ಸ್ವಿಗ್ಗಿಯಲ್ಲಿ ಫುಡ್ ಡೆಲವರಿ ಗರ್ಲ್ ಆಗಿ ಕೆಲಸ ಮಾಡುವ ಮೂಲಕ ಮಹಿಳೆಯರು ಈ ಕೆಲಸ ಮಾಡಬಹುದು ಎಂಬುದನ್ನು ತೋರಿಸಿದ ಜನನಿ ರಾವ್.

20 ವರ್ಷದ ಹೈದರಾಬಾದ್ ಮೂಲದ ಜನನಿ ರಾವ್ ಸದ್ಯ ಸ್ವಿಗ್ಗಿ ಫುಡ್ ಡೆಲವರಿ ಗರ್ಲ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಈ ಮೂಲಕ ಪುರುಷರಂತೆ ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಸ್ವಿಗ್ಗಿಯಲ್ಲಿ ಫುಡ್ ಡೆಲವರಿ ಗರ್ಲ್ ಆಗಿ ಕೆಲಸ ಮಾಡುವ ಮೂಲಕ ಮಹಿಳೆಯರು ಈ ಕೆಲಸ ಮಾಡಬಹುದು ಎಂಬುದನ್ನು ತೋರಿಸಿದ ಜನನಿ ರಾವ್.

Monday October 21, 2019,

3 min Read

ನಮ್ಮ ತಂತ್ರಜ್ಞಾನ ಮುಂದುವರೆದಂತೆ ಸಮಾಜ ಕೂಡ ಮುಂದುವರೆಯುತ್ತಿದೆ ಎಂಬುದು ನಾವೆಲ್ಲ ನಂಬಿರುವ ಸತ್ಯ. ಈಗಾಗಲೆ ಹಳೆಯ ಕಟ್ಟುಪಾಡುಗಳನ್ನು ಬಿಟ್ಟ ಅನೇಕ ಜನ ಸದ್ಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಷ್ಟೆಲ್ಲಾ ಮುಂದುವರೆದಿದ್ದರೂ ಹಳೆಯ ಕೆಲವೊಂದು ಕಟ್ಟುಪಾಡುಗಳು ಇನ್ನು ಸಮಾಜದಿಂದ ದೂರ ಆಗಿಲ್ಲ. ಶಿಕ್ಷಣದಿಂದ ಸಾಕ್ಷರತೆ ಪ್ರಮಾಣ ಹೆಚ್ಚಾಗಿದ್ದರೂ ಕೆಲವೊಂದು ಹಳೆಯ ಸಂಪ್ರದಾಯಗಳಿಗೆ ಕೆಲವರು ಜೋತುಬಿದ್ದಿರೋದನ್ನು ನೋಡಿದ್ದೇವೆ, ಕೇಳಿದ್ದೇವೆ. ಹೆಣ್ಣು ಮನೆಯಿಂದ ಹೊರಗೆ ಹೋಗಬಾರದು ಎಂಬುದು ಹಳೆಯ ಕಟ್ಟುಪಾಡು.


ಆದರೆ ಇದೀಗ ಬದಲಾಗಿದೆ. ಹೆಣ್ಣು ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸುವಂತವಳಾಗಿದ್ದಾಳೆ. ಆದರೂ ಕೆಲವೊಂದು ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಮಾಣ ಕಡಿಮೆ ಇದೆ. ಈ ಸಾಲಿಗೆ ಫುಡ್ ಡೆಲವರಿ ಕ್ಷೇತ್ರ ಕೂಡ ಒಂದು. ಈಗಾಗಲೇ ಸಾಕಷ್ಟು ಆನ್ ಲೈನ್ ಫುಡ್ ಕಂಪನಿಗಳು ತೆರೆದುಕೊಂಡಿವೆ. ಆ ಕಂಪನಿಗಳಲ್ಲಿ ಹೆಚ್ಚಾಗಿ ಡೆಲವರಿ ಬಾಯ್ ಗಳನ್ನು ಮಾತ್ರ ನಾವು ನೋಡುತ್ತೇವೆ. ಆದರೆ ಈ ಎಲ್ಲಾ ಕಟ್ಟುಪಾಡುಗಳನ್ನು ತೊಡೆದು ಹಾಕಿರುವ ಜಜನಿ ರಾವ್ ಹೊಸದೊಂದು ಹೆಜ್ಜೆ ಇಡುವ ಮೂಲಕ ಮಹಿಳೆಯರಿಗೆ ಅಡಿಪಾಯ ಹಾಕಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.


ಸ್ಕೂಟರ್ ಮೇಲೆ ಜನನಿ ರಾವ್ (ಚಿತ್ರ ಕೃಪೆ: ತೆಲಂಗಾನ ಟುಡೇ)



ಹೌದು, ಸ್ವಿಗ್ಗಿ ಡೆಲಿವರಿ ಕೆಲಸ ಮಾಡುವುದು ಮಹಿಳೆಯರಿಗೆ ಅಷ್ಟಾಗಿ ಹೇಳಿಮಾಡಿಸುವ ಕೆಲಸ ಅಲ್ಲ ಎಂಬ ಪೂರ್ವಗ್ರಹದಲ್ಲಿದ್ದವರಿಗೆ ಹೈದ್ರಾಬಾದ್ ನ ಜನನಿ ಹುಡುಗಿ ಉತ್ತರ ನೀಡಿದ್ದಾರೆ. ಹೈದ್ರಾಬಾದ್ ಮೂಲದ 20 ವರ್ಷದ ಜನನಿ ರಾವ್ ಸದ್ಯ ತನ್ನ ಸ್ಕೂಟರ್ ಮೂಲಕ ಹೈದ್ರಾಬಾದ್ ನ ಗಲ್ಲಿ ಗಲ್ಲಿಗಳಲ್ಲಿ ಸ್ವಿಗ್ಗಿ ಆರ್ಡರ್ ಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಸ್ವಿಗ್ಗಿ ಡೆಲವರಿ ಫೀಲ್ಡ್ ನಲ್ಲೂ ಮಹಿಳೆಯರು ಕೆಲಸ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.


ಎರಡುವರೆ ತಿಂಗಳ ಹಿಂದೆಯಷ್ಟೆ ಸ್ವಿಗ್ಗಿ ಫುಡ್ ಕಂಪನಿಗೆ ಸೇರಿರುವ ಜನನಿ ರಾವ್ ಫುಡ್ ಡೆಲವರಿ ಗರ್ಲ್ ಆಗಿ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪುರುಷರ ಭದ್ರ ಕೋಟೆ ಎನ್ನುತ್ತಿದ್ದ ಸ್ವಿಗ್ಗಿ ಡೆಲವರಿ ಕೆಲಸಕ್ಕೆ ಜನನಿ ರಾವ್ ಪ್ರವೇಶ ಮಾಡುವ ಮೂಲಕ ಅನೇಕ ಮಹಿಳೆಯರಿಗೆ ದಾರಿ ಮಾಡಿ ಕೊಟ್ಟಿದ್ದಾರೆ.


ದಿ ನ್ಯೂಸ್ ಮಿನಿಟ್ ನೊಂದಿಗೆ ಮಾತನಾಡುತ್ತಾ ಜನನಿ ರಾವ್ ಹೇಳುತ್ತಾರೆ,


ನಾನು ಈ ಕೆಲಸಕ್ಕೆ ಸೇರಲು ಒಂದು ಮುಖ್ಯ ಕಾರಣ ಇದೆ. ನನ್ನ ಪೋಷಕರು ಮನೆಯೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ‌. ಹಾಗಾಗಿ ತಾನು ಆ ಮನೆ ಕಟ್ಟಿಸುವುದಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಯೋಚಿಸಿದೆ. ಆಗ ಹೊಳೆದದ್ದು ಡೆಲವರಿ ಗರ್ಲ್ ಆಗಿ ಕೆಲಸ ಮಾಡುವುದು. ಹಾಗಾಗಿ ಕಳೆದ ಎರಡುವರೆ ತಿಂಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಮೊದಲು ನಾನು ಸ್ವಿಗ್ಗಿ ಕಂಪನಿಗೆ ಕೆಲಸ ಕೇಳಿಕೊಂಡು ಹೋದಾಗ ಸಿಬ್ಬಂದಿಯೊಂದಿಗೆ ಈ ವಿಚಾರ ಹೇಳಿದೆ. ಅವರು ನನ್ನನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆಯೋ..? ಇಲ್ಲವೋ..? ಎಂಬ ಅನುಮಾನ ಇತ್ತು. ಆದರೆ ಕೆಲಸ ಸಿಕ್ಕಿತು. ಈ ಕೆಲಸ ಖುಷಿಯಿದೆ ಎನ್ನುತ್ತಾರೆ.

ಇನ್ನು ಜನನಿಯ ಪ್ರತಿನಿತ್ಯದ ಕೆಲಸ ಬೆಳಗ್ಗೆ 11 ರಿಂದ ಪ್ರಾರಂಭವಾಗಿ ಮಧ್ಯಾಹ್ನ 3:30 ರವರೆಗೆ ಕೊನೆಗೊಳ್ಳುತ್ತದೆ. ದಿನಕ್ಕೆ ಸುಮಾರು 7 ರಿಂದ 8 ಫುಡ್ ಡೆಲವರಿಗಳನ್ನು ನಿಭಾಯಿಸುತ್ತಾರೆ ಜನನಿ. ತಮ್ಮ ವ್ಯಾಪ್ತಿಯಲ್ಲಿರುವ ಯಾವುದೇ ಪ್ರದೇಶಕ್ಕಾದರೂ ಜನನಿ ಹೋಗಿ ಗ್ರಾಹಕರ ಹೇಳಿದ ಆಹಾರವನ್ನು ಡೆಲವರಿ ಮಾಡಿ ಬರುತ್ತಾರೆ. ಸದ್ಯ ಜನನಿ ಈ ವರ್ಷ ಸೈಕಾಲಜಿ ಮತ್ತು ಮಾಸ್ ಕಮ್ಯುನಿಕೇಷನ್‌ನಲ್ಲಿ ಪದವಿ ಮುಗಿಸಿದ್ದಾರೆ.


ಎ ಎನ್ ಐ ಜೊತೆ ಮಾತನಾಡುತ್ತಾ ಜನನಿ,

“ನಾನು ಈ ಕೆಲಸಕ್ಕೆ ಸೇರಿ ಎರಡೂವರೆ ತಿಂಗಳಾಯ್ತು. ಈ ಕೆಲಸವನ್ನು ನಾನು ಸಂಭ್ರಮಿಸುತ್ತಿದ್ದೇನೆ. ಇದೊಂದು ತುಂಬಾ ಇಂಟರೆಸ್ಟಿಂಗ್ ಕೆಲಸ ಅನ್ನಿಸಿದೆ. ನಾನು ಪ್ರತಿದಿನ ವಿಭಿನ್ನ ಹಾಗೂ ವೈವಿದ್ಯಮಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇನೆ. ಅವರೊಂದಿಗೆ ಸಂಭಾಷಣೆ ನಡೆಸುತ್ತೇನೆ. ಇದೊಂದು ವಿಭಿನ್ನ ಅನುಭವ ನನಗೆ ಅನೇಕರು ನನ್ನ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಹುಡುಗಿಯರು ಇಂಥಹ ಕೆಲಸಕ್ಕೆ ಬರುವುದು ಕಡಿಮೆ ನೀನು ಬಂದಿದ್ದೀಯ ಎಂದು ಬೆನ್ನು ತಟ್ಟಿದ್ದಾರೆ” ಎಂದರು

ಇನ್ನು ಮುಂದುವರೆದಂತೆ ಕೆಲಸ ಕೆಲಸ ಅಷ್ಟೇ, ಕೆಲಸದಲ್ಲಿ ದೊಡ್ಡದು ಚಿಕ್ಕದು ಎಂಬುದು ಇಲ್ಲಾ, ಯಾವುದು ನಿಮ್ಮ ಶ್ರಮಕ್ಕೆ ತಕ್ಕ ಹಣ ಕೊಡುತ್ತದೋ ಅದರಲ್ಲಿ ಕೆಲಸ ಮಾಡುವುದರಲ್ಲಿ ಏನು ತಪ್ಪಿಲ್ಲ. ಇನ್ನು ಈ ಫುಡ್ ಡೆಲವರಿ ಕೆಲಸದಲ್ಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತಿದೆ. ಆದರೆ ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಹೈದರಾಬಾದ್, ತೆಲಂಗಾಣದ ರಾಜ್ಯದ ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದು. ಆದ್ದರಿಂದ ಭಯಪಡುವ ಅಗತ್ಯವೇ ಇಲ್ಲ. ನನಗೆ ಎಂದಿಗೂ ಅಭದ್ರತೆಯ ಭಯ ಕಾಡಲಿಲ್ಲ ಎಂದು ಖುಷಿಯಿಂದ ಹೇಳಿದರು, ಇಂಡಿಯನ್ ಟೈಮ್ಸ್ ವರದಿ.


(ಚಿತ್ರ ಕೃಪೆ: ಫೇಸ್ ಬುಕ್)



ಒಬ್ಬ ಮಹಿಳೆ ಮನಸ್ಸು ಮಾಡಿದರೆ ಯಾವ ಕೆಲಸವನ್ನಾದರೂ ಮಾಡಬಹುದು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಅಂಥವರ ಸಾಲಿಗೆ ಇದೀಗ ಜನನಿ ರಾವ್ ಕೂಡ ಸೇರಿಕೊಂಡಿದ್ದಾರೆ. ಕೇವಲ ದುಡ್ಡು ದುಡಿಯುವುದೇ ಜೀವನ ಅಲ್ಲ. ಮಾಡುವ ಕೆಲಸದಲ್ಲಿ ಖುಷಿ ಕಾಣುವುದು ಮುಖ್ಯವಾದರೆ, ಮತ್ತೊಂದು ಕಡೆ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎನ್ನುವುದು ಜನನಿ ಅವರ ಮಾತು. ಹಾಗಾಗಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ತೃಪ್ತಿ ಕಾಣಬೇಕು. ಇನ್ನು ಮುಂದುವರೆದಂತೆ ಕೆಲಸದಲ್ಲಿ ಲಿಂಗಭೇದ ಇಲ್ಲ. ಯಾವ ಕ್ಷೇತ್ರದಲ್ಲಿಯಾದರೂ ಮಹಿಳೆಯರು ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸಿದ್ದಾರೆ ಜನನಿ. ಈ ಮೂಲಕ ಸಾಕಷ್ಟು ಮಂದಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.