ಮಿಲಿಟರಿ ಪೊಲೀಸ್ ಆಗಿ ಆಯ್ಕೆಯಾದ ಧಾರವಾಡದ ಈ ಯುವತಿ
ದೇಶದಲ್ಲಿ ಭಾರತೀಯ ಸೇನೆ ನಡೆಸಿದ ಮೊದಲ ಮಹಿಳಾ ಸೇನಾ ನೇಮಕಾತಿಗೆ ಕರ್ನಾಟಕದ ಧಾರವಾಡ ಜಿಲ್ಲೆಯ ಯುವತಿಯೊರ್ವಳು ಆಯ್ಕೆಯಾಗಿದ್ದಾಳೆ.
ಸೈನಿಕರಾಗಬೇಕು, ದೇಶವನ್ನು ಕಾಯಬೇಕು ಎಂಬುದು ಹಲವಾರು ಜನರ ಕನಸಾಗಿರುತ್ತದೆ. ಇದಕ್ಕೆ ತಕ್ಕಂತೆ ದೇಹಾದಾರ್ಡ್ಯತೆ ಕೂಡ ಬೇಕು. ಕೆಲವು ಜನರು ಮಾತ್ರ ಈ ಕೆಲಸಕ್ಕೆ ಆಯ್ಕೆಯಾಗುತ್ತಾರೆ. ಇತ್ತೀಚೆಗೆ ಮಹಿಳೆಯು ಎಲ್ಲ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಸೈನ್ಯವನ್ನು ಹೊರತುಪಡಿಸಿ ಇದೀಗ ಆ ಕನಸು ಸಾಕಾರವಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ಸೈನ್ಯವು ಮಹಿಳೆಯರಿಗಾಗಿ ಆಯ್ಕೆ ನಡೆಸಿತ್ತು. ಈ ವರ್ಷದ ಆರಂಭದಲ್ಲಿ ಮಹಿಳೆಯರಿಗಾಗಿ ಮೊದಲ ಬಾರಿಗೆ ಅರ್ಜಿ ಕರೆದಿತ್ತು. ಮಹಿಳಾ ಮಿಲಿಟರಿ ಪೊಲೀಸ್ ಆಗಿ ಆಯ್ಕೆಯಾದ ಕೆಲವು ಅಭ್ಯರ್ಥಿಗಳಲ್ಲಿ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಮದಿಕೊಪ್ಪದ ಭೀಮಕ್ಕ ಮಹಾದೇವಪ್ಪ ಚವ್ಹಾಣ್ ಕೂಡ ಆಯ್ಕೆಯಾಗಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಮೊದಲಿನಿಂದಲೂ ತುಂಬಾ ಚುರುಕಾಗಿದ್ದ ಭೀಮಕ್ಕ ಪ್ರಸ್ತುತ ಧಾರವಾಡದ ಕರ್ನಾಟಕ ಕಲಾ ವಿದ್ಯಾಲಯದಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದು, ಪದವಿ ಪೂರ್ವ ಕಾಲೇಜಿನ ದಿನಗಳಿಂದಲೂ ಎನ್.ಸಿ.ಸಿ(ನ್ಯಾಷನಲ್ ಕೆಡಿಟ್ ಕಾರ್ಪ್ಸ) ಯಲ್ಲಿ ಸಕ್ರೀಯರಾಗಿದ್ದರು.
ಇತ್ತೀಚಿಗೆ ಭಾರತೀಯ ಸೇನೆಯು ತಮ್ಮ ವೆಬ್ಸೈಟ್ ಅಲ್ಲಿ ಮಹಿಳಾ ಸೈನಿಕರ ಆಯ್ಕೆಯ ಕುರಿತಾಗಿ ನೇಮಕ ಮಾಡಿಕೊಳ್ಳುವುದರ ಬಗೆಗೆ ಮಾಹಿತಿಯನ್ನು ನೀಡಿ ಅರ್ಜಿಯನ್ನು ಆಹ್ವಾನಿಸಿತ್ತು. ಇದರ ಬಗ್ಗೆ ಆಸಕ್ತಿ ಹೊಂದಿದ್ದ ಭೀಮಕ್ಕ ಮರುಮಾತಿಲ್ಲದೆ ಅರ್ಜಿಯನ್ನು ಸಲ್ಲಿಸಿದ್ದರು.
ತನ್ನ ಕಾಲೇಜಿನ ಸಮಯದ ನಂತರ, ತನ್ನ ಹಳ್ಳಿಯ ಶಾಲಾ ಮೈದಾನದಲ್ಲಿ ವ್ಯಾಯಾಮ ಮಾಡುತ್ತಿದ್ದಳು. ಇದನ್ನು ಗಮನಿಸಿದ ಆಕೆಯ ಸಂಬಂಧಿಕರೊಬ್ಬರು ಕಿತ್ತೂರಿನ ರೂರಲ್ ಯೂತ್ಸ್ ಡಿಫೆನ್ಸ್ ಅಕಾಡೆಮಿ ಅಕಾಡೆಮಿಗೆ ಸೇರಲು ಸೂಚಿಸಿದರು. ಕಾಲೇಜಿನ ರಜೆಯಲ್ಲಿ ಎರಡು ತಿಂಗಳು ತರಬೇತಿ ಪಡೆದು ನಂತರ ಸೇನಾ ಅರ್ಜಿ ಹಾಕಿದ್ದಾರೆ, ವರದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್.
"ಹಳ್ಳಿಯ ಜನರು ನಾನು ಗಂಡು ಹುಡುಗರಂತೆ ಟ್ರ್ಯಾಕ್ ಸೂಟ್ ಬಟ್ಟೆಗಳನ್ನು ಧರಿಸುವುದಕ್ಕೆ ಅವಮಾನಿಸುತ್ತಿದ್ದರು. ಇಂದು ನಾನು ಅದನ್ನು ಸವಾಲಾಗಿ ತೆಗೆದುಕೊಂಡು ನನ್ನ ಗುರಿಯೆಡೆಗೆ ಹೆಜ್ಜೆ ಹಾಕಿ ಸತತ ಅಭ್ಯಾಸದಿಂದ ಗುರಿಯನ್ನು ಸಾಧಿಸಿದೆ." ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ತಿಳಿಸಿದ್ದಾರೆ.
ಎಡೆಕ್ಸ್ ಲೈವ್ ನೊಂದಿಗೆ ಮಾತನಾಡಿದ ಭೀಮಕ್ಕ,
"ನಾನು ಆನ್ಲೈನ್ ಅಲ್ಲಿ ಅರ್ಜಿ ಭರ್ತಿ ಮಾಡುವಾಗ ಸುಮಾರು 8.4 ಲಕ್ಷ ಜನರು ಅರ್ಜಿ ಸಲ್ಲಿಸಿದ್ದರು. ಅವರು ನನಗಿಂತ ಉತ್ತಮ ಅಭ್ಯರ್ಥಿಗಳಾಗಿರುತ್ತಾರೆ ನಾನು ಆಯ್ಕೆಯಾಗುಬಹುದೆಂದು ನಿರೀಕ್ಷಿಸಿರಲಿಲ್ಲ. ಅಗಸ್ಟ್ ತಿಂಗಳಲ್ಲಿ ನನಗೆ ಪತ್ರ ಸಿಕ್ಕಿತು. ಬಹುಶಃ ಅವರು ಬೋರ್ಡ್ ಪರೀಕ್ಷೆಗಳಲ್ಲಿ 86% ಹೆಚ್ಚು ಅಂಕಗಳನ್ನು ಪಡೆದವರನ್ನು ಆಯ್ಕೆ ಮಾಡಿರಬಹದು," ಎಂದಿದ್ದಾರೆ.
ದೈಹಿಕ ಪರೀಕ್ಷೆಯಲ್ಲಿ ಕಡಿಮೆ ಕಾಲಾವಧಿಯಲ್ಲಿ 1,600 ಮೀಟರ್ ಓಡಲು ಹೇಳಿ, ಅಲ್ಲಿ 1600 ಮೀಟರ್ ಕ್ರಮಿಸಲು ತೆಗೆದುಕೊಂಡ ಸಮಯದ ಆಧಾರದ ಮೇಲೆ ಅತ್ಯುತ್ತಮ, ಉತ್ತಮ ಹಾಗೂ ಒಳ್ಳೆಯ ಶ್ರೇಣಿಗಳನ್ನು ಗುರುತಿಸುತ್ತಾರೆ. ನಾನು ಅತ್ಯುತ್ತಮ ಹಾಗೂ ಉತ್ತಮ ಓಟಗಾರ್ತಿ ಗುಂಪಿನಲ್ಲಿ ಗುರುತಿಸಲ್ಪಟ್ಟಿದ್ದೇನೆ. ಜೊತೆಗೆ ದೂರದೃಷ್ಟಿಯ ಪರೀಕ್ಷೆಯನ್ನು ಸಹ ನಡೆಸಿದರು ಎಂದು ಭೀಮಕ್ಕ ಹೇಳುತ್ತಾರೆ. ದೈಹಿಕ ಪರೀಕ್ಷೆಯ ನಂತರ ಲಿಖಿತ ಪರೀಕ್ಷೆಗಾಗಿ ಸತತ ತಯಾರಿ ನಡೆಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಸಿದ್ಧತೆ ನಡೆಸಿದ್ದರು.
"ನನ್ನ ಪೋಷಕರು ಈ ಫಲಿತಾಂಶದಿಂದ ತುಂಬಾ ಸಂತಸ ಪಟ್ಟಿದ್ದು, ತರಬೇತಿ ಶಿಬಿರದ ಕುರಿತಾಗಿ ಸೂಚನೆಗಳನ್ನು ಪಡೆಯಲು ಹಾಗೂ ನನ್ನನ್ನು ಎಲ್ಲಿ ಪೋಸ್ಟ್ ಮಾಡಲಾಗುತ್ತದೆ ಎಂಬುದನ್ನು ತಿಳಿಯಲು ಉತ್ಸುಕಳಾಗಿದ್ದೇನೆ" ಎಂದು ಭೀಮಕ್ಕ ಹೇಳುತ್ತಾರೆ.
ಈ ಸೇನೆಗೆ ದೇಶಾದ್ಯಾಂತ ಒಟ್ಟು ನೂರು ಜನರು ಆಯ್ಕೆಯಾಗಿದ್ದು ಅದರಲ್ಲಿ ದಕ್ಷಿಣ ಭಾರತದಿಂದ ಇಪ್ಪತ್ತು ಜನರು ಆಯ್ಕೆಯಾಗಿದ್ದಾರೆ. ಅದರಲ್ಲಿ ಕರ್ನಾಟಕದ ಭೀಮಕ್ಕ ಕೂಡ ಒಬ್ಬರೂ ಎನ್ನುವುದು ಹೆಮ್ಮೆಯ ವಿಷಯ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.