ತರಕಾರಿ ಅಂಗಡಿ ತೆರೆಯಲು ಕರ್ನಾಟಕದ ವಿಶೇಷ ಚೇತನ ಮಹಿಳೆಗೆ ನೆರವಾಗುತ್ತಿರುವ ನಟ ಸೋನು ಸೂದ್

ಕೊರೊನಾ ಕಾಲದಲ್ಲಿ ಜನರ ನೆರವಿಗೆ ನಿಂತಿರುವ ನಟ ಸೋನು ಸೂದ್‌ ಅವರು ಕರ್ನಾಟಕದ ವಿಶೇಷ ಚೇತನ ಮಹಿಳೆಯೊಬ್ಬರಿಗೆ ತರಕಾರಿ ಅಂಗಡಿ ತೆರೆಯಲು ನೆರವಾಗುತ್ತಿದ್ದಾರೆ.

ತರಕಾರಿ ಅಂಗಡಿ ತೆರೆಯಲು ಕರ್ನಾಟಕದ ವಿಶೇಷ ಚೇತನ ಮಹಿಳೆಗೆ ನೆರವಾಗುತ್ತಿರುವ ನಟ ಸೋನು ಸೂದ್

Friday August 21, 2020,

1 min Read

ಕೊರೊನಾವೈರಸ್‌ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ವಲಸಿಗರ ನೆರವಿಗೆ ನಿಂತಿರುವ ಹಿಂದಿ ಚಿತ್ರರಂಗದ ನಟ ಸೋನು ಸೂದ್‌ ಅವರು ತಮ್ಮ ಸೇವಾ ಮನೋಭಾವನೆಯಿಂದ ಜನಮಾನಸದಲ್ಲಿ ವಿಶೇಷ ಸ್ಥಾನಗಳಿಸಿದ್ದಾರೆ. ಅವರ ನೆರವಿನಿಂದ ಎಷ್ಟೋ ಜನರು ಊರು ಸೇರಿದ್ದಾರೆ, ಎಷ್ಟೋ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಂಡಿದ್ದಾರೆ.


ಹೀಗೆ ಹತ್ತು ಹಲವು ರೀತಿಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿರುವ ಸೋನು ಸೂದ್‌ ಪ್ರತಿದಿನವು ಒಂದಿಲ್ಲೊಂದು ವಿಶೇಷ ಸುದ್ದಿಗಳಿಂದ ಗಮನ ಸೆಳೆಯುತ್ತಿರುತ್ತಾರೆ. ದಿನವೊಂದಕ್ಕೆ ಸೋನು ಅವರ ಸಹಾಯಯಾಚಿಸಿ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ಸಂದೇಶಗಳ ಸಂಖ್ಯೆ 31 ಸಾವಿರಕ್ಕೂ ಮಿಗಿಲಾಗಿದೆ.


ಅಗಸ್ಟ್‌ 18 ರಂದು ಕರ್ನಾಟಕದ ವರಮಹಾಲಕ್ಷ್ಮೀ ಎಂಬ ವಿಕಲಚೇತನ ಮಹಿಳೆಯೊಬ್ಬರು ಸಹಾಯಯಾಚಿಸಿ ಟ್ವೀಟ್‌ ಮಾಡಿದ್ದರು.


“ನಮಸ್ಕಾರ, ನನ್ನ ಹೆಸರು ಮಹಾಲಕ್ಷ್ಮೀ. ನಾನು ಕರ್ನಾಟಕದವಳು. ನಾನೊಬ್ಬಳು ವಿಶೇಷ ಚೇತನ ಮಹಿಳೆ. ಎರಡು ವರ್ಷಗಳ ಹಿಂದೆ ನಮ್ಮ ತಂದೆ ತೀರಿಕೊಂಡಿದ್ದಾರೆ ಹಾಗೂ ನನಗೆ ಈಗ ಆದಾಯದ ಯಾವುದೇ ಮೂಲವಿಲ್ಲ. ಹಾಗಾಗಿ ತರಕಾರಿ ಅಂಗಡಿ ತೆರೆಯಲು ನಿಮ್ಮ ಸಹಾಯ ಬೇಕಾಗಿದೆ,” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.

ವರಮಹಾಲಕ್ಷ್ಮೀ ಅವರ ಕರೆಗೆ ಸ್ಪಂದಿಸಿರುವ ಸೋನು ಸೂದ್‌, ಅವರಿಗಾಗಿ ತರಕಾರಿ ಅಂಗಡಿ ತೆರೆದುಕೊಡಲು ಒಪ್ಪಿದ್ದಾರೆ.


“ನಿಮಗಾಗಿ ತರಕಾರಿ ಅಂಗಡಿ ತೆರೆಯುವ ಮೂಲಕ ಈ ದಿನವನ್ನು ಆರಂಭಿಸೋಣ, ಹೊಸ ಅಂಗಡಿ ನೋಡಲು ತಯಾರಾಗಿ,” ಎಂದು ಪ್ರತಿಕ್ರಿಯಿಸಿದ್ದಾರೆ.


ಸಹಾಯಯಾಚಿಸಿ ಬರುವ ಸಂದೇಶಗಳ ಬಗ್ಗೆ ಮಾತನಾಡಿರುವ ಅವರು,


“19,000 ಎಫ್‌ಬಿ ಮೆಸೆಜ್‌ಗಳು, 1,137 ಇಮೇಲ್‌ಗಳು, 4,812 ಇನ್ಸ್ಟಾ ಮೆಸೆಜ್‌ಗಳು ಮತ್ತು 6,741 ಟ್ವಿಟರ್‌ ಮೆಸೆಜ್‌ಗಳು. ಇದು ಇವತ್ತು ಸಹಾಯಯಾಚಿಸಿ ಬಂದ ಸಂದೇಶಗಳ ಸಂಖ್ಯೆ. ದಿನವೊಂದಕ್ಕೆ ಸರಾಸರಿಯಾಗಿ ಇಷ್ಟೊಂದು ಮೆಸೆಜ್‌ಗಳು ನನಗೆ ಬರುತ್ತವೆ. ಇವರೆಲ್ಲರಿಗೂ ಸಹಾಯಮಾಡುವುದೂ ಅಸಾಧ್ಯವಾದ ಕಾರ್ಯ. ಆದರೂ ನನಗೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಸಂದೇಶಗಳನ್ನು ನಾನು ನೋಡಿರದಿದ್ದರೆ ಕ್ಷಮಿಸಬೇಕು,” ಎಂದು ಟ್ವೀಟ್‌ ಮಾಡಿ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ, ಇರಲು ಸ್ಥಳವಿಲ್ಲದೆ ಮುಂಬೈನಲ್ಲಿ ಪರದಾಡುತ್ತಿದ್ದ 350 ಕರ್ನಾಟಕದ ವಲಸಿಗರಿಗೆ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಿ ಮನೆಗೆ ಮರಳಲು ಸಹಾಯ ಮಾಡಿದ್ದರು.