#ಪ್ಲಾಸ್ಟಿಕ್ ಬೇಕು: ಪ್ಲಾಸ್ಟಿಕ್ ಮರುಬಳಕೆಗೆ ವಿಶಿಷ್ಟ ಅಭಿಯಾನ ಆರಂಭಿಸಿದ ಬೆಂಗಳೂರು ಅಂತರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರ
ದಿನೇ ದಿನೇ ಹೆಚ್ಚಾಗುತ್ತಲೇ ಇರುವ ಪ್ಲಾಸ್ಟಿಕ್ ಸಮಸ್ಯೆಗೆ ಹಲವು ರೀತಿಯ ಪರಿಹಾರಗಳನ್ನು ಕಂಡುಕೊಳ್ಳಲಾಗಿದೆಯಾದರೂ ಅದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಪ್ಲಾಸ್ಟಿಕ್ ಬಳಸಿ ರಸ್ತೆ ಮಾಡುವ ಪದ್ಧತಿ ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನು ಅನುಸರಿಸಲು ಹೊರಟಿರುವ ಕೆಐಎ ಸಫಲವಾದರೆ ಮತ್ತಷ್ಟು ಪ್ಲಾಸ್ಟಿಕ್ ಸಮಸ್ಯೆ ಕಡಿಮೆಯಾಗುತ್ತದೆ.
ಇಡಿಯ ಪ್ರಪಂಚಕ್ಕೇ ತಲೆನೋವಾಗಿ ಪರಿಣಮಿಸಿರೋ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಲು ಎಂತದೇ ಕಠಿಣ ಕ್ರಮ ಕೈಗೊಂಡರೂ ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ನಿಂದ ಚಿಕ್ಕ ಪುಟ್ಟ ಕಟ್ಟಡಗಳನ್ನು, ರಸ್ತೆಗಳನ್ನು ನಿರ್ಮಿಸಿ ಪ್ಲಾಸ್ಟಿಕ್ ಕಡಿಮೆ ಮಾಡುವ ಸಂಕಲ್ಪವನ್ನು ಇತ್ತೀಚಿನ ದಿನಗಳಲ್ಲಿ ಮಾಡಲಾಗುತ್ತಿದೆ. ಇಂತಹುದೇ ವಿಶಿಷ್ಟ ಪರಿಕಲ್ಪನೆಯೊಂದಿಗೆ ಈಗ ಸುದ್ದಿಯಲ್ಲಿರೋದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
ಇತ್ತೀಚೆಗೆ ಬಿಡುಗಡೆಯಾದ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಬಿ.ಐ.ಎ.ಲ್, ತನ್ನ ಕ್ಯಾಂಪಸ್‌ನಲ್ಲಿನ ಅಷ್ಟೂ ರಸ್ತೆಗಳನ್ನು 2021 ರೊಳಗೆ ಪ್ಲಾಸ್ಟಿಕ್‌ನಿಂದ ನಿರ್ಮಿಸುವುದಾಗಿ ಹೇಳಿದೆ.
ಪ್ಲಾಸ್ಟಿಕ್ ಮರುಬಳಕೆಗೆ ಒತ್ತು ನೀಡಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮವು ಶ್ಲಾಘನೀಯವಾಗಿದೆ. ರಸ್ತೆ ನಿರ್ಮಾಣಕ್ಕೆ ಸುಮಾರು 50 ಟನ್ ಪ್ಲಾಸ್ಟಿಕ್ ಬೇಕಾಗಬಹುದು ಎಂದು ಹೇಳಿರುವ ಪ್ರಾಧಿಕಾರವು, ಪ್ಲಾಸ್ಟಿಕ್ ಸಂಗ್ರಹಿಸಲು ಬೆಂಗಳೂರು ಉತ್ತರದಲ್ಲಿ ಹಾಗೂ ದೇವನಹಳ್ಳಿ ತಾಲ್ಲೂಕಿನ ಹಲವು ಕಡೆ ಡಬ್ಬಿಗಳನ್ನು ಅಳವಡಿಸಿದೆ.
#ಪ್ಲಾಸ್ಟಿಕ್‌ಬೇಕು ಎಂಬ ಪ್ಲಾಸ್ಟಿಕ್ ಸಂಗ್ರಹಣಾ ಕಾರ್ಯಕ್ರಮಕ್ಕೆ ಪ್ರಾಧಿಕಾರದ ಅಡಿಯಲ್ಲಿ ನಡೆಯುತ್ತಿರುವ ಬೆಟ್ಟಕೋಟೆ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ, ವಿಜಯಪುರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ, ಅರದೇಶನಹಳ್ಳಿ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಹಾಗೂ ದೇವನಹಳ್ಳಿ ತಾಲೂಕಿನ ಐದು ಪಂಚಾಯಿತಿಗಳು ಮತ್ತು ಬೆಂಗಳೂರು ಉತ್ತರದ ನಿವಾಸಿ ಕಲ್ಯಾಣ ಸಂಘಗಳು ಬೆಂಬಲದಲ್ಲಿ ನಡೆಯಲಿದ್ದು, ಇವು ತಮ್ಮ ಸುತ್ತಲಿನ ಜನರಿಗೆ ಪ್ಲಾಸ್ಟಿಕ್ ಕೊಡುವಂತೆ ಪ್ರೇರೇಪಿಸುವುಂತೆ ತಿಳಿಸುತ್ತವೆ.
ಐಟಿಸಿಯ ಪಾಲುದಾರಿಕೆಯೊಂದಿಗೆ ಮುಂದುವರೆಯಲು ಇಚ್ಛಿಸಿರುವ ಪ್ರಾಧಿಕಾರವು, ಐಟಿಸಿಯ ಸಹಾಯದಿಂದ ಬೆಂಗಳೂರಿನ 20ಕ್ಕೂ ಹೆಚ್ಚು ಶಾಲೆಗಳಿಗೆ ಪ್ಲಾಸ್ಟಿಕ್ ಸಂಗ್ರಹಣಾ ಅಭಿಯಾನದ ಜಾಗೃತಿ ಮೂಡಿಸಲು ಯಶಸ್ವಿಯಾಗಿದ್ದು, ತನ್ನ “ಬೆಟರ್ ವರ್ಡ್” ಕಾರ್ಯಕ್ರಮದಡಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಹೊಣೆ ಹೊತ್ತಿದೆ. ಇನ್ನು, ಸನ್‌ಫೀಸ್ಟ್‌ಯಿಪ್ಪೀ ಸಂಸ್ಥೆಯು “ಬೆಟರ್ ವರ್ಡ್” ಉಪಕ್ರಮದಲ್ಲಿ ಪ್ರತಿಜ್ಞೆ ತಗೆದುಕೊಳ್ಳುವ ಪ್ರತಿ ಭಾರತೀಯನ ಪರವಾಗಿ 1 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ಲಾಸ್ಟಿಕ್ ಬೇಕು ಅಭಿಯಾನಕ್ಕೆ ಕೊಡುಗೆ ನೀಡುವುದಾಗಿ ಒಪ್ಪಿಕೊಂಡಿದೆ. ಕೆಕೆ ಪ್ಲಾಸ್ಟಿಕ್ ಎಂಬ ತ್ಯಾಜ್ಯ ನಿರ್ವಹಣಾ ಸಂಸ್ಥೆಯು ಬಿಟುಮೆನ್ ಜೊತೆ ಪ್ಲಾಸ್ಟಿಕ್ ಬೆರೆಸಿ ರಸ್ತೆ ನಿರ್ಮಿಸುವ ತಂತ್ರಜ್ಞಾನವನ್ನು ಈ ಕಾರ್ಯದಲ್ಲಿ ಬಳಸಲಿದೆ.
ಈ ಯೋಜನೆಯ ಮುಖ್ಯ ಅಧಿಕಾರಿಯಾದ ಟಾಮ್ ಶಿಮ್ಮಿನ್, ಮಾತನಾಡುತ್ತಾ,
“ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ, ನಮ್ಮಲ್ಲಿ ದಿನವೊಂದಕ್ಕೆ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಟಿಯಾಗುತ್ತದೆ. ಬಿಐಎಎಲ್, ಆದಾಗ್ಯೂ, ತ್ಯಾಜ್ಯ ನಿರ್ವಹಣೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದು, ಜವಬ್ದಾರಿಯುತವಾಗಿ ನಿರ್ವಹಿಸುತ್ತಾ ಬಂದಿದೆ. ಪ್ಲಾಸ್ಟಿಕ್‌ನಿಂದ ರಸ್ತೆ ನಿರ್ಮಿಸುವುದು ಸಾಂಪ್ರದಾಯಿಕವಾದ ಡಾಂಬರು ಅಥವಾ ಸಿಸಿ ರಸ್ತೆ ನಿರ್ಮಿಸುವುದಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದ್ದು ಮತ್ತು ಬಾಳಿಕೆ ಬರುವಂತೆ ನಿರ್ಮಿಸಬಹುದಾಗಿದೆ. ಇದು ಸುಲಭವು ಹಾಗೂ ಪರಿಸರೀಯವಾಗಿಯೂ ಫಲಕಾರಿಯಾಗಿದೆ ಮತ್ತು ಇದರಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನೂ ಕಡಿಮೆ ಮಾಡಬಹುದಾಗಿದೆ. ನಾವು ಯಾವಾಗಲೂ ಬಿಐಎಎಲ್ ಸುಸ್ಥಿರವಾಗಿ ಅಭಿವೃದ್ಧಿ ಮಾಡುವ ಕಾರ್ಯಗಳಲ್ಲಿ ಮುಂದಾಳತ್ವ ವಹಿಸಿಕೊಂಡು ಎಲ್ಲರಿಗೂ ಮಾದರಿಯಾಗುತ್ತದೆ ಎಂದು ನಂಬಿದ್ದೇವೆ. #ಪ್ಲಾಸ್ಟಿಕ್‌ಬೇಕು ಅಭಿಯಾನವು ಜಗತ್ತನ್ನೇ ಬದಲಾಯಿಸುವಂತ ಉಪಕ್ರಮವಾಗಿದೆ,” ಎಂದಿದ್ದಾರೆ.
ಹೇಗೆ ನಿರ್ಮಾಣಗೊಳ್ಳುತ್ತದೆ ಪ್ಲಾಸ್ಟಿಕ್ ರಸ್ತೆ?
ಇಂಡಿಯನ್ ರೋಡ್ ಕಾಂಗ್ರೆಸ್‌ನ ಮಾರ್ಗಸೂಚಿಗಳ ಅನುಗುಣವಾಗಿ ಪ್ಲಾಸ್ಟಿಕ್‌ಅನ್ನು ಕಲ್ಲುಹಾಸಿನೊಂದಿಗೆ ಹಾಕಲಾಗುತ್ತದೆ. ಅದನ್ನು ಮತ್ತು ಬಿಟುಮೆನ್ ಸಮನಾಂತರವಾಗಿ 150 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾಯಿಸಿ, ಮಿಶ್ರಣ ಘಟಕಕ್ಕೆ ಕಳುಹಿಸಲಾಗುತ್ತದೆ. ಅದಾದನಂತರದಲ್ಲಿ ಚೂರುಚೂರಾದ 6 ರಿಂದ 8 % ಪ್ಲಾಸ್ಟಿಕ್‌ಅನ್ನು ಕಾಯಿಸಿದ ಮಿಶ್ರಣದೊಂದಿಗೆ ಬೆರೆಸಿ ರಸ್ತೆಗೆ ಹರಡಲಾಗುತ್ತದೆ.
ಯಾವ್ಯಾವ ರಸ್ತೆಗಳಿಗೆ ಪ್ಲಾಸ್ಟಿಕ್?
ಸಂಗ್ರಹಣೆಗೊಂಡ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಲ್ದಾಣ ಪ್ರದೇಶದ ಒಳರಸ್ತೆಗಳನ್ನು ಪ್ಲಾಸ್ಟಿಕ್ ಮತ್ತು ಬಿಟುಮೆನ್ ಬಳಸಿ ಪಾಲಿಮರೀಕರಿಸಲಾದ, ಯಾವುದೇ ಹವಾಮಾನದಲ್ಲೂ ಗಟ್ಟಿಯಾಗಿರುವ ರಸ್ತೆಗಳನ್ನು ನಿರ್ಮಿಸಲು ಬಿಐಎಎಲ್ ನಿರ್ಧರಿಸಿದೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ ಈ ರೀತಿಯ ರಸ್ತೆಗಳು ಡಾಂಬರು ರಸ್ತೆಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆಂಬುದು ಸಾಬೀತಾಗಿದೆ. ತನ್ನ ಕ್ಯಾಂಪಸ್‌ಗೆ ಸಂಪರ್ಕ ಒದಗಿಸುವ ಹಲವಾರು ರಸ್ತೆಗಳನ್ನು ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ನಿಂದ ನಿರ್ಮಿಸಲು ಚಿಂತಿಸುತ್ತಿರುವ ಪ್ರಾಧಿಕಾರಕ್ಕೆ ಸಾಕಷ್ಟು ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯದ ಅವಶ್ಯಕತೆ ಇದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.