ಕಣ್ಣುಮುಚ್ಚಿಕೊಂಡು ಸ್ಕೇಟಿಂಗ್ ಮಾಡಿ ಗಿನ್ನಿಸ್ ದಾಖಲೆ ಬರೆದ ಹುಬ್ಬಳ್ಳಿಯ 14ರ ಪೋರಿ
ಹುಬ್ಬಳ್ಳಿಯ ಓಜಲ್ ನಲವಾಡೆ ಕಣ್ಣುಮುಚ್ಚಿಕೊಂಡು ಸ್ಕೇಟಿಂಗ್ ಮಾಡಿ 51 ಸೆಕೆಂಡುಗಳಲ್ಲಿ 400 ಮೀಟರ್ ದೂರ ಚಲಿಸಿ ವಿಶ್ವದಾಖಲೆ ಬರೆದಿದ್ದಾರೆ.
ಓದು ಆಟ-ಪಾಠ, ಮೊಬೈಲ್, ಟಿವಿ ಎಂದು ಮಕ್ಕಳು ಕಾಲಕಳೆಯುವ ಇಂದಿನ ದಿನಗಳಲ್ಲಿ ಇಲ್ಲೊಬ್ಬಳು ಪೋರಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಈ ಕುವರಿ ಯಾವುದರಲ್ಲಿ ವಿಶ್ವ ದಾಖಲೆ ಮಾಡಿದ್ದಾಳೆ ಎಂದುಬು ತಿಳಿದರೆ ನೀವು ಬೆರಗಾಗುವುದಂತು ಖಂಡಿತ.
ಹುಬ್ಬಳ್ಳಿಯ 14 ವರ್ಷದ ಬಾಲಕಿ ಓಜಲ್ ನಲವಾಡೆ 14 ನವೆಂಬರ್ 2019 ರಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 51 ಸೆಕೆಂಡುಗಳಲ್ಲಿ 400 ಮೀಟರ್ ದೂರವನ್ನು ಸ್ಕೇಟಿಂಗ್ ಮಾಡಿ ವಿಶ್ವದಾಖಲೆ ಬರೆದಿದ್ದಾಳೆ. ಈ ಮೂಲಕ ವಿಶ್ವದ ಅತಿ ವೇಗದ ಕಣ್ಣುಮುಚ್ಚಿ ಓಡುವ ಸ್ಕೇಟರ್ ಎಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾರೆ.
ಹುಬ್ಬಳ್ಳಿಯ ಚೇತನಾ ಕಾಲೇಜಿನ ಬಳಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟು ಮೂರು ಸುತ್ತು ಆಯೋಜಿಸಲಾಗಿತ್ತು. ಮೂರನೇ ಸುತ್ತಿನಲ್ಲಿ ಸ್ಕೇಟಿಂಗ್ ಮಾಡುವುದಕ್ಕೆ 6೦ ಸೆಕೆಂಡುಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಓಜಲ್ ಕಣ್ಣುಮುಚ್ಚಿಕೊಂಡು ಕೇವಲ 51 ಸೆಕೆಂಡುಗಳಲ್ಲಿ 400 ಮೀಟರ್ ದೂರವನ್ನು ಚಲಿಸಿ ವಿಶ್ವದಾಖಲೆ ಮಾಡಿದ್ದಾಳೆ, ವರದಿ ಎಡೆಕ್ಸ್ ಲೈವ್.
ತನ್ನ ಸಂತೋಷವನ್ನು ವ್ಯಕ್ತಪಡಿಸಿದ ಓಜಲ್ ತನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದಳು. ನನ್ನ ಪೋಷಕರಾದ ತಂದೆ ಸುನೀಲ್ ತಾಯಿ ದೀಪಾ ಹಾಗೂ ಕುಟುಂಬ ಮತ್ತು ತರಬೇತುದಾರರ ಬೆಂಬಲದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆಯೂ ಇದೆ ಬೆಂಬಲದೊಂದಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತೇನೆ ಎನ್ನುತ ತಮ್ಮ ಖುಷಿ ವ್ಯಕ್ತಪಡಿಸಿದರು ಎಂದು ವರದಿಗಳು ತಿಳಿಸಿವೆ.
ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಓಜಲ್ ನ ತರಬೇತುದಾರ ಅಕ್ಷಯ್ ಸೂರ್ಯವಂಶಿ,
“ಹಲವು ದಿನಗಳಿಂದ ಮುಂಜಾನೆ ಕಣ್ಣುಮುಚ್ಚಿಕೊಂಡು ಸ್ಕೇಟಿಂಗ್ ಅಭ್ಯಾಸ ಮಾಡುತ್ತಿದ್ದಳು. ಕಣ್ಣುಮುಚ್ಚಿಕೊಂಡು ಸ್ಕೇಟಿಂಗ್ ಮಾಡುವುದು ಅಪರೂಪ. ತನ್ನ ದೃಡ ನಿಶ್ಚಯ ಹಾಗೂ ಕಠಿಣ ಪರಿಶ್ರಮದಿಂದ ಓಜಲ್ ಇಂದು ಸಾಧನೆ ಮಾಡಿದ್ದಾಳೆ” ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ಈ ಹಿಂದೆ ಓಜಲ್ ನಲವಾಡೆ ಯುವಜನತೆಯಲ್ಲಿ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳ ಕುರಿತು ಅರಿವು ಮೂಡಿಸುವದಕ್ಕಾಗಿ ಒಟ್ಟು 10.55 ಕಿಮೀ ದೂರವನ್ನು 15 ನಿಮಿಷ 54 ಸೆಕೆಂಡುಗಳು ಕಣ್ಣುಮುಚ್ಚಿಕೊಂಡು ಸ್ಕೇಟಿಂಗ್ ಮಾಡುವುದರ ಮೂಲಕ ಎಲ್ಲರ ಪ್ರಶಂಸೆ ಪಡೆದಿದ್ದರು, ವರದಿ ಪ್ರಜಾವಾಣಿ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.