ಹುಲಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು 36,000 ಕಿ.ಮೀ ಪಯಣಿಸಿದ ಈ ದಂಪತಿಗಳು
ರತಿನ್ ದಾಸ್ ಮತ್ತು ಗೀತಾಂಜಲಿ ದಾಸ್ಗುಪ್ತಾ ರವರು ದೇಶದ 50 ಹುಲಿ ಮೀಸಲು ಪ್ರದೇಶಗಳಿಗೆ ಭೇಟಿ ನೀಡಿ ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ದಿನ ಕಳೆದಂತೆ ದೇಶದಲ್ಲಿ ಹವಾಮಾನದ ವೈಪರೀತ್ಯ ಹಾಗೂ ಹಸಿರು ಹೊದಿಕೆ ಕ್ಷೀಣಿಸುತ್ತಿರುವದರಿಂದ ವನ್ಯಜೀವಿಗಳು ಅಳಿವಿನಂಚಿನಲ್ಲಿವೆ. ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಕೋಲ್ಕತ್ತಾದ ಈ ದಂಪತಿಗಳು 36,000 ಕಿ.ಮೀ ದೂರವನ್ನು ತಮ್ಮ ಬೈಕ್ನಲ್ಲಿ ಪ್ರಯಾಣಿಸುತ್ತಾ ದೇಶಾದ್ಯಂತ 50 ಹುಲಿ ಮೀಸಲು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದ ನಿವಾಸಿಗಳಾದ ರತಿನ್ ದಾಸ್ ಮತ್ತು ಗೀತಾಂಜಲಿ ದಾಸ್ಗುಪ್ತಾರವರು ಫೆಬ್ರವರಿ 15ರಂದು ತಮ್ಮ ಪಯಣವನ್ನು ಆರಂಭಿಸಿ, ದುಧೋವಾ, ಬಂಡೀಪುರ, ಕಾಜಿರಂಗಾ, ಸುಂದರಬನ್ಸ್, ಬಕ್ಸಾ, ಪಿಲಿಭಿತ್, ನಾಗಾರರ್ಜುನ ಸಾಗರ್ ಮತ್ತು ರಣಥಂಬೋರ್ ಹುಲಿ ಮೀಸಲು ಪ್ರದೇಶಗಳಿಗೆ ಸೇರಿದಂತೆ 29 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
ಪಿಟಿಐ ಜೊತೆಗಿನ ಸಂವಾದದಲ್ಲಿ ರತಿನ್ ರವರು,
"ನಾವು 268 ದಿನಗಳ ನಮ್ಮ ಪ್ರಯಾಣದ ಸಂದರ್ಭದಲ್ಲಿ ಸುಮಾರು 3,000 ಗ್ರಾಮಸ್ಥರೊಂದಿಗೆ ಸಂವಹನ ಮಾಡಿದ್ದೇವೆ. ನವೆಂಬರ್ 10ರಂದು 36,492 ಕಿ.ಮೀ ಪಯಣದ ನಂತರ ಕೋಲ್ಕತ್ತಾಗೆ ಮರಳಿದ್ದೇವೆ" ಎಂದಿದ್ದಾರೆ, ವರದಿ ಬ್ಯುಸಿನೆಸ್ ಸ್ಟ್ಯಾಂಡರ್ಡ್.
ಹುಲಿ ಮೀಸಲು ಪ್ರದೇಶದ ಬಳಿ ಇರುವ ಶಾಲೆಗಳಲ್ಲಿ ಆಯೋಜಿಸಿದ್ದ 643 ಅಭಿಯಾನಗಳಲ್ಲಿ ದಂಪತಿಗಳು ಭಾಗವಹಿಸಿದ್ದರು.
"ನಾವು ಗ್ರಾಮಸ್ಥರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರು, ಕೆಲವು ಪ್ರವಾಸಿಗರು ಅರಣ್ಯ ವಲಯದ ಪ್ರದೇಶದಲ್ಲಿ ಜೋರಾಗಿ ಸಂಗೀತವನ್ನು ಹಚ್ಚುವ ಮೂಲಕ ನಿಯಮಾವಳಿಗಳನ್ನು ಮೀರಿದ್ದಾರೆ ಎಂಬುದನ್ನು ನಮಗೆ ತಿಳಿಸಿದರು. ಇಂತಹ ಘಟನೆಗಳನ್ನು ತಡೆಯಲು ಅರಣ್ಯ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸುವಂತೆ ನಾವು ಅವರಿಗೆ ತಿಳಿಸಿದ್ದೇವೆ" ಎಂದು ರತನ್ ಹೇಳುತ್ತಾರೆ, ವರದಿ ದಿ ಲಾಜಿಕಲ್ ಇಂಡಿಯನ್.
ದಂಪತಿಗಳ ಈ ಯಾತ್ರೆಗೆ ಎಕ್ಸ್ಪ್ಲೋರಿಂಗ್ ನೇಚರ್ ಎನ್ಜಿಒಗಳು, ದಕ್ಷಿಣ ಏಷ್ಯನ್ ಫೋರಮ್ ಫಾರ್ ಎನ್ವಿರಾನ್ಮೆಂಟ್(ಎಸ್ಎಎಫ್ಇ) ಮತ್ತು ಯುಕೆಯ ಏಷ್ಯನ್ ವೈಲ್ಡ್ ಲೈಫ್ ಫೋಟೋಗ್ರಾಫರ್ ಕ್ಲಬ್ ನವರು ಬೆಂಗಾವಲಾಗಿದ್ದರು.
ರತಿನ್ ಕಳವಳ ವ್ಯಕ್ತಪಡಿಸುತ್ತಾ ಹೀಗೆ ಹೇಳುತ್ತಾರೆ,
"ಕರ್ನಾಟಕದ ಬಂಡೀಪುರ ಮತ್ತು ಮಹಾರಾಷ್ಟ್ರದ ಮೆಲ್ಘಾಟ್ ಪ್ರದೇಶಗಳು ಉತ್ತಮ ಕೆಲಸ ಮಾಡುತ್ತಿವೆ. ಕಳೆದ ಐದು ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವಲ್ಲಿ ಸಮರ್ಥರಾಗಿದ್ದಾರೆ," ವರದಿ ದಿ ಲಾಜಿಕಲ್ ಇಂಡಿಯನ್.
ಈಗ ಈ ದಂಪತಿಯು ನೆರೆಯ ರಾಷ್ಟ್ರಗಳಾದ ನೇಪಾಳ, ಭೂತಾನ್, ಬಾಂಗ್ಲಾದೇಶ, ವಿಯೆಟ್ನಾಂಮ ಮತ್ತು ಏಷ್ಯಾದ ದೇಶಗಳಿಗೆ ಭೇಟಿ ನೀಡಿ ಹುಲಿ ಸಂರಕ್ಷಣೆ ಸಂದೇಶವನ್ನು ಹರಡುವ ಆಶಯ ಹೊಂದಿದ್ದಾರೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.