ವಲಸಿಗರಿಗಾಗಿ ಸಹಾಯವಾಣಿ ಪ್ರಾರಂಭಿಸಿದ ನಟ ಸೋನು ಸೂದ್
ಆಹಾರ, ನೀರು ಇಲ್ಲದೆ ಸಾವಿರಾರು ಮೈಲಿ ನಡೆದುಕೊಂಡೆ ಮನೆಗೆ ಹೋಗುತ್ತಿರುವ ವಲಸಿಗರ ಕಷ್ಟ ನೋಡಿ ನಟ ಸೋನು ಸೂದ್ ಬಸ್ಸಿನ ವ್ಯವಸ್ಥೆ ಕಲ್ಪಿಸುತ್ತಿರುವುದಲ್ಲದೇ ಈಗ ಸಹಾಯವಾಣಿಯೊಂದನ್ನು ಪ್ರಾರಂಭಿಸಿದ್ದಾರೆ.
ಹಿಂದಿ ಚಿತ್ರರಂಗದ ನಟ ಸೋನು ಸೂದ್ ವಲಸಿಗರು ಮನೆಗೆ ಹೋಗಲು ಅನುಕೂಲವಾಗುವಂತೆ ಉಚಿತ ಸಹಾಯವಾಣಿಯೊಂದಕ್ಕೆ ಮಂಗಳವಾರ ಚಾಲನೆ ನೀಡಿದ್ದೇವೆ ಎಂದಿದ್ದಾರೆ.
ಈ ಹಿಂದೆ ಆಹಾರ, ನೀರು ಇಲ್ಲದೆ ಸಾವಿರಾರು ಮೈಲಿ ನಡೆದುಕೊಂಡೆ ಮನೆಗೆ ಹೋಗುತ್ತಿರುವ ವಲಸಿಗರ ಕಷ್ಟ ನೋಡಿ ನಟ ಸೋನು ಸೂದ್ ಮುಂಬೈನಲ್ಲಿ ಸಿಲುಕಿದ್ದ ಕಾರ್ಮಿಕರಿಗಾಗಿ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದರು.
ಇಲ್ಲಿಯವರೆಗೂ ಕರ್ನಾಟಕ, ಬಿಹಾರ್, ಜಾರ್ಖಂಡ್ ಮತ್ತು ಉತ್ತರ ಪ್ರದೇಶಕ್ಕೆ ಹಲವಾರು ವಲಸಿಗರನ್ನು ರವಾನಿಸಿದ್ದಾರೆ.
ಈಗ ಅವರು 18001213711 ಎಂಬ ಉಚಿತ ಸಹಾಯವಾಣಿಯೊಂದನ್ನು ಸ್ಥಾಪಿಸಿದ್ದು, ಇದರ ಮೂಲಕ ಸಹಾಯ ಬೇಕಾದವರು ಸೋನು ಅವರ ತಂಡವನ್ನು ಸಂಪರ್ಕಿಸಬಹುದು.
“ನನಗೆ ತುಂಬಾ ಫೋನ್ ಕರೆಗಳು ಬರುತ್ತಿದ್ದವು…ದಿನಕ್ಕೆ ಸಾವಿರಾರು ಕರೆಗಳು. ನನ್ನ ಕುಟುಂಬದವರು ಮತ್ತು ಗೆಳೆಯರು ಡಾಟಾ ಸಂಗ್ರಹಣೆಯಲ್ಲಿ ನಿರತರಾಗಿದ್ದರು. ಹೀಗೆ ಮುಂದುವರೆದರೆ ಸಹಾಯ ಬೇಕಾದವರೆಲ್ಲರೂ ನಮ್ಮನ್ನು ಸಂಪರ್ಕಿಸಲಾಗುವುದಿಲ್ಲ ಎಂಬುದನ್ನು ಅರಿತೆವು. ಹಾಗಾಗಿ ಕಾಲ್ ಸೆಂಟರ್ ಶುರುಮಾಡಲು ನಿರ್ಧರಿಸಿದೆವು, ಇದೊಂದು ಉಚಿತ ಸಹಾಯವಾಣಿ ಸಂಖ್ಯೆಯಾಗಿದೆ,” ಎಂದರು ನಟ ಸೋನು.
ಎಷ್ಟು ಸಾಧ್ಯವಾಗುತ್ತದೊ ಅಷ್ಟು ಜನರನ್ನು ಮನೆಗೆ ಮುಟ್ಟಿಸಬೇಕೆಂಬುದೇ ಇದರ ಉದ್ದೇಶ ಎಂದರು ಅವರು.
“ಹೆಚ್ಚು ಜನರನ್ನು ತಲುಪಲು ನಾವು ಒಂದು ತಂಡವನ್ನು ಮೀಸಲಿರಿಸಿದ್ದೇವೆ. ಅವರು ಪ್ರತಿಯೊಬ್ಬರನ್ನು ಸಂಪರ್ಕಿಸುತ್ತಿದ್ದಾರೆ. ನಾವು ಎಷ್ಟು ಜನರಿಗೆ ಸಹಾಯ ಮಾಡುತ್ತೇವೆಂದು ನಮಗೆ ಗೊತ್ತಿಲ್ಲ, ಆದರೆ ನಾವು ಪ್ರಯತ್ನಿಸುತ್ತೇವೆ,” ಎಂದರು ಸೋನು ಸೂದ್.
ಕೇರಳದ ಟೆಕ್ಸ್‌ಟೈಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾದ 150 ಮಹಿಳೆಯರು, ಲಾಕ್‌ಡೌನ್ ಆದಾಗಿನಿಂದಲೂ ತಮ್ಮೂರಿಗೆ ಮರಳಲಾಗದೆ ಕೇರಳದಲ್ಲೆ ಸಿಲುಕಿಕೊಂಡಿದ್ದರು. ಅವರಿಗಾಗಿ ಚಾರ್ಟರಡ್ ವಿಮಾನದ ವ್ಯವಸ್ಥೆ ಮಾಡಿ ಇಂದು ಅವರೆಲ್ಲರೂ ಊರಿಗೆ ಮರಳುವಂತೆ ಮಾಡಿದ್ದಾರೆ ಸೋನು ಸೂದ್ ಎಂದು ವರದಿಗಳು ತಿಳಿಸಿವೆ.