ಕರ್ನಾಟಕದ ಶಕ್ತಿ ಸೌಧಕ್ಕೆ 61ರ ಹರೆಯ
ಅಗಸ್ತ್ಯ
ಕರ್ನಾಟಕ ರಾಜ್ಯ ಹೆಗ್ಗುರುತು ವಿಧಾನಸೌಧಕ್ಕೀಗ 61ರ ಹರೆಯ. ಕರ್ನಾಟಕ ಏಕೀಕರಣದ ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ತನ್ನ ಕಾರ್ಯಾರಂಭ ಮಾಡಿದ್ದ ವಿಧಾನಸೌಧ, ಈವರೆಗೆ ಕರ್ನಾಟಕದ ಶಕ್ತಿಸೌಧವೆಂದೇ ಗುರುತಿಸಿಕೊಂಡಿದೆ. ವಿಧಾನಸೌಧ ಮಾದರಿಯಲ್ಲಿಯೇ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮಿನಿ ವಿಧಾನಸೌಧಗಳ ನಿರ್ಮಾಣವಾಗಿದೆ. ಆದರೆ ಶಕ್ತಿಸೌಧದ ಗತ್ತು-ಗಮ್ಮತ್ತು ಮಾತ್ರ 61 ವರ್ಷಗಳಾದರು ಕೊಂಚವೂ ಕಡಿಮೆಯಾಗಿಲ್ಲ.
ವಿಧಾನಸೌಧ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು 1951ರಲ್ಲಿ. ಅಂದರೆ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವಧಿಯಲ್ಲಿ. 1951ರ ಜು.13ರಂದು ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಮೊದಲಿಗೆ ವಿಧಾನಸೌಧದ ವಾಸ್ತುಶಿಲ್ಪ ಈ ರೀತಿ ಇರಲಿಲ್ಲ. ನಂತರ ವಾಸ್ತುಶಿಲ್ಪ ಬದಲಾಗಿ ಭವ್ಯಸೌಧ ನಿರ್ಮಾಣಕ್ಕೆ ಕಾರಣವಾಗಿದ್ದು ರಷ್ಯಾದ ಒಂದು ನಿಯೋಗ.
ವಾಸ್ತುಶಿಲ್ಪವೇ ಬದಲು
1952ರ ಸುಮಾರಿಗೆ ಮುಖ್ಯಮಂತ್ರಿಯಾಗಿದ್ದವರು ಕೆಂಗಲ್ ಹನಿಮಂತಯ್ಯ. ಅವರ ಅವಧಿಯಲ್ಲೊಮ್ಮೆ ರಷ್ಯಾದ ಸಾಂಸ್ಕೃತಿಕ ನಿಯೋಗವೊಂದು ಬೆಂಗಳೂರಿಗೆ ಬಂದಿತ್ತು. ಅವರನ್ನು ಕೆಂಗಲ್ ಹನುಮಂತಯ್ಯ ಬೆಂಗಳೂರು ದರ್ಶನಕ್ಕೆ ಕರೆದೊಯ್ದರು. ದರ್ಶನ ಮುಗಿದ ನಂತರ ನಿಯೋಗದವರು ನಿಮ್ಮಲ್ಲಿ ಎಲ್ಲವೂ ಐರೊಪ್ಯ ವಾಸ್ತುಶಾಸ್ತ್ರದ ಕಟ್ಟಡಗಳೇ ಇವೆ. ನಿಮ್ಮ ವಾಸ್ತುಶಿಲ್ಪದ್ದು ಯಾವುದೂ ಇಲ್ಲವಲ್ಲ ಎಂದಿದ್ದರು. ಈ ಮಾತನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಹನುಮಂತಯ್ಯ ಅದಾಗಲೆ ನಿರ್ಮಣದತ್ತ ಸಾಗಿದ್ದ ವಿಧಾನಸೌಧವನ್ನು ನಾಡಿನ ಸಾಂಸ್ಕøತಿಕ ಗುರುತಾಗಿ ರೂಪಿಸುವ ನಿರ್ಧಾರ ಕೈಗೊಂಡರು. ತಾವೇ ವಿವಿಧೆಡೆ ಸಂಚರಿಸಿ ಭಾರತಿಯ ಸಂಸ್ಕೃತಿಕ, ಕಲೆ, ವಾಸ್ತುಶಿಲ್ಪ, ದೇವಾಲಯ ಶಿಲ್ಪವನ್ನು ಅಧ್ಯಯನ ಮಾಡಿದರು. ನಂತರ ವಾಸ್ತುಶಿಲ್ಪಿಕಾರರಿಗೆ ನಮ್ಮ ಸಾಂಸ್ಕೃತಿಕ ಪ್ರತೀಕದಂತೆ ವಿಧಾನಸೌಧ ನಿರ್ಮಾಣವಾಗಬೇಕೆಂದು ಸೂಚಿಸಿದ್ದರು. ಅದರಂತೆ ವಾಸ್ತುಶಿಲ್ಪಕಾರರು ವಿಧಾನಸೌಧವನ್ನು ಮೈಸೂರು ದ್ರಾವಿಡ ಶೈಲಿ, ಇಂಡೋ ಸಾರ್ಸೆನಿಕ್ ಹಾಗೂ ದ್ರಾವಿಡ ಶೈಲಿಯ ಅಂಶಗಳನ್ನು ಅಡಕ ಮಾಡಿ ನಿರ್ಮಾಣ ಮಾಡಿದ್ದಾರೆ. ಅಂದಿಗೆ 1.84 ಕೋಟಿ ರೂಪಾಯಿ ವೆಚ್ಚದಲ್ಲಿ ವಿಧಾನಸೌಧ ನಿರ್ಮಿಸಲಾಗಿದೆ. ಇಂದಿಗಾದರೆ ಆ ಮೊತ್ತ 400 ಕೋಟಿ ರೂಪಾಯಿ ದಾಟುತ್ತಿತ್ತೇನೋ.
ಡೇಂಜರ್..! ಭಯ ಇದ್ರೆ ಇಲ್ಲಿ ಹೋಗಲೇ ಬೇಡಿ..!
ವಿಧಾನಸೌಧದ ವಿಶೇಷತೆಗಳು
ಪ್ರತಿ ಹಂತದಲ್ಲೂ ವಿಶಿಷ್ಟವಾಗಿರುವ ವಿಧಾನಸೌಧಕ್ಕೆ ಭೂಷಣವೆಂದರೆ ಮುಂಭಾಗದ ಮೆಟ್ಟಿಲು, ಕಂಬಗಳು. ಶಕ್ತಿಸೌಧದ ಮುಂಭಾಗ 204 ಅಡಿ ಅಗಲ, 70 ಅಡಿ ಎತ್ತರದಲ್ಲಿ ಒಟ್ಟು 45 ಮೆಟ್ಟಿಲುಗಳಿದ್ದು, ನೇರವಾಗಿ ಮೊದಲ ಮಹಡಿಯಲ್ಲಿರುವ ವಿಧಾನಸಭೆ ಅಂಗಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ವಿಧಾನಸಭೆ ಎದುರು 40 ಅಡಿಯ 12 ಕಂಬಗಳು ಕೇಂದ್ರದಲ್ಲಿರುವ ಬೃಹತ್ ಗೊಪುರಕ್ಕೆ ಹಾಗೂ 6 ಚಿಕ್ಕ ಕಂಬಗಳಿಗೆ ಮೆರುಗು ನೀಡುತ್ತವೆ. ಕೇಂದ್ರದ ಗೊಪುರ 60 ಅಡಿ ವ್ಯಾಸದ 8 ಕಂಬಗಳ ಆಧಾರದಲ್ಲಿ ನಿಂತಿದೆ.
ಒಟ್ಟು 1,32,400 ಚದರ ಅಡಿ ವಿಸ್ತಿರ್ಣದ 3 ಅಂತಸ್ತುಗಳನ್ನು ಹೊಂದಿರುವ ವಿಧಾನಸೌಧದ ಉಪ್ಪರಿಗೆ ವಿಸ್ತಿರ್ಣ 1,05,164 ಚದರ ಅಡಿ, ನೆಲದ ಒಟ್ಟು ವಿಸ್ತಿರ್ಣ 5,50,505 ಚದರ ಅಡಿ. ಹಾಗೆಯೇ ನೆಲಮಟ್ಟದಿಂದ ಗೊಪುರದ ಮಧ್ಯಭಾಗದ ಗೊಪುರದ ತುದಿಯವರೆಗಿನ ಎತ್ತರ 150 ಅಡಿ, ಮಧ್ಯ ಗೊಪುರದ ವ್ಯಾಸ 80 ಅಡಿಗಳಾಗಿದೆ. ಇನ್ನು ಶ್ರೀಗಂಧದ ಮರದಿಂದ ಕ್ಯಾಬಿನೆಟ್ ಕೊಠಡಿಯ ಬಾಗಿಲನ್ನು ನಿರ್ಮಿಸಲಾಗಿದೆ. ಈ ಇಡೀ ಕಟ್ಟಡ ನಿರ್ಮಾಣಕ್ಕೆ ತೆಗೆದುಕೊಂಡ ಸಮಯ 5 ವರ್ಷ.
ಈ ಭವ್ಯ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದ್ದು ಅಂದಿನ ಕೈದಿಗಳನ್ನು. ಕಟ್ಟಡ ನಿರ್ಮಾಣದ ನಂತರ ಅವರನ್ನೆಲ್ಲಾ ಬಿಡುಗಡೆಗೊಳಿಸಲಾಯಿತು. ವಿಧಾನಸೌಧದ ಬಹುಭಾಗ ಮಲ್ಲಸಂದ್ರ ಹಾಗೂ ಹೆಸರುಘಟ್ಟ ಪ್ರದೇಶದಿಂದ ಹೊರತೆಗೆದ ಗ್ರಾನೈಟ್ನಿಂದ ನಿರ್ಮಿಸಲಾಗಿದೆ. ಅಂದ ಹಾಗೂ ಆಕರ್ಷಣೆಗಾಗಿ ಮಾಗಡಿ ಪಿಂಕ್ ಮತ್ತು ತುರುವೇಕೆರೆ ಕಪ್ಪು ಶಿಲೆಗಳನ್ನು ಬಳಸಲಾಗಿದೆ.
ವಿಧಾನಸಭೆ-ವಿಧಾನಪರಿಷತ್
ಇನ್ನು ಇಡೀ ಕಟ್ಟಡದ ಕೇಂದ್ರ ಭಾಗದಲ್ಲಿ ವಿಧಾನಸಭಾ ಅಂಗಳವನ್ನು ನಿರ್ಮಿಸಲಾಗಿದೆ. ಅಲ್ಲಿ 268 ಸದಸ್ಯರು ಅರಾಮಾಗಿ ಕೂರುವಂತೆ ಆಸನದ ವ್ಯವಸ್ಥೆಯಿದೆ. ಅದರೊಂದಿಗೆ ಮುಂದೆ 100 ಹೆಚ್ಚುವರಿ ಆಸನಗಳನ್ನು ಅಳವಡಿಸಲು ಅವಕಾಶಗಳಿವೆ. ಹಾಗೆಯೇ ದಕ್ಷಿಣ ಭಾಗದಲ್ಲಿರುವ ವಿಧಾನಪರಿಷತ್ ಸಭಾಂಗಣ 88 ಸದಸ್ಯರಿಗೆ ಆಸನ ವ್ಯವಸ್ಥೆ ಹೊಂದಿದೆ.
ಏಕೀಕರಣ ವರ್ಷವೇ ಪೂರ್ಣ
ವಿಧಾನಸೌಧ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು 1956ರಲ್ಲಿ. ಸರ್ಕಾರಿ ದಾಖಲೆಗಳ ಪ್ರಕಾರ ವರ್ಷ ನಮೂದಾಗಿದೆಯೇ ಹೊರತು, ಉದ್ಘಾಟನೆಯಾದ ದಿನ ಗುರುತು ಮಾಡಿಲ್ಲ. ಅದಕ್ಕೆ ಕಾರಣ ಕರ್ನಾಟಕ ಏಕೀಕರಣ ಮತ್ತು ರಾಜಕೀಯ ಬೆಳವಣಿಗೆಗಳು. ಹನುಮಂತಯ್ಯ ಅಧಿಕಾರದಿಂದಿಳಿದ ನಂತರ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿಯಾದರು. ಅದೇ ವೇಳೆ ಕರ್ನಾಟಕ ಏಕೀಕರಣವಾಗಿ ನ. 1ರಂದು ಕರ್ನಾಟಕ ರಾಜ್ಯ ಉದಯವಾಯಿತು. ಹೀಗಾಗಿ ವಿಧಾನಸೌಧದ ಉದ್ಘಾಟನೆಯಾಗಲಿಲ್ಲ ಅಥವಾ ಆಗಿದ್ದರೂ ಅದರ ಬಗ್ಗೆ ಉಲ್ಲೇಖಿಸಲಾಗಿಲ್ಲ.
2. ನರೇಂದ್ರ ಮೋದಿ ಕ್ಷೇತ್ರದಲ್ಲಿ ದೇಶದ ಮೊಟ್ಟ ಮೊದಲ ಆಹಾರ ಧಾನ್ಯದ ಬ್ಯಾಂಕ್...