ಸಾರ್ವಜನಿಕ ಸಾರಿಗೆ - ಲೈಂಗಿಕ ಕಿರುಕುಳದ ಮತ್ತೊಂದು ಹಾಟ್ಸ್ಪಾಟ್!
ಟೀಮ್ ವೈ.ಎಸ್.ಕನ್ನಡ
ಕಿರುಕುಳ ಅನ್ನೋದು ಸಾಮಾನ್ಯ ಮನಸ್ಸಿಗೆ ಪರಿಚಿತವಲ್ಲದ ಒಂದು ಪದ. ಜಗತ್ತಿನಾದ್ಯಂತ ಜನರು ದೌರ್ಜನ್ಯ ಎದುರಿಸುತ್ತಾರೆ, ಬಹುತೇಕ ಸಂದರ್ಭಗಳಲ್ಲಿ ದೌರ್ಜನ್ಯಕ್ಕೊಳಗಾಗುವವರು ಮಹಿಳೆಯರೇ. ಕಿರುಕುಳ ಅನ್ನೋದು ಕೇವಲ ಕಣ್ಸೆಳೆಯುವ ತುಚ್ಛ ಕ್ರಮವಲ್ಲ, ಮರೆತುಬಿಡಲಾಗದಂತಹ, ಕಡೆಗಣಿಸಲಾಗದಂತಹ ಸೂಕ್ಷ್ಮ ತೊಂದರೆ ಇದು. ಸಾರ್ವಜನಿಕ ಸಾರಿಗೆಯಲ್ಲಿ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಸಮೀಕ್ಷೆ ನಡೆಸಿದ `ಸೇಫ್ಸಿಟಿ' ವರದಿಗಳನ್ನು ಸಂಗ್ರಹಿಸಿದೆ. ಈ ಸಮೀಕ್ಷೆಯಿಂದ ಬಯಲಾದ ಅಂಶವೆಂದರೆ ಒಟ್ಟಾರೆ ಪ್ರಕರಣಗಳಲ್ಲಿ ಐದರಲ್ಲಿ ಒಂದು ಕಿರುಕಳ ಪ್ರಕರಣ ನಡೆದಿರುವುದು ಸಾರ್ವಜನಿಕ ಸಾರಿಗೆಗಳಲ್ಲಿ ಅನ್ನೋದು ನಿಜಕ್ಕೂ ಆಘಾತಕಾರಿ.
ಈ ಅಂಕಿ-ಅಂಶಗಳನ್ನು ಹಲವು ದೇಶಗಳಿಂದ ಸಂಗ್ರಹಿಸಲಾಗಿದೆ. ಸಾಮಾನ್ಯ ಸಾರಿಗೆ ವಿಧಾನ ಮತ್ತು ಬಳಕೆ ಹಿನ್ನೆಲೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ನಡೆದ ಘಟನೆಗಳು ಕೂಡ ಬೇರೆ ಬೇರೆ ರೀತಿಯಲ್ಲಿವೆ. ಶೇಕಡಾ 40ರಷ್ಟು ಕಿರುಕುಳ ಪ್ರಕರಣಗಳು ಬಸ್ಗಳಲ್ಲಿ ಸಂಭವಿಸಿವೆ. ಬಸ್ ಅಥವಾ ಬಸ್ ನಿಲ್ದಾಣಗಳು ದೌರ್ಜನ್ಯ ಪ್ರಕರಣಗಳ ಹಾಟ್ಸ್ಪಾಟ್ ಅನ್ನೋದಕ್ಕೆ ಇದೇ ಸಾಕ್ಷಿ. ಬಸ್ ನಂತರದ ಸ್ಥಾನ ಮೆಟ್ರೋಗಳದ್ದು, ಅಲ್ಲಿ ಶೇ.16ರಷ್ಟು ಪ್ರಕರಣಗಳು ನಡೆದಿವೆ. ಬಸ್ ಹಾಗೂ ಮೆಟ್ರೋನಲ್ಲಿ ನಡೆದ ಘಟನೆಗಳ ಪ್ರಮಾಣದಲ್ಲಿ ಶೇ.20ಕ್ಕೂ ಹೆಚ್ಚು ವ್ಯತ್ಯಾಸವಿದೆ. ಕಾರ್ ಅಥವಾ ಟ್ಯಾಕ್ಸಿಗಳಲ್ಲಿ ಶೇ.14ರಷ್ಟು, ಆಟೋ ರಿಕ್ಷಾಗಳಲ್ಲಿ ಶೇ.7ರಷ್ಟು ಮತ್ತು ರೈಲುಗಳಲ್ಲಿ ಶೇ.5ರಷ್ಟು ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ವಿಪರ್ಯಾಸವೆಂದ್ರೆ ಶೇಕಡಾ 15ರಷ್ಟು ಕಿರುಕುಳ ಪ್ರಕರಣಗಳು ಪ್ರಯಾಣದ ಸಂದರ್ಭದಲ್ಲೇ ನಡೆದಿವೆ. ಇನ್ನು ವಿಮಾನ ನಿಲ್ದಾಣಗಳಲ್ಲಿ ಕೂಡ ಮಹಿಳೆಯರಿಗೆ ಸಂಪೂರ್ಣ ಸುರಕ್ಷತೆಯಿಲ್ಲ.
ಶೇಕಡಾ 20ರಷ್ಟು ಕಿರುಕುಳ ಪ್ರಕರಣಗಳು ವಿದ್ಯುತ್ ಅಭಾವವಿದ್ದಲ್ಲಿ, ಕತ್ತಲಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ, ಅದರರ್ಥ ರಾತ್ರಿ ಪ್ರಯಾಣ ಕಾಮುಕರಿಗೆ ವರದಾನವಾಗ್ತಿದೆ. ಶೇ.18ರಷ್ಟು ಪ್ರಕರಣಗಳಲ್ಲಿ ಪಾತಕಿಗಳು ಫೋಟೋ ತೆಗೆದುಕೊಂಡು ಬೆದರಿಸಿದ್ದಾರೆ. ಮಹಿಳೆಯರನ್ನು ಸ್ಪರ್ಷಿಸುವುದು, ಬೆನ್ನತ್ತಿ ಹೋಗುವುದು ಕೂಡ ನಡೆದಿದೆ, ಇಂತಹ ಶೇ.11ರಷ್ಟು ಕೇಸ್ಗಳು ದಾಖಲಾಗಿವೆ. ಗುರಾಯಿಸೋದು, ಸೀಟಿ ಹಾಕಿ ಛೇಡಿಸಿದ ಪ್ರಕರಣಗಳು ಶೇ.9ರಷ್ಟು ನಡೆದಿವೆ. ಉದಾಹರಣೆಗೆ ಪತಿ-ಪತ್ನಿ ಜೊತೆಯಾಗಿ ಹೋದಾಗ ಇಂತಹ ಘಟನೆಗಳು ನಡೆದಿರುವುದು ವಿರಳ ಅನ್ನೋದು ಕೂಡ ಸಮೀಕ್ಷೆಯಿಂದ ದೃಢಪಟ್ಟಿದೆ.
ಸಾರಿಗೆ ಕ್ರಮ ಮತ್ತು ಕಿರುಕುಳ ಮಾದರಿ ಎರಡೂ ವರದಿಗಳನ್ನು ವಿಶ್ಲೇಷಣೆ ಮಾಡಿದಾಗ, ಅತ್ಯಂತ ಹೆಚ್ಚು ಕಿರುಕುಳ ಘಟನೆಗಳು ಬಸ್ನಲ್ಲಿಯೇ ನಡೆದಿರೋದು ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿ ಅತ್ಯಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಸಾರಿಗೆ ಪ್ರತಿ ವಿಧಾನದಲ್ಲೂ, ವಾಹನದೊಳಗೆ ಸಂಭವಿಸುವ ಕಿರುಕುಳದಲ್ಲಿ ಗಮನಾರ್ಹ ಬದಲಾವಣೆಗಳನ್ನು ಗಮನಿಸಬಹುದು. ಬಸ್ಗಳಲ್ಲಿ ಹೆಚ್ಚಾಗಿ ಗುರಾಯಿಸುವುದು, ಸ್ಪರ್ಷಿಸುವುದು ನಡೆದ್ರೆ ಮೆಟ್ರೋ ಮತ್ತು ರಿಕ್ಷಾಗಳಲ್ಲಿ ಕೆಟ್ಟ ಕಮೆಂಟ್ ಪಾಸ್ ಮಾಡುವಿಕೆ ಹೆಚ್ಚಾಗಿದೆ. ರೈಲು, ಟ್ಯಾಕ್ಸಿ, ರಿಕ್ಷಾಗಳಲ್ಲಿ ಎರಡು ಬಗೆಯ ಮಿಶ್ರ ಘಟನೆಗಳು ವರದಿಯಾಗಿವೆ. ಬಸ್ಗಳಲ್ಲಿ ಬೆಳಕಿನ ಕೊರತೆಯಲ್ಲಿ ದೌರ್ಜನ್ಯ ನಡೆದ್ರೆ, ರೈಲು, ಆಟೋರಿಕ್ಷಾಗಳಲ್ಲಿ ಲೈಂಗಿಕ ಆಕ್ರಮಣ ಮತ್ತು ಹಿಂಬಾಲಿಸುವಿಕೆ ಹೆಚ್ಚಾಗಿ ನಡೆಯುತ್ತಿದೆ. ಟ್ಯಾಕ್ಸಿ ಮತ್ತು ಕಾರ್ಗಳಲ್ಲಿ ಹೆಚ್ಚಾಗಿ ಫೋಟೋ ತೆಗೆದುಕೊಂಡಂತಹ ಕಿರುಕುಳ ವರದಿಯಾಗಿದೆ. ಸಾರ್ವಜನಿಕ ಸಾರಿಗೆಗಳಲ್ಲಿ ಲೈಂಗಿಕ ಆಕ್ರಮಣದಂತಹ ಘಟನೆಗಳು ಕಡಿಮೆ ಪ್ರಮಾಣದಲ್ಲಿ ವರದಿಯಾಗಿವೆ. ವಾಸ್ತವವಾಗಿ ಇಂತಹ ಘಟನೆಗಳು ನಡೆದಿದ್ರೂ, ಸಾಮಾಜಿಕ ಕಳಂಕ, ಗೌರವಕ್ಕೆ ಧಕ್ಕೆಯುಂಟಾಗುವ ಆತಂಕ ಮತ್ತು ಆಘಾತಕಾರಿ ಪರಿಣಾಮಗಳ ಭೀತಿಯಿಂದಾಗಿ ಹೆಚ್ಚು ಬೆಳಕಿಗೆ ಬರುವುದಿಲ್ಲ. ಒಟ್ಟಿನಲ್ಲಿ ಸಾರ್ವಜನಿಕ ಸಾರಿಗೆಗಳಲ್ಲಿ ಇಂತಹ ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಅಪರಾಧಿಗಳನ್ನು ಶಿಕ್ಷಿಸುವ ಮತ್ತು ಇಂತಹ ಘಟನೆಗಳನ್ನು ತಡೆಯುವ ಕೆಲಸ ಆಗಬೇಕಿದೆ.
ಇದನ್ನೂ ಓದಿ...
ಶೂನ್ಯ ಹೂಡಿಕೆಯೊಂದಿಗೆ ಉದ್ಯಮ ಆರಂಭಿಸುವುದು ಹೇಗೆ?
ಬೆಂಗಳೂರಿನಲ್ಲಿ ಏನೂ ಆಗಲ್ಲ ಅನ್ನುವವರು ಇವರನ್ನು ನೋಡಿ ಕಲಿಯಿರಿ..!