ಬೆಂಗಳೂರಿನ 9 ವರ್ಷದ ಬಾಲಕ ಕಂಡು ಹಿಡಿದ ಆ್ಯಪ್ ತ್ಯಾಜ್ಯ ಬೇರ್ಪಡಿಸುವಿಕೆಯನ್ನು ಸುಲಭಗೊಳಿಸುತ್ತಿದೆ
ಬೆಂಗಳೂರಿನ 9 ವರ್ಷದ ಬಾಲಕ ಸರಿಯಾದ ತ್ಯಾಜ್ಯ ನಿರ್ವಹಣೆಯನ್ನು ತಿಳಿಸಲು ಎಲ್ಲರಿಗೂ ಲಭ್ಯವಾಗುವಂತಹ ಮೊಬೈಲ್ ಅಪ್ಲಿಕೇಶನ್ ಒಂದನ್ನು ನಿರ್ಮಿಸಿದ್ದಾನೆ.
ಕಾಣುವ ಕನಸಿಗೆ, ಕಲ್ಪನೆಗಳಿಗೆ, ಯೋಚನೆಗಳಿಗೆ ವಯಸ್ಸಿನ ಯಾವುದೇ ಹಂಗಿಲ್ಲ. ಕಂಡಿರುವ ಕನಸಿನ ಎಳೆ ಹಿಡಿದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡಿರುವವರು ಸಿಗುತ್ತಾರೆ.
ಹೀಗೆ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಭಿನ್ನವಾಗಿ ಯೋಚಿಸಿ ಆ್ಯಪ್ ಒಂದನ್ನು ಕಂಡು ಹಿಡಿದು ಎಲ್ಲರ ಚಿತ್ತ ತಮ್ಮತ್ತ ಸೆಳೆಯುವಂತೆ ಮಾಡಿದ್ದಾನೆ ಬೆಂಗಳೂರಿನ 9 ವರ್ಷದ ಸೀನ್ ಸೋಲಾನೊ ಪೌಲ್ ಎಂಬ ಬಾಲಕ.
ಇಂದು ತ್ಯಾಜ್ಯ ನಿರ್ವಹಣೆ ಹಾಗೂ ಅದರ ನಿರ್ಮೂಲನೆ ಮಾಡುವುದು ಒಂದು ಸಮಸ್ಯೆಯಾಗಿದೆ. ಸರಿಯಾದ ತ್ಯಾಜ್ಯ ನಿರ್ವಹಣೆ ಮಾಡಿದರೆ ಅದು ನಮಗೆ ಅನುಕೂಲಕರ. ಆದರೆ ಅನೇಕ ಜನರು ತಮ್ಮ ನಿರ್ಲಕ್ಷ್ಯದಿಂದಾಗಿ ಅಥವಾ ಸರಿಯಾದ ಮಾಹಿತಿಯಿಲ್ಲದೆಯಿರುವದರಿಂದ ತ್ಯಾಜ್ಯವನ್ನು ಸರಿಯಾಗಿ ಹಸಿಕಸ ಹಾಗೂ ಒಣಕಸವೆಂದು ವಿಂಗಡಿಸುವುದಿಲ್ಲ.
ಇದಕ್ಕಾಗಿ ಜನರಿಗೆ ಸರಿಯಾದ ತ್ಯಾಜ್ಯ ವಿಂಗಡಣೆಯ ಬಗ್ಗೆ ತಿಳಿಸಲು, ಬೆಂಗಳೂರಿನ 9 ವರ್ಷದ ಸೀನ್ ಸೋಲಾನೊ ಪೌಲ್ "ಟ್ರ್ಯಾಶ್ ಸಾರ್ಟರ್" ಎಂಬ ಮೊಬೈಲ್ ಅಪ್ಲಿಕೇಶನ್ ಒಂದನ್ನು ರಚಿಸಿದ್ದಾನೆ. ಇದು ಜೈವಿಕ ವಿಘಟನೀಯ ಮತ್ತು ಜೈವಿಕ ವಿಘಟನೀಯವಲ್ಲದ ತ್ಯಾಜ್ಯದ ಬೇರ್ಪಡಿಸುವಿಕೆಯ ಬಗ್ಗೆ ಜನರಿಗೆ ತಿಳಿಸುತ್ತದೆ, ವರದಿ ಇಂಡಿಯಾ ಟೈಮ್ಸ್.
ಒಂದು ದಿನ ಶಾಲೆಗೆ ಹೋಗುವಾಗ, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಶಾಲೆಯ ಸೀನ್ ಪೌಲ್, ಪೌರ ಕಾರ್ಮಿಕರು ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲದೆ ತಮ್ಮ ಕೈಗಳಿಂದ ತ್ಯಾಜ್ಯವನ್ನು ಬೇರ್ಪಡಿಸುವುದನ್ನು ನೋಡಿದನು. ಇದರಿಂದ ವಿಚಲಿತನಾದ ಸೀನ್ ತ್ಯಾಜ್ಯವನ್ನು ಬೇಪರ್ಡಿಸುವ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಜನರಿಗೆ ತಿಳಿಸಲು ಒಂದು ಆ್ಯಪ್ ಅನ್ನು ಅಭಿವೃದ್ಧಿ ಮಾಡಲು ನಿರ್ಧರಿಸಿದನು. ಕಳೆದ 6 ತಿಂಗಳಿಂದ ಸೀನ್ ಕೋಡಿಂಗ್ ಬಗ್ಗೆ ಕಲಿಯುತ್ತಿದ್ದಾನೆ. ಅವನು ತನ್ನ ಅಪ್ಲಿಕೇಶನ್ ಅನ್ನು ಇನ್ನೂ ಉತ್ತಮವಾಗಿ ಮಾಡುವದರ ಬಗ್ಗೆ ಯೋಚಿಸುತ್ತಿದ್ದಾನೆ,
ವರದಿ ದಿ ಹಿಂದೂ.
ಆ್ಯಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
"ಟ್ರ್ಯಾಶ್ ಸಾರ್ಟರ್" ಎಂಬುದು ಮೂಲಭೂತವಾಗಿ ಒಂದು ಮೊಬೈಲ್ ಗೇಮ್ ಆಗಿದ್ದು, ಎರಡು ಕಸದ ತೊಟ್ಟಿಗಳನ್ನು ಹೊಂದಿರುವ ಆಟವಾಗಿದೆ, ಅದರಲ್ಲೊಂದು ತೊಟ್ಟಿ ಜೈವಿಕ ವಿಘಟನೀಯ ತ್ಯಾಜ್ಯಕ್ಕೆ ಮತ್ತೊಂದು ಜೈವಿಕ ವಿಘಟನೀಯವಲ್ಲದ ತ್ಯಾಜ್ಯಕ್ಕೆ. ಕಸದ ಬುಟ್ಟಿಗಳ ಸುತ್ತಲೂ ಬೇರೆ ಬೇರೆ ಕಸದ ರಾಶಿ ಬಿದ್ದಿರುತ್ತದೆ ಬಳಕೆದಾರರು ಸರಿಯಾದ ಬಿನ್‌ನಲ್ಲಿ ಅದನ್ನು ಸರಿಯಾಗಿ ನೋಡಿ ಹಾಕಬೇಕು. ಇದರಿಂದ ಅವರು ಅಂಕಗಳನ್ನು ಗಳಿಸುತ್ತಾರೆ.
ದಿ ಹಿಂದೂ ಜೊತೆಗಿನ ಸಂದರ್ಶನವೊಂದರಲ್ಲಿ ಮಾತಾಡಿದ ಸೀನ್,
"ಹಳೆಯ ಆವೃತ್ತಿಯಲ್ಲಿ ತ್ಯಾಜ್ಯವನ್ನು ಸರಿಯಾದ ತೊಟ್ಟಿಯಲ್ಲಿ ಹಾಕುವ ಮೂಲಕ ಅದನ್ನು ವಿಲೇವಾರಿ ಮಾಡಿದರೆ ಅವರಿಗೆ ಅಂಕಗಳು ಸಿಗುತ್ತಿತ್ತು. ತಪ್ಪಾದ ತೊಟ್ಟಿಯಲ್ಲಿ ಹಾಕಿದರೆ ನಕರಾತ್ಮಕ ಅಂಕಗಳು ದೊರಕುತ್ತಿದ್ದವು. ಸುಧಾರಿತ ಆವೃತ್ತಿಯಲ್ಲಿ ಬಳಕೆದಾರರು ತ್ಯಾಜ್ಯ ವಿಭಜನೆ ಹಾಗೂ ಮರುಬಳಕೆಯ ಕುರಿತಾಗಿ ತಿಳಿಯಬಹುದಾಗಿದೆ," ಎಂದೆನ್ನುತ್ತಾನೆ.
ಆ್ಯಪ್‌ನ ಹಿಂದಿನ ಆಲೋಚನೆ ಬಹುಮುಖ್ಯವಾಗಿದೆ. ಮಕ್ಕಳು ಹಾಗೂ ವಯಸ್ಕರು ಕಸ ಹೇಗೆ ಬೇಪರ್ಡಿಸಬೇಕು, ಕಸ ಎಲ್ಲಿಗೆ ಸೇರಬೇಕು ಎಂಬ ಅಭ್ಯಾಸವನ್ನು ಇದರಿಂದ ರೂಢಿಸಿಕೊಳ್ಳಬಹುದಾಗಿದೆ. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.