ನಾಗಿ ಅಧ್ಯಯನ ಮಾಡಿ, ಸರ್ಕಾರಿ ಉದ್ಯೋಗವನ್ನು ಪಡೆದು ನನ್ನ ಕುಟುಂಬವನ್ನು ನೋಡಿಕೊಳ್ಳಲು ಬಯಸುವೆ," ಎಂಬ ಈಕೆಯ ಕನಸು ನನಸಾಗಲಿ. ಸರ್ಕಾರಿ ಸಂಸ್ಥೆಗಳಲ್ಲಿ ಓದುತ್ತಿರುವವರಿಗೆಲ್ಲ ಇವರ ಸಾಧನೆ ಮಾದರಿಯಾಗಲಿ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.