ಎಲ್ಲರಿಗೂ ಪುಸ್ತಕ ಲಭ್ಯವಾಗಲಿ ಎಂಬ ಉದ್ದೇಶದಿಂದ ಪ್ರಾರಂಭವಾದ ಪುಣೆಯ 24*7 'ಓಪನ್ ಬುಕ್ ಮೂಮೆಂಟ್'
ಎಲ್ಲ ವಯೋಮಾನದವರು ಯಾವುದೇ ನಿರ್ಬಂಧ ಹಾಗೂ ಶುಲ್ಕವಿಲ್ಲದೆ ಓದುವಂತಾಗಲಿ ಎಂದು ಪುಣೆಯ ಕಾಲೇಜಿನ ಎಂಟು ಜನ ವಿದ್ಯಾರ್ಥಿಗಳ ತಂಡವೊಂದು 24*7 ಓಪನ್ ಬುಕ್ ಮೂಮೆಂಟ್ ಅನ್ನು ಪ್ರಾರಂಭಿಸಿದೆ.
"ಪುಸ್ತಕಗಳಿಲ್ಲದೆ ಕೋಣೆ ಆತ್ಮವಿಲ್ಲದ ದೇಹದಂತೆ" ಎಂಬ ನುಡಿಗಟ್ಟಿನಂತೆ ಪುಸ್ತಕಗಳು ನಮ್ಮ ಆತ್ಮೀಯ ಸ್ನೇಹಿತರಾಗಿವೆ. ಅವು ಬದುಕಿನುದ್ದಕ್ಕೂ ಒಳ್ಳೆಯ ಸಂಗಾತಿಯಾಗಿರುತ್ತವೆ.
ಪುಸ್ತಕಗಳು ವಿಶೇಷವಾಗಿ ಜೀವನದ ಕುರಿತಾಗಿ ಪಾಠವನ್ನು ಹೇಳುವಂತಹ ವಿಶೇಷ ಸ್ವತ್ತಾಗಿವೆ. ಇಂತಹ ಪುಸ್ತಕಗಳನ್ನು ನಾವು ಓದುವುದರ ಜೊತೆಗೆ ಮತ್ತೊಬ್ಬರಿಗೆ ಓದಿಸುವುದು ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ. ಅವರು ಅವುಗಳನ್ನು ಓದಿ ಖುಷಿ ಪಡಬಹುದಲ್ಲವೆ..!!
ಈ ಪರಿಕಲ್ಪನೆಯನ್ನು ಸಾಕರಾಗೊಳಿಸಲೆಂದು ಪುಣೆಯ ನಗರದಲ್ಲಿ ಎಂಟು ಜನ ಕಾಲೇಜು ವಿದ್ಯಾರ್ಥಿಗಳು ಸೇರಿ 24*7 ತೆರದಿರುವಂತಹ ಗ್ರಂಥಾಲಯವನ್ನು ಪ್ರಾರಂಭಿಸಿದ್ದಾರೆ. ಡಿಸೆಂಬರ್ 7ರಂದು ಪುಣೆ ನಗರದ ಕೊಥ್ರುಡ್ನಲ್ಲಿ ಇದು ಪ್ರಾರಂಭವಾಯಿತು.
ಇಲ್ಲಿ ಯಾವುದೇ ಸಮಯದಲ್ಲಿ ನೀವು ಪುಸ್ತಕವನ್ನು ತೆಗೆದುಕೊಳ್ಳಬಹುದು. ನಿಮ್ಮ ಬಳಿ ಇರುವ ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ಕೊಡಬಹುದು.
ತಂಡದ ಮುಖ್ಯಸ್ಥೆ ಪ್ರಿಯಾಂಕ ಚೌಧರಿ ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡುತ್ತಾ, "ಪುಸ್ತಕಗಳ ಕದಿಯುವಿಕೆ ಸರಿಯಾದ ಕೆಲಸವಲ್ಲ, ಅದಕ್ಕಾಗಿ ನಾವು ಪುಸ್ತಕಗಳ ದಾನ ಮತ್ತು ಓದುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದೇವೆ."
ಇದಕ್ಕೆ "ಓಪನ್ ಲೈಬ್ರರಿ ಮೂಮೆಂಟ್" ಎಂದು ಹೆಸರಿಸಲಾಗಿದ್ದು, ಇಲ್ಲಿ ಪುಸ್ತಕ ಓದುವುದಕ್ಕೆ ಯಾವುದೇ ತೆರನಾದ ನಿರ್ಬಂಧ, ಶುಲ್ಕಗಳಿಲ್ಲ. ದಿನದ ಯಾವ ಹೊತ್ತಿನಲ್ಲಿಯೂ ಬೇಕಾದರೂ ಬಂದು ಪುಸ್ತಕ ಓದಬಹುದು. ಪುಣೆಯ ಲೋಕಮಾನ್ಯ ಕಾಲೋನಿಯ ಜೀತ್ ಮೈದಾನದಲ್ಲಿ ಪುಸ್ತಕಗಳನ್ನು ದಾನ ಮಾಡಲು ಸಂಪೂರ್ಣವಾಗಿ ಶೆಲ್ಪ್ ಒಂದನ್ನು ಮೀಸಲಿರಿಸಲಾಗಿದೆ.
ಈ ಗ್ರಂಥಾಲಯವು ಯಾವುದೇ ನಿರ್ಬಂಧಗಳಿಲ್ಲದೆ ಎಲ್ಲರಿಗೂ ಪುಸ್ತಕಗಳನ್ನು ಲಭ್ಯವಾಗುವಂತೆ ಮಾಡುವ ಏಕೈಕ ಉದ್ದೇಶವನ್ನು ಹೊಂದಿದೆ.
ಪ್ರಸ್ತುತ ವೈವಿಧ್ಯಮಯ ಪ್ರಕಾರಗಳ 200ಕ್ಕೂ ಹೆಚ್ಚಿನ ಪುಸ್ತಕಗಳಿದ್ದು, ಮರಾಠಿ ಹಾಗೂ ಇಂಗ್ಲೀಷ್ ಭಾಷೆಯ ಕಾದಂಬದರಿಗಳಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆ, ಜೀವನಚರಿತ್ರೆಯಂತಹ ಪುಸ್ತಕಗಳ ಸಂಗ್ರಹವನ್ನು ಇದು ಹೊಂದಿದೆ, ವರದಿ ಪುಣೆ ಮೀರರ್.
ವಿವಿಧ ವಯೋಮಾನದವರು ಹಾಗೂ ಆಸಕ್ತಿಯ ಓದುಗರನ್ನು ಸೆಳೆಯುವಂತಹ ಪುಸ್ತಕಗಳ ಸಂಗ್ರಹವಿದೆ. ಈ ಪರಿಕಲ್ಪನೆಯನ್ನು ಇಡೀ ನಗರದ ತುಂಬ ವಿಸ್ತರಿಸಲು ಯೋಜಿಸಿದ್ದೇವೆ. ಅದಕ್ಕಾಗಿ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇವೆ ಎಂದು ಪ್ರಿಯಾಂಕ ಹೇಳುತ್ತಾರೆ. ವರದಿ ದಿ ಲಾಜಿಕಲ್ ಇಂಡಿಯನ್.
ಸ್ಟೋರಿ ಪಿಕ್ ವರದಿಯೊಂದರ ಪ್ರಕಾರ,
"ಈ ಗ್ರಂಥಾಲಯವು ಯಾವುದೇ ಆರ್ಥಿಕ ಸಹಾಯವನ್ನು ಬಯಸುತ್ತಿಲ್ಲ. ಅದರ ಬದಲಿಗೆ ಜ್ಞಾನದ ವಿನಿಮಯಕ್ಕಾಗಿ ಪುಸ್ತಕ ಹಾಗೂ ಪುಸ್ತಕದ ಕಪಾಟುಗಳು ಮಾತ್ರ ಸ್ವೀಕರಿಸುತ್ತೇವೆ ಎನ್ನುವುದು ತಂಡದ ಅಭಿಪ್ರಾಯ."
ಇಂತಹ ಗ್ರಂಥಾಲಯಗಳು ಕೇವಲ ಪುಣೆ ಮಾತ್ರವಲ್ಲದೆ ದೇಶದಾದ್ಯಂತ ಹರಡಲಿ. ಓದು ಪುಸ್ತಕದ ಪ್ರೀತಿ ಎಲ್ಲರಲ್ಲಿಯೂ ಒಡಮೂಡಲಿ ಎಂಬುದೇ ನಮ್ಮ ಹಾರೈಕೆ..!!