ಚೆಕ್ಇನ್ ಕೌಂಟರ್ಗಳಲ್ಲಿ ಕಾಯಬೇಕಿಲ್ಲ : ಜಸ್ಟ್ ಫಿಂಗರ್ ಪ್ರಿಂಟ್ ಕೊಟ್ಟು ವಿಮಾನ ಏರುವ ಅವಕಾಶ..
ಟೀಮ್ ವೈ.ಎಸ್.ಕನ್ನಡ
ಭಾರತದ ಪ್ರಯಾಣಿಕರಿಗೆ ಸಿಹಿ ಸುದ್ದಿ ಇದೆ. ಇನ್ಮೇಲೆ ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್ ಗಾಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಪ್ರಯಾಣಿಕರು ಕಾಯಬೇಕಾಗಿಲ್ಲ. ಜಸ್ಟ್ ಒಂದು ಬೆರಳಚ್ಚಿನ ಮೂಲಕ ಆರಾಮಾಗಿ ಎಂಟ್ರಿ ಪಡೆಯಬಹುದು. ಯಾಕಂದ್ರೆ ವಿಮಾನ ನಿಲ್ದಾಣಗಳಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಅಳವಡಿಸಲು ವಿಮಾನಯಾನ ಸಚಿವಾಲಯ ಚಿಂತನೆ ನಡೆಸಿದೆ. ಬಯೋಮೆಟ್ರಿಕ್ ಸ್ಕ್ರೀನಿಂಗ್ ಪ್ರಕ್ರಿಯೆ ಅಳವಡಿಸಿದಲ್ಲಿ ಪ್ರಯಾಣಿಕರು ವಿಮಾನ ಏರುವ ಮುನ್ನ ಚೆಕಿಂಗ್ ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ.
ಚೆಕ್ ಇನ್ ಕೌಂಟರ್ ಗಳಲ್ಲಿ ಪ್ರಯಾಣಿಕರಿಂದ ಪಡೆಯುವ ಏಕೈಕ ದಾಖಲೆ ಅವರ ಬೆರಳಚ್ಚು ಮಾತ್ರ. ಹಾಗಾಗಿ ಗುರುತಿನ ಚೀಟಿ, ಇತರ ದಾಖಲೆಗಳು ಹಾಗೂ ಟಿಕೆಟ್ ಅನ್ನು ಚೆಕ್ ಇನ್ ಕೌಂಟರ್ ಗಳಲ್ಲಿ ಪ್ರಯಾಣಿಕರು ಸಲ್ಲಿಸುವ ಬದಲು ಜಸ್ಟ್ ಬೆರಳಚ್ಚು ನೀಡಿದ್ರೆ ಮುಗೀತು. ಬೇರೆ ಬೇರೆ ವೆಬ್ ಸೈಟ್ ಗಳ ಮೂಲಕ ಪ್ರಯಾಣಿಕರು ವಿಮಾನದ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಅವರ ಆಧಾರ್ ಕಾರ್ಡನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಕನೆಕ್ಟ್ ಮಾಡಲಾಗಿರುತ್ತದೆ. ಇದುವರೆಗೆ 100 ಕೋಟಿಗೂ ಅಧಿಕ ಮಂದಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರೂ ತಮ್ಮ ಐರಿಸ್ ಹಾಗೂ ಫಿಂಗರ್ ಪ್ರಿಂಟನ್ನು ನೀಡಿದ್ದು, ಅದನ್ನು ಏರ್ ಪೋರ್ಟ್ ಚೆಕ್ ಇನ್ ಕೌಂಟರ್ ನ ಬಯೋಮೆಟ್ರಿಕ್ ಸ್ಕ್ರೀನಿಂಗ್ ಗೆ ಕನೆಕ್ಟ್ ಮಾಡಲಾಗುತ್ತದೆ. ಹಾಗಾಗಿ ಪ್ರಯಾಣಿಕರು ಮಷಿನ್ ನಲ್ಲಿ ತಮ್ಮ ಬೆರಳನ್ನು ಇಟ್ಟಾಗ ಆಟೋಮ್ಯಾಟಿಕ್ ಆಗಿ ಐಡೆಂಟಿಫೈ ಆಗುತ್ತದೆ.
ಹೈದ್ರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯೋಗಾತ್ಮಕವಾಗಿ ಈ ಯೋಜನೆ ಜಾರಿ ಮಾಡಿದ್ದು ಯಶಸ್ವಿಯಾಗಿದೆ. ಟರ್ಮಿನಲ್ ಪ್ರವೇಶಿಸುವ ಪ್ರಯಾಣಿಕರು ಬೆರಳಚ್ಚು ನೀಡಿ ಎಂಟ್ರಿ ಪಡೆಯುತ್ತಿದ್ದಾರೆ.
''ಟಿಕೆಟ್ ಬುಕ್ಕಿಂಗ್ ಸಂದರ್ಭದಲ್ಲಿ ಆಧಾರ್ ಕಾರ್ಡ್ ನಂಬರ್ ನೀಡುವಂತೆ ಪ್ರಯಾಣಿಕರಿಗೆ ಸೂಚಿಸಿದ್ದೇವೆ. ಈ ಮೂಲಕ ಹೊಸ ತಂತ್ರಜ್ಞಾನದ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಯೋಮೆಟ್ರಿಕ್ ಮಷಿನ್ಗಳಲ್ಲಿ ತಮ್ಮ ಹೆಬ್ಬೆರಳನ್ನು ಒತ್ತಿ ಟರ್ಮಿನಲ್ ಪ್ರವೇಶಿಸಬಹುದು ಮತ್ತು ವಿಮಾನ ಏರಬಹುದು'' ಅಂತಾ ವಿಮಾನಯಾನ ಖಾತೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಆದ್ರೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಪಾಸ್ಪೋರ್ಟ್ ಹೊಂದುವುದು ಕಡ್ಡಾಯ.
ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಪಿಓಸಿ ಪೂರ್ಣಗೊಳಿಸಿದ ಬಳಿಕ ಅಧಿಕೃತವಾಗಿ UIDAI ಬಳಿ ಬಳಕೆದಾರ ಏಜೆನ್ಸಿಯಾಗಿ ಗುರುತಿಸುವಂತೆ ಮನವಿ ಮಾಡಿರೋದಾಗಿ GMR ಹೈದ್ರಾಬಾದ್ ಇಂಟರ್ ನ್ಯಾಶನಲ್ ಏರ್ಪೋರ್ಟ್ ಸಿಇಓ ಎಸ್.ಜಿ.ಕೆ. ಕಿಶೋರ್ ತಿಳಿಸಿದ್ದಾರೆ.
ಹೈದ್ರಾಬಾದ್, ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈನಂತಹ ಬ್ಯುಸಿ ಏರ್ಪೋರ್ಟ್ಗಳಲ್ಲಿ ಈ ಯೋಜನೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ. ಯಾಕಂದ್ರೆ ಇಲ್ಲಿ ಹೆಚ್ಚು ಏರ್ ಟ್ರಾಫಿಕ್ ಇರೋದ್ರಿಂದ ಚೆಕ್ ಇನ್ ಕೌಂಟರ್ ಗಳಲ್ಲಿ ಪ್ರಯಾಣಿಕರು ಕಾಯಬೇಕಾದ ಅನಿವಾರ್ಯತೆ ಇರುತ್ತದೆ.
ಇದನ್ನೂ ಓದಿ...
ಯೂಟ್ಯೂಬ್ನಲ್ಲಿ ಇವರು ಸೂಪರ್ ಸ್ಟಾರ್ಸ್- ಡಿಫರೆಂಟ್ ವೀಡಿಯೋಗಳಿಂದಲೇ ಕೋಟಿ ಕೋಟಿ ಇನ್ಕಂ