ಸನ್ಯಾಸಿ, ಯೋಗ ಗುರು, ಉದ್ಯಮಿ, ಕುಂಚ ಕಲಾವಿದ ಸಕಲಕಲಾ ವಲ್ಲಭ ಭರತ್ ಠಾಕುರ್
ಟೀಮ್ ವೈ.ಎಸ್. ಕನ್ನಡ
ಇವರು ಅಘೋರಿ. ಅದ್ಭುತ ಕುಂಚ ಕಲಾವಿದ. ನೂರಾರು ಯೋಗ ಕೇಂದ್ರಗಳನ್ನು ನಡೆಸುತ್ತಿರುವ ಯೋಗ ಗುರು. ಲೇಖಕ ಕೂಡ. ಉದ್ಯಮಿಯೂ ಹೌದು. ಅರೆ ಒಬ್ಬ ವ್ಯಕ್ತಿ ಇಷ್ಟೆಲ್ಲ ಮಾಡಲು ಸಾಧ್ಯವಾ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಇದು ಭರತ್ ಠಾಕುರ್ ಅವರಿಗೆ ಸಾಧ್ಯ.
" ನಾನೊಬ್ಬ ಯೋಗಿ, ಸನ್ಯಾಸಿ. ಸಾಮಾನ್ಯ ಒಬ್ಬ ಯೋಗಿಯ ಜೀವನಚರಿತ್ರೆಯೇ ನನ್ನದೂ ಕೂಡ. ಧ್ಯಾನ ಮತ್ತು ಸಾಧನೆಗಳನ್ನು ಹೆಚ್ಚಾಗಿ ಮಾಡಿದರೆ, ನಮ್ಮಲ್ಲಿನ ಕ್ರಿಯಾಶೀಲತೆ ಹೆಚ್ಚುತ್ತದೆ. ಯಾಕೆಂದರೆ ನಾವು ಧ್ಯಾನ ಮಾಡಿದಾಗ ಮಲಗಿರುವ ಮೆದುಳಿನ ಬೇರೆ ಬೇರೆ ವಿಭಾಗಗಳು ಎಚ್ಚರವಾಗುತ್ತವೆ. ಕೆಲಸ ಮಾಡತೊಡಗುತ್ತವೆ. ಹೆಚ್ಚೆಚ್ಚು ಧ್ಯಾನ ಮಾಡುತ್ತಾ, ನಮ್ಮೊಳಗಿನ ಪ್ರಪಂಚದ ಆಳಕ್ಕೆ ಇಳಿಯುತ್ತಾ ಹೋದಂತೆ ನಮಗೆ ನಮ್ಮ ಶಕ್ತಿಯ ಅರಿವಾಗುತ್ತದೆ. ನಾವು ಕಣ್ಣು ತೆರೆದಾಗ ಮುಂದೆ ಕಾಣುವ ಪ್ರಪಂಚವೇ ಬೇರೆ, ಕಣ್ಣು ಮುಚ್ಚಿದಾಗ ನಮ್ಮ ಒಳಗಿನ ಪ್ರಪಂಚವೇ ಬೇರೆ. ಧ್ಯಾನದ ಮೂಲಕವಷ್ಟೇ ನಾವು ಒಳಗಿನ ಪ್ರಪಂಚವನ್ನು ನೋಡಲು ಸಾಧ್ಯ. ವಿಜ್ಞಾನಿಗಳು ಹೊರಗಡೆ ಪ್ರಯೋಗಗಳನ್ನು ಮಾಡಿದರೆ, ಯೋಗಿಗಳು ತಮ್ಮೊಳಗೆಯೇ ಪ್ರಯೋಗ ಮಾಡುತ್ತಾರೆ. ನಾನೂ ಹಿಮಾಲಯದ ಪರ್ವತಗಳಲ್ಲಿ 14 ವರ್ಷಗಳ ಕಾಲ ಅದನ್ನೇ ಮಾಡಿದ್ದು, ಅಲ್ಲಿಂದ ನಾಗರೀಕತೆಗೆ ಬಂದ ಬಳಿಕ ಈಗ ಮಾಡುತ್ತಿರುವುದೂ ಅದನ್ನೇ"
ಹೀಗೆ ಮಾತಿಗಿಳಿಯುತ್ತಾರೆ ಭರತ್ ಠಾಕುರ್.
ಭರತ್ ಠಾಕುರ್ ಬಾಲ್ಯ
ದೇವರಿಗೆ ಹರಕೆ ಹೊತ್ತ ಬಳಿಕ ಭರತ್ ಠಾಕುರ್ ಹುಟ್ಟಿದ ಕಾರಣ, ಅವರ ಪೋಷಕರು ಬಾಲಕ ಭರತ್ ಅನ್ನು ಯೋಗಿಯ ಬಳಿ ಬಿಟ್ಟಿದ್ದರು. ಸುಮಾರು 14 ವರ್ಷಗಳ ಕಾಲ ಯೋಗಿಗಳೊಂದಿಗೆ ಬರೋಬ್ಬರಿ 14 ವರ್ಷಗಳ ಕಾಲ ವಾಸವಿದ್ದರು ಭರತ್. ಹೀಗೆ ವರ್ಷಗಟ್ಟಲೆ ಅಘೋರಿಗಳ ಜತೆಗಿದ್ದ ಕಾರಣ ಭರತ್ ತಪಸ್ಸು, ಧ್ಯಾನ ಮಾಡುತ್ತಾ ಹಲವು ಶಕ್ತಿಗಳನ್ನು ಪಡೆದರು. ಆ ಬಳಿಕ ಮತ್ತೆ ನಗರಕ್ಕೆ ಮರಳಿದ ಅವರು ಮತ್ತೆ ಶಿಕ್ಷಣ ಪಡೆದರು. ಹಾಗೇ ತಾವು ಕಲಿತ ಯೋಗವನ್ನು ಬೇರೆಯವರಿಗೆ ಕಲಿಸತೊಡಗಿದರು. ಆ ಮೂಲಕ 1999ರಲ್ಲಿ ಭರತ್ ಠಾಕುರ್ ಆರ್ಟಿಸ್ಟಿಕ್ ಯೋಗಾ ಪ್ರಾರಂಭವಾಯಿತು. ಇವತ್ತು ವಿಶ್ವಾದ್ಯಂತ ನೂರಾರು ಯೋಗ ಕೇಂದ್ರಗಳನ್ನು ನಡೆಸುತ್ತಿದ್ದಾರೆ ಭರತ್. ಜತೆಗೆ ಬಾಲಿವುಡ್ ಸ್ಟಾರ್‍ಗಳು ಮಾತ್ರವಲ್ಲ ದೇಶ ವಿದೇಶಗಳ ರಾಜಕಾರಿಣಿಗಳು, ವಿಐಪಿಗಳು ಸಹ ಭರತ್ ಅವರ ಬಳಿ ಯೋಗ ಕಲಿತಿದ್ದಾರೆ, ಕಲಿಯುತ್ತಿದ್ದಾರೆ.
ಲಕ್ಷ ಲಕ್ಷ ಬೆಲೆ ಬಾಳುವ ಪೇಂಟಿಂಗ್‍ಗಳು
ಭರತ್ ಠಾಕುರ್ ಒಬ್ಬ ಅದ್ಭುತ ಕುಂಚ ಕಲಾವಿದ ಕೂಡ ಹೌದು. ಅವರ ಪೇಂಟಿಂಗ್‍ಗಳು 2 ಲಕ್ಷ ರೂಪಾಯಿಯಿಂದ 2 ಕೋಟಿ ರೂಪಾಯಿವರೆಗೂ ಮಾರಾಟ ಆಗಿರೋದು ವಿಶೇಷ. ಆದರೆ ಕಾರಣಾಂತರಗಳಿಂದ ಕೆಲ ವರ್ಷಗಳಿಂದ ಅವರು ಪೇಂಟಿಂಗ್ ಮಾಡುತ್ತಿರಲಿಲ್ಲ. ಆದರೆ ಈಗ ಮತ್ತೆ ಕುಂಚ ಕೈಗೆತ್ತಿಕೊಂಡಿರುವ ಭರತ್, ಇತ್ತೀಚೆಗಷ್ಟೇ ಬೆಂಗಳೂರಿನಲ್ಲೇ ಪೇಂಟಿಂಗ್ ಎಕ್ಸಿಬಿಷನ್ ಆಯೋಜಿಸಿದ್ದರು. ಸುಮಾರು 60 ಪೇಂಟಿಂಗ್‍ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
"ಮೊದಲು ನಾನು ಹಲವು ಬಗೆಯ ಪೇಂಟಿಂಗ್‍ಗಳನ್ನು ಮಾಡುತ್ತಿದ್ದೆ. ಆದರೆ ನಾನು ಕೇವಲ ಅಮೂರ್ತ ಕಲಾವಿದ. ಈ ವಿಧಕ್ಕೆ ಸೀಮಿತವಾಗಲು ನಾನೇ ಬಯಸಿದೆ. ಯಾಕೆಂದರೆ ಇದು ಆತ್ಮದ ಅಭಿವ್ಯಕ್ತಿ. ವ್ಯಕ್ತಿಚಿತ್ರ ಬಿಡಿಸುವುದು ಅಥವಾ ಬೇರೆ ರೀತಿಯ ಪೇಂಟಿಂಗ್‍ಗಳಿಗಿಂತ ಅಮೂರ್ತ ಪೇಂಟಿಂಗ್‍ಗಳನ್ನು ರಚಿಸುವುದು ಬಹಳ ಕಷ್ಟ. ಯಾಕೆಂದರೆ ಇಲ್ಲಿ ನಾವು ಸಾಬೀತುಪಡಿಸಬೇಕಾದ ತರ್ಕಗಳು ಬಹಳಷ್ಟಿರುತ್ತವೆ. ಒಬ್ಬ ವ್ಯಕ್ತಿಚಿತ್ರವನ್ನು ಬಿಡಿಸುವಾಗ ಆ ವ್ಯಕ್ತಿಯ ಮುಖ ನಿಮ್ಮ ಕಣ್ಣಮುಂದಿರುತ್ತದೆ. ಹೀಗಾಗಿಯೇ ಅವರ ಮುಖಭಾವ, ಭಂಗಿಗಳನ್ನು ನೋಡಿ ಬರೆಯಬಹುದು. ಅದರಲ್ಲೂ ಕಣ್ಣೀರು ಸುರಿಸುವ ಅಥವಾ ನಗುತ್ತಿರುವ ಬದಲಾವಣೆಗಳನ್ನು ಮಾಡಬಹುದು. ಆ ಮೂಲಕ ಆ ನೋಡುಗರನ್ನು ಬೇಸರಕ್ಕೆ ದೂಡುವ ಅಥವಾ ನಗಿಸಬಹುದು. ಆದರೆ ಕೇವಲ ಪೇಂಟ್‍ಗಳನ್ನು ಬಿಳಿ ಕಾಗದದ ಮೇಲೆ ಚೆಲ್ಲಿ ಒಬ್ಬರ ಮುಖದಲ್ಲಿ ನಗು ಅರಳಿಸುವುದು ಹೇಗೆ? ಅದೇ ಒಬ್ಬ ಅಮೂರ್ತ ಕುಂಚ ಕಲಾವಿದನ ಮುಂದಿರುವ ದೊಡ್ಡ ಸವಾಲು. ಅದನ್ನೇ ಒಬ್ಬ ಅಮೂರ್ತ ಕಲಾವಿದ ಸೆರೆಹಿಡಿಯಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ನಾನಾ ಕಷ್ಟಪಡುತ್ತಾನೆ. ಮೈಲುಗಟ್ಟಲೆ ಓಡಾಡುತ್ತಾನೆ. ಪೇಂಟಿಂಗ್‍ನ ನಿಯಮಗಳೇನು? ಪೇಂಟಿಂಗ್ ಹೇಗೆ ಕೆಲಸ ಮಾಡುತ್ತದೆ? ಇದನ್ನು ನಾನು ಪ್ರಪಂಚಕ್ಕೆ ಹೇಳಿಕೊಡಬೇಕಿಲ್ಲ. ನಾನು ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ಅದೇನೆಂದರೆ ನಮ್ಮ ಕಣ್ಣುಗಳು ಯಾವ ಕಲೆಯನ್ನು ನೋಡಿ ಇಷ್ಟಪಡುತ್ತವೋ, ನಗುವಿಗೆ ಕಾರಣವಾಗುತ್ತವೋ ಅದೇ ಅತ್ಯುತ್ತಮ ಕಲೆ"
- ಭರತ್ ಠಾಕೂರ್, ಸನ್ಯಾಸಿ
ಆಧ್ಯಾತ್ಮ ಮತ್ತು ಭರತ್
ಆಧ್ಯಾತ್ಮಿಕವಾಗಿ ಬೆಳೆದರೆ ನಮ್ಮೊಳಗಿರುವ ಗುಣಗಳು ಎಚ್ಚರಗೊಳ್ಳುತ್ತವೆ. ಬಣ್ಣಗಳ ಮೂಲಕ ಮತ್ತೊಬ್ಬರೊಂದಿಗೆ ಮಾತನಾಡುವುದು ಕವಿ, ಲೇಖಕ, ಗಾಯಕ, ಚಿಂತಕ, ತತ್ವಜ್ಞಾನಿ, ವಿಶ್ಲೇಷಕ, ಕಲಾವಿದ, ಯೋಗಗುರು, ಉದ್ಯಮಿ, ಇದೆಲ್ಲಾ ಏನೂ ಹೊಸತಲ್ಲ. ಇದನ್ನು ಆಧ್ಯಾತ್ಮ, ಧ್ಯಾನಗಳ ಮೂಲಕ ತಮ್ಮ ಶಕ್ತಿಯನ್ನು ಅರಿತುಕೊಂಡಿರುವ ಎಲ್ಲರೂ ಮಾಡಬಹುದು. ಇವೆಲ್ಲವೂ ನಮ್ಮೊಳಗೇ ಇರುವ ಪ್ರಪಂಚದ ಸಣ್ಣ ಸಣ್ಣ ಝಲಕ್‍ಗಳಷ್ಟೇ. ಹಾಗಂತ ನಾನೇನೋ ದೊಡ್ಡ ಸಾಧನೆ ಮಾಡಿದ್ದೇನೆ ಅಂತಲ್ಲ. ಬದಲಾಗಿ ಪ್ರತಿದಿನ ಎರಡೂವರೆ ತಾಸು ಧ್ಯಾನ ಮಾಡುವ ಯಾವುದೇ ವ್ಯಕ್ತಿಯೂ ಇದನ್ನು ಮಾಡಬಹುದು. ನಾನು ಒಬ್ಬ ಸಾಮಾನ್ಯನೇ' ಎಂದು ತಮ್ಮ ಅಪೂರ್ವ ಸಾಧನೆಗಳ ಕುರಿತು ಹೇಳಿಕೊಳ್ಳುತ್ತಾರೆ ಭರತ್. ಅವರ ಪ್ರಕಾರ `ಒಂದೇ ಜೀವನದಲ್ಲಿ ಹಲವು ಜೀವನಗಳನ್ನು ಜೀವಿಸುವುದೇ' ಯಶಸ್ಸಿನ ಗುಟ್ಟು. ಹೀಗೆ ಹೇಳುತ್ತಾ ಮಾತು ಮುಗಿಸಿದಾಗ ಹೊಸ ಉತ್ಸಾಹ ಮತ್ತು ಬದುಕಿನ ಬಗ್ಗೆ ಹೊಸ ಕನಸುಗಳು ಹುಟ್ಟಿಕೊಂಡಿದ್ದು ಸುಳ್ಳಲ್ಲ..!
1. ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!
2. ಇಂಧೋರ್ನಲ್ಲಿ ಟೆಲಿ ರಿಕ್ಷಾ ಕಿಂಗ್- ಲೂಧಿಯಾನದ ಕರಣ್ವೀರ್ ಸಿಂಗ್