ಮಧ್ಯರಾತ್ರಿಯಲ್ಲಿ ಮಹಿಳೆಗೆ ನೆರವು ನೀಡಿದ ಆಟೊ ಚಾಲಕಿ

ಇಂದು ಹೆಣ್ಣು ಯಾವುದೇ ಕ್ಷೇತ್ರದಲ್ಲಿಯೂ ಹಿಂದೆ ಉಳಿದಿಲ್ಲ. ರಾಜಕೀಯ, ವಿಜ್ಞಾನ, ಬಾಹಾಕ್ಯಾಶ, ರಂಗಭೂಮಿ, ತಂತ್ರಜ್ಞಾನ... ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಪುರುಷರಿಗಷ್ಟೇ ಸೀಮಿತವಾಗಿದ್ದ ಆಟೊ ಚಾಲನೆ ಲೋಕಕ್ಕೂ ಇಂದು ಮಹಿಳೆ ಕಾಲಿಟ್ಟಿದ್ದಾಳೆ. ಮೈಸೂರಿನ ಹೆಬ್ಬಾಳದ ನಿವಾಸಿಯಾಗಿರುವ ಸೌಮ್ಯಾ ಅವರು ಆಟೊ ಚಾಲನೆಗೂ ಸೈ ಎಂದಿದ್ದಾರೆ.

ಮಧ್ಯರಾತ್ರಿಯಲ್ಲಿ ಮಹಿಳೆಗೆ ನೆರವು ನೀಡಿದ ಆಟೊ ಚಾಲಕಿ

Tuesday October 22, 2019,

2 min Read

ಸೌಮ್ಯಾ ಅವರು ಬಡತನದ ಕುಟುಂಬದಲ್ಲಿ ಬೆಳೆದವರು. ಅಪ್ಪ ಆಟೊ ಚಾಲಕ. ಹತ್ತನೇ ವಯಸ್ಸಿನಲ್ಲಿಯೆ ಅಪ್ಪನ ಮಾರ್ಗದರ್ಶನದಲ್ಲಿ ಆಟೊ ಓಡಿಸುವುದನ್ನು ಕಲಿಯಲು ಆರಂಭಿಸಿದ್ದರು. ಮನೆಯ ಪರಿಸ್ಥಿತಿ, ಶಿಕ್ಷಣ ಪಡೆಯಬೇಕೆಂಬ ಹಂಬಲ ಇವರನ್ನು ಹತ್ತನೆ ತರಗತಿ ಮುಗಿದ ತಕ್ಷಣವೇ ಆಟೊ ಏರುವಂತೆ ಮಾಡಿತು. ಹೀಗೆ ಬಾಡಿಗೆ ಆಟೊವನ್ನು ಓಡಿಸುತ್ತಲೇ ಪದವಿ ಶಿಕ್ಷಣ ಮುಗಿಸಿದರು.


q

ಸೌಮ್ಯ ತಮ್ಮ ಆಟೋ ಜೊತೆಗೆ



‘ಆಟೊ ನನಗೆ ತುಂಬಾ ಕಂಫರ್ಟ್ ಎನಿಸಿದೆ. ಅಲ್ಲದೇ ಇಂದು ಹೊರಗಡೆ ಯಾವುದೇ ಕಂಪನಿಯಲ್ಲಿ ಕೆಲಸಕ್ಕೆ‌ ಸೇರಿದರೂ ₹10ರಿಂದ 12 ಸಾವಿರ ಮಾತ್ರ ಸಂಬಳ ಸಿಗುತ್ತೆ. ಅದರ ಬದಲು ನನ್ನದೇ ಆಟೊವನ್ನು ಓಡಿಸುತ್ತಿರುವುದರಿಂದ ಕುಟುಂಬ ನಿರ್ವಹಣೆ ಜೊತೆಗೆ ನನ್ನ ಮಗುವಿಗೂ ಸಮಯ ಕೊಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸೌಮ್ಯಾ.

ಜನ ಬೇಗನೆ ಎಲ್ಲವನ್ನೂ ಒಪ್ಪಿಕೊಳ್ಳೊಲ್ಲ‌. ಅಯ್ಯೋ ಇವಳು ಓಡಿಸ್ತಾಳ? ಅನ್ನೊರು ಸಿಕ್ಕಿದಾರೆ. ಅರೇ! ಲೇಡಿ ಆಟೊ ಡ್ರೈವರ್ ಇದಾರೆ ಅನ್ನೋ ಬೆರಗಿನಿಂದ ಕಂಡೊರು ಇದಾರೆ. ಲೇಡಿ ಆಟೊ ಡ್ರೈವರ್ ಅಂದಾಗ ತುಂಬಾ ಹೆಮ್ಮೆಯಾಗುತ್ತೆ. ನನ್ನ ಬದುಕನ್ನು ರೂಪಿಸಿಕೊಳ್ಳೊಕೆ ಈ ಆಟೊ ತುಂಬಾ ಸಹಾಯಕವಾಗಿದೆ ಎಂದು ಹೇಳುವಾಗ ಅವರ ಮಾತಿನಲ್ಲಿ ಹೆಮ್ಮೆ ಕಾಣುತ್ತಿತ್ತು.


ರಾತ್ರಿ 8ರ ವರೆಗೆ ಮಾತ್ರ ಆಟೊ ಓಡಿಸ್ತಾ ಇದ್ದು, ಕೆಲವೊಮ್ಮೆ‌ ಎಮರ್ಜೆನ್ಸಿ ಅಂತ ಬಂದ್ರೆ ಮಧ್ಯರಾತ್ರಿ ಆದರೂ ಹೊರಡ್ತೀವಿ. ಇದು ನಮ್ಮ ಧರ್ಮ. ಪರೋಕ್ಷವಾಗಿ ಸಾಮಾಜಿಕ ಕಾರ್ಯ ಮಾಡ್ತಿದೀವಿ ಅನ್ನೋ ಖುಷಿ ಇದೆ‌ ಎನ್ನುತ್ತಾರವರು.

‘ಒಮ್ಮೆ ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಹಿರಿಯ ಮಹಿಳೆಯೊಬ್ಬರು ತಮ್ಮ ಹಣ ಕಳೆದುಕೊಂಡು ಅಸಹಾಯಕರಾಗಿ ನಿಂತಿದ್ದರು. ತಕ್ಷಣ ನಾನು ಅವರ ಹತ್ತಿರ ಹೋಗಿ ವಿಚಾರಿಸಿ ಅವರನ್ನು ಮನೆ ತಲುಪಿಸಿದೆ. ಇಂಥ ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದಿವೆ.

ಮಾನವೀಯತೆಗೆ ಸ್ಪಂದಿಸಬೇಕಾದದ್ದು ನಮ್ಮ ಕರ್ತವ್ಯ. ಇದುವರೆಗೂ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿಲ್ಲ. ಆಟೊ ಓಡಿಸುವವರೆಲ್ಲರೂ ತಂದೆಯ ಸ್ನೇಹಿತರು ಹಾಗೂ ಪರಿಚಯದವರೇ ಆಗಿರುವುದರಿಂದ ತುಂಬಾ ಖುಷಿಯಿಂದ ಮಾತನಾಡಿಸುತ್ತಾರೆ. ನಡುರಸ್ತೆಯಲ್ಲಿ ಆಟೊ ಕೆಟ್ಟಾಗ ಅಥವಾ ಸಮಸ್ಯೆ ಎಂದರೆ ಧಾವಿಸಿ ಬರ್ತಾರೆ. ಆಟೊ ಕೆಟ್ಟು ನಿಂತಾಗ ಮೆಕ್ಯಾನಿಕ್ ನಂಬರ್ ಇಟ್ಟುಕೊಂಡಿದ್ದು, ಅವರಿಗೆ ಕರೆ ಮಾಡಿದ ತಕ್ಷಣ ಬರ್ತಾರೆ’ ಎನ್ನುವ ಇವರು, ಇಷ್ಟು ದಿನ ಬಾಡಿಗೆ ಆಟೊ ಓಡಿಸುತ್ತಿದ್ದು, ಕಳೆದರಡು ವರ್ಷಗಳಿಂದ ಸ್ವಂತ ಆಟೊ ಹೊಂದಿದ್ದೆನೆ‌ ಎಂದು ತಿಳಿಸಿದರು.


ತಂದೆ ಹಾಗೂ ಗಂಡನ ಮನೆಯಲ್ಲಿ ಎರಡು ಕಡೆಯಿಂದಲೂ ನನ್ನ ಈ ವೃತ್ತಿಗೆ ಬೆಂಬಲ ಸಿಕ್ಕಿದ್ದು, ಬೇರೆ ಕಡೆ ಕೆಲಸ ಮಾಡುವುದಕ್ಕಿಂತ, ಇದರಲ್ಲಿಯೇ ಮುಂದುವರೆಯುವಂತೆ ಸೂಚಿಸಿದ್ದಾರೆ. ಪತಿ ಶೇಖರ್ ಅವರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಬೆಂಬಲವಾಗಿ ನಿಂತಿದ್ದಾರೆ. ಅಷ್ಟೇ ಅಲ್ಲದೇ, ಕಳೆದ ವರ್ಷ ನಡೆದ ನಗರ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅದೊಂದು ವಿನೂತನ ಅನುಭವವಾಗಿತ್ತು ಎನ್ನುತ್ತಾರೆ.


ಮೈಸೂರಿನ ‘ಆಟೊ ರಾಣಿ’ ಎಂದೇ ಖ್ಯಾತಿ ಪಡೆದ ಇವರು, ನಿಮಗೆ ಯಾವಾಗಲಾದರೂ ಆಟೊದಲ್ಲಿ ಸಿಕ್ಕರೆ ಇವರಿಗೊಂದು ಹ್ಯಾಟ್ಸಾಪ್ ಹೇಳಿ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.