ವ್ಯರ್ಥವಾಗುವ ಆಹಾರ ಪದಾರ್ಥಗಳನ್ನು ಉಳಿಸುತ್ತಿರುವ ರೈತನ ಮಗ

2014 ರಲ್ಲಿ ಸ್ಥಾಪನೆಯಾದ ಈ ಸ್ಟಾರ್ಟಪ್, ಮಾರಿಕೊ, ಇಂಡಿಯನ್ ರೈಲ್ವೆ, ಸೊಡೆಕ್ಸೊ ಸೇರಿದಂತೆ 250 ಕ್ಕೂ ಹೆಚ್ಚು ಬಿ 2 ಬಿ ಗ್ರಾಹಕರಿಗೆ ಒಣಗಿದ ಆಹಾರವನ್ನು ಮಾರಾಟ ಮಾಡುತ್ತಿದೆ.

ವ್ಯರ್ಥವಾಗುವ ಆಹಾರ ಪದಾರ್ಥಗಳನ್ನು ಉಳಿಸುತ್ತಿರುವ ರೈತನ ಮಗ

Tuesday January 07, 2020,

4 min Read

ಹಣ್ಣು ಮತ್ತು ತರಕಾರಿಗಳಂತಹ ಲಕ್ಷಾಂತರ ಟನ್ ತಾಜಾ ಉತ್ಪನ್ನಗಳು ಪ್ರತಿವರ್ಷ ವ್ಯರ್ಥವಾಗುತ್ತವೆ ಮತ್ತು ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಭಾರತದಲ್ಲಿ ಉತ್ಪತ್ತಿಯಾಗುವ ಆಹಾರದ 40 ಪ್ರತಿಶತ ವ್ಯರ್ಥವಾಗುತ್ತದೆ. ಈ ನಿರಂತರವಾದ ಆಹಾರ ವ್ಯರ್ಥ ಸಮಸ್ಯೆಗೆ ವೈಭವ್ ಟಿಡ್ಕೆ ಪರಿಹಾರವನ್ನು ಕಂಡುಹಿಡಿದಿದ್ದಾರೆ.


32 ವರ್ಷದ ವೈಭವ್, ತನ್ನ ಸ್ನೇಹಿತರಾದ ಗಣೇಶ್ ಭೆರೆ, ತುಷಾರ್ ಗಾವೇರ್, ಶಿತಲ್ ಸೋಮನಿ, ಅಶ್ವಿನ್ ಪವಾಡೆ, ನಿಧಿ ಪಂತ್, ಮತ್ತು ಸ್ವಪ್ನಿಲ್ ಕೊಕಟೆ ಜೊತೆ ಸೇರಿ 2014 ರಲ್ಲಿ ಔರಂಗಾಬಾದ್ನಲ್ಲಿ ಎಸ್4ಎಸ್ ಟೆಕ್ನಾಲಜೀಸ್ ಎಂಬ ಆಹಾರದ ಸ್ಟಾರ್ಟಪ್ ಒಂದನ್ನು ಪ್ರಾರಂಭಿಸಿದರು, ಇದು ತರಕಾರಿಗಳು, ಹಣ್ಣು ಮತ್ತು ಮಾಂಸದಂತಹ ಒಣಗಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಪೇಟೆಂಟ್ ಪಡೆದ ತಂತ್ರಜ್ಞಾನವಾದ ಸೌರಚಾಲಿತ ಒಣಗಿಸುವ ಯಂತ್ರವನ್ನು ಬಳಸಿಕೊಂಡು ಸಂರಕ್ಷಕಗಳು ಮತ್ತು ರಾಸಾಯನಿಕಗಳನ್ನು ಬಳಸದೆ ಹಾಳಾಗುವ ಆಹಾರ ಪದಾರ್ಥಗಳ ಶೆಲ್ಫ್ ಲೈಫ್‌ನ್ನು ಇದು ಒಂದು ವರ್ಷದವರೆಗೆ ಹೆಚ್ಚಿಸುತ್ತದೆ.


ಉದಾಹರಣೆಗೆ, ಎಸ್4ಎಸ್ ತಾಜಾ ಈರುಳ್ಳಿಯನ್ನು ತೇವಾಂಶವಿರದ ರೂಪಕ್ಕೆ ಪರಿವರ್ತಿಸುತ್ತದೆ ಅಥವಾ ಸಂರಕ್ಷಿಸುತ್ತದೆ, ಇದು ಈರುಳ್ಳಿಯ ಶೆಲ್ಫ್ ಲೈಫ್‌ ಅನ್ನು ಒಂದು ವರ್ಷದಷ್ಟು ಹೆಚ್ಚಿಸುತ್ತದೆ, ಅದು ಯಾವುದೇ ರಾಸಾಯನಿಕಗಳ ಬಳಕೆ ಮಾಡದೆ.


ಇಂತಹ ಈರುಳ್ಳಿ ಮನೆಯಲ್ಲಿನ ಅಡುಗೆಗಾಗಿ ಬಳಸುವ ತಾಜಾ ಈರುಳ್ಳಿಗೆ ಮತ್ತು ಕ್ಲೌಡ್‌ ಕಿಚನ್‌ ನ ಈರುಳ್ಳಿಗೆ ಪರ್ಯಾಯವಾಗಬಹುದು. ಎಸ್ 4 ಎಸ್ ಈರುಳ್ಳಿ 80 ಪ್ರತಿಶತದಷ್ಟು ಅಡುಗೆಯ ಸಮಯವನ್ನು ಉಳಿಸುತ್ತದೆ, ಮತ್ತು ಹಣವನ್ನು ಉಳಿಸುತ್ತದೆ. ಅಲ್ಲದೇ ಎಸ್ 4 ಎಸ್ ಎಲ್ಲಾ ಮಧ್ಯವರ್ತಿಗಳನ್ನು ದೂರವಿಡುತ್ತಿದೆ,” ಎಂದು ಎಸ್ 4 ಎಸ್ ಟೆಕ್ನಾಲೊಜೀಸ್ ಸಿಇಒ ಮತ್ತು ಸಹ ಸಂಸ್ಥಾಪಕ ವೈಭವ್ ವಿವರಿಸುತ್ತಾರೆ.


ಈ ಸ್ಟಾರ್ಟಪ್, ಮಾರಿಕೊ, ಇಂಡಿಯನ್ ರೈಲ್ವೆ, ಸೊಡೆಕ್ಸೊ ಸೇರಿದಂತೆ 250 ಕ್ಕೂ ಹೆಚ್ಚು ಬಿ 2 ಬಿ ಗ್ರಾಹಕರಿಗೆ ಒಣಗಿದ ಆಹಾರವನ್ನು ಮಾರಾಟ ಮಾಡುತ್ತದೆ. ಎಸ್ 4 ಎಸ್ ಇತ್ತೀಚೆಗೆ ಬಿ 2 ಸಿ ವಿಭಾಗಕ್ಕೆ ಕಾಲಿಟ್ಟಿತು ಮತ್ತು ಈಗ ವಿವಿಧ ಇಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ದೇಸಿವಿದೇಸಿ ಬ್ರಾಂಡ್‌ನಡಿಯಲ್ಲಿ ಬೀಟ್‌ರೂಟ್ ಚಿಪ್‌ಗಳಂತಹ ತಿಂಡಿಗಳನ್ನು ಮಾರಾಟ ಮಾಡುತ್ತಿದೆ.


ಬದಲಾವಣೆಯೆಂಬ ಬೀಜಗಳನ್ನು ಬಿತ್ತನೆ

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಜೋಗೈ ಎಂಬ ಊರಿನಲ್ಲಿ ರೈತ ಕುಟುಂಬದಲ್ಲಿ ಜನಿಸಿದ ವೈಭವ್, ಕೃಷಿ ಕ್ಷೇತ್ರದಲ್ಲಿ ಎದುರಾಗುವ ತೊಂದರೆಗಳನ್ನು ಹತ್ತಿರದಿಂದ ನೋಡಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಸಿಟಿ) ಯಿಂದ ಸುಸ್ಥಿರ ತಂತ್ರಜ್ಞಾನದಲ್ಲಿ ಪಿಎಚ್‌ಡಿ ಮಾಡಿದ ನಂತರ, ವೈಭವ್ ತಮ್ಮ ಜ್ಞಾನ ಮತ್ತು ಪರಿಣತಿಯನ್ನು ರೈತರ ಅನುಕೂಲಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದರು.


2011 ರಲ್ಲಿ ತನ್ನ ಪಿಎಚ್‌ಡಿಯ ಭಾಗವಾಗಿ, ಅವರು ಸೌರಚಾಲಿತ ಒಣಗಿಸುವ ಯಂತ್ರವನ್ನು ಕಂಡುಹಿಡಿದರು, ಇದು ಸಂರಕ್ಷಕಗಳನ್ನು ಬಳಸದೆ ಮಸಾಲೆಗಳು, ತರಕಾರಿಗಳು, ಹಣ್ಣು ಮತ್ತು ಮಾಂಸದ ಶೆಲ್ಫ್ ಲೈಫ್‌ಅನ್ನು ಸುಮಾರು ಆರು ತಿಂಗಳವರೆಗೆ ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡಿದ ಸ್ನೇಹಿತರು ಈಗ ಎಸ್ 4 ಎಸ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ.


6X6 ಅಡಿ ಇರುವ ಸೌರಚಾಲಿತ ಒಣಗಿಸುವ ಯಂತ್ರವನ್ನು ಜೋಡಿಸಬಹುದು ಮತ್ತು ಬೇರೆ ಬೇರೆ ಭಾಗಗಳಗಿಸಬಹುದು ಹಾಗೂ ತಾರಸಿ ಅಥವಾ ಹಿತ್ತಲಿನಂತಹ ಯಾವುದೇ ತೆರೆದ ಪ್ರದೇಶದಲ್ಲಿ ಇಡಬಹುದು. "ಒಣಗಿಸುವ ಯಂತ್ರಗಳು ನವೀಕರಿಸಬಹುದಾದ ಶಕ್ತಿಯ ಮೂಲದಿಂದ ಕಾರ್ಯನಿರ್ವಹಿಸುವುದರಿಂದ, ಇದಕ್ಕೆ ವಿದ್ಯುತ್ ಸರಬರಾಜು ಮತ್ತು ಇತರ ನಿರ್ವಹಣೆಯ ಅಗತ್ಯವಿಲ್ಲ," ಎಂದು ವೈಭವ್ ಹೇಳುತ್ತಾರೆ,


ಒಣಗಿಸುವ ಯಂತ್ರ ಎಸ್ 4 ಎಸ್ ಗೆ ಕೈಗಾರಿಕಾ ಮಾನದಂಡಗಳಿಗಿಂತ 40 ಪ್ರತಿಶತದಷ್ಟು ಕಡಿಮೆ ವೆಚ್ಚದಲ್ಲಿ ಆಹಾರ ಸಂರಕ್ಷಣೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ.


ಈ ಆವಿಷ್ಕಾರವು ತಂಡಕ್ಕೆ 2012 ರಲ್ಲಿ ಯುನೈಟೆಡ್ ನೇಷನ್ ಎನ್ವಿರಾನ್ಮೆಂಟ್ ಲೀಡರ್ಶಿಪ್ ಅವಾರ್ಡ್ನಂತಹ ಹಲವಾರು ಪುರಸ್ಕಾರಗಳನ್ನು ತಂದುಕೊಟ್ಟಿದೆ.

ಕೃಷಿ ಉದ್ಯಮಿಗಳನ್ನು ಪೋಷಿಸುವುದು

ಯಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದ ನಂತರ, ವೈಭವ್ ಆವಿಷ್ಕಾರವನ್ನು ವಾಣಿಜ್ಯವಾಗಿ ಬಳಕೆಗೆ ತರಲು ನಿರ್ಧರಿಸಿದರು ಮತ್ತು ಎಸ್ 4 ಎಸ್ ತಂತ್ರಜ್ಞಾನಗಳನ್ನು 2014 ರಲ್ಲಿ ಪ್ರಾರಂಭಿಸಿದರು. ತಂತ್ರಜ್ಞಾನವನ್ನು ಬಂಡವಾಳ ಮಾಡಿಕೊಳ್ಳುವುದರ ಜೊತೆಗೆ, ವೈಭವ್ ಭಾರತದ ರೈತರಿಗೆ ಸಹಾಯ ಮಾಡಲು ಬಯಸಿದ್ದರು, ಯಾಕೆಂದರೆ ಭಾರತದ 60 ಪ್ರತಿಶತ ಜೀವನೋಪಾಯವು ಕೃಷಿಯ ಮೇಲೆ ಅವಲಂಬಿತವಾಗಿದೆ.


ಆದ್ದರಿಂದ, ರೈತರನ್ನೆ ಉದ್ಯಮಿಗಳಾಗಿಸಲು ಸ್ಟಾರ್ಟಪ್ ನಿರ್ಧರಿಸಿತು. "ನಾವು ಹಳ್ಳಿಯಲ್ಲಿ ತರಕಾರಿಗಳು, ಹಣ್ಣುಗಳು, ಮಸಾಲೆ ಪದಾರ್ಥಗಳನ್ನು ಬೆಳೆಯುವ ರೈತರೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಅವರಿಗೆ ನಮ್ಮ ಸೌರ ನಿರ್ಜಲೀಕರಣ ಸೆಟಪ್ ಅನ್ನು ಒದಗಿಸುತ್ತೇವೆ, ಅದು ಉತ್ಪನ್ನಗಳನ್ನು ನಿರ್ಜಲೀಕರಣಗೊಳಿಸಲು ಅನುವು ಮಾಡಿಕೊಡುತ್ತದೆ," ಎಂದು ವೈಭವ್ ವಿವರಿಸುತ್ತಾರೆ.


ಸೌರ ನಿರ್ಜಲೀಕರಣ ಯಂತ್ರದ ಸ್ಥಾಪನೆಗೆ 80,000 ರೂ ಬೇಕಾಗುತ್ತದೆ ಹಾಗೂ ಎಸ್ 4 ಎಸ್ ಅಗ್ರಿಪ್ರೆನ್ಯೂಯರ್‌ಗಳು(ಕೃಷಿ ಉದ್ಯೋಗಿಗಳು) ಈ ಯಂತ್ರಗಳನ್ನು ಬ್ಯಾಂಕಿನ ಸಹಾಯದಿಂದ ಖರೀದಿಸುತ್ತಾರೆ, ಮತ್ತು ಎಸ್ 4 ಎಸ್ ರೈತರಿಗೆ ಸಂಸ್ಕರಣೆಗಾಗಿ ಹಣವನ್ನು ನೀಡುತ್ತದೆ ಮತ್ತು ಬ್ಯಾಂಕ್ ಇಎಂಐ ಅನ್ನು ಹಿಂದಿರುಗಿಸಲು ಸಹಾಯ ಮಾಡುತ್ತದೆ.


"ನಾವು ಪ್ರತಿ ಕೆಜಿಗೆ ಕಚ್ಚಾ ಸಾಮಗ್ರಿಗಳಿಗಾಗಿ ರೈತರಿಗೆ ಪ್ರತ್ಯೇಕವಾಗಿ ಪಾವತಿಸುತ್ತೇವೆ ಮತ್ತು ಅದರ ಮೇಲೆ, ನಾವು ತಿಂಗಳಿಗೆ 4,000 ರಿಂದ 8,000 ರೂಗಳವರೆಗಿನ ಸಂಸ್ಕರಣಾ ಶುಲ್ಕವನ್ನು (ಉತ್ಪನ್ನಗಳನ್ನು ನಿರ್ಜಲೀಕರಣಗೊಳಿಸಲು) ಪಾವತಿಸುತ್ತೇವೆ," ಎಂದು ವೈಭವ್ ಹೇಳುತ್ತಾರೆ.


ಪ್ರಸ್ತುತ, ಈ ಸ್ಟಾರ್ಟಪ್ 1,000 ರೈತರಿಂದ ತಾಜಾ ಉತ್ಪನ್ನಗಳನ್ನು ಸಂಗ್ರಹಿಸುತ್ತದೆ, ಮತ್ತು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ 13 ಹಳ್ಳಿಗಳಿಂದ 200 ರೈತರು-ಕಮ್-ಮೈಕ್ರೋ-ಉದ್ಯಮಿಗಳು (ಅಗ್ರಿಪ್ರೆನಿಯರ್ಗಳು) ಎಸ್ 4 ಎಸ್ ಗಾಗಿ ನಿರ್ಜಲೀಕರಣಗೊಂಡ ಆಹಾರವನ್ನು ಸಂಸ್ಕರಿಸುತ್ತಿದ್ದಾರೆ.



ರೈತರಿಂದ ಸಂಗ್ರಹಿಸಿದ ಒಣಗಿದ ಹಣ್ಣುಗಳು ಮತ್ತು ತರಕಾರಿಗಳನ್ನು ಅಂತಿಮವಾಗಿ ಹೆಚ್ಚಿನ ಪ್ರಕ್ರಿಯೆಗಳು ಮತ್ತು ವಿತರಣೆಗಳಿಗಾಗಿ ಔರಂಗಾಬಾದ್‌ನ ಎಸ್ 4 ಎಸ್ ಕಾರ್ಖಾನೆಯಲ್ಲಿ ಇಡಲಾಗುತ್ತದೆ. ಮಾರಿಕೊ ಇನ್ನೋವೇಶನ್ ಫೌಂಡೇಶನ್ ಮತ್ತು ನೆಸ್ಲೆ, ಸ್ಟಾರ್ಟಪ್ಗೆ ಗುಣಮಟ್ಟದ ಪರಿಶೀಲನೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಎಸ್ 4 ಎಸ್ ವರ್ಷಕ್ಕೆ 5,000 ಟನ್ ಉತ್ಪನ್ನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಗ್ರಿಟೆಕ್ ಕಂಪನಿಗಳು

ಅಗ್ರಿಟೆಕ್ ವಲಯದಲ್ಲಿ ಏರಿಳಿತಗಳು ಹೆಚ್ಚು. ನಾಸ್ಕಾಮ್ನ ಇತ್ತೀಚಿನ ಅಧ್ಯಯನವು ಭಾರತವು ಪ್ರಸ್ತುತ ಅಗ್ರಿಟೆಕ್ ವಲಯದಲ್ಲಿ 450 ಕ್ಕೂ ಹೆಚ್ಚು ಸ್ಟಾರ್ಟಪ್ಗಳನ್ನು ಆಯೋಜಿಸುತ್ತಿದೆ ಮತ್ತು ವಿಶ್ವದ ಪ್ರತಿ ಒಂಬತ್ತನೇ ಅಗ್ರಿಟೆಕ್ ಸ್ಟಾರ್ಟಪ್ ಭಾರತದ್ದಾಗಿರುತ್ತದೆ ಎಂದು ಬಹಿರಂಗಪಡಿಸಿದೆ. 2020 ರ ವೇಳೆಗೆ ಅಗ್ರಿಟೆಕ್ ವಲಯವು ಹೊಸತನದ ಕೇಂದ್ರಬಿಂದುವಾಗಲಿದೆ ಮತ್ತು ಒಟ್ಟಾರೆ ಪರಿವರ್ತನೆಯತ್ತ ಭಾರತದ ಪ್ರಯಾಣವನ್ನು ಮುನ್ನಡೆಸುತ್ತದೆ ಎಂದು ವರದಿ ಅಂದಾಜಿಸಿದೆ.


2019 ರ ಜೂನ್ ವೇಳೆಗೆ ಈ ವಲಯವು $ 248 ದಶಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸಂಪಾದಿಸಿದೆ ಎಂದು ವರದಿಯು ಹೇಳಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 300 ಪ್ರತಿಶತದಷ್ಟು ಹೆಚ್ಚಾಗಿದೆ. ಅಗ್ರಿಟೆಕ್ ಕ್ಷೇತ್ರದಲ್ಲಿ ಸರ್ಕಾರ ಆಸಕ್ತಿ ತೋರಿಸಲು ಪ್ರಾರಂಭಿಸಿದೆ. ಕೃಷಿ ನಿರ್ವಹಣೆಯನ್ನು ಡಿಜಿಟಲ್‌ ಆಗಿ ಗುರುತಿಸಲು ಮಹಾರಾಷ್ಟ್ರವು ‘ಅಗ್ರಿಟೆಕ್’ ಯೋಜನೆಯನ್ನು ಪ್ರಾರಂಭಿಸಿದರೆ, ಕರ್ನಾಟಕವು ಕನಿಷ್ಠ 21 ಸ್ಟಾರ್ಟಪ್‌ಗಳನ್ನು ಗುರಿಯಾಗಿಸುವ ಉದ್ದೇಶದಿಂದ 2.5 ಮಿಲಿಯನ್ ಅಗ್ರಿಟೆಕ್ ನಿಧಿಯನ್ನು ಸ್ಥಾಪಿಸಿದೆ.


ಏಳು ರಾಜ್ಯಗಳ 10 ಜಿಲ್ಲೆಗಳಲ್ಲಿ ಎಐ ಬಳಸಿ ನಿಖರ ಕೃಷಿಯ ಬಗ್ಗೆ ನೀತಿ ಆಯೋಗ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದ್ದು, ತಂತ್ರಜ್ಞಾನವನ್ನು ಕೃಷಿಯಲ್ಲಿ ಪ್ರಮುಖ ಸಾಧನವಾಗಿ ಉತ್ತೇಜಿಸಲು ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳು ಕೃಷಿಯುಕ್ತ ದತ್ತಾಂಶ ಪೋರ್ಟಲ್ ಅನ್ನು ಪ್ರಾರಂಭಿಸಿದೆ.


ಅಗ್ರಿಟೆಕ್ ಸಂಸ್ಥೆಗಳ ಸಮೃದ್ಧಿಯಲ್ಲಿ, ಎಸ್ 4 ಎಸ್ ಬಹು ಮುಖ್ಯವಾಗಿದೆ, ಹಾಗೂ ಇದು ಫುಲ್-ಸ್ಟ್ಯಾಕ್ ಆಹಾರ ಕಂಪನಿಯಾಗಿದೇ ಎಂದು ವೈಭವ್ ಹೇಳುತ್ತಾರೆ.


ಎಸ್ 4 ಎಸ್ ಪರಿಸರ ವ್ಯವಸ್ಥೆಯ ಭಾಗವಾಗಿದ್ದು, ಎಲ್ಲಾ ಮಧ್ಯವರ್ತಿಗಳನ್ನು ದೂರವಿಡುತ್ತದೆ, ಲಾಜಿಸ್ಟಿಕ್ಸ್, ಶೇಖರಣಾ ವೆಚ್ಚಗಳನ್ನು ಕಡಿಮೆಗೊಳಿಸುತ್ತದೆ ಮತ್ತು ಆಹಾರವನ್ನು ಪೂರೈಸುತ್ತದೆ,” ಎಂದು ಅವರು ಹೇಳುತ್ತಾರೆ.


ಇದರ ಉದ್ದೇಶಿತ ಬಳಕೆದಾರೆಂದರೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲೌಡ್ ಕಿಚನ್‌ಗಳು, ಕ್ಯಾಟರರ್‌ಗಳು ಮತ್ತು ಈಗ ಕುರುಕುಲು ತಿಂಡಿಗಳ ಗ್ರಾಹಕರನ್ನು ಒಳಗೊಂಡಿದೆ. 


ಇಂದು ಭಾರತದಲ್ಲಿ ರೈಲ್ವೆ, ವಿಮಾನಗಳು, ಹೋಟೆಲ್‌ಗಳು, ಕಾರ್ಪೊರೇಟ್‌ಗಳು ಮತ್ತು ಮನೆಗಳಲ್ಲಿ ಎಸ್ 4 ಎಸ್ ಈರುಳ್ಳಿ ಬಳಸಿ 200,000 ಕ್ಕೂ ಹೆಚ್ಚು ಊಟ ತಯಾರಿಸಲಾಗುತ್ತದೆ,” ಎಂದು ವೈಭವ್ ಹೇಳುತ್ತಾರೆ.

ಫಂಡಿಂಗ್ ಮತ್ತು ಯೋಜನೆಗಳು

ಸ್ಟಾರ್ಟಪ್ ಕಳೆದ ಡಿಸೆಂಬರ್‌ನಲ್ಲಿ ಯುಎಸ್ ಮೂಲದ ಏಂಜಲ್ ಹೂಡಿಕೆದಾರರಾದ ಫ್ಯಾಕ್ಟರ್ ಇ ವೆಂಚರ್ಸ್ನಿಂದ ಬಹಿರಂಗಪಡಿಸದ ಸಣ್ಣ ಪ್ರಮಾಣದ ಬಂಡವಾಳವನ್ನು ಪಡೆಯಿತು.


ಎಸ್ 4 ಎಸ್ ಆರಂಭದಲ್ಲಿ ಕೃಷಿ ಮಟ್ಟದಲ್ಲಿ ತಂತ್ರಜ್ಞಾನವನ್ನು ಸರಿಪಡಿಸಲು ಸಮಯ ತೆಗೆದುಕೊಂಡಿತು, ಮತ್ತು ಐಎಸ್ಒ-ದರ್ಜೆಯ ಆಹಾರ ಕಾರ್ಖಾನೆಯನ್ನು ನಿರ್ಮಿಸಿತು ಮತ್ತು 2016 ಮತ್ತು 2018 ರ ನಡುವೆ ಗ್ರಾಹಕರ ನಡುವೆ ಪ್ರಯೋಗಗಳನ್ನು ನಡೆಸಿತು. ಸಣ್ಣ ಪ್ರಮಾಣದ ಹೂಡಿಕೆಯ ನಂತರ ನಾವು ತಿಂಗಳಿಗೆ 25 ಪ್ರತಿಶತದಷ್ಟು ಬೆಳೆಯುತ್ತಿದ್ದೇವೆ,” ಎಂದು ವೈಭವ್ ಹೇಳುತ್ತಾರೆ.


ಸ್ಟಾರ್ಟಪ್ ತನ್ನ ಕೃಷಿ ಪೂರೈಕೆ ಸರಪಳಿಯನ್ನು 1,200 ರೈತರಿಂದ 10,000 ಕ್ಕೆ ಹೆಚ್ಚಿಸಿ, ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 70,000 ಟನ್‌ಗಳಷ್ಟು ಹೆಚ್ಚಿಸಲು ಮಾರ್ಚ್ 2020 ರ ವೇಳೆಗೆ ಇನ್ನಷ್ಟು ಬಂಡವಾಳವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ.